ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುವರ್ಣ ಹೂ’ ಹೊತ್ತು ಕಂಗೊಳಿಸುತ್ತಿದೆ ತೊಗರಿ

Last Updated 15 ನವೆಂಬರ್ 2017, 9:11 IST
ಅಕ್ಷರ ಗಾತ್ರ

ಚಿಂಚೋಳಿ: ‘ತೊಗರಿ ಕಣಜ’ ಖ್ಯಾತಿಯ ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ತಾಲ್ಲೂಕುಗಳಲ್ಲಿ ಚಿಂಚೋಳಿಗೆ ಅಗ್ರಸ್ಥಾನವಿದೆ. ಇಲ್ಲಿ 46ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತೊಗರಿ ಬೆಳೆಯ ಬೇಸಾಯದಲ್ಲಿ ತೊಡಗಿದ್ದಾರೆ.

ಕೊನೆಯ ಮಳೆಗಾಲಕ್ಕೆ ಅಲ್ಪಾ ವಧಿಯ ಬೆಳೆಗಳು ಆಹುತಿ ಯಾಗಿದ್ದು, ಬಯಲು ನಾಡಿನ ರೈತರು ತೊಗರಿ ಮೇಲೆಯೇ ಹೆಚ್ಚು ಅವಲಂಬಿತರಾಗಿ ಬೆಳೆಯ ನಿರ್ವಹಣೆ ಯಲ್ಲಿ ತೊಡಗಿದ್ದಾರೆ. ಉತ್ತಮ ಬೆಳವಣಿಗೆ ಕಂಡಿರುವ ಬೆಳೆ ಪ್ರಸ್ತುತ ಎಲ್ಲೆಡೆ ಹೂವಾಡುವ ಹಂತದಲ್ಲಿದ್ದರೆ, ಕೆಲವು ಕಡೆ ಕಾಯಿ ಕಚ್ಚುತ್ತಿದೆ. ನೀರಾವರಿ ಆಶ್ರಿತ ತೊಗರಿ ಬೆಳೆ ಮೊಗ್ಗು ಬಿಡುತ್ತಿದೆ.

ಪ್ರಸಕ್ತ ವರ್ಷ ಭರಪೂರ ಹೂವು ಬಿಟ್ಟು ಸುವರ್ಣ ವರ್ಣದ ಹೂ ಹೊತ್ತು ನಗುತ್ತಿದೆ. ಎಲ್ಲೆಡೆ ಬೆಳೆ ನೋಡಲು ಎರಡು ಕಣ್ಣುಗಳೂ ಸಾಲದಂತೆ ಬೆಳೆ ಬಂಗಾರದ ಹೂವಿನೊಂದಿಗೆ ಆಕರ್ಷಿಸುತ್ತಿದೆ. ಸ್ವಲ್ಪ ಮಂಜು ಬೀಳುತ್ತಿರುವುದು ಹಾಗೂ ತಾಪಮಾನ ಕುಸಿತದಿಂದ ಹೂವು ಉದುರುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ರೈತರಿಗೆ ಪ್ರಕೃತಿ ಸಾಥ್‌ ನೀಡಿ, ಎಲ್ಲವೂ ಅಂದುಕೊಂಡಂತೆ ಸಾಗಿದರೆ ಪ್ರಸಕ್ತ ವರ್ಷ ತೊಗರಿ ಬೆಳೆ ಬಂಪರ್‌ ಇಳುವರಿ ನೀಡುವುದು ನಿಶ್ಚಿತ ಎನ್ನುವ ಸ್ಥಿತಿಯಿದೆ.

‘ಕುಂಚಾವರಂ ಹೋಬಳಿಯಲ್ಲಿ ತೊಗರಿ ಬೇಸಾಯ ಸ್ವಲ್ಪ ಕಡಿಮೆಯಿದೆ. ಆದರೆ ಕೋಡ್ಲಿ, ಐನಾಪುರ ಮತ್ತು ಸುಲೇಪೇಟ ಹೋಬಳಿಯ ವಲಯ ದಲ್ಲಿ ತೊಗರಿ ಬಂಪರ್‌ ಹೂವು ಹೊತ್ತು ಮಿನುಗುತ್ತಿದೆ. ಸದ್ಯ ಅತ್ಯಂತ ಮುಖ್ಯಘಟ್ಟದಲ್ಲಿರುವ ತೊಗರಿ ಬೆಳೆ ತಗ್ಗುಪ್ರದೇಶದಲ್ಲಿ ಅಧಿಕ ತೇವಾಂಶ ದಿಂದ ಹಾಗೂ ಹೊಲದಲ್ಲಿ ಬೆಳೆ ಬದಲಾವಣೆ ಮಾಡದೇ ಬೇಸಾಯದಲ್ಲಿ ತೊಡಗಿದ್ದರಿಂದ ನೆಟೆರೋಗ ಕಾಡುತ್ತಿದೆ. ಆದರೆ, ಎಲ್ಲೂ ಗೊಡ್ಡು ರೋಗ ಕಂಡುಬಂದಿಲ್ಲ. ಕೀಟ ಹಾಗೂ ರೋಗಬಾಧೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ’ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಗಡಗಿಮನಿ.

ಕೃಷಿ ಇಲಾಖೆಯಿಂದ ಸ್ಪ್ರೇಯರ್‌ ಹಾಗೂ ಕೀಟನಾಶಕಗಳು ಮತ್ತು ಲಘು ಪೋಷಕಾಂಶಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ‘ಸದ್ಯ ತೊಗರಿಗೆ ಯಾವುದೇ ತೊಂದರೆಯಿಲ್ಲ. ಆದರೆ, ತಾಪಮಾನ ಕುಸಿತ ಮುಂದುವರಿದರೆ ಬೆಳೆಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ರೈತರು ಪಲ್ಸ್‌ ಮ್ಯಾಜಿಕ್‌ 10 ಗ್ರಾಂ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು’ ಎಂದು ರಾಯಚೂರು ಕೃಷಿ ವಿ.ವಿ ಸಸ್ಯ ವಿಜ್ಞಾನಿ ಡಾ.ಜಹೀರ್‌ ಅಹಮದ್‌ ತಿಳಿಸಿದ್ದಾರೆ.

ತೊಗರಿಯ ಬೆಲೆ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದ ಚೇತರಿಕೆ ಕಂಡಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ತೊಗರಿಯನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಗೆ ಸಿದ್ಧತೆ ಆರಂಭಿಸಬೇಕು. ಜತೆಗೆ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ತೊಗರಿಯ ಬೆಂಬಲ ಬೆಲೆ ₹7,500ಕ್ಕೆ ಹೆಚ್ಚಿಸಬೇಕೆಂದು ಪ್ರಗತಿಪರ ರೈತ ಚಿತ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ.
 

* * 

ತೊಗರಿಯ ಬೆಂಬಲ ಬೆಲೆ ಕ್ವಿಂಟಲ್‌ಗೆ ₹7,500 ನಿಗದಿಪಡಿಸಿ ಗ್ರಾ.ಪಂ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆದು ಖರೀದಿಸಬೇಕು.
ಚಿತ್ರಶೇಖರ ಪಾಟೀಲ,
ಪ್ರಗತಿಪರ ರೈತ, ದೇಗಲಮಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT