ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ಪುನೇರಳೆ ತೋಟಗಳಲ್ಲಿ ಕೀಟಗಳ ಹಾವಳಿ

Last Updated 15 ನವೆಂಬರ್ 2017, 10:16 IST
ಅಕ್ಷರ ಗಾತ್ರ

ರಾಮನಗರ: ಚಳಿಗಾಲದ ಆರಂಭದೊಡನೆ ಹಿಪ್ಪುನೇರಳೆ ತೋಟಗಳಲ್ಲಿ ಕೀಟಬಾಧೆ ಹೆಚ್ಚಾಗಿದೆ. ಇಡೀ ತೋಟವನ್ನು ರೇಷ್ಮೆಹುಳುಗಳ ಬದಲಿಗೆ ಕೀಟಗಳೇ ಮೇಯತೊಡಗಿದ್ದು, ರೈತರು ಕಂಗಾಲಾಗಿದ್ದಾರೆ.

ಹಿಪ್ಪುನೇರಳೆಯ ಚಿಗುರಿನ ರುಚಿಗೆ ಮಾರುಹೋಗಿರುವ ಕೀಟಗಳು ರೈತರ ತೋಟಗಳಿಗೆ ದಂಡುದಂಡಾಗಿ ಲಗ್ಗೆ ಇಡುತ್ತಿವೆ. ಎಳೆಯ ಕುಡಿಗಳನ್ನು ಮುರಿದು ಮೇಯುತ್ತಿರುವ ಕಾರಣ ಸೊಪ್ಪಿನ ಬೆಳವಣಿಗೆ ಕುಂಠಿತಗೊಂಡಿದೆ. ಇದರಿಂದಾಗಿ ಹುಳು ಸಾಕಾಣಿಕೆಗೂ ಹೊಡೆತ ಬೀಳುತ್ತಿದೆ.

‘ಬೆಳಗ್ಗಿನ ಎಳೆ ಬಿಸಿಲಿಗೆ ಮೈ ಕಾಯಿಸಿಕೊಳ್ಳುವ ಈ ಕೀಟಗಳು ಬಕಾಸುರರಂತೆ ಒಮ್ಮೆಗೆ ಚಿಗುರನ್ನು ಕಡಿಯುತ್ತಾ ಹೋಗುತ್ತವೆ. ಬಿಸಿಲು ಜಾಸ್ತಿಯಾದ ಬಳಿಕ ಎಲೆಗಳ ಅಡಿ ಅವಿತು ವಿಶ್ರಾಂತಿ ಪಡೆಯುತ್ತವೆ. ಸಂಜೆ ಆಯಿತೆಂದರೆ ಮತ್ತೆ ಹೊಲಗಳಲ್ಲಿ ಅವುಗಳ ಉಪಟಳ ಹೆಚ್ಚುತ್ತದೆ. ಗಿಡವೊಂದರಲ್ಲೇ ಹಿಂಡುಹಿಂಡಾಗಿ ಹುಳುಗಳು ಕಾಣಸಿಗುತ್ತವೆ’ ಎಂದು ವಿವರಿಸುತ್ತಾರೆ ಪಾಲಬೋವಿದೊಡ್ಡಿಯ ರೈತ ದೇವರಾಜು.

‘ಕೀಟಗಳ ಬೆಳವಣಿಗೆಯೂ ವೇಗವಾಗಿದ್ದು, ನಾಲ್ಕೈದು ದಿನಕ್ಕೆಲ್ಲ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಹೀಗಾಗಿ ಎಷ್ಟೇ ನಿಯಂತ್ರಿಸಿದರೂ ಮತ್ತೆ ಬರುತ್ತಲೇ ಹೋಗುತ್ತವೆ. ಇದರಿಂದ ಬೇಸತ್ತು ಕೆಲವು ರೈತರು ಹೊಲಗಳನ್ನು ಹಾಗೆಯೇ ಬಿಟ್ಟುಬಿಡುತ್ತಾರೆ’ ಎಂದು ಅವರು ವಿವರಿಸುತ್ತಾರೆ.

ಪ್ರತಿ ವರ್ಷವೂ ಹೀಗೆ: ‘ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತೆಂದರೆ ಈ ಕೀಟಬಾಧೆ ತಪ್ಪಿದ್ದಲ್ಲ. ಯಾವ ಔಷಧೋಪಚಾರಕ್ಕೂ ಇವುಗಳು ಬಗ್ಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಮತ್ತೊಬ್ಬ ರೈತ ಪುಟ್ಟರಾಮು.

‘ಮೋಡ ಕವಿದ ವಾತಾವರಣ ಇರುವ ದಿನಗಳಲ್ಲಿ ಇವುಗಳ ಉಪಟಳ ಹೆಚ್ಚು, ವಾತಾವರಣ ತಣ್ಣಗಿದ್ದಷ್ಟೂ ಹೆಚ್ಚು ಹೆಚ್ಚು ಸೊಪ್ಪನ್ನು ಮೇಯುತ್ತಾ ಹೋಗುತ್ತವೆ. ಇದರಿಂದ ಇಡೀ ಹೊಲಗಳು ಬೋಳುಬೋಳಾಗಿ ಕಾಣತೊಡಗಿವೆ’ ಎಂದು ಅವರು ಹೇಳುತ್ತಾರೆ.

ಉತ್ಪಾದನೆ ಕುಸಿತ: ಚಳಿಗಾಲವು ರೇಷ್ಮೆ ಕೃಷಿಗೆ ಉತ್ತಮವಾದ ಸಮಯ. ಈ ಅವಧಿಯಲ್ಲಿ ವಾತಾವರಣವು ತಂಪಾಗಿ ಇರುವುದರಿಂದ ರೇಷ್ಮೆಹುಳುಗಳು ಹೆಚ್ಚು ಆರೋಗ್ಯದಿಂದ ಇರುತ್ತವೆ. ಹೀಗಾಗಿ ಗೂಡಿನ ಉತ್ಪಾದನೆಯೂ ಹೆಚ್ಚಿದ್ದು, ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದು ರೈತರು ವಿವರಿಸುತ್ತಾರೆ.

ಆದರೆ ಹೊಲಗಳಲ್ಲಿ ಸೊಪ್ಪು ಇಲ್ಲದಿರುವ ಕಾರಣ ಹೆಚ್ಚು ಹುಳುಗಳನ್ನು ಸಾಕಲು ಆಗದು. ಸಾಮಾನ್ಯವಾಗಿ 100 ಮೊಟ್ಟೆ ಬೆಳೆಸುವವರು ಈ ಅವಧಿಯಲ್ಲಿ ಕೇವಲ 25 ಮೊಟ್ಟೆ ಬೆಳೆಸುತ್ತಾರೆ. ಒಂದು ಎಕರೆಯಲ್ಲಿ 400 ಮೊಟ್ಟೆ ಹುಳುಗಳಿಗೆ ಸಾಕಾಗುವಷ್ಟು ಸೊಪ್ಪು ಬೆಳೆದರೆ, ಈ ಕೀಟಬಾಧೆಯಿಂದಾಗಿ ಕೇವಲ 50–75 ಮೊಟ್ಟೆಗೆ ಸಾಕಾಗುವಷ್ಟು ಸೊಪ್ಪು ಮಾತ್ರ ದೊರೆಯುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಸೊಪ್ಪು ಲಭ್ಯವಿಲ್ಲದ ಕಾರಣಕ್ಕೆ ಇನ್ನೂ ಕೆಲವರು ಹುಳು ಸಾಕುವುದನ್ನೇ ನಿಲ್ಲಿಸಿದ್ದಾರೆ.

ಸೊಪ್ಪಿನ ಬೆಲೆ ಏರಿಕೆ: ಹಿಪ್ಪುನೇರಳೆ ಸೊಪ್ಪಿನ ಉತ್ಪಾದನೆ ಕುಸಿದಿರುವ ಕಾರಣ ಸಹಜವಾಗಿಯೇ ಅದರ ಬೆಲೆ ಏರಿಕೆ ಕಂಡಿದೆ. ಒಂದು ಚೀಲಕ್ಕೆ ಇಷ್ಟೆಂಬ ಲೆಕ್ಕದಲ್ಲಿ ಸೊಪ್ಪು ಬೆಳೆದವರು ಹುಳು ಸಾಕಿದವರಿಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ಸೊಪ್ಪಿನ ಚೀಲವೊಂದಕ್ಕೆ ₨400–500ವರೆಗೂ ಬೆಲೆ ಏರಿದೆ.

‘ತುಂಡು ಭೂಮಿಗಳನ್ನು ಹೊಂದಿರುವ ರೈತರ ಬಳಿ ಒಂದಷ್ಟು ಹೊರೆಗಳಷ್ಟು ಮಾತ್ರ ಸೊಪ್ಪು ಬೆಳೆದಿದೆ. ಅಷ್ಟನ್ನೇ ನಂಬಿಕೊಂಡು ಹುಳುಗಳನ್ನು ಸಾಕುವುದು ಕಷ್ಟ. ಅಂತಹವರು ಸೊಪ್ಪು ಮಾರುತ್ತಿದ್ದಾರೆ. ಹುಳು ಸಾಕಿ ಸೊಪ್ಪಿನ ಕೊರತೆ ಇದ್ದವರು ಹೊಲಗಳಿಗೆ ಹುಡುಕಿಕೊಂಡು ಹೋಗಿ ದುಡ್ಡು ಕೊಟ್ಟು ಸೊಪ್ಪು ತರುತ್ತಿದ್ದಾರೆ’ ಎನ್ನುತ್ತಾರೆ ರೈತ ಮಂಚಯ್ಯ.

‘ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹400–420 ವರೆಗೂ ಬೆಲೆ ಇದೆ. ಉತ್ತಮ ಬೆಲೆ ಇದ್ದಾಗ್ಯೂ ಹೆಚ್ಚಿನ ಉತ್ಪನ್ನ ಬೆಳೆಯಲಾಗದ ಕಾರಣ ಸಹಜವಾಗಿಯೇ ನಿರಾಸೆ ಆಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಕೀಟಬಾಧೆ ನಿರಂತರವಾಗಿದ್ದರೂ ಅವುಗಳ ನಿಯಂತ್ರಣಕ್ಕೆ ರೇಷ್ಮೆ ಇಲಾಖೆ ಮುಂದಾಗಿಲ್ಲ. ಇನ್ನಾದರೂ ರೈತರ ನೆರವಿಗೆ ಧಾವಿಸಿ, ಅಗತ್ಯ ಔಷದೋಪಚಾರಕ್ಕೆ ಸಲಹೆ ನೀಡಬೇಕು. ಉಚಿತವಾಗಿ ಔಷಧಗಳನ್ನು ಸರಬರಾಜು ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಫಲ ನೀಡದ ಔಷಧೋಪಚಾರ
ಕೀಟಬಾಧೆ ನಿಯಂತ್ರಣಕ್ಕೆ ರೇಷ್ಮೆ ಇಲಾಖೆಯು ರೈತರಿಗೆ ಹಲವು ಬಗೆಯ ಔಷಧೋಪಚಾರಗಳನ್ನು ಸಲಹೆ ಮಾಡಿದೆ. ಇವುಗಳನ್ನು ಅನುಸರಿಸುತ್ತಿದ್ದಾಗ್ಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.

‘ಈ ಅವಧಿಯಲ್ಲಿ ಕೀಟಬಾಧೆ ಸಾಮಾನ್ಯವಾಗಿದೆ. ರೈತರು ಏಕಕಾಲಕ್ಕೆ ಸಮಗ್ರ ಔಷಧೋಪಚಾರ ಮಾಡಿದಲ್ಲಿ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ಪ್ರತಿ 15–20 ದಿನಗಳಿಗೆ ಒಮ್ಮೆ ಔಷಧ ಸಿಂಪಡನೆ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಹೇಂದ್ರಕುಮಾರ್.

‘ರೇಷ್ಮೆ ಹೊಲಗಳು ಅಕ್ಕಪಕ್ಕದಲ್ಲಿಯೇ ಇದ್ದು, ಏಕಕಾಲಕ್ಕೆ ಕಟಾವು ನಡೆಯದ ಕಾರಣ ಕೀಟಗಳು ವಲಸೆ ಹೋಗುತ್ತಲೇ ಇರುತ್ತವೆ. ಇದರಿಂದಾಗಿ ಅವುಗಳನ್ನು ನಿಯಂತ್ರಿಸುವುದು ವೈಜ್ಞಾನಿಕವಾಗಿ ಕಷ್ಟಕರ’ ಎಂದು ಅವರು ಹೇಳುತ್ತಾರೆ.

* * 

ಪ್ರತಿ ಚಳಿಗಾಲದ ಸಂದರ್ಭ ಹುಳು ಬಾಧೆ ಸಾಮಾನ್ಯವಾಗಿದೆ. ಇದರಿಂದ ಗೂಡಿಗೆ ಉತ್ತಮ ಬೆಲೆ ಇದ್ದರೂ ರೈತರು ನಷ್ಟ ಅನುಭವಿಸುವುದು ತಪ್ಪಿಲ್ಲ
ದೇವರಾಜು,
ರೇಷ್ಮೆ ಬೆಳೆಗಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT