ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿನಾಚರಣೆಗಳು ವಿವಾದಾತ್ಮಕ ಸ್ವರೂಪ ಪಡೆಯುತ್ತಿವೆ‘

Last Updated 15 ನವೆಂಬರ್ 2017, 5:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಾರ್ವತ್ರಿಕವಾಗಿ ಆಚರಿಸುವ ದಿನಾಚರಣೆಗಳು ವಿವಾದಾತ್ಮಕ ಸ್ವರೂಪ ಪಡೆಯುತ್ತಿರುವುದು ವಿಷಾದಕರ ಸಂಗತಿ. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಆಚರಣೆಗಳನ್ನು ಕೌಟುಂಬಿಕವಾಗಿ ಆಚರಿಸುವುದು ಪ್ರಸ್ತುತವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ನಗರದ ಖಾಸ್‌ಬಾಗ್‌ನಲ್ಲಿರುವ ಶ್ರೀಗಂಗಾ,ಭಗತ್ ಸಿಂಗ್- ಚಂದ್ರಶೇಖರ್ಆಜ಼ಾದ್ ಆಸ್ಪತ್ರೆಯ ವತಿಯಿಂದ ನೀಡಲಾಗುವ ರೈತ ನಾಯಕ ದಿವಂಗತ ಡಾ.ವೆಂಕಟರೆಡ್ಡಿ ನೆನಪಿನ ಪ್ರಶಸ್ತಿ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮೊದಲಾದ ಆಚರಣೆಗಳನ್ನು ಕುಟುಂಬದಲ್ಲಿ ಆಚರಿಸಿದರೆ ಅದರ ಮಹತ್ವವೇ ಬೇರೆ ಎನ್ನುವುದಕ್ಕೆ ಇಂದು ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ನಿದರ್ಶನವಾಗಿದೆ.

ನಾಡಗೀತೆಯನ್ನು ಹಾಡಿದರೆ ಸಾಲದು ಅದರ ಅರ್ಥ ತಿಳಿಯಬೇಕು. ಸರ್ವಜನಾಂಗದ ಶಾಂತಿಯ ತೋಟ ಎನ್ನುತ್ತೇವೆ. ಆದರೆ ಧರ್ಮದ ಹೆಸರಿನಲ್ಲಿ ಶಾಂತಿಗೆ ಭಂಗ ತರುವ ಸಂಗತಿಗಳು ನಡೆಯುತ್ತಿವೆ. ಇಂತಹವರ ವಿರುದ್ಧ ನಾವು ದನಿ ಎತ್ತಬೇಕು. ನಾಡು ನುಡಿಗಳ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು. ರಾಷ್ಟ್ರಭಕ್ತಿ ನಮ್ಮ ಉಸಿರಾಟದಂತಿರಬೇಕು ಎಂದರು.

ದಿವಂಗತ ಡಾ.ಡಿ.ಆರ್.ನಟರಾಜ್ ಅವರ ಸಾಧನೆಯ ಬಗ್ಗೆ ಸ್ಮರಿಸಿ ಅಗ್ರಹಾರ ಕೃಷ್ಣಮೂರ್ತಿ, ದೊಡ್ಡಬಳ್ಳಾಪುರದಲ್ಲಿ ಹುಟ್ಟಿದ ಡಿಆರ್ಎನ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದರು. ವಿಮರ್ಶಾ ಕ್ಷೇತ್ರದಲ್ಲಿ ಅದ್ವಿತೀಯರಾಗಿದ್ದರು. ಡಾ.ವೆಂಕಟರೆಡ್ಡಿ, ರುಮಾಲೆ ಚೆನ್ನಬಸವಯ್ಯ, ಕೊಂಗಾಡಿಯಪ್ಪ, ಅವರಂತಹ ಮಹನೀಯರನ್ನು ಸ್ಮರಿಸುತ್ತಿರುವುದು ಹಾಗೂ ವೃತ್ತಿ ಮತ್ಸರ ಹೆಚ್ಚಾಗಿರುವ ಇವತ್ತಿನ ದಿನಗಳಲ್ಲಿ ತಮ್ಮ ವೃತ್ತಿಯ ವೈದ್ಯರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಡಾ.ವೆಂಕಟರೆಡ್ಡಿ ಅವರಂತಹ ಸಮಾಜಸೇವಕರು ತಮ್ಮ ವೃತ್ತಿಯೊಂದಿಗೆ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿ, ಸಮಾಜದಲ್ಲಿ ಸದಾ ಒಡನಾಟವಿಟ್ಟುಕೊಂಡಿದ್ದರು. ಇಂದು ಭಾಷಾ ಪ್ರೇಮ ತೋರ್ಪಡಿಕೆಯಾಗುತ್ತಿರುವುದು ಹೆಚ್ಚಾಗುತ್ತಿದೆ. ಮನೆಯಲ್ಲಿ ಸಾಹಿತ್ಯದ ವಾತಾವರಣ ಸೃಷ್ಟಿಯಾಗುತ್ತಿಲ್ಲ ಎಂದು ವಿಷಾದಿಸಿದರು.

ಶ್ರೀಗಂಗಾ, ಭಗತ್ ಸಿಂಗ್- ಚಂದ್ರಶೇಖರ್ಆಜ಼ಾದ್ ಆಸ್ಪತ್ರೆಯ ನಿರ್ದೇಶಕ ಡಾ.ರಮೇಶ್‌ಗೌಡ ಮಾತನಾಡಿ, ನಾಡು ನುಡಿಗಾಗಿ ಸೇವೆ ಸಲ್ಲಿಸಿದವರ ಹಾಗೂ ವಿಶೇಷವಾಗಿ ದೊಡ್ಡಬಳ್ಳಾಪುರದ ಸಾಧಕರ ಸ್ಮರಣೆಯೊಂದಿಗೆ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ನೆಲದ ಸಾಧಕರ ಪರಿಚಯ ಇಂದಿನ ಪೀಳಿಗೆಗೆ ಆಗಬೇಕು. ಅವರ ಸಾಧನೆಗಳು ನಮಗೆ ಸ್ಪೂರ್ತಿಯಾಗಬೇಕು ಎಂದರು.

ಸಮಾರಂಭದಲ್ಲಿ ದಿವಂಗತ ಡಾ.ಡಿ.ಆರ್.ನಾಗರಾಜ್ ಅವರಿಗೆ ಮರಣೋತ್ತರವಾಗಿ ನೀಡಲಾದ ಡಾ.ವೆಂಕಟರೆಡ್ಡಿ ನೆನಪಿನ ಪ್ರಶಸ್ತಿ ಪುರಸ್ಕಾರವನ್ನು ಡಿ.ಆರ್.ನಾಗರಾಜ್ ಅವರ ಪತ್ನಿ ಗಿರಿಜಾ ನಾಗರಾಜ್ ಸ್ವೀಕರಿಸಿದರು.

ಯುವ ವೈದ್ಯರಾದ ಡಾ.ಕೆ.ಎಸ್.ಲೋಕೇಶ್, ಡಾ.ಮುಕುಂದ, ಡಾ.ಸ್ನೇಹ ಜೆ.ಪ್ರಮೋದ್ ಅವರಿಗೆ ಡಾ.ವೆಂಕಟರೆಡ್ಡಿ ನೆನಪಿನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಭಗತ್‌ಸಿಂಗ್, ಕೊಂಗಾಡಿಯಪ್ಪ, ಟಿ.ಸಿದ್ದಲಿಂಗಯ್ಯ ಅವರ ಕುರಿತಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್‌ಕುಮಾರ್, ನಗರಸಭೆ ಸದಸ್ಯ ಎಂ.ಮಲ್ಲೇಶ್, ರೈತ ಮುಖಂಡರಾದ ಕೆ.ಸುಲೋಚನಮ್ಮವೆಂಕಟರೆಡ್ಡಿ, ಪ್ರಾಧ್ಯಾಪಕ ಕೆ.ಆರ್.ರವಿಕಿರಣ್, ತಾಲ್ಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ತಾಲ್ಲೂಕು ಶಿವರಾಜ್‌ಕುಮಾರ್ ಸೇನಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರಮೇಶ್, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ನಾಯಕ್, ಕರವೇ ಪ್ರವೀಣ್ ಶೆಟ್ಟಿ ಭಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಪುನೀತ್ ರಾಜ್‌ಕುಮಾರ್ ಅಭಿಮಾಳ ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT