ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭ

Last Updated 15 ನವೆಂಬರ್ 2017, 6:41 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಮಂಗಳವಾರ ಜಿಲ್ಲೆಯಲ್ಲಿ ಕೆಲವೆಡೆ ಮಾತ್ರ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ವೈದ್ಯರು ಸೇವೆಗೆ ಹಾಜರಾದರು. ಕ್ಲಿನಿಕ್‌ಗಳು, ಲ್ಯಾಬೊರೇಟರಿ ಮತ್ತು ಡಯಾಗ್ನೊಸ್ಟಿಕ್‌ ಕೇಂದ್ರಗಳು ತೆರೆದಿದ್ದವು. ಹನೂರು ಭಾಗದಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದವು. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರ ಮತ್ತು ಕೊಳ್ಳೇಗಾಲದ ಆಸ್ಪತ್ರೆಗಳನ್ನು ಅವಲಂಬಿಸುವಂತಾಯಿತು.

ಯಳಂದೂರಿನಲ್ಲಿ ಬೆಂಬಲ: ಯಳಂದೂರಿನಲ್ಲಿ ಬೆಳಿಗ್ಗೆಯಿಂದ ಆಸ್ಪತ್ರೆಗಳು ತೆರೆದಿದ್ದರೂ, ಮಧ್ಯಾಹ್ನದ ಬಳಿಕ ಬಂದ್‌ ಮಾಡಲಾಯಿತು. ಆಸ್ಪತ್ರೆಗಳ ಮುಂಭಾಗದಲ್ಲಿ ಮುಷ್ಕರದ ಮಾಹಿತಿಯ ಫಲಕಗಳನ್ನು ಅಳವಡಿಸಲಾಗಿತ್ತು. ಇದರಿಂದ ರೋಗಿಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿದರು. ಆಸ್ಪತ್ರೆಗಳು ತೆರೆದಿರುವ ಮಾಹಿತಿ ತಿಳಿದು ಬಂದ ರೋಗಿಗಳು ಹತಾಶೆಯಿಂದ ಮರಳುವಂತಾಯಿತು.

ನಗರದಲ್ಲಿ ತೆರೆದ ಆಸ್ಪತ್ರೆಗಳು: ನಗರದ ಜೆಎಸ್‌ಎಸ್‌ ಆಸ್ಪತ್ರೆ, ಬಸವರಾಜೇಂದ್ರ ಆಸ್ಪತ್ರೆ, ಪಿಕಾರ್ಡೊ ಹಾಗೂ ಕ್ಷೇಮ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಕೆಲಸ ನಿರ್ವಹಿಸಿದವು. ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು.

ಹೊರರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಒಳಗೊಂಡಂತೆ ಇತರೆ ವಿಭಾಗಗಳು ಎಂದಿನಂತೆ ತೆರೆದಿದ್ದವು. ಆದರೆ, ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ವಿರಳವಾಗಿತ್ತು. ಸೋಮವಾರ ಬಂದ್‌ ಆಗಿದ್ದರಿಂದ ಮತ್ತು ಮಂಗಳವಾರವೂ ಮುಷ್ಕರ ಮುಂದುವರಿಯಲಿದೆ ಎಂಬ ವರದಿಗಳು ಪ್ರಕಟವಾಗಿದ್ದರಿಂದ, ರೋಗಿಗಳು ನೇರವಾಗಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಇದರಿಂದ ಅಲ್ಲಿ ರೋಗಿಗಳ ಹಾಜರಿ ಹೆಚ್ಚಾಗಿತ್ತು.

ಕೊಳ್ಳೇಗಾಲದಲ್ಲಿ ಜನನಿ ಆಸ್ಪತ್ರೆ, ರವಿಕುಮಾರ್ ಆಸ್ಪತ್ರೆ, ಆರ್‌.ಕೆ. ಆಸ್ಪತ್ರೆ, ಮುದ್ದುವೀರಪ್ಪ ಆಸ್ಪತ್ರೆ, ನಂಜಪ್ಪ ಕಣ್ಣಿನ ಆಸ್ಪತ್ರೆ ಮತ್ತು ಲ್ಯಾಬ್‌ಗಳು ತೆರೆದಿದ್ದರಿಂದ ವೈದ್ಯಕೀಯ ಸೇವೆಯಲ್ಲಿ ತೊಂದರೆ ಉಂಟಾಗಲಿಲ್ಲ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೂಡ ಎಲ್ಲ ಖಾಸಗಿ ಆಸ್ಪತ್ರೆಗಳು ಕಾರ್ಯ ಆರಂಭಿಸಿದವು.

‘ನನ್ನ ಮಗನಿಗೆ ಮೂರು ದಿನಗಳಿಂದ ಜ್ವರವಿದೆ. ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆ. ಮತ್ತೆ ಸೋಮವಾರ ಹೋದರೆ ಬಂದ್‌ ಎಂದು ಹೇಳಿದರು. ಮಂಗಳವಾರವೂ ವೈದ್ಯರ ಮುಷ್ಕರ ಮುಂದುವರೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರಿಂದ ಖಾಸಗಿ ಆಸ್ಪತ್ರೆಗೆ ಹೋಗದೆ ನೇರವಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದೇನೆ’ ಎಂದು ನಗರದ ನಿವಾಸಿ ಸರಸ್ವತಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT