ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದನಾಯಕನಹಳ್ಳಿ:ಅಕ್ರಮ ಗಣಿಗಾರಿಕೆ ಸಂಕಷ್ಟ

Last Updated 15 ನವೆಂಬರ್ 2017, 6:41 IST
ಅಕ್ಷರ ಗಾತ್ರ

ದೇವನಹಳ್ಳಿ: ಬಿರುಕು ಬಿಟ್ಟ ಗೋಡೆಗಳು, ಸದ್ದು ಮಾಡುತ್ತಿರುವ  ಆಧುನಿಕ ಜೆಸಿಬಿ ಯಂತ್ರಗಳು, ಜನರು ನಡೆದಾಡುವ ರಸ್ತೆಯಲ್ಲಿ ತಡೆಗೆ ಅಡ್ಡಲಾಗಿ ಹಾಕಿರುವ ಬೃಹತ್ ಬಂಡೆಗಳು– ಇದು ದೇವನಹಳ್ಳಿ ತಾಲ್ಲೂಕು ಮುದ್ದ ನಾಯಕನಹಳ್ಳಿ ಗ್ರಾಮದ ಸುತ್ತ ಕಂಡು ಬರುವ ಚಿತ್ರಣ.

ತಾಲ್ಲೂಕಿನ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೊಯಿರಾ ಚಿಕ್ಕಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಪರವಾನಗಿ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯನ್ನು ಭೂ ಮತ್ತು ಗಣಿ ಇಲಾಖೆ ನಿಷೇಧಿಸಿ ನಾಲ್ಕು ವರ್ಷ ಕಳೆದಿದೆ. ಈ ನಡುವೆ ಚಿಕ್ಕಗೊಲ್ಲಹಳ್ಳಿ ಬಳಿ ಇರುವ ಕಲ್ಲು ಗಣಿಯಲ್ಲಿ ವಿಶ್ವಕರ್ಮ ಶಿಲಾಮೂರ್ತಿಗಾಗಿ ಕಲ್ಲು ಹೊರ ತೆಗೆಯಲು ಪರವಾನಗಿ ಪಡೆಯಲಾಗಿದೆ.

ಇದರ ಜತೆಗೆ ಶಿಲಾ ಮೂರ್ತಿ ಪೀಠದ ಕಲ್ಲಿಗಾಗಿ ಅನುಮತಿ ಪಡೆದು ಇದರ ಜತೆಗೆ ಸಾಕಷ್ಟು ಅಕ್ರಮವಾಗಿ ಕಲ್ಲು ಲೂಟಿಯಾಗುತ್ತಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಇಲಾಖೆ ಕೈಕಟ್ಟಿಕೊಂಡು ಕುಳಿತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಿದಲೂರು ಗ್ರಾಮ ಮತ್ತು ಮುದ್ದನಾಯಕನಹಗಳ್ಳಿ ಗ್ರಾಮದ ಸರ್ವೇ ನಂಬರ್‌ಗಳ ಮಧ್ಯೆ ಇರುವ ಕಲ್ಲುಗಣಿ ಪ್ರಭಾವಿಗಳಿಗೆ ಸ್ವರ್ಗದ ತಾಣವಾಗಿದೆ. ಕಲ್ಲು ಡಿಮ್ಮಿ, ಜಲ್ಲಿ ಕ್ರಶರ್ ಯಂತ್ರಗಳು ಹಗಲು ರಾತ್ರಿ ಸದ್ದು ಮಾಡುತ್ತಿವೆ. ಬೃಹತ್ ಆಳದಲ್ಲಿ ಕಲ್ಲು ಬಂಡೆಯನ್ನು ತೂತು ಮಾಡಿ ರಾಸಾಯನಿಕ ಬಳಸಿ ಸ್ಫೋಟಿಸುವುದರಿಂದ ಎರಡು ಮೂರು ಕಿಲೋಮೀಟರ್ ವರೆಗೆ ದೂಳಿನ ಕಣಗಳು ಹರಡುತ್ತಿವೆ. ಬೆಳೆ ನಷ್ಟದ ಜತೆಗೆ ಸುತ್ತಾಲಿನ ವಾತಾವರಣ ಕಲುಷಿತಗೊಳ್ಳುತ್ತದೆ ಎಂಬುದು ರೈತರ ಆರೋಪ.

ಮುದ್ದನಾಯಕನಹಳ್ಳಿ ಕುಂದಾಣ ಹೋಬಳಿಗೆ ಸೇರಿದೆ. ಬಿದಲೂರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿದೆ. ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ತಪಾಸಣೆಗೆ ಬಂದರೆ ತಪ್ಪು ಸರ್ವೇ ನಂಬರ್ ಹೇಳಿ ಇದರಲ್ಲಿ ಅನುಮತಿ ಪಡೆದಿದ್ದೇವೆ ಎಂದು ಸಬೂಬು ಹೇಳಿ ಪ್ರಭಾವಿಗಳು ನುಣುಚಿಕೊಳ್ಳತ್ತಾರೆ. ಸರ್ಕಾರ ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಟ್ಟಿರುವ ನಕಾಶೆಯಲ್ಲಿನ ರಸ್ತೆಯನ್ನು ಮಾಯ ಮಾಡಿ ಬೇರೆಡೆ ಮಾರ್ಗ ನಿರ್ಮಿಸಲಾಗಿದೆ.

ಮೂಲ ನಕಾಶೆಯಲ್ಲಿರುವ ರಸ್ತೆಯ ಮೇಲೆ ಗ್ರಾಮಸ್ಥರು ನಡೆದಾಡದಂತೆ ಕಲ್ಲುದಿಮ್ಮಿಯನ್ನು ಸುರಿದಿದ್ದಾರೆ. ಅನೇಕ ಬಾರಿ ಕಂದಾಯ ಇಲಾಖೆಗೆ ದೂರು ನೀಡಿದರು ಯಾವುದೇ ಪ್ರಯೋಜನವಿಲ್ಲ ಎಂಬುದು ರೈತ ಮುನಿರಾಜಪ್ಪ ದೂರುತ್ತಾರೆ.

‘ಮುದ್ದನಾಯಕನಹಳ್ಳಿ ಗ್ರಾಮದ ಸ.ನಂ. 235ರಲ್ಲಿ 5 ಎಕರೆ ಜಮೀನು ಹೊಂದಿದ್ದೇನೆ. ಇದರಲ್ಲಿ ರಾಗಿ, ತರಕಾರಿ, ಪಶುಗಳಿಗೆ ಮೇವು ಬೆಳೆಯುತ್ತಿದ್ದೆನೆ. ನನ್ನ ಜಮೀನಿಗೆ ಹೊಂದಿಕೊಂಡಂತೆ ಬಿದಲೂರು ಗ್ರಾಮದ ಸ.ನಂ. 167ರಲ್ಲಿ ಇಬ್ಬರು ಪ್ರಭಾವಿ ರಾಜಕಾರಣಿಗಳು ತಮ್ಮ ಹಿಂಬಾಲಕರನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಬೆಂಬಲವಾಗಿ ನಿಂತಿದ್ದಾರೆ. ಕಲ್ಲು ಗಣಿಯಲ್ಲಿ ಬಳಸುವ ಸಿಡಿಮದ್ದಿನಿಂದ ಕಲ್ಲಿನ ಚೂರುಗಳು ತರಕಾರಿ ಬೆಳೆಗಳ ಮೇಲೆ ಬಿದ್ದು ಅಪಾರ ನಷ್ಟವಾಗುತ್ತಿದೆ ಎಂದು ಸ್ಥಳೀಯ ಮುದ್ದನಾಯಕನಹಳ್ಳಿ ಗ್ರಾಮದ ರೈತ ಜಿ.ರಮೇಶ್ ದೂರು.

2017ರ ಮೇ 20ರಂದು ದೂರು ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಿದಲೂರು ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಕಲ್ಲು ಗಣಿ ಗುತ್ತಿಗೆಗಳು ಇರುವುದಿಲ್ಲ. ಸದರಿ ಪ್ರದೇಶದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಟಾಸ್ಕ್ ಪೋರ್ಸ್‌ ಸಮಿತಿಯು ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿ ಅನಧಿಕೃತ ಕಲ್ಲುಗಣಿಗಾರಿಕೆ ಹಾಗೂ ಸಾಗಾಣಿಕೆಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಹಿಂಬರಹ ನೀಡಿದೆ. ಆದರೆ, ಕ್ರಮ ಕೈಗೊಂಡಲ್ಲ ಎಂದು ಅವರು ದೂರಿದ್ದಾರೆ.

* *

ನನ್ನ ಜಮೀನಿಗೆ ಹೋಗುವ ರಸ್ತೆಯನ್ನು ಸಂಪೂರ್ಣ ಮುಚ್ಚಿದ್ದಾರೆ. ರಸ್ತೆ ತೆರವುಗೊಳಿಸಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಕಳೆದ ಮೂರು ವರ್ಷಗಳಿಂದ ತಹಶೀಲ್ದಾರ್‌ಗೆ, ಪೊಲೀಸ್ ಠಾಣೆಗೆ, ಜಿಲ್ಲಾಧಿಕಾರಿ ಮತ್ತು ಭೂ ಮತ್ತು ಗಣಿ ಇಲಾಖೆಗೆ ಹತ್ತಾರು ಬಾರಿ ಲಿಖಿತವಾಗಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ.

ಪ್ರಭಾವಿಗಳಿಂದ ಜೀವಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಬರುತ್ತಲೇ ಇದೆ. ಇದರ ಬಗ್ಗೆಯು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಸೂಕ್ತ ಕ್ರಮ ಇಲ್ಲ ಎಂಬುದು ಸ್ಥಳೀಯ ಗ್ರಾಮದ ರೈತ ಜಿ.ರಮೇಶ್ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT