ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ, ಬಾಣಂತಿಗೆ ಆಸರೆಯಾದ ‘ಮಾತೃಪೂರ್ಣ’

Last Updated 15 ನವೆಂಬರ್ 2017, 7:20 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಮಾತೃಪೂರ್ಣ’ ಯೋಜನೆಯು ಹಲವು ಸಮಸ್ಯೆಗಳ ನಡುವೆಯೂ ಜಿಲ್ಲೆಯಲ್ಲಿ ಶೇ 72ರಷ್ಟು ಪ್ರಗತಿ ಸಾಧಿಸಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶ ಊಟ ಒದಗಿಸುವ ಈ ಯೋಜನೆ ಅ.2ರಿಂದ ರಾಜ್ಯದಾದ್ಯಂತ ಏಕಕಾಲದಲ್ಲಿ ಜಾರಿಯಾಗಿತ್ತು. ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಶೇ 65ರಷ್ಟು ಪ್ರಗತಿ ಸಾಧಿಸಿದರೆ, ಜಗಳೂರು, ಹರಪನಹಳ್ಳಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ಶೇ 85ರಷ್ಟು ಪ್ರಗತಿ ಕಂಡಿದೆ. ಹಿಂದುಳಿದ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಒಪ್ಪೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದ ಬಡ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಯೋಜನೆಯಿಂದ ಅನುಕೂಲವಾಗಿದೆ.

ಸ್ಥಳಾವಕಾಶದ ಸಮಸ್ಯೆ: ಯೋಜನೆ ಜಾರಿಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದಾಗಿದೆ. ಆದರೆ, ನಗರ ಪ್ರದೇಶಗಳಲ್ಲಿ ಬಹುತೇಕ ಅಂಗನವಾಡಿಗಳು ಚಿಕ್ಕ ಮನೆ, ಮಳಿಗೆಯಂತಹ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿಯರು ಒಳಗೊಂಡಂತೆ ಕನಿಷ್ಟ 25 ಮಹಿಳೆಯರು ಈ ಯೋಜನೆಯಡಿ ಬಿಸಿಯೂಟಕ್ಕೆ ಹೆಸರು ನೋಂದಣಿ ಮಾಡಿಕೊಂಡಿರುತ್ತಾರೆ. ಇವರೆಲ್ಲರೂ ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳೊಂದಿಗೆಯೇ ಊಟ ಮಾಡಬೇಕಾದ ಸ್ಥಿತಿ ಇದೆ. ಇದರಿಂದಾಗಿ ಬಹುತೇಕ ಅಂಗನವಾಡಿ ಕೇಂದ್ರಗಳು ಅಗತ್ಯ ಸ್ಥಳಾವಕಾಶದ ಸಮಸ್ಯೆ ಎದುರಿಸುತ್ತಿವೆ.

ಪಡಿತರ ಅಕ್ಕಿ ಅನ್ನ ಬೇಡ: ‘ನಿತ್ಯ ಮಧ್ಯಾಹ್ನ ಗರ್ಭಿಣಿ, ಬಾಣಂತಿಯರಿಗೆ ಉಚಿತವಾಗಿ ಅನ್ನ ಸಾಂಬಾರು, ಪಲ್ಯ, ಬೇಯಿಸಿದ ಮೊಟ್ಟೆ, 200 ಮಿಲಿ ಲೀಟರ್‌ ಹಾಲು ಹಾಗೂ ಶೇಂಗಾ ಮಿಟಾಯಿ ಕೊಡುತ್ತೇವೆ. ಮೊಟ್ಟೆ ಬೇಡ ಎನ್ನುವವರಿಗೆ ಮೊಳಕೆ ಕಾಳು ಕೊಡುತ್ತೇವೆ. ಕೆಲವರು ಕೇಂದ್ರಕ್ಕೆ ಬಂದು ಊಟ ಮಾಡುತ್ತಾರೆ. ಇನ್ನು ಕೆಲವರು ಅನ್ನ ಸರಿಯಿಲ್ಲ ಎಂದು ಊಟ ಮಾಡಲು ಹಿಂಜರಿಯುತ್ತಾರೆ’ ಎಂದು ಹೆಸರು ಹೇಳಬಯಸದ ಕೆಟಿಜೆ ನಗರದ ಅಂಗನವಾಡಿ ಕೇಂದ್ರದ ಶಿಕ್ಷಕಿಯೊಬ್ಬರು ಹೇಳುತ್ತಾರೆ.

‘ಪೌಷ್ಟಿಕ ಆಹಾರ ಕೊಡುತ್ತೇವೆ ಎಂದು ಹೇಳಿ ಪಡಿತರ ಅಕ್ಕಿಯಿಂದ ತಯಾರಿಸಿದ್ದ ಅನ್ನ ಬಡಿಸುತ್ತಾರೆ. ಒಂದು ಕೆಜಿ ತರಕಾರಿಯಲ್ಲಿಯೇ 20 ಮಹಿಳೆಯರ ಊಟಕ್ಕೆ ಸಾಂಬಾರು ಮಾಡುತ್ತಾರೆ. ಅಂಗನವಾಡಿ ಕೇಂದ್ರ ಚಿಕ್ಕದಾಗಿರುವುದರಿಂದ ಊಟ ಮಾಡಲು ಜಾಗವಿಲ್ಲ. ಕೇಂದ್ರದ ಮಕ್ಕಳು ಎಲ್ಲೆಂದರಲ್ಲಿ ಓಡಾಡುತ್ತಾರೆ. ಇದರಲ್ಲಿಯೇ ಊಟ ಮಾಡಬೇಕು. ಇದರಿಂದ ದೃಷ್ಟಿಯಾಗುತ್ತದೆ’ ಎಂದು ಊಟಕ್ಕೆ ಬಂದ ಕೆಲ ಫಲಾನುಭವಿಗಳು ಹಾಗೂ ಅವರ ಪೋಷಕರ ದೂರುತ್ತಾರೆ’ ಎಂದು ಹೇಳುತ್ತಾರೆ ಅವರು.

‘ಅಡುಗೆ ತಯಾರಿಗೂ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿಯಿಂದ ನೀರು ತಂದು ಊಟ ತಯಾರಿಸುತ್ತೇವೆ. ನಂತರ ಉಳಿದ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುತ್ತೇವೆ. ಈ ಯೋಜನೆ ಆರಂಭದಿಂದ ನಮಗೆ ಕೆಲಸದ ಹೊರೆ ತುಸು ಹೆಚ್ಚಾಗಿದೆ’ ಎಂದು ಅಂಗನವಾಡಿ ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡರು.

‘ಸಂಪ್ರದಾಯಸ್ಥ ಕುಟುಂಬದ ಕೆಲ ಮಹಿಳೆಯರು ಕೇಂದ್ರಕ್ಕೆ ಬಂದು ಊಟ ಮಾಡಲು ಮುಜುಗರ ಪಡುತ್ತಿದ್ದಾರೆ. ಸರ್ಕಾರ ಮೊದಲಿನಂತೆ ಆಹಾರ ಧಾನ್ಯ ನೀಡಿದರೆ ಅನುಕೂಲವಾಗುತ್ತದೆ ಎಂದು ಕೇಳುತ್ತಾರೆ. ಆದರೆ, ಮನೆಗೆ ಆಹಾರ ಧಾನ್ಯಗಳನ್ನು ನೀಡಿದರೆ, ಫಲಾನುಭವಿಗಳಿಗೆ ಪೋಷಕಾಂಶಭರಿತ ಊಟ ಸಿಗುವುದಿಲ್ಲ’ ಎಂದು ಕೆಟಿಜೆ ನಗರದ ‘ಎ’ ಕೇಂದ್ರದ ಅಂಗನವಾಡಿ ಸಹಾಯಕಿ ಶೋಭಾ ಪುರಡಿ ಪ್ರತಿಕ್ರಿಯಿಸಿದರು.

ನಿತ್ಯ ₹ 5ಲಕ್ಷ ವೆಚ್ಚ: ‘ಜಿಲ್ಲೆಯಲ್ಲಿ 12,584 ಗರ್ಭಿಣಿಯರು ಹಾಗೂ 11,429 ಬಾಣಂತಿಯರು ಒಳಗೊಂಡಂತೆ ಒಟ್ಟು 24,013 ಮಹಿಳೆಯರು ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ನಿತ್ಯ ಮಧ್ಯಾಹ್ನ ಪೌಷ್ಟಿಕ ಆಹಾರ ಸೇವಿಸುತ್ತಿದ್ದಾರೆ. ಪ್ರತಿ ಮಹಿಳೆಯ ಮಧ್ಯಾಹ್ನದ ಬಿಸಿಯೂಟಕ್ಕೆ ₹ 21 ವೆಚ್ಚ ತಗಲುತ್ತದೆ. ಅದರಂತೆ ಒಟ್ಟು 24,013 ಮಹಿಳೆಯರಿಗೆ ನಿತ್ಯ ಅಂದಾಜು ₹ 5 ಲಕ್ಷದವರೆಗೆ ವೆಚ್ಚವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌ ಮಾಹಿತಿ ನೀಡಿದರು.

ಇಣುಕಿದ ಜಾತಿ ವ್ಯವಸ್ಥೆ..
ಎಲ್ಲ ಸಮುದಾಯದ ಗರ್ಭಿಣಿ, ಬಾಣಂತಿಯರಿಗೂ ಪೌಷ್ಟಿಕಾಂಶದ ಬಿಸಿಯೂಟ ಸಿಗಬೇಕೆಂದು ಸರ್ಕಾರವು ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಇದನ್ನೂ ಜಾತಿವ್ಯವಸ್ಥೆ ಆವರಿಸಿಕೊಂಡಿರುವುದು ವಿಪರ್ಯಾಸವಾಗಿದೆ.

‘ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಂಗನವಾಡಿ ಸಹಾಯಕಿಯರು ತಯಾರಿಸಿದ ಅಡುಗೆಯನ್ನು ಮೇಲ್ವರ್ಗಕ್ಕೆ ಸೇರಿದ ಗರ್ಭಿಣಿ ಹಾಗೂ ಬಾಣಂತಿಯರು ಸೇವಿಸಲು ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಶೀಘ್ರದಲ್ಲಿಯೇ ಇಲಾಖೆಯಿಂದ ಜಿಲ್ಲೆಯಾದ್ಯಂತ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಮೂಢನಂಬಿಕೆ, ಜಾತಿ ವ್ಯವಸ್ಥೆಯಿಂದ ಹೊರಬರುವಂತೆ ಮನವಿ ಮಾಡಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳಿಗೆ ಅಡುಗೆ ತಯಾರಿಸಿ ಕೊಡುವ ಜವಾಬ್ದಾರಿ ನೀಡಲಾಗುವುದು’ ಎಂದು ವಿಜಯಕುಮಾರ್‌ ಹೇಳುತ್ತಾರೆ.

‘ಕೆಲ ಅಂಗನವಾಡಿಗಳಲ್ಲಿ ಊಟಕ್ಕೆ ಬರುವ ಕೆಲವರು ಪಡಿತರ ಅಕ್ಕಿಯ ಅನ್ನ ಬೇಡ. ಉತ್ತಮ ಗುಣಮಟ್ಟದ ಅಕ್ಕಿಯಿಂದ ತಯಾರಿಸಿದ ಅನ್ನ ಕೊಡಿ ಎಂದು ಕೇಳುತ್ತಿದ್ದಾರೆ. ಪಡಿತರ ಅಕ್ಕಿ ಕೂಡ ಗುಣಮಟ್ಟದಿಂದ ಕೂಡಿದೆ’ ಎಂದು ಸ್ಪಷ್ಟನೆ ನೀಡುತ್ತಾರೆ ಅವರು.

‘ಮದ್ಯವ್ಯಸನಿ ಗಂಡನ ಗಲಾಟೆಯಿಂದ ಊಟ ಇಲ್ಲದೇ ನಿತ್ಯ ತೊಂದರೆ ಅನುಭವಿಸುತ್ತಿದ್ದ ಹನಗವಾಡಿ ಗ್ರಾಮದ ಗರ್ಭಿಣಿಗೆ ಮಾತೃಪೂರ್ಣ ಯೋಜನೆಯ ಬಿಸಿಯೂಟವು ತುಂಬಾ ಅನುಕೂಲವಾಯಿತು. ಈಗ ಮಹಿಳೆ ಶಿಶುವಿನೊಂದಿಗೆ ಆರೋಗ್ಯವಾಗಿದ್ದಾರೆ’ ಎನ್ನುತ್ತಾರೆ ಅವರು.

ಮಾತೃಪೂರ್ಣ ಯೋಜನೆಯ ಪ್ರಗತಿ
ತಾಲ್ಲೂಕು ಶೇಕಡವಾರು

ದಾವಣಗೆರೆ 66
ಜಗಳೂರು 81
ಹರಿಹರ 61
ಹರಪನಹಳ್ಳಿ 83
ಹೊನ್ನಾಳಿ 85
ಚನ್ನಗಿರಿ 67

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT