ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗಕ್ಕೆ ಕುರಿಗಳು ಸಾವು

Last Updated 15 ನವೆಂಬರ್ 2017, 10:07 IST
ಅಕ್ಷರ ಗಾತ್ರ

ಮುದಗಲ್: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವ್ಯಾಪಿಸಿರುವ ಸಾಂಕ್ರಾಮಿಕ ರೋಗಕ್ಕೆ ಕುರಿಗಳು ಸಾವನ್ನಪ್ಪುತ್ತಿದ್ದು, ಕುರಿಗಾರರು ಆತಂಕಗೊಂಡಿದ್ದಾರೆ. ಕುರಿಗಳನ್ನು ರಕ್ಷಿಸಿಕೊಳ್ಳಲಾಗದೆ ಅವರು ಕಂಗಾಲು ಆಗಿದ್ದಾರೆ.

ನೀಲಿ ನಾಲಿಗೆ ರೋಗ, ಜಂತು ರೋಗ ಮುಂತಾದವುಗಳಿಂದ ಕುರಿಗಳು ಸಾವನ್ನಪ್ಪುತ್ತಿವೆ. ಇದರಿಂದ ಮನನೊಂದು ಕುರಿಗಾರರು ಕುರಿಗಳ ಕಳೆಬರವನ್ನು ಮರಗಳಿಗೆ ನೇತು ಹಾಕುತ್ತಿದ್ದಾರೆ. ಆಯಾ ಮರಗಳ ಸುತ್ತಮುತ್ತ ಇತರ ಕುರಿಗಳು ಬಾರದಂತೆ ತಡೆಯುತ್ತಿದ್ದಾರೆ.

‘ಪಶು ಇಲಾಖೆಯಿಂದ ಕುರಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆ ದೊರೆಯದ ಕಾರಣ ಕುರಿಗಳು ಸಾಯುತ್ತಿವೆ. ಮುದಗಲ್ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಕುರಿ ಮತ್ತು ಆಡುಗಳಿವೆ. ನಿಯಂತ್ರಣಕ್ಕೆ ಬಾರದ ಸಾಂಕ್ರಾಮಿಕ ರೋಗದಿಂದ ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ’ ಎಂದು ಕುರಿಗಾರರು ತಿಳಿಸಿದರು.

ಮುದಗಲ್ ಭಾಗದ ಬನ್ನಿಗೋಳ, ಮೇಗಳಪೇಟೆ, ನಾಗಲಾಪುರು, ಛತ್ತರ, ಕಿಲಾರಹಟ್ಟಿ, ಆಮದಿಹಾಳ, ಜನತಾಪುರು, ಪಿಕಳಿಹಾಳ ಹಲ್ಕಾವಟಗಿ, ತೊಂಡಿಹಾಳ, ರಾಮತ್ನಾಳ, ತೊಡಕಿ, ನಾಗರಾಳ ಸಜ್ಜಲಗುಡ್ಡ, ಕೊಮನೂರು ಮುಂತಾದ ಗ್ರಾಮಗಳಲ್ಲಿ ರೋಗಕ್ಕೆ ಕುರಿಗಳು ಬಲಿಯಾಗಿವೆ.

ಕುರಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ, ಸರ್ಕಾರದ ಸೌಲಭ್ಯ, ವಿಮೆ, ಪರಿಹಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕುರಿಗಾರರಿಗೆ ಸರಿಯಾದ ಮಾಹಿತಿ ಇಲ್ಲ. ಸರ್ಕಾರಿ ಸೌಲಭ್ಯ ಸದ್ಬಳಕೆ ಕುರಿತು ಕುರಿಗಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯದಿರುವುದು ಬೇಸರದ ಸಂಗತಿ. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟವಾಗುತ್ತಿದೆ’ ಎಂದು ಕುರಿಗಾರ ಧರ್ಮಪ್ಪ ಹೇಳಿದರು.

‘ಪಶು ಇಲಾಖೆ ವೈದ್ಯರು ಮತ್ತು ಅಧಿಕಾರಿಗಳು ಈಗಲಾದರೂ ಕುರಿಗಳಿಗೆ ಕಾಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಕುರಿಗಾರರಲ್ಲಿ ಜಾಗೃತಿ ಮೂಡಿಸಬೇಕು’ ಕುರಿಗಾರ ಹನಮಪ್ಪ ಒತ್ತಾಯಿಸಿದರು.

‘ಕುರಿಗಳಿಗೆ ತಗಲುವ ಈ ರೋಗಕ್ಕೆ ಔಷಧಿ ಇಲ್ಲ. ಅಗತ್ಯ ಔಷಧಿಗಳುನ್ನು ಹಾಕಿ ರೋಗ ಹತೋಟಿಗೆ ತರಬೇಕು. ಕುರಿಗಾರರು ಪಶು ವೈದ್ಯರಿಗೆ ಸಂಪರ್ಕಿಸದೆ ತಾವೇ ಔಷಧಿ ಹಾಕುವುದರಿಂದ ಕುರಿಗಳು ಸಾಯುತ್ತಿವೆ. ಸರ್ಕಾರ ಸಾಕಷ್ಟು ಲಸಿಕೆ, ಔಷಧ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ಕುರಿಗಾರು ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ’ ಎಂದು ಪಶು ವೈದ್ಯಾಧಿಕಾರಿ ರಾಚಪ್ಪ ತಿಳಿಸಿದರು.

* * 

ಕುರಿಗಳಲ್ಲಿ ಅನಾರೋಗ್ಯ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣವೇ ಪಶುವೈದ್ಯರನ್ನು ಸಂಪರ್ಕಿಸಬೇಕು. ಕುರಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು.
ಡಾ. ರಾಚಪ್ಪ,
ತಾಲ್ಲೂಕು ಪಶು ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT