ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಕೈಕೊಟ್ಟ ‘ಬಡವರ ಬಾದಾಮಿ’

Last Updated 15 ನವೆಂಬರ್ 2017, 9:27 IST
ಅಕ್ಷರ ಗಾತ್ರ

ಅಂಕೋಲಾ: ‘ಬಡವರ ಬಾದಾಮಿ’ ಎಂದೇ ಖ್ಯಾತಿಯಾದ ಶೇಂಗಾವನ್ನು ಬೆಳೆದ ತಾಲ್ಲೂಕಿನ ರೈತರು ಇದೀಗ ನಷ್ಟ ಅನುಭವಿಸುವಂತಾಗಿದೆ. ಈ ಬಾರಿ ಇಳುವರಿ ತುಂಬಾ ಕಡಿಮೆಯಾಗಿರುವುದರಿಂದ ರೈತರ ಮುಖದಲ್ಲಿ ಬೇಸರದ ಛಾಯೆ ಮೂಡಿದೆ.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಎತ್ತರ ಪ್ರದೇಶದ ಗದ್ದೆಗಳಲ್ಲಿ ಭತ್ತದ ಬದಲಾಗಿ ಶೇಂಗಾವನ್ನು ಕೆಲವು ರೈತರು ಬೆಳೆಯುತ್ತಿದ್ದಾರೆ. ತಾಲ್ಲೂಕಿನ ಬೆಳಂಬಾರ, ಹೊಸಗದ್ದೆ ಸೇರಿದಂತೆ ಎತ್ತರ ಇರುವ ಗದ್ದೆಗಳಲ್ಲಿ, ಬೇಣದಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದ್ದವು. ಹೀಗಾಗಿ ಇಂಥ ಜಾಗದಲ್ಲಿ ಭತ್ತದ ಬದಲಾಗಿ ಶೇಂಗಾ ಬೆಳೆದಿದ್ದರು. ಬೆಳಂಬಾರ ಗ್ರಾಮದ ಗದ್ದೆಯಿಂದ ಇದೀಗ ಶೇಂಗಾವನ್ನು ಕೀಳುತ್ತಿದ್ದು, ಇಳುವರಿ ತೀವ್ರವಾಗಿ ಕುಸಿದಿದೆ.

ಪರಿಹಾರ ನೀಡಲು ಆಗ್ರಹ: ‘ಮಳೆ ಅಭಾವದಿಂದಾಗಿ ಈ ಹಿಂದೆ ಭತ್ತ ಬೆಳೆಯುತ್ತಿದ್ದ ಜಾಗದಲ್ಲಿ ಅನಿವಾ ರ್ಯವಾಗಿ ಶೇಂಗಾ ಬೆಳೆಯಬೇಕಾ ಗಿದೆ. ಇಲ್ಲದಿದ್ದರೆ ಆ ಭೂಮಿ ಬಂಜರು ಬಿಡಬೇಕಾಗುತ್ತದೆ. ನಷ್ಟವಾದರೂ ನಮ್ಮ ಹಿರಿಯರು ಮಾಡಿಕೊಂಡು ಬಂದ ಕೃಷಿ ಕಾರ್ಯ ಮುಂದುವರಿಸಿಕೊಂಡು ಹೋಗು ತ್ತಿದ್ದೇವೆ. ಹಾನಿಗೊಳಗಾದ ಶೇಂಗಾ ಬೆಳೆಯಿಂದ ನಷ್ಟಕ್ಕೊಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಸೋಮು ಗೌಡ ಆಗ್ರಹಿಸಿದರು.

ಮಾಹಿತಿ ಪಡೆದು ಬೆಳೆಯಲಿ
‘ಶೇಂಗಾ ಬೇಸಿಗೆಯ ಬೆಳೆಯಾಗಿದ್ದು, ತಾಲ್ಲೂಕಿನಲ್ಲಿ ನವೆಂಬರ್‌ ತಿಂಗಳಲ್ಲಿ ಸುಮಾರು ಒಂದೂವರೆ ಸಾವಿರ ಎಕರೆಯಷ್ಟು ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಇದಕ್ಕೆ ಅತೀ ಕಡಿಮೆ ನೀರಿನ ಅಗತ್ಯ ಇರುವುದರಿಂದ ಸಾಮಾನ್ಯವಾಗಿ ಕೃಷಿಕರು ಕೂಡ ಆಸಕ್ತಿ ವಹಿಸುತ್ತಾರೆ. ಆದರೆ ಮಳೆಗಾಲದಲ್ಲಿ ಈ ಬೆಳೆ ಬೆಳೆದರೆ ಕಾಳು ಹೆಚ್ಚು ಬರುವುದಿಲ್ಲ. ಮಣ್ಣಿನ ಒಳಗಡೆ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಇರುವುದರಿಂದ ಜೊಳ್ಳು ಅಧಿಕವಾಗಿರುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

* * 

ರೈತರು ಯಾವ ಅವಧಿಯಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುವುದನ್ನು ಇಲಾಖೆಯಿಂದ ಮಾಹಿತಿ ಪಡೆದುಕೊಂಡರೆ ಬೆಳೆ ನಷ್ಟ ತಪ್ಪಿಸಬಹುದು
ಡಿ.ಎಂ.ಬಸವರಾಜು
ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT