ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ನಗರಿಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌

Last Updated 15 ನವೆಂಬರ್ 2017, 5:35 IST
ಅಕ್ಷರ ಗಾತ್ರ

ಮಂಗಳೂರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶಿಕ್ಷಣ, ಪ್ರವಾಸೋದ್ಯಮ, ಕೈಗಾರಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಕುಡ್ಲದಲ್ಲಿ ಈಗ ಪ್ಲಾಸ್ಟಿಕ್ ಪಾರ್ಕ್‌ನ ಗಾಳಿ ಬೀಸುತ್ತಿದೆ. ಹತ್ತು ಹಲವು ಯೋಜನೆಗಳ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ, ಪ್ಲಾಸ್ಟಿಕ್‌ ಪಾರ್ಕ್‌ ಮೂಲಕ ದೇಸಿಯ ಪ್ಲಾಸ್ಟಿಕ್‌ ಬೇಡಿಕೆಯನ್ನು ಪೂರೈಸಲು ಸಜ್ಜಾಗುತ್ತಿದೆ.

ಹೌದು, ಕೇಂದ್ರ ಸರ್ಕಾರದ ಯೋಜನೆಯಂತೆ ಮಂಗಳೂರಿನ ಹೊರವಲಯದ ಗಂಜಿಮಠ ಹಾಗೂ ಗುರುಪುರ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ತಲೆ ಎತ್ತಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದಲೇ ಆರಂಭವಾಗಿವೆ. ಈಗಾಗಲೇ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಸುಮಾರು 90 ಎಕರೆ ಜಾಗವನ್ನು ಗುರುತಿಸಲಾಗಿದೆ.

₹1 ಸಾವಿರ ಕೋಟಿ ವೆಚ್ಚದ ಈ ಯೋಜನೆಯಡಿ ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗಲಿದ್ದು, ಇನ್ನೊಂದೆಡೆ ದೇಶದಲ್ಲಿ ಬೇಡಿಕೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ.

ಕಡಿಮೆ ಪ್ಲಾಸ್ಟಿಕ್ ವಹಿವಾಟು: ದೇಶದಲ್ಲಿ ಹಲವಾರು ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ ಘಟಕಗಳಿದ್ದರೂ, ಜಾಗತಿಕ ಪ್ಲಾಸ್ಟಿಕ್‌ ವಹಿವಾಟಿನಲ್ಲಿ ದೇಶದ ಕೊಡುಗೆ ಅತ್ಯಂತ ಕಡಿಮೆ. ದೇಶದಲ್ಲಿರುವ ಪ್ಲಾಸ್ಟಿಕ್ ತಯಾರಿಕೆ ಘಟಕಗಳು ಲಘು ಮತ್ತು ಸಣ್ಣ ಪ್ರಮಾಣದಲ್ಲಿದ್ದು, ದೇಶದ ಬೇಡಿಕೆಯನ್ನು ಪೂರೈಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹು
ತೇಕ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಹೊರ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ.

ಇದನ್ನು ನಿವಾರಿಸುವುದಕ್ಕಾಗಿಯೇ ದೇಶದ ವಿವಿಧೆಡೆ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರದ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಸಚಿವಾಲಯವು ಮುಂದಾಗಿದೆ.
ಇದರ ಪರಿಣಾಮವಾಗಿ 12ನೇ ಪಂಚ ವಾರ್ಷಿಕ ಯೋಜನೆಯಡಿ ಪಂಜಾಬ್‌, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಹಾಗೂ ಆಂಧ್ರಪ್ರದೇಶಗಳಲ್ಲಿ ಆರು ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು.

ಇದರ ಜತೆಗೆ ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಆಸ್ಸಾಂಗಳಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಪ್ಲಾಸ್ಟಿಕ್‌ ಹಬ್‌ ಎಂದೇ ಖ್ಯಾತವಾಗಿರುವ ಒಡಿಶಾದ ಬಾಲಸೋರ್‌ನಲ್ಲಿ ಮೊದಲ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಪರಿಸರ ಸ್ನೇಹಿ ಪ್ಲಾಸ್ಟಿಕ್‌ನ ಮರುಬಳಕೆ, ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆಗೆ ಅವಕಾಶ ಕಲ್ಪಿಸಲಾಗಿದೆ.

190 ಎಕರೆ ಜಮೀನು: ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಸುಮಾರು 190 ಎಕರೆ ಜಮೀನು ಅಗತ್ಯವಾಗಿದ್ದು, ಇದಕ್ಕಾಗಿ ನಗರದ ಹೊರವಲಯದ ಗಂಜಿಮಠ ಹಾಗೂ ಗುರುಪುರಗಳಲ್ಲಿ ಈಗಾಗಲೇ 90 ಎಕರೆ ಜಮೀನು ಗುರುತಿಸಲಾಗಿದೆ. ಇನ್ನೂ 100 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ.

ಈ ಮೊದಲು ಪ್ಲಾಸ್ಟಿಕ್‌ ಪಾರ್ಕ್‌ಗಾಗಿ ಮುಡಿಪು ಹಾಗೂ ಶಿಬರೂರಿನಲ್ಲಿ ಜಾಗವನ್ನು ಗುರುತಿಸಲಾಗಿತ್ತು. ಆದರೆ, ಪ್ಲಾಸ್ಟಿಕ್‌ ಉದ್ಯಮಗಳ ಸ್ಥಾಪನೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಇದೀಗ ಗುರುಪುರ ಹಾಗೂ ಗಂಜಿಮಠದ ಬಳಿ ಜಾಗವನ್ನು ಗುರುತಿಸಲಾಗಿದೆ.

‘ಈ ಜಾಗದಲ್ಲಿ ಘಟಕ ಸ್ಥಾಪನೆಗೆ ಈಗಾಗಲೇ 36 ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಪಾರ್ಕ್‌ಗೆ ಅಗತ್ಯವಿರುವ ರಸ್ತೆ, ಒಳಚರಂಡಿ, ವಿದ್ಯುತ್‌ ಸರಬರಾಜು, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಿದಲ್ಲಿ, ಇನ್ನೂ ಹೆಚ್ಚಿನ ಘಟಕಗಳು ಸ್ಥಾಪನೆ ಆಗಲಿವೆ. ಇದರಿಂದ ಒಟ್ಟಾರೆ 30 ಸಾವಿರ ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ’ ಎನ್ನುವುದು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ವಿವರಣೆ.

ಆರಂಭದಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಿದೆ. ಸೌಕರ್ಯಗಳನ್ನು ಒದಗಿಸಿದ ನಂತರ, ಘಟಕಗಳು ಸ್ಥಾಪನೆ ಆಗಲಿವೆ. ಈ ಪ್ರದೇಶದಲ್ಲಿ ಪ್ಲಾಸ್ಟಿಕ್‌ನ ಎಲ್ಲ ಬಗೆಯ ಉದ್ಯಮಗಳು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಪರಿಸರ ಸ್ನೇಹಿಯಾಗಿ ಪ್ಲಾಸ್ಟಿಕ್‌ನ ಮರುಬಳಕೆ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT