ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಖಾಸಗಿ ಶಾಲೆಗಳು ಕನ್ನಡ ವಿರೋಧಿ ಅಲ್ಲ'

Last Updated 15 ನವೆಂಬರ್ 2017, 10:14 IST
ಅಕ್ಷರ ಗಾತ್ರ

ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡಲು ಕನ್ನಡಿಗರೇ ಮುಜುಗರ ಪಡುತ್ತಿದ್ದು, ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಕನ್ನಡ ಮಾತನಾಡಲು ಮುಜುಗರ ಬೇಡ ಎಂದು ಮಕ್ಕಳ ತಜ್ಞೆ ಡಾ.ರಾಜಶ್ರೀ ಅಭಿಪ್ರಾಯಪಟ್ಟರು.

ಪಟ್ಟಣದ ಮಂಗಳವಾರಪೇಟೆಯ ವೆಬ್ ಸ್ಟರ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಕೀರ್ತಿ ಈ ಭಾಷೆಗೆ ಇದೆ. ಆದ್ದರಿಂದ ಈ ನಾಡಿನ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ಅವರಿಗೆ ಗಟ್ಟಿಯಾದ ನೆಲೆಗಟ್ಟನ್ನು ಹಾಕಿಕೊಡಬೇಕಿದೆ’ ಎಂದರು.

ಆರೋಗ್ಯ ಇಲಾಖೆಯ ಡಿ.ಪುಟ್ಟಸ್ವಾಮಿಗೌಡ ಮಾತನಾಡಿ, ಕೇವಲ ಬದುಕನ್ನು ರೂಪಿಸಿಕೊಳ್ಳಲು ಕನಿಷ್ಟ ಮಟ್ಟದ ಇಂಗ್ಲಿಷ್ ಭಾಷೆ ಕಲಿಯ ಬೇಕೆ ವಿನಾ ಮಕ್ಕಳ ಇಡೀ ಬದುಕೇ ಇಂಗ್ಲೀಷ್ ಮಯವಾಗಬಾರದು, ಕನ್ನಡ ಭಾಷೆಯ ಮುಂದೆ ಗಟ್ಟಿಯಾಗಿ ನಿಲ್ಲಲು ಇಂಗ್ಲಿಷ್‌ ಭಾಷೆಗೆ ಸಾಧ್ಯವೇ ಇಲ್ಲ. ಅಂತಹ ಒಂದು ಶ್ರೀಮಂತ ತಾಯಿ ಭಾಷೆಯನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳು ಕಲಿತಾಗ ಮಾತ್ರ ಅವರು ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಪಟೇಲ್ ಸಿ.ರಾಜು ಮಾತನಾಡಿ, ಖಾಸಗಿ ಶಾಲೆಗಳು ಕನ್ನಡ ವಿರೋಧಿಗಳಲ್ಲ. ಮಕ್ಕಳ ಮುಂದಿನ ವ್ಯಾಸಂಗ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಆಂಗ್ಲ ಭಾಷೆ ಅನಿವಾರ್ಯ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಕನ್ನಡ ಭಾಷೆಯನ್ನು ನಮ್ಮ ಶಾಲೆಯಲ್ಲಿ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ಒತ್ತುಕೊಟ್ಟು ಕಲಿಸಲಾಗುತ್ತಿದೆ ಎಂದರು.

ರೈತ ಮುಖಂಡ ಎಂ.ಡಿ ಶಿವಕುಮಾರ್, ಸಾಹಿತಿ ವಿಜಯ್ ರಾಂಪುರ, ಶಿಕ್ಷಕರಾದ ರವಿಕುಮಾರ್, ಸೌಜನ್ಯ, ಕನಕಲಕ್ಷ್ಮಿ, ಸವಿತ, ಸರ್ವಮಂಗಳ, ಶ್ರುತಿ, ರೋಹಿನ್, ಸೌಮ್ಯ, ರಜ್ವಾನ ಬಾನು, ರಾಬಿಯಾ ಬಾನು, ಮುಬೀನ್ ತಾಜ್, ಗುಲ್ಫಾಮ್ ಕಾತೂನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT