ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೀಯ ತಾಣವಾಗಿ ತುಂಗಾ ನದಿ ತೀರ

Last Updated 15 ನವೆಂಬರ್ 2017, 10:20 IST
ಅಕ್ಷರ ಗಾತ್ರ

ಶಿವಮೊಗ್ಗ: ತುಂಗಾ ನದಿಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ತಡೆಗೋಡೆಗೆ ಹೊಂದಿಕೊಂಡ ಜಾಗವನ್ನು ಸೈಕಲ್‌ ಮತ್ತು ಪಾದಚಾರಿ ಮಾರ್ಗವಾಗಿ ಅಭಿವೃದ್ದಿಪಡಿಸಲಾಗುವುದು. ಸುಂದರ ಹೂದೋಟ ನಿರ್ಮಿಸಿ, ಆಕರ್ಷಣೀಯ ತಾಣವಾಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮುಲೈ ಮುಹಿಲನ್‌ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಬೇಸಿಗೆ ಅರಮನೆ ಪ್ರವೇಶ ಪೂರ್ವಕ್ಕೆ: ಪ್ರವಾಸಿಗರ ಆಕರ್ಷಣೆಗಾಗಿ ನಗರದ ಶಿವಪ್ಪನಾಯಕನ ಬೇಸಿಗೆ ಅರಮನೆಯ ಮುಂಭಾಗದಲ್ಲಿರುವ ವಸತಿಗೃಹ ತೆರವುಗೊಳಿಸಿ ಪೂರ್ವದಿಕ್ಕಿಗೆ ಪ್ರವೇಶ ನೀಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮೇಲು ಪಾದಚಾರಿ ಮಾರ್ಗ: ಅಭಿವೃದ್ಧಿಯಾಗದ ಕನ್ಸರ್ವೆನ್ಸಿಗಳನ್ನು ಅಭಿವೃದ್ಧಿ ಪಡಿಸಬೇಕು. ವಾಣಿಜ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಪಾರ್ಕಿಂಗ್, ಸೈಕಲ್ ಪ್ರಯಾಣಕ್ಕೆ ಪೂರಕವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಮುಖ್ಯ ಬಸ್‌ನಿಲ್ದಾಣದ ಬಳಿ ಖಾಸಗಿ, ಕೆಎಸ್‌ಆರ್‌ಟಿಸಿ ಮತ್ತು ನಗರ ಸಾರಿಗೆ ಬಸ್‌ಗಳಿಗೆ ತೆರಳಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೇಲು ಪಾದಚಾರಿ ಮಾರ್ಗ ನಿರ್ಮಿಸುವ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆ ಅಡಿ ಪ್ರಸ್ತಾಪ ಮಾಡಿರುವ ಯೋಜನೆಗಳಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಶಾಶ್ವತವಾಗಿರುವಂತೆ ಹಾಗೂ ನಿರ್ವಹಣಾ ವೆಚ್ಚ ಇರದಂತೆ ಗಮನಹರಿಸಬೇಕು ಎಂದು ಪಾಲಿಕೆ ಆಯುಕ್ತರು ಹಾಗೂ ಯೋಜನಾ ವರದಿ ತಯಾರಿಸಿರುವ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದರು.

ಪೂರ್ಣ ಪ್ರಮಾಣದಲ್ಲಿ ಬೀದಿದೀಪ ಅಳವಡಿಕೆ, ಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಎಲ್ಲ ನಗರಗಳಲ್ಲೂ ಕ್ರಮ ವಹಿಸಲಾಗುವುದು. ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ನಗರದ ಆಯ್ದ ಪ್ರದೇಶ ಒಳಗೊಂಡ ಪ್ರತ್ಯೇಕ ಘಟಕ ರೂಪಿಸಲಾಗಿದೆ. ನದಿ ಹರಿಯುವ ಪ್ರದೇಶ, ರೈಲು ನಿಲ್ದಾಣದಿಂದ ಬಿ.ಎಚ್. ರಸ್ತೆಯ ಸಮಗ್ರ ಅಭಿವೃದ್ಧಿ ಒಳಗೊಂಡಿದೆ. ವಿಶೇಷವಾಗಿ ನಗರ ವ್ಯಾಪ್ತಿಯ 1,500 ಎಕರೆ ಭೂಪ್ರದೇಶ ಒಳಗೊಂಡ ಪ್ರತ್ಯೇಕವಾದ ಮೂರು ಪ್ಯಾಕೇಜ್‌ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ತಯಾರಿಸಲಾಗಿರುವ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಅನುಷ್ಠಾನ ಪೂರ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆಗೆ ಯೋಜನೆಯ ಸಾಧಕ-–ಬಾಧಕ ಕುರಿತು ಸಮಾಲೋಚನೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಶೋಕ ವೃತ್ತದಿಂದ ಹಾಲ್ಕೊಳ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣ, ಪಾದಚಾರಿ ಮಾರ್ಗ, ಸೈಕಲ್ ಸವಾರರಿಗೆ ಪ್ರತ್ಯೇಕ ರಸ್ತೆ ನಿರ್ಮಿಸಲಾಗುವುದು. ವಿಶಾಲ ರಸ್ತೆಗಳ ಬದಿಯಲ್ಲಿ ನಗರದ ಸೌಂದರ್ಯ ಹೆಚ್ಚಿಸುವ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅತಿದೊಡ್ಡ ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆ ತರುವಂತಹ ಕಾಡುಜಾತಿ ಗಿಡಗಳು ಬೇಡ ಎಂದು ತಾಕೀತು ಮಾಡಿದರು.

ನಿರ್ವಹಿಸುವ ಕಾಮಗಾರಿಗಳು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕು. ಗುಣಮಟ್ಟ ಕಾಪಾಡದೇ ಬೇಗ ಹಾಳಾದರೆ ನಿರ್ವಹಣೆ ಕಷ್ಟವಾಗುತ್ತದೆ. ಈ ಎಲ್ಲ ಅಮಶಗಳನ್ನೂ ಯೋಜನೆ ರೂಪಿಸುವವರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದರು.

ವಿಶೇಷವಾಗಿ ನಗರದ ಹೃದಯಭಾಗದ ಅಮೀರ್ ಅಹ್ಮದ್ ವೃತ್ತದಲ್ಲಿ ಜನದಟ್ಟಣೆ ಹೆಚ್ಚಾಗಿ ಪಾದಚಾರಿಗಳು, ವಾಹನಗಳು ಸಂಚರಿಸಲು ಅಡ್ಡಿಯಾಗಿದೆ. ಈಗಾಗಲೇ ನಿರ್ಮಿಸಿರುವ ಪಾದಚಾರಿ ಸುರಂಗ ಮಾರ್ಗಗಳು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪಾದಚಾರಿಗಳಿಗೆ ಮಾರ್ಗದರ್ಶನ ನೀಡಲು ಸೂಚನಾ ಫಲಕ ಅಳವಡಿಸಬೇಕು. ವೃತ್ತದ ಸೌಂದರ್ಯ ಹೆಚ್ಚಿಸಲು ಅಗತ ಕಾಮಗಾರಿ ಆರಂಭಿಸಲು ಗಮನಹರಿಸಬೇಕು. ಪಾದಚಾರಿ ಸುರಂಗ ಮಾರ್ಗಗಳಲ್ಲಿ ಶುದ್ಧ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಆತಂಕವಿಲ್ಲದೇ ಜನರು ನಡೆದಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಟಾಟಾ ಕನ್ಸಲ್ಟೆಂಟ್ ಇಂಜಿನಿಯರ್‌ ಸುರಜಿತ್ ಭಟ್ಟಾಚಾರ್ಯ, ಸಂಯೋಜಕ ಉಮಾಶಂಕರ್, ನೋಡಲ್ ಅಧಿಕಾರಿ ಗಣೇಶ್, ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT