ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಲ್ಲದೆ ಗರ್ಭಿಣಿಯರ ಸಂಕಟ

Last Updated 15 ನವೆಂಬರ್ 2017, 10:47 IST
ಅಕ್ಷರ ಗಾತ್ರ

ವಿಜಯಪುರ: ಖಾಸಗಿ ವೈದ್ಯರ ಮುಷ್ಕರ ಮುಂದುವರಿದಿದ್ದು, ಜಿಲ್ಲೆ ಯಾದ್ಯಂತ ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್‌ ಹೋಂಗಳು ಬಾಗಿಲು ಮುಚ್ಚಿರುವುದರಿಂದ ರೋಗಿಗಳ ಪರದಾಟ ಹೆಚ್ಚಿದೆ. ಸೋಮವಾರದಿಂದ ಖಾಸಗಿ ವೈದ್ಯ ಸೇವೆ ಸ್ಥಗಿತಗೊಂಡಿದ್ದು, ಗರ್ಭಿಣಿಯರು, ಬಾಣಂತಿಯರ ಸಂಕಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

‘ಸಿಂದಗಿ ಪಟ್ಟಣದ ಖಾಸಗಿ ವೈದ್ಯರ ಬಳಿ ಪ್ರತಿ ತಿಂಗಳು ತಪಾ ಸಣೆಗೊಳಪಡುತ್ತಿದ್ದೆವು. ಸೋಮವಾರ ಮತ್ತೆ ತಪಾಸಣೆಯಿತ್ತು. ಆಸ್ಪತ್ರೆ ಬಂದ್‌ ಇದ್ದುದರಿಂದ ಹೊರ ಬಂದಿರಲಿಲ್ಲ. ಮಂಗಳವಾರ ಸಹ ಮುಷ್ಕರ ಮುಂದುವರಿದಿದೆ. ಆದರೆ ಆಕೆ ತ್ರಾಸ್ ಪಡೋದನ್ನ ನೋಡಲಾಗದೆ ವಿಜ ಯಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿರುವೆ’ ಎಂದು ಧರೆಪ್ಪ ನಾಟೀಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರಂಭದಲ್ಲಿ ಸರ್ಕಾರಿ ದವಾಖಾನೆಗೆ ತೋರಿಸಿದ್ದೆವು. ನಂತರ ಸರಿಯಾಗದಿದ್ದುದರಿಂದ ಖಾಸಗಿ ವೈದ್ಯರ ಬಳಿ ತೋರಿಸುತ್ತಿದ್ದೆವು. ಇದೀಗ ಎರಡೂ ಕಡೆ ಇಲ್ಲದಂತಾಗಿದೆ. ಪಾಳಿ ಹಚ್ಚಿ ಕೂತರೂ ಜಿಲ್ಲಾಸ್ಪತ್ರೆಯಲ್ಲಿ ಸ್ಪಂದನೆಯೇ ಸಿಗುತ್ತಿಲ್ಲ. ಪಾಪ ಅವ್ರಿಗೂ ತ್ರಾಸು. ಸಿಕ್ಕಾಪಟ್ಟೆ ಮಂದಿ ಪಾಳಿ ಹಚ್ಚಿದ್ದಾರೆ’ ಎಂದು ಜಾಲಗೇರಿಯ ಈರಣ್ಣ ಶಿರಾಳಶೆಟ್ಟಿ ತಿಳಿಸಿದರು.

‘ಸೋಮವಾರ ಆಸ್ಪತ್ರೆ ಬಂದ್‌ ಇರುತ್ತೆ ಎಂಬ ಮಾಹಿತಿಯಿತ್ತು. ಮಗುವಿಗೆ ತ್ರಾಸ್‌ ಹೆಚ್ಚಿದ್ರೂ ಚಿಕಿತ್ಸೆಗೆ ಬಂದಿರಲಿಲ್ಲ. ಒಂದ್‌ ದಿನ ಕಳೆದು ಬಾಣಂತಿ, ಮಗೂನ ಮಕ್ಕಳ ಆಸ್ಪತ್ರೆಗೆ ಕರೆ ತಂದರೇ ಇಲ್ಲಿ ಬಾಗಿಲ್ ಹಾಕೋವ್ರೆ. ಯಾವಾಗ ತೆಗಿತಾರೇ ಎಂಬುದು ಗೊತ್ತಿಲ್ಲ. ಊರಿಂದ ಇಲ್ಲಿಗೆ ಬರಲು ₹300 ಖರ್ಚಾಗೈತಿ. ಮಗಿನ ಔಷಧಿಯೂ ಇಲ್ಲಿ ಸಿಗ್ತಿಲ್ಲ. ಮೆಡಿಕಲ್ ಸ್ಟೋರ್‌ನವ್ರೂ ಬಾಗಿಲಾಕಿದ್ದಾರೆ. ಹೊರಗೆ ಕೇಳಿದರೆ ನಮ್ಮಲ್ಲಿಲ್ಲ ಅನ್ತ್ವಾರೆ. ಏನ್‌ ಮಾಡ್ಬೇಕು ಎಂಬುದೇ ತೋಚದಂಗಾಗೈತಿ’ ಎಂದು ವಿಜಯಪುರ ತಾಲ್ಲೂಕು ಲಿಂಗದಹಳ್ಳಿಯ ರೇಣುಕಾ ಚಲವಾದಿ ಅಲವತ್ತುಕೊಂಡರು.

ರೋಗಿಗಳ ಪರದಾಟ
ಸಿಂದಗಿ: ಸಿಂದಗಿ ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ತಾಲ್ಲೂಕು ವೃತ್ತಿಪರ ವೈದ್ಯರ ಸಂಘ ಜಂಟಿಯಾಗಿ ಹಮ್ಮಿಕೊಂಡ ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ ಎರಡನೆಯ ದಿನವೂ ಮುಂದುವರೆದಿದ್ದು, ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಬೀಗ ಹಾಕಲಾಗಿದೆ. ರೋಗಿಗಳ ಪರದಾಟ ಮಂಗಳವಾರವೂ ಕಂಡು ಬಂದಿತು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಸೋಮವಾರಕ್ಕಿಂತ ಹೆಚ್ಚಾಗಿತ್ತು.

‘ಖಾಸಗಿ ವೈದ್ಯರ ಪ್ರತಿಭಟನೆ ಹೀಗೆ ಮುಂದುವರಿದರೆ ಅನಾಹುತ ಸಂಭವಿಸಬಹುದಾಗಿದೆ. ಸರ್ಕಾರ ಮತ್ತು ವೈದ್ಯರ ಮಧ್ಯೆ ಹೊಂದಾಣಿಕೆ ಸೂತ್ರ ಬರಲೇಬೇಕಿದೆ. ಸರ್ಕಾರದ ಹಟಮಾರಿಧೋರಣೆ ಸರಿಯಲ್ಲ. ಸರ್ಕಾರ ಮತ್ತು ಖಾಸಗಿ ವೈದ್ಯರ ಹಟಮಾರಿತನದಿಂದಾಗಿ ಇಬ್ಬರ ನಡುವೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

* * 

ಮುಂಜಾನೆಯಿಂದ ಪಾಳಿ ಹಚ್ಚಿ ಕೂತೀವಿ. ಮಧ್ಯಾಹ್ನವಾದ್ರೂ ವೈದ್ಯರ ಸ್ಪಂದನೆಯಿಲ್ಲ. ಅನಿ ವಾರ್ಯವಾಗಿ ಬಂದಿದ್ದೇವೆ. ಕಾದು ಕುಳಿತು ಚಿಕಿತ್ಸೆ ಪಡೆದು ಮರಳುತ್ತೇವೆ 
ಧರೆಪ್ಪ ನಾಟೀಕಾರ, 
ರೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT