ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ದಾಳಿ: ಜೇನು ಕೃಷಿ ಧ್ವಂಸ

Last Updated 15 ನವೆಂಬರ್ 2017, 8:54 IST
ಅಕ್ಷರ ಗಾತ್ರ

ಹಾನಗಲ್‌: ತಾಲ್ಲೂಕಿನ ಕಾಮನಹಳ್ಳಿ ಭಾಗದ ತೋಟಗಳಿಗೆ ಕರಡಿಗಳು ದಾಳಿ ನಡೆಸುತ್ತಿದ್ದು, ಪ್ರಗತಿ ಪರ ರೈತ ಮುತ್ತಣ್ಣ ಪೂಜಾರ ಅವರ ತೋಟದಲ್ಲಿರುವ ಜೇನು ಕೃಷಿಯ ವ್ಯವಸ್ಥೆಯನ್ನು ಹಾಳುಗೆಡುವುತ್ತಿವೆ.

ಮುತ್ತಣ್ಣ ಅವರು 10 ವರ್ಷದಿಂದ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ನಾಲ್ಕು ದಿನಗಳಿಂದ ಜೇನುತುಪ್ಪ ಅರಸಿ ಬರುತ್ತಿರುವ ಕರಡಿಗಳು, ಜೇನು ತುಪ್ಪ ತಿಂದು ಜೇನು ಸಾಕಾಣಿಕೆಯ ಡಬ್ಬಿಗಳನ್ನು ಧ್ವಂಸಗೊಳಿಸಿವೆ.ರಾತ್ರಿ ಹೊತ್ತಲ್ಲಿ ದಾಂಗುಡಿ ಇಟ್ಟು ಜೇನು ಸವಿದು ಬೆಳಗಾಗುವ ಮುನ್ನವೇ ಮತ್ತೆ ಮೆರೆಯಾಗುತ್ತಿವೆ. ಸಪೋಟಾ(ಚಿಕ್ಕು) ತೋಟದಲ್ಲಿರುವ ಹಾನಿಗೊಂಡ ಪೆಟ್ಟಿಗೆಗಳ ಸ್ಥಳದಲ್ಲಿ ಕರಡಿಯ ಲದ್ದಿ, ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ.

ಒಟ್ಟು ಐದು ಜೇನು ಕೃಷಿಯ ಪೆಟ್ಟಿಗೆಗಳು ಪೂರ್ಣ ಹಾನಿಗೊಂಡಿದ್ದು, ಒಂದು ಪೆಟ್ಟಿಗೆ ಸುಮಾರು ₹4 ಸಾವಿರ ಮೌಲ್ಯ ಬೆಲೆ ಬಾಳುತ್ತದೆ. ಒಂದೊಂದು ಪೆಟ್ಟಿಗೆಯಲ್ಲಿ ₹1 ರಿಂದ ₹2 ಸಾವಿರ ಮೊತ್ತದ ಜೇನುತುಪ್ಪ ನಷ್ಟವಾಗಿದೆ.

ಜೇನು ಕದಿಯುವುದು ಮೊದಲು ಯಾರೋ ಮನುಷ್ಯರೇ ಮಾಡುತ್ತಿದ್ದಾರೆ ಎಂದು ಭಾವಿಸಿದ್ದ ಅವರಿಗೆ ಇದು ಕರಡಿಗಳ ಕೃತ್ಯ ಎಂಬುದು ಸೋಮವಾರ ಖಾತ್ರಿಯಾಗಿದೆ. ಮಂಗಳವಾರ ಬೆಳಿಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಂ.ಪೀರಜಾದೆ, ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಪರಮೇಶ ಆನವಟ್ಟಿ, ಗೋರ್ಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ರಾತ್ರಿ ಸಮಯದಲ್ಲಿ 32 ಎಕರೆ ಜಮೀನು ಸುತ್ತಿ ನಾಲ್ಕು ಕೊಳವೆಬಾವಿಗಳಿಂದ ನೀರು ಹರಿಸುವ ಧಾವಂತದಲ್ಲಿರುತ್ತೇವೆ. ಈಗ ಕರಡಿಗಳ ದಾಳಿ ಭೀತಿ ಹುಟ್ಟಿಸಿದೆ. ಇಲ್ಲಿರುವ ರಾತ್ರಿ ಕಾವಲುಗಾರ ಕೆಲಸ ಬಿಟ್ಟು ಹೋಗಿದ್ದಾರೆ. ಕರಡಿಗಳು ಇತ್ತ ಬರದಂತೆ ರಕ್ಷಣೆ ನೀಡಬೇಕು’ ಎಂದು ಅಧಿಕಾರಿಗಳನ್ನು ಮುಂದೆ ರೈತ ಮುತ್ತಣ್ಣ ಕೋರಿದರು.

‘ಕರಡಿಗಳಿಗೆ ಮೀನು, ಹಲಸು ಮತ್ತು ಜೇನು ಬಲು ಇಷ್ಟ. ಜೇನು ಅರಸಿಕೊಂಡು ಕರಡಿಗಳು ಇತ್ತ ಬಂದಿರುವುದು ಸ್ವಾಭಾವಿಕವೇ ಆಗಿದೆ. ಅವುಗಳಿಂದ ಅಪಾಯ ಇಲ್ಲ’ ಎಂದು ಎಸಿಎಫ್‌ ಪೀರಜಾದೆ ನುಡಿದರು.

‘ಮಂಗಳವಾರ ಸಂಜೆ ಬೋನು ಇಟ್ಟು ಕರಡಿ ಸೆರೆಹಿಡಿಯುವ ಯತ್ನ ಮಾಡಲಾಗುವುದು. ಬೋನಿನಲ್ಲಿ ಜೇನು ಇಟ್ಟರೆ ಕರಡಿ ಸೆರೆಯಾಗುತ್ತದೆ. ಸೆರೆ ಸಿಕ್ಕರೆ ಕರಡಿಯನ್ನು ದೂರದ ಕಾಡಿನಲ್ಲಿ ಬಿಡಬಹುದು’ ಎಂದು ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ ಭರವಸೆ ನೀಡಿದರು.

50ಕ್ಕೂ ಹೆಚ್ಚು ಕರಡಿಗಳು..
‘ತಾಲ್ಲೂಕಿನ ಅರಣ್ಯ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಕರಡಿಗಳಿರುವ ಸಮೀಕ್ಷೆ ಇದೆ. ದಶರಥಕೊಪ್ಪ, ಗುಡಗುಡಿ, ಬೈಚವಳ್ಳಿ, ಮಂತಗಿ, ಕಾಮನಹಳ್ಳಿ, ಶಿರಗೋಡ, ಕೊಣನಕೊಪ್ಪ, ಮಕರವಳ್ಳಿ, ಮೂಡೂರ ಗ್ರಾಮ ವ್ಯಾಪ್ತಿಯಲ್ಲಿ ಕರಡಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ’ ಎಂದು ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯದಂಚಿನ ಸಪೋಟಾ ತೋಟಗಳು ಕರಡಿ ದಾಳಿಯ ಮುಖ್ಯ ಕೇಂದ್ರಗಳು. ಮುತ್ತಣ್ಣ ಅವರ ಚಿಕ್ಕು ತೋಟಕ್ಕೆ ಎರಡು ಕರಡಿಗಳು ದಾಳಿ ಮಾಡುತ್ತಿರುವ ಶಂಕೆ ಇದೆ. ಸದ್ಯ ಜೇನು ಸವಿಯುವ ಕರಡಿಗಳು ಪಕ್ಕದಲ್ಲಿರುವ ಚಿಕ್ಕು ಗಿಡಗಳತ್ತ ಗಮನ ಹರಿಸುತ್ತಿಲ್ಲ, ಜೇನು ಖಾಲಿಯಾದರೆ ಚಿಕ್ಕು ಹಣ್ಣುಗಳನ್ನು ತಿನ್ನುತ್ತವೆ. ಹೀಗಾಗಿ ಮಂಗಳವಾರದಿಂದಲೇ ಕರಡಿ ಸೆರೆಗೆ ಬೋನು ಅಳವಡಿಸಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT