ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಸಮಾನತೆಗೆ ಹೆಚ್ಚಿನ ಒತ್ತು

Last Updated 15 ನವೆಂಬರ್ 2017, 10:03 IST
ಅಕ್ಷರ ಗಾತ್ರ

ಲಿಂಗಸುಗೂರು: ‘ವೀರಶೈವ ಲಿಂಗಾಯತ ಪರಂಪರೆಯಲ್ಲಿ ಎಲ್ಲರ ಸಮಾನತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಾನವ ಧರ್ಮಕ್ಕೆ ಪಂಚಪೀಠಗಳು ಅಪಾರ ಕೊಡುಗೆ ನೀಡಿವೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘12ನೇ ಶತಮಾನಕ್ಕೂ ಮುಂಚೆ ಆಗಸ್ತ್ಯ ಮುನಿಗಳಿಗೆ ಶಿವಬೋಧನೆಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಆಂಧ್ರಪ್ರದೇಶದ ಕೊಲ್ಲಿಪಾಕಿಯಲ್ಲಿ ವಿವಿಧ ಜಾತಿಗಳ 18 ಮಠಗಳಿವೆ. ಶೈವ ಬ್ರಾಹ್ಮಣರಾಗಿದ್ದ ಬಸವಣ್ಣ ಕೂಡಲಸಂಗಮದ ಜಾತಿವೇದ ಶಿವಾಚಾರ್ಯರಿಂದ ಲಿಂಗದೀಕ್ಷೆ ಪಡೆದು ಲಿಂಗವಂತರಾದರು’ ಎಂದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗಿರುವ ಕೆಲ ಸ್ವಾಮೀಜಿ, ರಾಜಕಾರಣಿಗಳು ಹತಾಶರಾಗಿ ಅವಾಚ್ಯ ಪದ ಬಳಕೆ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಬಸವಣ್ಣನವರ ಆದರ್ಶಗಳಿಗೆ ಮಸಿ ಬಳಿಯುವ ಯತ್ನ ಫಲಿಸದು. ಸಾಂವಿಧಾನಿಕವಾಗಿ ಪ್ರತ್ಯೇಕ ಧರ್ಮ ಘೋಷಣೆ ಸುಲಭವಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯ ಕೈಗೊಂಡಿದೆ’ ಎಂದರು.

‘ಬಸವಣ್ಣನವರು ಧರ್ಮ ಸ್ಥಾಪನೆ ಕುರಿತು ಎಲ್ಲಿಯೂ ಹೇಳಿಲ್ಲ. ಆದರೆ, ಕೆಲವರು ಬಸವಣ್ಣನ ಹೆಸರು ಬಳಸಿಕೊಂಡು ಮನಸ್ಸಿಗೆ ಬಂದಂತೆ ಹೋಗುತ್ತಿರುವುದು ಅವರ ಆಶಯಗಳಿಗೆ ಮಸಿ ಬಳಿದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭವ್ಯ ಮೆರವಣಿಗೆ: ತಾಲ್ಲೂಕು ವೀರಶೈವ ಜಂಗಮ ಸಮಾಜದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಅಲಂಕೃತ ಸಾರೋಟ್‌ನಲ್ಲಿ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಆಸೀನರಾಗುತ್ತಿದ್ದಂತೆ ಭಕ್ತರು ಜೈಘೋಷ ಹಾಕಿದರು. ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ‍್ಯಾಲಿ ಕೈಗೊಂಡರು.

ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಸುಮನಾ ನಂದಿಕೋಲಮಠ ಮಾತನಾಡಿದರು. ನವಲಕಲ್‌ನ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು ಲೋಕಾಪುರದ ಚಂದ್ರಶೇಖರ ಸ್ವಾಮೀಜಿ, ನೀಲಗಲ್‌ ಮತ್ತು ಹುನಕುಂಟಿ ಶರಣಯ್ಯ ತಾತಾ ಇದ್ದರು.

ಲಿಂಗಸುಗೂರು: ‘ಪಂಚಪೀಠಗಳ ನೇತೃತ್ವ ಹಾಗೂ ರಾಜ್ಯದ ವಿವಿಧ ವಿರಕ್ತ ಮಠಾಧೀಶರ ಸಹಯೋಗದಲ್ಲಿ ಡಿಸೆಂಬರ್‌ 24 ರಂದು ಗದಗಿನಲ್ಲಿ ವೀರಶೈವ ಲಿಂಗಾಯತ ಬೃಹತ್‌ ಸಮಾವೇಶವನ್ನು ಆಯೋಜಿಸಿ ಭಕ್ತರಲ್ಲಿ ಆತ್ಮಸ್ಥೈರ್ಯ ತುಂಬಲಾಗುವುದು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಒಳಪಂಗಡದ ಕೆಲ ಜಾತಿಯವರು ಈಗಾಗಲೇ ವಿವಿಧ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರತ್ಯೇಕ ಧರ್ಮ ಸ್ಥಾಪನೆಯಿಂದ ಅವರಿಗೆ ಅನ್ಯಾಯವಾಗುತ್ತದೆ. ಸಾಮಾಜಿಕ ಚಿಂತನೆ ಹೊಂದಿರದ, ಮಠಗಳ ಪರಂಪರೆಯ ಜ್ಞಾನದ ಕೊರತೆಯಿಂದ ಪ್ರತ್ಯೇಕ ಧರ್ಮದ ಹೋರಾಟ ದಾರಿ ತಪ್ಪುತ್ತಿದೆ’ ಎಂದು ಹೇಳಿದರು.

‘ವೀರಶೈವ ಎಂಬುದು ಧರ್ಮ ವಾಚಕ, ಲಿಂಗಾಯತ ಎಂಬುದು ರೂಢಿಗತ ಶಬ್ದಗಳಾಗಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಪೊಳ್ಳು ಹೋರಾಟಕ್ಕೆ ಮಣೆ ಹಾಕಬಾರದು. ಈ ಹೋರಾಟದ ಹಿಂದೆ ರಾಜಕೀಯ ಉದ್ದೇಶವಿದ್ದು, ಚುನಾವಣೆ ಘೋಷಣೆ ನಂತರ ಸರಿ ಹೋಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರತ್ಯೇಕ ಧರ್ಮದ ಹೋರಾಟ ನಡೆಸುವ ಸಚಿವರು, ಶಾಸಕರು ತಾವು ಸ್ವೀಕರಿಸಿದ ಪ್ರಮಾಣವಚನವನ್ನೇ ಧಿಕ್ಕರಿಸಿದಂತೆ ಆಗುತ್ತದೆ. ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕ ಧರ್ಮದ ಹೋರಾಟಕ್ಕಾಗಿ ಬೀದಿಗಿಳಿದಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT