ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ ಶಿಶುಗಳ ಸಾವು ಹೆಚ್ಚಳ

Last Updated 15 ನವೆಂಬರ್ 2017, 8:47 IST
ಅಕ್ಷರ ಗಾತ್ರ

ಹಾಸನ: ಅವಧಿಗೂ ಮುನ್ನ ಜನನ, ಕಡಿಮೆ ತೂಕ, ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ಇಲ್ಲಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಬೋಧಕ ಆಸ್ಪತ್ರೆಯೊಂದರಲ್ಲೇ ಏಪ್ರಿಲ್‌ನಿಂದ ಈವರೆಗೆ ವರ್ಷ ತುಂಬದ 98 ಮಕ್ಕಳು ಮರಣ ಹೊಂದಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಪ್ರಕಾರ ಹಾಸನ ಜಿಲ್ಲೆಯಲ್ಲಿ ಏಳು ತಿಂಗಳ ಅವಧಿಯಲ್ಲಿ 252 ಶಿಶುಗಳು ಮೃತಪಟ್ಟಿವೆ.

‘ಹಿಮ್ಸ್‌’ನಲ್ಲಿ 20 ಹಾಸಿಗೆ ಸಾಮರ್ಥ್ಯದ ನವಜಾತ ಶಿಶುಗಳ ತೀವ್ರ ನಿಗಾ ಘಟಕವಿದೆ. ವೆಂಟಿಲೇಟರ್‌ ಹಾಗೂ ವಾರ್ಮರ್‌ ಸೌಲಭ್ಯವನ್ನೂ ಒದಗಿಸಲಾಗಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯ ಮಕ್ಕಳನ್ನೂ ಇಲ್ಲಿಗೆ ಕರೆತರಲಾಗುತ್ತದೆ. ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಸರಾಸರಿ 750 ಹೆರಿಗೆಗಳಾಗುತ್ತವೆ. ಕೆಲವು ಶಿಶುಗಳಿಗೆ ಹುಟ್ಟಿದ ತಕ್ಷಣವೇ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ.

ಆರೋಗ್ಯ ಇಲಾಖೆ ವರದಿ ಪ್ರಕಾರ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಹುಟ್ಟಿದ ನಂತರ ಮೃತಪಡುವ ಮಕ್ಕಳ ಸಂಖ್ಯೆ ಸಾವಿರಕ್ಕೆ 15ರಷ್ಟಿತ್ತು. 2016ರಲ್ಲಿ ಈ ಪ್ರಮಾಣ 18ಕ್ಕೆ ಏರಿಕೆಯಾಗಿತ್ತು. ಪ್ರಸಕ್ತ ವರ್ಷ 19 ಮಕ್ಕಳು ಮೃತಪಟ್ಟಿವೆ.

‘ನವಜಾತ ಶಿಶುಗಳು ಸಾಯಲು ಅವಧಿಗೂ ಮುನ್ನ ಜನನ, ಹೃದಯ ಸಮಸ್ಯೆಯಂತಹ ಕಾರಣಗಳೂ ಇರುತ್ತವೆ. ನಿತ್ಯ ಕನಿಷ್ಠ 8 ಶಿಶುಗಳನ್ನು ಎನ್‌ಐಸಿಯುಗೆ ದಾಖಲಿಸಲಾಗುತ್ತದೆ. ಇಷ್ಟು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿಲ್ಲ’ ಎಂದು ಹಿಮ್ಸ್‌ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್‌ ತಿಳಿಸಿದರು.

‘ಎಲ್ಲ ಶಿಶುಗಳಿಗೆ ಪ್ರತ್ಯೇಕ ವಾರ್ಮರ್‌ ಒದಗಿಸಲು ಸಾಧ್ಯವಾಗದೆ ಒಂದೇ ವಾರ್ಮರ್‌ನಲ್ಲಿ ಎರಡು ಶಿಶುಗಳನ್ನು ಮಲಗಿಸಿದ ಉದಾಹರಣೆಗಳೂ ಇವೆ. ಇದರಿಂದ ಒಂದು ಶಿಶುವಿನ ಸೋಂಕು ಮತ್ತೊಂದಕ್ಕೆ ಹರಡಲು ಕಾರಣವಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಸೌಲಭ್ಯಗಳಿರುವ ಕಾರಣ ಹೊರ ಜಿಲ್ಲೆಗಳ ಗರ್ಭಿಣಿಯರು ಹೆಚ್ಚಾಗಿ ಬರುತ್ತಿರುವುದು ಸಮಸ್ಯೆ ಉದ್ಬವಿಸಲು ಕಾರಣವಾಗಿದೆ. ಈಗಿರುವ ಶಿಶು ತೀವ್ರ ನಿಗಾ ಘಟಕವನ್ನು ವಿಸ್ತರಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದರು.

‘ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಇಷ್ಟಾದರೂ ವ್ಯವಸ್ಥೆಯ ಲೋಪದಿಂದ ಶಿಶುಗಳ ಸಾವು ಅಕ್ಷಮ್ಯ. ತಕ್ಷಣ ಲೋಪ ಸರಿಪಡಿಸಿ ಸಾವು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಪ್ರೇರಣಾ ವಿಕಾಸ ವೇದಿಕೆ ಅಧ್ಯಕ್ಷೆ ರೂಪ ಹಾಸನ ಆಗ್ರಹಿಸಿದರು.

50 ಹಾಸಿಗೆ ಶಿಶು ಚಿಕಿತ್ಸಾ ಘಟಕ
ನವಜಾತ ಶಿಶುಗಳ ಆರೈಕೆಗಾಗಿ ಹಾಸನ ವೈದ್ಯಕೀಯ ಸಂಸ್ಥೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕ ತೆರೆಯಲಾಗುತ್ತಿದೆ. ‘ ಹಿಮ್ಸ್‌ನಲ್ಲಿ ಜನಿಸುವ ಹಾಗೂ ಹೊರಗಿನಿಂದ ಚಿಕಿತ್ಸೆಗಾಗಿ ಬರುವ ನವಜಾತ ಶಿಶುಗಳಿಗೆ ಪ್ರತ್ಯೇಕವಾಗಿ ವೈದ್ಯಕೀಯ ಸೇವೆ ಕಲ್ಪಿಸುವುದು. ಜತೆಗೆ ತಾಯಂದಿರು ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್‌ ತಿಳಿಸಿದರು.

ತಿಂಗಳು–ಶಿಶುಗಳ ಜನನ–ಸಾವು
ಏಪ್ರಿಲ್‌–1800–47
ಮೇ–1975–44
ಜೂನ್‌–1874–33
ಜುಲೈ–1825–35
ಆಗಸ್ಟ್‌–1718–34
ಸೆಪ್ಟೆಂಬರ್‌–1652–30
ಅಕ್ಟೋಬರ್‌–1295–29
ಒಟ್ಟು–12139– 252

* * 

ಮಕ್ಕಳ ಮರಣ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಸಂಬಂಧ ಪಟ್ಟ ವೈದ್ಯರಿಗೆ ಸೂಚನೆ ನೀಡಲಾಗಿದೆ. 
ಡಾ.ಬಿ.ಸಿ.ರವಿಕುಮಾರ್‌,
ಹಿಮ್ಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT