‘ಆಹಾರ–ಆರೋಗ್ಯ’

ರಾಗಿ ಉದ್ಯಮ ಇಂದಿರಾ ಯಶೋಗಾಥೆ

ಕಿರುಧಾನ್ಯ ರಾಗಿಯಿಂದ ಹತ್ತು ಹಲವು ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ‘ಆಹಾರ–ಆರೋಗ್ಯ’ ಎರಡೂ ಕಾಳಜಿ, ಕಳಕಳಿಯನ್ನು ಅಭಿವ್ಯಕ್ತಿಸಿರುವವರು ಬೆಂಗಳೂರಿನ ಜೆ.ಪಿ.ನಗರದ ಇಂದಿರಾ ಸಿ.ಗೌಡ. ರಾಗಿ ಹುರಿಹಿಟ್ಟು, ದೋಸೆ ಮಿಶ್ರಣ, ಇಡ್ಲಿ, ಉಂಡೆ ಮುಂತಾದ ಆಹಾರ ತಯಾರಿಸುವ ಅತ್ಯಂತ ಸುಲಭದ ಅಡುಗೆಯನ್ನು ಮನೆ ಮನೆಗೆ ತಲುಪಿಸುತ್ತಿರುವುದನ್ನು ಉಮಾ ಅನಂತ್‌ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಉದ್ಯಮಿ ಇಂದಿರಾ

ರಾಗಿ ತಿಂದವ ನಿರೋಗಿ’ ಎನ್ನುವ ನಾಣ್ಣುಡಿ ಬಳಕೆಯಲ್ಲಿ ಇದೆ. ರಾಗಿಯನ್ನೇ ಬಳಸಿ ಹಲವು ಬಗೆಯ ಉತ್ಪನ್ನ ತಯಾರಿಸಿ ಯಶಸ್ವಿ ಉದ್ಯಮಿಯಾದ ಬೆಂಗಳೂರಿನ ಇಂದಿರಾ ಅವರ ಉದ್ಯಮಶೀಲತೆ ಗುಣ ಇತರರಿಗೆ ಮಾದರಿಯಾಗುವಂತಹದ್ದು. ರಾಗಿ ಉದ್ಯಮಿ ಮಹಿಳೆಯೊಬ್ಬರ ಯಶೋಗಾಥೆಯೊಂದು ಇಲ್ಲಿದೆ.

ಆರೋಗ್ಯಕ್ಕೆ ಅತ್ಯಂತ ಪೂರಕವಾದ ರಾಗಿಯನ್ನು ಬಳಸಿ ಅನೇಕ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಮಾರುವುದರ ಜತೆಗೆ ಆರೋಗ್ಯ ಕಾಳಜಿಯನ್ನೂ ಮೂಡಿಸುವ ಇಂದಿರಾ ಅವರ ಪರಿಶ್ರಮ, ಶ್ರದ್ಧೆ ಎಲ್ಲ ಮಹಿಳೆಯರಿಗೂ ಅನುಕರಣೀಯ.

ಹಾಗೆ ನೋಡಿದರೆ ಇಂದಿರಾ ಅವರು ರಾಗಿ ಉದ್ಯಮ ಆರಂಭಿಸಿದ್ದು 20 ವರ್ಷಗಳ ಹಿಂದೆ. ಅವರ ಮನೆಯ ಕಾರು ಷೆಡ್‌ನಲ್ಲಿ ರಾಗಿ ಹಿಟ್ಟನ್ನು ಮಾರುವ ಕೆಲಸ ಶುರು ಮಾಡುವ ಮೂಲಕ ಉದ್ಯಮಕ್ಕೆ ನಾಂದಿ ಹಾಡಿದರು.

ಈ ಉದ್ಯಮ ಆರಂಭಿಸಲು ಸ್ಫೂರ್ತಿ ನೀಡಿದ್ದು ಬೆಂಗಳೂರಿನ ‘ಅವೇಕ್‌’ ಎಂಬ ಸ್ವಯಂಸೇವಾ ಸಂಸ್ಥೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹುಟ್ಟು, ಬಾಲ್ಯ ಕಳೆದ ಇಂದಿರಾ ಅವರಿಗೆ ಈಗ 68ರ ಹರೆಯ. ಮಹಾರಾಣಿ ಕಾಲೇಜಿನಲ್ಲಿ ಬಿಎಸ್‌ಸಿ ಹಾಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇಂದಿರಾ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲದಿಂದಲೇ ಈ ರಾಗಿ ಉದ್ಯಮವನ್ನು ಆರಂಭಿಸಿದ್ದು.

‘ಇಪ್ಪತ್ತು ವರ್ಷಗಳ ಹಿಂದೆ ‘ಅವೇಕ್‌’ ಸಂಸ್ಥೆ ಆಹಾರಕ್ಕೆ ಸಂಬಂಧಿಸಿದ ಒಂದು ಕಾರ್ಯಕ್ರಮ ನಡೆಸಿತ್ತು. ಅದು ಎಷ್ಟು ಉತ್ತೇಜನ
ಕಾರಿಯಾಗಿತ್ತೆಂದರೆ, ನಾವೂ ಬದುಕಿನಲ್ಲಿ ಸ್ವತಂತ್ರವಾಗಿ ಏನಾದರೂ ಸಾಧಿಸಬೇಕು, ಆರ್ಥಿಕ ಸ್ವಾವಲಂಬನೆ ಮಾಡಬೇಕು ಎಂಬ ತುಡಿತ ಹೆಣ್ಣುಮಕ್ಕಳಲ್ಲಿ ಮೂಡಿಸುವಂತಿತ್ತು. ಇದೇ ಪ್ರೇರಣೆಯಿಂದ ನಮ್ಮ ತಾಯಿ ಮನೆಯಲ್ಲಿ ಹುರಿ ಹಿಟ್ಟು ತಯಾರಿಸಿ ಕೊಡುತ್ತಿದ್ದರು.

ಇದನ್ನು ನಾನು ಕಾರು ಷೆಡ್‌ನಲ್ಲಿ ಇಟ್ಟು ಮಾರಲಾರಂಭಿಸಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಹಂತ ಹಂತವಾಗಿ ರಾಗಿ ದೋಸೆ ಮಿಶ್ರಣ, ಮಕ್ಕಳಿಗಾಗಿಯೇ ವಿಶೇಷ ರಾಗಿ ಮಿಕ್ಸ್‌, ಡ್ರೈಫ್ರುಟ್ಸ್‌ ಎಲ್ಲ ಹಾಕಿ ಮಾಡಿದ ಹೆಲ್ದಿ ಅಂಡ್‌ ಟೇಸ್ಟಿ ಹುರಿಹಿಟ್ಟು ಎಲ್ಲವನ್ನೂ ಮಾಡಲಾರಂಭಿಸಿದೆವು.

‘ಆ ಸಮಯದಲ್ಲಿ ರಾಗಿ ಬಗ್ಗೆ ಜನರಲ್ಲಿ ಇಷ್ಟೊಂದು ಜಾಗೃತಿ ಇರಲಿಲ್ಲ. ಇದು ಆರೋಗ್ಯಕರ ಆಹಾರ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಪಾರ್ಕ್‌ನಲ್ಲಿ, ಮುಖ್ಯ ರಸ್ತೆಗಳ ಬದಿಗಳಲ್ಲಿ ರಾಗಿ ಹುರಿಹಿಟ್ಟು ಪ್ಯಾಕೆಟ್‌ಗಳನ್ನು ಇಟ್ಟು ಮಾರತೊಡಗಿದೆವು. ಮಹಿಳಾ ಮಂಡಳಿಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಿ ರಾಗಿಯನ್ನು ಜನಪ್ರಿಯಗೊಳಿಸಲಾರಂಭಿಸಿದೆ.

ಉದ್ಯಮ ನಿಧಾನಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಬಂತು. ರಾಜ್ಯದಾದ್ಯಂತ ಸುಮಾರು 200 ಮಹಿಳಾ ಮಂಡಳಿಗಳಲ್ಲಿ ನಾವೇ ತಯಾರಿಸಿದ ರಾಗಿ ದೋಸೆ ಮಿಶ್ರಣದ ಪ್ರಾತ್ಯಕ್ಷಿಕೆ  ಮಾಡಿದೆ. ಹಲವು ಸವಾಲುಗಳನ್ನೂ ಎದುರಿಸುತ್ತಾ ಬಂದೆ. ಮಗ ವಿಜಯ್‌ಕುಮಾರ್‌ ಪದವಿ ಓದಿದ್ದರೂ ನನಗೆ ಬೆಂಬಲವಾಗಿ ನಿಂತ. ರಾಗಿ ಇಡ್ಲಿ, ಉಂಡೆ, ಮಾಲ್ಟ್‌ ಮುಂತಾದ ಉತ್ಪನ್ನಗಳನ್ನೂ ತಯಾರು ಮಾಡಲಾರಂಭಿಸಿದೆವು.

ಹೆಚ್ಚು ಬಂಡವಾಳ ಹಾಕಲು ಆರ್ಥಿಕ ಸಮಸ್ಯೆ ಇದ್ದ ಕಾರಣ ಅತ್ಯಂತ ಕಡಿಮೆ ಹಣ ತೊಡಗಿಸಿ, ಬಂದ ಲಾಭಾಂಶವನ್ನು ಮತ್ತೆ ಉದ್ಯಮ ವಿಸ್ತರಣೆಗೇ ಬಳಸಿದೆವು. ಕೆಎಸ್‌ಎಫ್‌ಸಿಯಿಂದ ಸಾಲವನ್ನೂ ಪಡೆದೆ. ದೂರ ದೂರಕ್ಕೆ ಕೈನೆಟಿಕ್‌ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದೆವು. ಇದೀಗ ರಾಗಿ ಹುರಿಹಿಟ್ಟು ಉದ್ಯಮ ಬಹಳ ಜನಪ್ರಿಯವಾಗಿದೆ’ ಎಂದು ತಮ್ಮ ‘ರಾಗಿ ಉದ್ಯಮ ಪಯಣ’ವನ್ನು ವಿವರಿಸುತ್ತಾರೆ ಇಂದಿರಾ ಸಿ. ಗೌಡ.

‘ರಾಗಿ ಬಗ್ಗೆ ಈಗ ಜನರಲ್ಲಿ ಬಹಳ ತಿಳಿವಳಿಕೆ ಬಂದಿದೆ. ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಯೂ ಇದಕ್ಕೆ ಕಾರಣ. ರಾಸಾಯನಿಕಮುಕ್ತ ರಾಗಿಯನ್ನು ವಿವಿಧ ರೂಪಗಳಲ್ಲಿ ಜನರ ಮನೆಗೆ ತಲುಪಿಸಿ ‘ಆಹಾರದಿಂದ ಆರೋಗ್ಯ.. ಆರೋಗ್ಯದಿಂದ ಉತ್ತಮ ಜೀವನ’ ಎಂಬ ಸಂದೇಶವನ್ನು ಸಾರುವುದು ನಮ್ಮ ಉದ್ದೇಶವೂ ಆಗಿದೆ’ ಎನ್ನುತ್ತಾರೆ ಇಂದಿರಾ ಅವರ ಮಗ ವಿಜಯಕುಮಾರ್‌.

ಗುಣಮಟ್ಟಕ್ಕೆ ಆದ್ಯತೆ: ತಾಯಿಯ ಸಲಹೆ, ಮಾರ್ಗದರ್ಶನ ಹಾಗೂ ಗೆಳೆಯರಾದ ಸುಧೀಂದ್ರ ಶರ್ಮ, ಅನೂಪ್‌ ಉತ್ತಯ್ಯ ಮತ್ತು ರಮೇಶ್‌ ಅವರೊಂದಿಗೆ ಇದೇ ಉದ್ಯಮವನ್ನು ವಿಜಯಕುಮಾರ್‌ ಅವರು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಮಾಡಲಾರಂಭಿಸಿದರು. ‘ರಾಗಿ ಹಿಟ್ಟಿನ ಉದ್ಯಮದ ಜತೆಗೆ ಟೊಮೆಟೊ ಕೆಚಪ್‌, ಹಣ್ಣುಗಳ ಜಾಮ್‌, ಹುಣಸೆಹಣ್ಣಿನ ಪೇಸ್ಟ್‌ ಮಾಡಿದ್ದೀವಿ. ಇದರ ಹಿಂದೆ ಅಪಾರ ಶ್ರಮವಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಬಹಳ ಗಮನ ಕೊಡಬೇಕಾಗುತ್ತದೆ.

ಬಹಳಷ್ಟು ಸಂಶೋಧನೆ ಮಾಡಬೇಕು. ಮಷಿನ್‌ ಡಿಸೈನ್‌, ತಳಿ, ಮಾಯಿಶ್ಚರೈಸರ್‌, ಶಾಖ ಕೊಟ್ಟು ಪುಡಿ ಮಾಡುವುದು, ಆಕರ್ಷಕ ಪ್ಯಾಕಿಂಗ್‌ ಡಿಸೈನ್‌ ಮಾಡುವುದು, ಪ್ರತಿಯೊಂದು ಅಂಗಡಿಗೆ ತಲುಪಿಸುವುದು..ಹೀಗೆ ನಾನಾ ಹಂತಗಳಲ್ಲಿ ಪರಿಶ್ರಮದಿಂದ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳುತ್ತಾರೆ ವಿಜಯ್‌.

‘ಮೊದಲಿಗೆ ನಮ್ಮ ಅಮ್ಮ ರಾಗಿ ಹುರಿಹಿಟ್ಟು ಅನ್ನು ಮನೆಯಲ್ಲೇ ಮಾಡಿಕೊಳ್ತಾ ಇದ್ರು. ಸಂಜೆ ಮಕ್ಕಳಿಗೆ ಸ್ನ್ಯಾಕ್ಸ್‌ ಆಗಿ ಕೊಡುವಂಥದ್ದು. ಇದನ್ನು ಮಾಡೋದು ಕಷ್ಟ. ರಾಗಿಯನ್ನು ನೆನೆಸಬೇಕು, ಹುರಿಬೇಕು, ಪೌಡರ್‌ ಮಾಡಿ ಅದು ಗಾಳಿಯಾಡಿ ಹಾಳಾಗದಂತೆ ಕಾಪಾಡಿಕೊಳ್ಳಬೇಕು. ಹುರಿಹಿಟ್ಟು ಸ್ಪೆಷಲ್‌, ರಾಗಿ ದೋಸೆ ಮಿಕ್ಸ್ ಮಾಡುವಾಗ ರಾಗಿಯನ್ನು ಅತಿ ಹೆಚ್ಚು ಶಾಖ ಕೊಟ್ಟು ಅರಳಿಸಿ ಪುಡಿ ಮಾಡಿ ರಾಗಿ ಹುರಿಹಿಟ್ಟು ಮಾಡ್ತೀವಿ. ಇದು ಲಘು ಆಹಾರ, ಪೌಷ್ಟಿಕ ಆಹಾರ. ನಾನಾ ರೀತಿಯಿಂದ ಬಳಕೆ ಮಾಡಬಹುದು’ ಎಂದು ವಿವರ ನೀಡುತ್ತಾರೆ ವಿಜಯ್.

ಪೌಷ್ಟಿಕಾಂಶಗಳ ಆಗರ: ‘ಬೆಳಿಗ್ಗೆ ಲಘು ಆಹಾರವಾಗಿ ಹಾಲಿನ ಜತೆ ರಾಗಿ ಹುರಿಹಿಟ್ಟು ತಗೊಂಡರೆ ಪೌಷ್ಟಿಕಾಂಶ ಸಿಗುತ್ತದೆ. ರಾಗಿ ದೋಸೆ ಅಂತೂ ಇಂದಿನ ವೇಗದ ಬದುಕಿನಲ್ಲಿ ದಿಢೀರ್‌ ಆಗಿ ಮಾಡಬಹುದು. 10 ನಿಮಿಷದಲ್ಲಿ ರಾಗಿ ದೋಸೆ ರೆಡಿ. ಗರಿ ಗರಿಯಾಗಿ ದೋಸೆ ಮಾಡಿ ತಿನ್ನಬಹುದು. ಸಂಜೆ ಹೊಟ್ಟೆ ಹಸಿದಾಗ ಹುರಿಹಿಟ್ಟನ್ನು ನೀರಿನಲ್ಲಿ ಕಲಸಿ ಉಂಡೆ ಮಾಡಿ ತಿನ್ನಬಹುದು. ಅಥವಾ ಬಿಸಿ ಹಾಲು ಹಾಕಿ ಹಾಗೇ ಕುಡಿಯಬಹುದು. ‘ರಾಗಿ ಹುರಿಹಿಟ್ಟು ವಿಶೇಷ’ ಎಂಬ ಉತ್ಪನ್ನ ಮಕ್ಕಳು ಮತ್ತು ಹದಿಹರೆಯದವರಿಗಾಗಿಯೇ ಮಾಡಿರುವುದು. ಬಾರ್ಲಿ ಮಾಲ್ಟ್‌ ಎಕ್ಸ್‌ಟ್ರ್ಯಾಕ್ಟ್‌ ಇರುವುದರಿಂದ ಮಕ್ಕಳ ಆರೋಗ್ಯ ಬಾರೀ ಒಳ್ಳೆಯದು’ ಎಂದೂ ಅವರು ಹೇಳುತ್ತಾರೆ.

ಸದಾ ಗುಣಮಟ್ಟವನ್ನೇ ಕಾಯ್ದುಕೊಂಡು ಬಂದ ಕಾರಣ ಇದೀಗ ಇಂದಿರಾ ರಾಗಿ ಉತ್ಪನ್ನಗಳು ವಿದೇಶಗಳಿಗೂ ರಫ್ತಾಗುತ್ತಿವೆ. ಬೆಂಗಳೂರಿನ ಬಹುತೇಕ ಎಲ್ಲ ಸೂಪರ್ ಮಾರ್ಕೆಟ್‌, ಬಜಾರ್‌ಗಳಲ್ಲೂ ಇಂದಿರಾ ರಾಗಿ ಉತ್ಪನ್ನ ಲಭ್ಯ. ಉದ್ಯಮಶೀಲತೆಯಲ್ಲಿ ಸದಾ ಪರಿಶ್ರಮ, ಸಾಧನೆ ಮೂಲಕ ಇಂದಿರಾ ಅವರದ್ದು ಇತರರು ಅನುಸರಿಸಬಹುದಾದ ಯಶೋಗಾಥೆಯಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ವಾಣಿಜ್ಯ
ಬದಲಾವಣೆ ಹಾದಿಯಲ್ಲಿ ಜಿಎಸ್‌ಟಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಆರು ತಿಂಗಳು ಪೂರ್ಣಗೊಂಡಿದ್ದು, ಹಲವು ಏರಿಳಿತಗಳ ಹೊರತಾಗಿಯೂ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು ನಿಧಾನವಾಗಿ...

17 Jan, 2018
50ನೇ ವರ್ಷಕ್ಕೆ ನಿವೃತ್ತಿ ಯೋಜನೆ

ವಾಣಿಜ್ಯ
50ನೇ ವರ್ಷಕ್ಕೆ ನಿವೃತ್ತಿ ಯೋಜನೆ

17 Jan, 2018
ಈಗ ಸ್ಮಾರ್ಟ್‌ಹೋಂ ಸಮಯ

ವಾಣಿಜ್ಯ
ಈಗ ಸ್ಮಾರ್ಟ್‌ಹೋಂ ಸಮಯ

17 Jan, 2018
ವೈರ್‌ಲೆಸ್‌ ಮೊಬೈಲ್ ಚಾರ್ಜರ್

ವಾಣಿಜ್ಯ
ವೈರ್‌ಲೆಸ್‌ ಮೊಬೈಲ್ ಚಾರ್ಜರ್

17 Jan, 2018
ಬರಲಿವೆ ಅದ್ಭುತ ತಂತ್ರಜ್ಞಾನಗಳು

ವಾಣಿಜ್ಯ
ಬರಲಿವೆ ಅದ್ಭುತ ತಂತ್ರಜ್ಞಾನಗಳು

17 Jan, 2018