ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಬಾರದ ಅಕ್ರಮ ಮರಳು ದಂಧೆ

Last Updated 15 ನವೆಂಬರ್ 2017, 9:44 IST
ಅಕ್ಷರ ಗಾತ್ರ

ಕುಷ್ಟಗಿ: ‘ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಅಕ್ರಮ ಮರಳು ಸಾಗಣೆ ದಂಧೆ ಮುಂದುವರೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ತಡೆಯಲು ಮುಂದಾಗುತ್ತಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಕುಷ್ಟಗಿ ಹೋಬಳಿ ವ್ಯಾಪ್ತಿಯ ಬಳೂಟಗಿ, ಮೇಗೂರು, ಕೇಸೂರು, ದೋಟಿಹಾಳ, ಶಿರಗುಂಪಿ, ಹೆಸರೂರು, ಟೆಂಗುಂಟಿ ಭಾಗದ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿದೆ. ಸರ್ಕಾರಿ ಅಥವಾ ಖಾಸಗಿ ಜಮೀನುಗಳ ಹಳ್ಳಗಳಲ್ಲಿ ಜೆಸಿಬಿ ಯಂತ್ರಗಳಿಂದ ಮನಸೋ ಇಚ್ಛೆ ಮರಳು ಬಗೆಯುತ್ತಿರುವುದು ಸಾಮಾನ್ಯವಾಗಿದೆ. ಹಗಲು ರಾತ್ರಿ ಗಣಿಗಾರಿಕೆ ಮುಂದುವರಿದಿದೆ’ ಎಂದು ಆರೋಪಿಸಿದ್ದಾರೆ.

‘ಕಳೆದ ತಿಂಗಳು ನಿರಂತರ ಮಳೆಯಿಂದ ಹಳ್ಳಗಳಲ್ಲಿ ಸಾಕಷ್ಟು ನೀರು ಹರಿದು ಮರಳು ಸಂಗ್ರಹವಾಗಿದ್ದು, ಅಕ್ರಮ ದಂಧೆಕೋರರಿಗೆ ಲಾಭವಾಗಿ ಪರಿಣಮಿಸಿದೆ. ಕೆಲ ಇಲಾಖೆ ಅಧಿಕಾರಿಗಳು, ಹಾಲಿ, ಮಾಜಿ ರಾಜಕಾರಣಿಗಳ ಪರೋಕ್ಷ ಸಹಕಾರ ಇರುವುದರಿಂದ ಅಕ್ರಮ ದಂಧೆಗೆ ಕಡಿವಾಣ ಇಲ್ಲದಂತಾಗಿದೆ.

ತಾಲ್ಲೂಕಿನಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವೆಂಬಂತಾಗಿದೆ. ಬೆಳಗಿನಿಂದಲೇ ಟ್ರ್ಯಾಕ್ಟರ್‌ಗಳ ಮೂಲಕ ಮರಳನ್ನು ತೆಗೆದು ರಹಸ್ಯಸ್ಥಳಗಳಲ್ಲಿ ಸಂಗ್ರಹಿಸಿ ತಡರಾತ್ರಿ ಲಾರಿಗಳ ಮೂಲಕ ಅಕ್ಕಪಕ್ಕದ ಜಿಲ್ಲೆಗಳಿಗೆ ಮರಳು ಸಾಗಿಸಲಾಗುತ್ತಿದೆ. ಅಕ್ರಮ ಮರಳು ದಂಧೆಕೋರರು ಬೆದರಿಕೆಯೊಡ್ಡುತ್ತಿದ್ದಾರೆ. ಕಂದಾಯ, ಪೊಲೀಸ್‌ ಇಲಾಖೆ ಗಮನಕ್ಕೆ ಬಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಅಧಿಕ ದರ: ‘ಅಕ್ರಮ ಮರಳು ಸಾಗಣೆಗೆ ವ್ಯವಸ್ಥಿತ ಜಾಲವೇ ಇದೆ. ದಂಧೆಕೋರರೊಂದಿಗೆ ಹಳ್ಳದ ಪಕ್ಕದ ಜಮೀನಿನ ಮಾಲೀಕರು ಶಾಮೀಲಾಗಿದ್ದಾರೆ. ಜಿಲ್ಲೆಯ ಗಡಿ ದಾಟಿಸುವ ಹೊಣೆಯನ್ನು ಕೆಲ ವ್ಯಕ್ತಿಗಳು ಹೊತ್ತಿದ್ದು ಇಂಥವರಿಗೆ ಅಧಿಕಾರಿಗಳು, ರಾಜಕಾರಣಿಗಳ ಬೆಂಬಲವಿದೆ. ಟ್ರ್ಯಾಕ್ಟರ್‌ ಮರಳಿಗೆ ₹500–1000 ನೀಡುತ್ತಿದ್ದರೆ ಒಂದು ಲಾರಿಗೆ ₹15,000ರಿಂದ ₹20,000ದ ವರೆಗೆ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ಜನ, ಬಡವರು ಕನಿಷ್ಠ ₹3–4 ಸಾವಿರ ದುಬಾರಿ ಹಣ ಕೊಟ್ಟು ಮರಳು ಖರೀದಿಸಬೇಕು’ ಎಂದು ತಿಳಿದು ಬಂದಿದೆ.

ಕಠಿಣ ಕ್ರಮ: ‘ಅನಧಿಕೃತ ಸ್ಥಳದಲ್ಲಿ ಮರಳು ತೆಗೆಯುವುದು, ಪರವಾನಗಿ ಇಲ್ಲದ, ಜಿಪಿಎಸ್‌ ವ್ಯವಸ್ಥೆ ಅಳವಡಿಸದ ಟ್ರ್ಯಾಕ್ಟರ್‌ಗಳ ಮೂಲಕ ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಅಕ್ರಮ ದಂಧೆ ನಿಯಂತ್ರಣಕ್ಕೆ ರಾಜಕೀಯ ಒತ್ತಡ ಅಡ್ಡಿಯಾಗಿದೆ’ ಎಂದು ಪೊಲೀಸ್‌ ಮೂಲಗಳು ಅಸಹಾಯಕತೆ ವ್ಯಕ್ತಪಡಿಸಿವೆ.

‘ರಾತ್ರಿ ವೇಳೆ ಅಕ್ರಮ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಮುದೇನೂರು, ದೋಟಿಹಾಳ, ತಾವರಗೇರಾ ಭಾಗದಲ್ಲಿನ ಕೆಲವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿ, ದಂಡವನ್ನೂ ಹಾಕಿದ್ದೇವೆ. ಹಳ್ಳಗಳಲ್ಲಿ ಉತ್ತಮ ಮರಳು ಸಂಗ್ರಹಣೆಯಾಗಿದ್ದು, ಅಕ್ರಮ ದಂಧೆ ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು’ ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ಸ್ಪಷ್ಟಪಡಿಸಿದರು.

* * 

ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರಾತ್ರಿ ಪಹರೆ ನಡೆಸಿ ಅಕ್ರಮ ಮರಳು ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಎಂ.ಗಂಗಪ್ಪ
ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT