ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ಭಾಗ’ ಹಣೆಪಟ್ಟಿ ಅಳಿಸಿದ ಅಪ್ಪ

Last Updated 15 ನವೆಂಬರ್ 2017, 9:04 IST
ಅಕ್ಷರ ಗಾತ್ರ

ಕಲಬುರ್ಗಿ: ‘ಶರಣಬಸವ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಹೈದರಾಬಾದ್ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿಯನ್ನು ಶರಣಬಸವಪ್ಪ ಅಪ್ಪ ಅವರು ಅಳಿಸಿ ಹಾಕಿದ್ದಾರೆ’ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಶರಣಬಸವ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣಬಸವಪ್ಪ ಅಪ್ಪ ಅವರ 83ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶರಣ ಬಸವೇಶ್ವರ ಸಂಸ್ಥಾನ ಅಕ್ಷರ ದಾಸೋಹಕ್ಕೆ ಹೆಸರಾಗಿದೆ. 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈಗ ಖಾಸಗಿ ವಿ.ವಿ ಸ್ಥಾಪನೆ ಮೂಲಕ ಇಡೀ ಕರ್ನಾಟಕವೇ ಕಲಬುರ್ಗಿ ಬಗ್ಗೆ ಹೆಮ್ಮೆ ಪಡುವಂತಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಶರಣಬಸವಪ್ಪ ಅಪ್ಪ ಕಾರಣರಾಗಿದ್ದಾರೆ. ಅವರ ಈ ಸೇವೆಯನ್ನು ಸರ್ಕಾರಗಳು ಗುರುತಿಸಬೇಕು. ಕೇಂದ್ರ ಸರ್ಕಾರ ಪದ್ಮಭೂಷಣ ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಈ ಭಾಗದ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಈ ಬಗ್ಗೆ ಆಸಕ್ತಿ ವಹಿಸಬೇಕು’ ಎಂದು ಸಲಹೆ ನೀಡಿದರು.

‘8ನೇ ವರ್ಷದಲ್ಲಿ ಅಪ್ಪ ಅವರು ಶಿವ ದೀಕ್ಷೆ ಪಡೆದರು. ಯಶಸ್ವಿಯಾಗಿ ಶರಣಬಸವೇಶ್ವರ ಸಂಸ್ಥಾನವನ್ನು ಮುನ್ನಡೆಸಿದರು. ಅವರೊಬ್ಬ ಕೊಹಿನೂರು ವಜ್ರ. ನಾಡಿಗೆ ಅನ್ನ, ಅಕ್ಷರ ದಾಸೋಹ ನೀಡುವ ಶಕ್ತಿ ಅವರಲ್ಲಿದೆ’ ಎಂದು ಬಣ್ಣಿಸಿದರು.

ಚವಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಶರಣಬಸವಪ್ಪ ಅಪ್ಪ ಅವರಿಗೆ ಪುತ್ರ ಜನಿಸಿದ ನವೆಂಬರ್‌ 1 ಕಲಬುರ್ಗಿ ನಗರ ‘ಪುತ್ರೋತ್ಸವ’ ಆಚರಿಸಲಾಯಿತು. ಭಕ್ತರ ಮನೆ–ಮನಗಳಲ್ಲಿ ಸಂಭ್ರಮದಲ್ಲಿ ಮನೆ ಮಾಡಿತ್ತು’ ಎಂದು ಹೇಳಿದರು.

ಅಂಚೆ ಇಲಾಖೆಯ ಅಕ್ಬರ್‌ ಅಲಿ ಮುದಗಲ್ ಮಾತನಾಡಿ, ಶರಣಬಸವಪ್ಪ ಅಪ್ಪ ಅವರ 83ನೇ ಜನ್ಮದಿನದ ಅಂಗವಾಗಿ ಅಂಚೆ ಇಲಾಖೆಯು ಅವರ ಭಾವಚಿತ್ರ ಒಳಗೊಂಡ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿ ಹೊರತಂದಿದೆ. ಅಪ್ಪ ಅವರ ಶೈಕ್ಷಣಿಕ ಕ್ಷೇತ್ರದ ಸೇವೆಗೆ ಈ ಗೌರವ ನೀಡಲಾಗಿದೆ. ದೇಶದ ಕೆಲವೇ ವ್ಯಕ್ತಿಗಳಿಗೆ ಇಂಥ ಅವಕಾಶ ಲಭಿಸಿದೆ. ಲಕೋಟೆ ಹಾಗೂ ಅಂಚೆ ಚೀಟಿಯನ್ನು ದೇಶದ ಎಲ್ಲ ಮುಖ್ಯ ಅಂಚೆ ಕಚೇರಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ತಿಳಿಸಿದರು.

ಶಿವರಾಜಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ,‘ ಹೈದರಾಬಾದ್‌ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕು ಎಂಬುದು ಅಪ್ಪ ಅವರ ಕನಸು. ಇದಕ್ಕಾಗಿಯೇ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಸ್ಥಾಪನೆಯ ಹಿಂದೆಯೂ ಅವರ ಶ್ರಮ ಇದೆ’ ಎಂದು ತಿಳಿಸಿದರು.

ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ, ಮೇಯರ್‌ ಶರಣಕುಮಾರ್ ಮೋದಿ, ಬಿಜೆಪಿ ಮುಖಂಡ ಶಶೀಲ್‌ ಜಿ.ನಮೋಶಿ, ಶರಣಬಸವ ವಿ.ವಿಯ ಕುಲಪತಿ ಡಾ.ನಿರಂಜನ ನಿಷ್ಠಿ, ಅಂಚೆ ಇಲಾಖೆಯ ಅಧೀಕ್ಷಕ ಶಿವಾನಂದ, ಮಾರುತಿರಾವ್‌ ಡಿ.ಮಾಲೆ, ತಿಪ್ಪಣ್ಣ ಕಮ

ಶರಣಬಸವ ವಿ.ವಿ ಲಾಂಛನ ಬಿಡುಗಡೆ
ತಾಲ್ಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಸ್ಥಾಪನೆ ಆಗಲಿರುವ ಶರಣಬಸವ ವಿಶ್ವವಿದ್ಯಾಲಯದ ಲಾಂಛನವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಲಾಂಛನಕ್ಕೆ ಹಕ್ಕುಸ್ವಾಮ್ಯ ದೊರೆತ ಪ್ರಮಾಣಪತ್ರವನ್ನು ಶರಣಬಸವಪ್ಪಅಪ್ಪ ಅವರು ಪ್ರದರ್ಶಿಸಿದರು. ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು 155 ಕೆ.ಜಿ. ತೂಕದ ಹೂವಿನಹಾರ ಹಾಕಿ ಅಪ್ಪ ಅವರನ್ನು ಸನ್ಮಾನಿಸಿದರು.

* * 

ಶರಣಬಸವಪ್ಪ ಅಪ್ಪ ಅವರಿಗೆ ಪುತ್ರ ಜನಿಸಿದ ಕರ್ನಾಟಕ ಮಾತ್ರವಲ್ಲ. ಇಡೀ ದೇಶವೇ ಸಂತಸ ಪಟ್ಟಿದೆ. ಶರಣರು ಮರುಹುಟ್ಟು ಪಡೆದು ಬಂದಿದ್ದಾರೆ.
ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ,
ಸಾರಂಗಧರ ಮಠ, ಶ್ರೀಶೈಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT