ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಬದಲಿಗೆ ಐಟಿಎಂ!

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ದಿನದ 24 ಗಂಟೆಯೂ ಶೇ 90ರಷ್ಟು ಬ್ಯಾಂಕಿಂಗ್‌ ಸೇವೆಗಳನ್ನು ಎಟಿಎಂ ಕೇಂದ್ರಗಳ ಮೂಲಕ ಒದಗಿಸಲು ಪ್ರಯೋಗಗಳು ನಡೆಯುತ್ತಿವೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಇಂಟರ‍್ಯಾಕ್ಟೀವ್‌ ಟೆಲ್ಲರ್‌ ಮಷಿನ್‌ಗಳನ್ನು (ಐಟಿಎಂ) ಅಳವಡಿಸಲು ಬ್ಯಾಂಕ್‌ಗಳು ಚಿಂತನೆ ನಡೆಸುತ್ತಿವೆ.

ಇವುಗಳ ಮೂಲಕ ಬ್ಯಾಂಕ್ ಸಿಬ್ಬಂದಿ ಜೊತೆ ನೇರವಾಗಿ ವಿಡಿಯೊ ಸಂಪರ್ಕ ಸಾಧಿಸಬಹುದು. ಫೋನ್‌ ಮೂಲಕವೂ ಮಾತನಾಡಿಸಿ ಸಮಸ್ಯೆಗಳು, ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಉದಾಹರಣೆಗೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಕಳೆದುಹೋದರೆ, ನೀವು ಖಾತೆ ತೆರೆದಿರುವ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಕಳೆದು ಹೋದುದನ್ನು ನಿಷ್ಕ್ರಿಯಗೊಳಿಸಿ ಮತ್ತೊಂದನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ ಬಿಡುವಿಲ್ಲದಿದ್ದರೂ ಬಿಡುವು ಮಾಡಿಕೊಂಡು ಬ್ಯಾಂಕ್‌ಗೆ ಹೋಗಬೇಕು.

ಆದರೆ, ಐಟಿಎಂಗಳು ಬಳಕೆಗೆ ಬಂದರೆ, ಬ್ಯಾಂಕ್ ಖಾತೆ ಜೊತೆಗೆ ಸಂಪರ್ಕ ಕಲ್ಪಿಸಿರುವ ಆಧಾರ್ ಕಾರ್ಡ್‌, ಪ್ಯಾನ್ ಕಾರ್ಡ್‌ ಇತ್ಯಾದಿ ದಾಖಲೆಗಳನ್ನು ಒದಗಿಸಿ ಕೂಡಲೇ ಸಮಸ್ಯೆ ಪರಿಹರಿಸಿಕೊಳ್ಳಬಹುದು. ವಿಡಿಯೊ ಮಾನಿಟರ್ ಮುಂದೆ ನಿಮ್ಮ ದಾಖಲೆಗಳನ್ನು ಪ್ರದರ್ಶಿಸಿದರೆ ಸಾಕು ಬ್ಯಾಂಕ್ ಸಿಬ್ಬಂದಿ ಪರಿಶೀಲಿಸುತ್ತಾರೆ.

ಐಟಿಎಂಗಳಿಂದ ಬ್ಯಾಂಕ್‌ಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದರ ಜತೆಗೆ ಗ್ರಾಹಕರಿಗೆ  ಮತ್ತಷ್ಟು ಗುಣಮಟ್ಟದ ಸೇವೆ ಒದಗಿಸಲು ನೆರವಾಗಲಿವೆ ಎಂದು ಹೇಳಲಾಗುತ್ತಿದೆ.

ನಾವೊಬ್ಬರೇ ಬ್ಯಾಂಕ್ ಸಿಬ್ಬಂದಿ ಜೊತೆ ನೇರವಾಗಿ ಮಾತನಾಡುವುದರಿಂದ ನಗದು ಹಿಂಪಡೆಯುವುದು, ದಾಖಲೆಗಳ ಪರಿಶೀಲನೆ ಇತ್ಯಾದಿ ವಹಿವಾಟುಗಳಲ್ಲಿ ಹೆಚ್ಚು ಸುರಕ್ಷತೆ ಇರುತ್ತದೆ. ಬ್ಯಾಂಕ್‌ಗಳೂ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತವೆ.

ಐಟಿಎಂಗಳಿಂದ ಸಣ್ಣ ವರ್ತಕರು ನಿತ್ಯ ಎದುರಿಸುವ ಚಿಲ್ಲರೆ ಸಮಸ್ಯೆಗೆ ಕಡಿವಾಣ ಬೀಳಲಿದೆ. ಚಿಲ್ಲರೆ ಬೇಕಿದ್ದರೆ ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಆದರೆ, ಐಟಿಎಂಗಳ ಮೂಲಕ ಬ್ಯಾಂಕ್ ಸಿಬ್ಬಂದಿ ಜೊತೆ ಮಾತನಾಡಿಸಿ ನಗದು ಹಿಂಪಡೆಯುವಾಗ ₹2,000, ₹500, ₹200, ₹100, ₹50, ₹20, ₹10, ಹೀಗೆ ಅಗತ್ಯವಾದ ನೋಟುಗಳನ್ನೇ ಕೇಳಿ ಪಡೆದುಕೊಳ್ಳಬಹುದು.

ಶೀಘ್ರ ವಹಿವಾಟು: ಐಟಿಎಂಗಳ ಮುಖ್ಯ ಉಪಯೋಗವೆಂದರೆ ಶೀಘ್ರ ವಹಿವಾಟು. ಬ್ಯಾಂಕ್‌ ಶಾಖೆಗಳಲ್ಲಿ ಕಾಯುವಷ್ಟು ಹೊತ್ತು ಇಲ್ಲಿ ಕಾಯುವ ಅಗತ್ಯವಿರುವುದಿಲ್ಲ. ಚೆಕ್‌, ನಗದು ಪಾವತಿ, ಹಿಂಪಡೆಯುವಿಕೆ ಇತ್ಯಾದಿ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಬಹುದು.

ಎಟಿಎಂಗಳಿಗೆ ಕನ್ನ ಹಾಕುವಂತೆ ಐಟಿಎಂಗಳಿಗೆ ಕನ್ನ ಹಾಕಲು ಸಾಧ್ಯವಿಲ್ಲ. ಐಟಿಎಂ ಕೇಂದ್ರಗಳ ಜೊತೆ ಬ್ಯಾಂಕ್‌ ಸಿಬ್ಬಂದಿ ಸದಾ ಸಂಪರ್ಕದಲ್ಲಿ ಇರುವುದರಿಂದ ಇಲ್ಲಿರುವ ಹಣ ಹೆಚ್ಚು ಸುರಕ್ಷಿತವಾಗಿರುತ್ತದೆ.

ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಇಂತಹ ಐಟಿಎಂ ಕೇಂದ್ರಗಳನ್ನು ಏರ್ಪಡಿಸಿದರೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಇದನ್ನು ಬಳಸಿಕೊಳ್ಳುವುದು ಗ್ರಾಹಕರಿಗೆ ಗೊತ್ತಿರಬೇಕು. ಇಲ್ಲದಿದ್ದರೆ ಸಾಮಾನ್ಯ ಎಟಿಎಂ ಕೇಂದ್ರಗಳಿಗೂ ಇವುಗಳಿಗೂ ಏನೂ ವ್ಯತ್ಯಾಸವಿರುವುದಿಲ್ಲ.

ಗ್ರಾಹಕರೂ ಅಷ್ಟೇ ಅಗತ್ಯ ವಹಿವಾಟುಗಳಿಗೆ ಮಾತ್ರ ಬ್ಯಾಂಕ್ ಸಿಬ್ಬಂದಿ ಸಹಾಯ ಪಡೆದರೆ ಒಳ್ಳೆಯದು, ಸಣ್ಣ–ಪುಟ್ಟ ವಿಷಯಗಳಿಗೂ ಬಳಸಿಕೊಂಡರೆ ದುರುಪಯೋಗವಾಗುವ ಸಾಧ್ಯತೆಯೂ ಇದೆ.

ಭವಿಷ್ಯದ ಬ್ಯಾಂಕ್‌ಗಳೆಂದೇ ಬಿಂಬಿಸಲಾಗುತ್ತಿರುವ ಐಟಿಎಂಗಳಲ್ಲಿ ಮೊಬೈಲ್ ವಹಿವಾಟುಗಳಿಗೂ ನೆರವಾಗುವಂಥ ಕ್ಯೂಆರ್ ಕೋಡ್‌ ಸೌಲಭ್ಯವೂ ಇರುತ್ತದೆ. ಬಯೊಮೆಟ್ರಿಕ್ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಬ್ಯಾಂಕ್‌ಗಳು ಗ್ರಾಹಕರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT