ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ಶಾಲಾ ಕಟ್ಟಡ: ಆಕ್ರೋಶ

Last Updated 15 ನವೆಂಬರ್ 2017, 5:09 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನಲ್ಲಿ ಗ್ರಾಮೀಣರಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜಯಕುಮಾರ ಬೇಟಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಆರೋಗ್ಯ ಸೌಲಭ್ಯ, ಶಾಲಾ ಕಟ್ಟಡ ಮತ್ತು ಕುಡಿಯುವ ನೀರಿನ ಸೌಲಭ್ಯ ಅಧಿಕಾರಿಗಳು ಸರಿಯಾಗಿ ಕಲ್ಪಿಸಬೇಕು. ತಾಲ್ಲೂಕಿನಲ್ಲಿ 89 ಶಾಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲವಾಗಿವೆ. ಅನುದಾನ ಮಂಜೂರಾದ ಕೂಡಲೇ ಶಾಲಾ ಕಟ್ಟಡ ಕಾಮಗಾರಿ ಆರಂಭಿಸಬೇಕು. ಶೇ 50ರಷ್ಟು ಶಾಲೆ ಬಲವರ್ಧನೆ ಯೋಜನೆಯಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.

ತಾಲ್ಲೂಕಿನಲ್ಲಿ 130 ಶಾಲೆಗಳ ದುರಸ್ತಿಗೆ ₹ 52 ಕೋಟಿ ಅಂದಾಜು ವೆಚ್ಚದ ಪ್ರಸ್ತಾವವನ್ನು ಶಿಕ್ಷಣ ಇಲಾಖೆಯ ಮೂಲಕ ಸರ್ಕಾರಕ್ಕೆ ಕಳಿಸಲಾಗಿದೆ. ಇನ್ನೂ ಅನುದಾನ ಮಂಜೂರಾಗಿ ಬಂದಿಲ್ಲ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್‌.ಎಸ್‌. ಹತ್ತಳ್ಳಿ ಸಭೆಯಲ್ಲಿ ತಿಳಿಸಿದರು.

‘ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವು ಗ್ರಾಮಗಳಲ್ಲಿ ಇನ್ನೂ ಆರಂಭವೇ ಆಗಿಲ್ಲ. ಕೆಲವೆಡೆ ಹಾಳಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಟಗೇರಿ ಗ್ರಾಮದಲ್ಲಿ ಭೂಸೇನಾ ನಿಗಮದಿಂದ ಹಾಕಲಾಗಿದ್ದ ನೀರಿನ ಘಟಕವನ್ನು ಕೆಲವರು ದುರುದ್ದೇಶದಿಂದ ಬಂದ್‌ ಮಾಡಿಸಿದ್ದಾರೆ. ಪುನರ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕೈಲಾಸ ಕುಂಬಾರ ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯಿಂದ ಬರೀ ತೆಂಗಿನ ಸಸಿ ವಿತರಿಸಲಾಗುತ್ತಿದೆ. ಜೊತೆಗೆ ಮಾವು, ಚಿಕ್ಕು, ಪೇರಲ ಮತ್ತಿತರ ಹಣ್ಣಿನ ಸಸಿಗಳನ್ನು ಕೊಡಿ ಎಂದು ಸದಸ್ಯ ನಿಂಗಪ್ಪ ಹೊಸಮನಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಹಿಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 42,480 ಹೆಕ್ಟೆರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿ ಡಿ.ಎಚ್‌. ನರಹಟ್ಟಿ ಹೇಳಿದರು.

ಫಸಲ್‌ಭೀಮಾ ಯೋಜನೆಯ ವಿಮೆ ಹಣ ಇನ್ನೂ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಸಂಗೆಪ್ಪ ನಕ್ಕರಗುಂದಿ, ಶರಣಬಸಪ್ಪ ಹಂಚಿನಮನಿ ತಾಲ್ಲೂಕು ಪಂಚಾಯ್ತಿ ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಖಾರಿ ಜೆ.ಜಿ. ಹೂಗಾರ ಇದ್ದರು. ಎಂ.ಬಿ. ದೊಡ್ಡಪ್ಪನವರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT