ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ರೋಗಿಗಳು

Last Updated 15 ನವೆಂಬರ್ 2017, 10:32 IST
ಅಕ್ಷರ ಗಾತ್ರ

ಕುಣಿಗಲ್: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರಿದಿದೆ. ಇದರಿಂದಾಗಿ ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 400 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ಕಳೆದೆರಡು ದಿನ 1200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಗಣೇಶ್‌ ಬಾಬು ತಿಳಿಸಿದರು.

ಮುಷ್ಕರದ ಕಾರಣ ಕರ್ತವ್ಯ ನಿರ್ವಹಿಸುತ್ತಿರುವ 8 ವೈದ್ಯರು ಸೇರಿ 50 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯ ಡಾ. ರುದ್ರಯ್ಯ ಮಂಗಳವಾರ ರೋಗಿಗಳಿಗೆ ಚಿಕಿತ್ಸೆ ನೀಡಿದರು. ‘ಮುಷ್ಕರ ಮುಂದುವರಿದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಕಾರ್ಯ ನಿರ್ವಹಿಸಿದ ಖಾಸಗಿ ವೈದ್ಯರು
ಹುಳಿಯಾರು: ಪಟ್ಟಣದಲ್ಲಿ ಕೆಲ ಖಾಸಗಿ ವೈದ್ಯರು ಮಂಗಳವಾರ ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ರೋಗಿಗಳಿಗೆ ತೊಂದರೆಯಾಗಲಿಲ್ಲ. ಸರ್ಕಾರಿ ಆಸ್ಪತ್ರೆಗಳಂತೆ ಖಾಸಗಿ ವೈದ್ಯರೂ ಕರ್ತವ್ಯ ನಿರ್ವಹಿಸಿದರು. ‘ರೋಗಿಗಳಿಗೆ ತೊಂದರೆ ಆಗದಂತೆ ಮಧ್ಯಾಹ್ನದ ನಂತರ ಕರ್ತವ್ಯ ನಿರ್ವಹಿಸಿದ್ದೇವೆ. ರಾಜ್ಯ ಘಟಕದ ವತಿಯಿಂದ ಮುಷ್ಕರ ಮುಂದುವರಿಸುವ ಆದೇಶ ಬಂದರೆ ಪಾಲನೆ ಮಾಡುತ್ತೇವೆ’ ಎಂದು ವೈದ್ಯರೊಬ್ಬರು ತಿಳಿಸಿದರು.

ಬೆಳಗಾವಿ ಚಲೋ ಫಲಕ
ಶಿರಾ: ಕರ್ನಾಟಕ ಖಾಸಗಿ ವೈದ್ಯಕೀಯ (ಕೆ.ಪಿ.ಎಂ.ಇ) ಮಸೂದೆ ವಿರೋಧಿಸಿ ನಗರದಲ್ಲಿ ಖಾಸಗಿ ವೈದ್ಯರು ಸ್ವಪ್ರೇರಣೆಯಿಂದ ಅಸ್ಪತ್ರೆಗಳಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.

ನಗರದಲ್ಲಿ ಮಂಗಳವಾರ ಸಂತೆ ದಿನವಾಗಿದ್ದು, ಗ್ರಾಮೀಣ ಪ್ರದೇಶದಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಹೆಚ್ಚು ಜನ ಬರುವರು. ಈ ಸಮಯದಲ್ಲಿ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರ ಮುಷ್ಕರಿಂದ ಆಸ್ಪತ್ರೆಗಳು ಮುಚ್ಚಿದ್ದರಿಂದ ವಾಪಸ್ಸಾದರು.

ಕೆಲವು ಖಾಸಗಿ ಅಸ್ಪತ್ರೆಗಳ ಮುಂದೆ ‘ಬೆಳಗಾವಿ ಚಲೋ’ ಎಂದು ಫಲಕ ಹಾಕಿದ್ದಾರೆ. ಇಲ್ಲಿಯ ಸ್ವಾತಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯ ಡಾ.ವಿನಯ್ ಕುಮಾರ್ ಮಾತನಾಡಿ, ‘ಸರ್ಕಾರ ಮಂಡಿಸುತ್ತಿರುವ ಮಸೂದೆ ವೈದ್ಯಕೀಯ ಕ್ಷೇತ್ರಕ್ಕೆ ಮರಣ ಶಾಸನ ಆಗಲಿದೆ. ಆದ್ದರಿಂದ ಅದನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ. ರೋಗಿಗಳಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ರ್ಕಾರ ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT