ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದ ಬಾಲ್ಯ...

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲ್ಯದ ಬದುಕಿಗೆ ರೇಖೆ ಹಚ್ಚಿಟ್ಟವರ‍್ಯಾರೆ ಗೆಳತಿ? ಹಾರಿ ಮತ್ತೆ ಮರಳಿ ಅಲ್ಲಿಗೆ ಜಾರೋಣವೆನಿಸುತ್ತಿದೆ. ನಾನು ಕಂಡ ಆ ನನ್ನದಾದ ದಿನಗಳು ಇಂದಿಗೂ ನೆನಪಿದೆ ಒಂದೊಂದು ಘಟನೆಗಳು ಮನದಲ್ಲಿ ಹಾಗೆ ಉಳಿದಿವೆ.

ಜಿಟಿ ಜಿಟಿ ಬೀಳುವ ಮಳೆಗೆ ಹೊಂಡಗಳಲ್ಲಿ ಹರಿಯುವ ನೀರಲಿ ಕಾಗದಗಳ ಸಾಲು ದೋಣಿಗಳು, ಅದಕ್ಕೆ ನಾವಿಕ ನಾವಾಗುವ ಖುಷಿಯಲಿ ನನ್ನಿಂದ ಅಪ್ಪನ ಗದ್ದೆ ಪತ್ರವು ಅದರಲ್ಲಿ ಪಾಲಾಗಿ ಹೋಗಿದ್ದ ನೆನಪು ಈಗಲೂ ಹಾಗೆಯೇ ಗುರುತಾಗಿ ಹಣೆಯಲ್ಲಿದೆ. ಚಿನ್ನಿದಾಂಡು ಆಟಕ್ಕೆ ತಲೆಯಲ್ಲಿ ಉಂಟಾದ ಮಾಸದ ಗಾಯದ ನೆನಪು. ನಾನೂ ಗೆಳತಿಯೂ ಮದುವೆ ಆಟ ಆಡಿದಾಗ ವರನಾಗಿ ನಾನು ಎಮ್ಮೆ ಸವಾರಿ ಮಾಡಿದ ನೆನಪು.

ಪಡೆಯದ ಅಂಕಗಳು ಪಡೆದ ಅಂಕದ ಮುನಿಸಿಗೆ ಅಪ್ಪನ ಬಾಸುಂಡೆ ಏಟುಗಳ ನೆನಪು. ಮೊದಲ ಸಲ ಆದ ಮೊಣಕೈ ಗಾಯಕ್ಕೂ ಅಮ್ಮನ ಸೆರಗಿನ ತುಂಡೇ ಬ್ಯಾಂಡೇಜ್ ಆಗಿದ್ದ ನೆನಪು. ಆದರೂ ಅದಕ್ಕೆ ಅಷ್ಟು ಅತ್ತಿರಲಿಲ್ಲ. ನನ್ನ ಪ್ರೀತಿಯ ಕುರಿಮರಿ ಸತ್ತಾಗ 2 ದಿನ ಊಟ ಬಿಟ್ಟು ಕಣ್ಣೀರು ಸುರಿಸಿದ್ದು ಎಷ್ಟೆಂದರೆ ಪ್ರತಿದಿನ ಭತ್ತ ಕೊಟ್ಟು ಖರೀದಿಸಿ ತಿನ್ನುವ ಮಿಠಾಯಿನೂ ಬಿಟ್ಟಿದ್ದ ನೆನಪು.

ಊರ ಚೌಡವ್ವನ ಜಾತ್ರೆಗೆ ಒಂಚೂರು ಧೈರ್ಯ ಮಾಡಿ ಬಿಸಿ ಬಿಸಿ ಜಿಲೇಬಿ ಕದ್ದು ತಿಂದು, ಅಜ್ಜನ ಜೊತೆ ಯಕ್ಷಗಾನ ನೋಡಲು ಹೋದಾಗ ದಶಾವತಾರ ರಾವಣನ ಪಾತ್ರಕ್ಕೆ ರಾತ್ರಿ ಚಾಪೆ ಒದ್ದೆ ಮಾಡಿದ, ಅಜ್ಜಿಯ ದೆವ್ವದ ಕಥೆಗೆ ಕತ್ತಲೆ ಕಡೆ ಕಣ್ಣೆತ್ತು ನೋಡದಿದ್ದ ನೆನಪು.

ಗರಡಿ ಮೇಷ್ಟ್ರು ಪಂಚೆಯಲ್ಲಿ ಇರುವೆ ಬಿಟ್ಟು ಸಂಕಿಯ ಮನೆಗೆ ಓಡಿ ಹೋಗಬೇಕಾದರೆ ಸಂಕ ದಾಟುವಾಗ ಹೊಳೆಗೆ ಬಿದ್ದು ಏಡಿಯಿಂದ ಕಿರು ಬೆರಳನ್ನು ಕಚ್ಚಿಸಿಕೊಂಡ ನೆನಪು. ಒಂದಾ ಎರಡಾ ಮೊದಲೇ ಹೇಳಿದ ಹಾಗೆ ಸಾವಿರಾರು ನೆನಪುಗಳು ಕಾಡದೆ ಬಿಡುವ ಮಧುರ ಅನುಭವಗಳು. ಬಾಲ್ಯವನ್ನು ಬಂಗಾರದಂತೆ ಬಾಳಿದ ಸುಂದರ ನೆನಪುಗಳು.
–ಆರತಿ ಗಣಪತಿ ತಳೇಕರ, ಕಾರವಾರ

*
ಮನದ ಬತ್ತಳಿಕೆಯ ನೆನಪುಗಳು
ನಮ್ಮ ಹಳ್ಳಿಯ ಸುತ್ತಲೂ ಇದ್ದದ್ದು ರಾಗಿ ಬೆಳೆಯುವ ಹೊಲಗಳ ಬಯಲು. ಆ ಬಯಲಿನಲ್ಲಿ ಅಲ್ಲಲ್ಲಿ ಒಂದೊಂದು ಮಾವಿನ ಮರ, ಹಲಸಿನ ಮರ. ಬೇಸಿಗೆಯಲ್ಲಿ ಬಿಡುತ್ತಿದ್ದ ಮರದ ಫಸಲಲ್ಲಿ ಅರ್ಧ ನಮಗೆ ಮೀಸಲು. ಮಾವಿನಕಾಯಿ, ಹಲಸಿನ ಕಾಯಿ ಕದಿಯಲು ನಾವು ರಾತ್ರಿ 7–8 ಗಂಟೆಗೆ ಹೋಗುತ್ತಿದ್ದೆವು. ಕಳ್ಳ ಹೆಜ್ಜೆ ಇಟ್ಟು ಬೇಟೆಗೆ ಹೊರಟ ಹುಲಿಯಂತೆ ಸದ್ದು ಮಾಡದೆ ಬರಿಗಾಲಲ್ಲಿ ನಡೆಯುತ್ತಿದ್ದೆವು.

ಊರಿನಲ್ಲಿ ಯಾರೂ ಸಾಕದಿದ್ದರೂ ಎಲ್ಲರಿಗೂ ಪ್ರೀತಿಯ ಹತ್ತಾರು ನಾಯಿಗಳಿರುತ್ತಿದ್ದವು. ನಾವು ಕತ್ತಲಲ್ಲಿ ನಡೆಯುವಾಗ ಒಣಗಿದ ಎಲೆ ಮೇಲೆ ಕಾಲು ಇಟ್ಟು ಶಬ್ದವೇನಾದರೂ ಆದರೆ ಇಡೀ ಊರಿನ ನಾಯಿ ಸಂಕುಲವೇ ಒಂದೆಡೆ ಸೇರಿ ಬೊಗಳಲು ಪ್ರಾರಂಭಿಸುತ್ತಿದ್ದವು. ದೊಡ್ಡ ನಾಯಿಗಳ ಬೊಗಳುವಿಕೆ, ಜೊತೆಗೆ ಮರಿಗಳ ಕೀರಲು ಶಬ್ದ ಐದಾರು ನಿಮಿಷಗಳವರೆಗೆ ಮುಂದುವರೆಯುತ್ತಿತ್ತು.

ಬದುವಿನ ಪಕ್ಕ ಹಾಗೆ ಕದ್ದು ಕುಳಿತು ಬಿಡುತ್ತಿದ್ದೆವು. ಅವುಗಳಿಗೂ ಬೊಗಳಿ ಬೇಡವಾಗಿ ಒಂದೊಂದಾಗಿ ಜಾಗ ಖಾಲಿ ಮಾಡಿ ಯಾರದೋ ಮನೆಯ ಮುಂದೆ ಮುದ್ದೆ ಕಾಯುತ್ತಾ ಮಲಗುತ್ತಿದ್ದವು. ನಾವು ಕತ್ತಲಲ್ಲೇ ಮರ ಹತ್ತಿ ಒಂದೊಂದೇ ಹಲಸಿನ ಕಾಯಿ ಬಡಿದು, ಬಲಿತಿರುವ ಬಗ್ಗೆ ಖಾತರಿಪಡಿಸಿಕೊಂಡು ಕಾಯಿ ಕೀಳುತ್ತಿದ್ದೆವು. ಕಿತ್ತ ಕಾಯಿ ಧೊಪ್ಪೆಂದು ಬೀಳುತ್ತಿದ್ದಂತೆ, ಮತ್ತೆ ಶ್ವಾನ ಸೈನ್ಯದಿಂದ ರಣಕಹಳೆ ಮೊಳಗುತ್ತಿತ್ತು. ನಾಯಿ ಬೊಗಳುವಿಕೆ ನಿಲ್ಲುವವರೆಗೆ ಅಲ್ಲೇ ಕದ್ದು ನಿಂತು, ಹಲಸಿನ ಕಾಯಿ ಹೊತ್ತು ತಂದು ಹಿತ್ತಲಲ್ಲಿ ಬಣವೆಗಳ ಕೆಳಗೆ ಅಡಗಿಸಿಟ್ಟು, ಹಣ್ಣಾದ ಮೇಲೆ ಎಲ್ಲರೂ ಸೇರಿ ತಿನ್ನುತ್ತಿದ್ದೆವು.

ಹಾಗೇ ನಮ್ಮ ಊರಿನಲ್ಲಿ ಮಡಕೆ ಮಾಡುವ ಕುಟುಂಬಗಳಿದ್ದವು. ಅವರ ಮನೆಗಳಲ್ಲಿ ಒಡೆದ ಮಡಿಕೆಗಳನ್ನು ತಂದು ಮೂರು ಕಲ್ಲು ಜೋಡಿಸಿ ಬೆಂಕಿ ಉರಿಸಿ, ಬೇಕಾದಷ್ಟು ಸಿಗುತ್ತಿದ್ದ ಹುರುಳಿಕಾಳು, ಅಲಸಂದೆ, ಅವರೆ ಕಾಳುಗಳನ್ನು ಬಯಲಲ್ಲಿ ಹುರಿದು, ಅರೆಬೆಂದಿದ್ದರೂ ತಿನ್ನುತ್ತಿದ್ದ ಆ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ.
ಇನ್ನೂ ಎಷ್ಟೋ ಬಾಲ್ಯದ ನೆನಪುಗಳು ಮನದ ಬತ್ತಳಿಕೆಯಲ್ಲಿವೆ. ಬರೆದರೆ ಒಂದು ಸಂಪುಟವೇ ಆಗಬಹುದು...
–ಲತೇಶ್. ಬಿ.ಎಸ್. ಮಂಗಳೂರು

*
ಪುಕ್ಸಟ್ಟೆ ಮನರಂಜನೆ ಕೊಟ್ಟೆವು
ಏಳನೇ ತರಗತಿಯಲ್ಲಿದ್ದಾಗ ಒಮ್ಮೆ ಐದಾರು ಮಿತ್ರರೆಲ್ಲ ಸೇರಿ ಊರಿಗೆ ಸ್ವಲ್ಪ ದೂರ ಇದ್ದ ತೋಟದ ಬಾವಿಯಲ್ಲಿ ಈಜಾಡಲು ಹೊರಟೆವು, ತೋಟದಲ್ಲಿ ಯಾರೂ ಇಲ್ಲದ್ದನ್ನು ಖಾತರಿ ಮಾಡಿಕೊಂಡು ನಮ್ಮ ನಮ್ಮ ಅಂಗಿ, ನಿಕ್ಕರುಗಳನ್ನು ಬಿಚ್ಚಿ ಬಾವಿ ಹತ್ತಿರ ಇಟ್ಟು ನೀರಿಗೆ ಧುಮುಕಿದೆವು. ಇನ್ನೂ ಹುಡುಗು ವಯಸ್ಸಿನವರಾದ ಕಾರಣ ನಿಕ್ಕರು ಹಾಕಿಕೊಂಡಿರಲಿಲ್ಲ! ನೀರಿನಲ್ಲಿ ತುಂಬಾ ಖುಷಿಯಿಂದ ಮುಳುಗಾಟ ಆಡುತ್ತಿದ್ದ ಆನಂದದಲ್ಲಿ ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ. ತೋಟದ ಮಾಲೀಕ, ನಾವು ಈಜುತ್ತಿದ್ದುದನ್ನು ನೋಡಿ ನಮ್ಮ ಬಟ್ಟೆಗಳನ್ನೆಲ್ಲಾ ಅವನ ಮನೆಗೆ ಒಯ್ದಿದ್ದ.

ಈಜಿದ್ದು ಸಾಕಾದ ಮೇಲೆ ಬಟ್ಟೆ ಹಾಕಿಕೊಳ್ಳಲು ಮೇಲೆ ಬಂದಾಗ ಅವು ಇಲ್ಲದೇ ಇರುವುದನ್ನು ನೋಡಿ ಗಾಬರಿಗೊಂಡೆವು. ಸಾಯಂಕಾಲವಾಗುತ್ತಿದ್ದರಿಂದ ಮೈ ಬೇರೆ ನಡುಗುತ್ತಿತ್ತು. ನಮ್ಮ ಬಟ್ಟೆಗಳನ್ನು ತೋಟದವನು ತೆಗೆದುಕೊಂಡು ಹೋದ ವಿಷಯ ಗೊತ್ತಾದ ಮೇಲಂತೂ ಹೆದರಿಕೆ ಮತ್ತೂ ಹೆಚ್ಚಾಯಿತು. ಮನೆಗೆ ಹೀಗೇ ಹೋದರೆ ಬಾಸುಂಡೆಗಳು ಬೀಳುವುದು ಗ್ಯಾರಂಟಿ ಅಂದುಕೊಂಡು ಮಾಲೀಕನ ಮನೆಗೇ ಹೊರಟೆವು. ಇವರ ಕಡಿಮೆ ಎಂದರೂ 2 ಕಿ.ಮೀ. ದೂರ ಇತ್ತು. ಏನೂ ಮಾಡಲು ತೋಚದೆ ಗೊಮ್ಮಟೇಶನ ಹಾಗೆಯೇ ದಾರಿಯಲ್ಲಿ ಓಡಬೇಕಾಯಿತು. ನಮ್ಮನ್ನು ನೋಡಿ ಜನ ನಗುತ್ತಿದ್ದದ್ದು ಇನ್ನೂ ಮುಜುಗರ ತಂದಿತ್ತು.

ಅಂತೂ ತೋಟದ ಮಾಲೀಕನ ಮನೆ ಮುಂದೆ ಅಳುತ್ತಾ, ಸಿಂಬಳ ಸುರಿಸುತ್ತಾ, ನಡುಗುತ್ತಾ ನಿಂತಿದ್ದ ನಮ್ಮ ಅವತಾರ ನೋಡಿ ಕೆಲವರು ನಗುತ್ತಿದ್ದರೆ, ಇನ್ನೂ ಕೆಲವರು ಅಯ್ಯೋ ಈ ಹುಡುಗರ ಫಜೀತಿ ನೋಡಕ್ಕಾಗಲ್ಲ ಅಂತ ಮರುಗುತ್ತಿದ್ದರು. ನಮ್ಮ ವಯಸ್ಸಿನ ಹುಡುಗರಂತೂ ಕೇಕೇ ಹಾಕ್ತ ಇದ್ದರು. ಎಲ್ಲರಿಗೂ ಪುಕ್ಸಟ್ಟೆ ಮನರಂಜನೆ.

ಮಾಲೀಕನ ಹೆಂಡತಿ ನಮ್ಮನ್ನು ನೋಡಿ ‘ಥೂ, ನಮ್ಮೆಜಮಾನ್ರಿಗೆ ಸ್ವಲ್ಪಾನೂ ಬುದ್ಧಿ ಇಲ್ಲ. ಈ ಹುಡುಗರಿಗೆ ಅಲ್ಲೇ ಬಯ್ದು ಬಟ್ಟೆ ಕೊಟ್ಟು ಕಳಿಸಿದ್ರೆ ಆಗ್ತಿತ್ತು. ಹುಡುಗರು ಹೀಗೆ ಬರೀ ಮೈಯಲ್ಲಿ ಮನೆ ಮುಂದೆ ನಿಂತಿದಾವೆ, ನಮ್ಗೇ ನಾಚ್ಕೆ ಬರೋಹಾಗೆ ಆಗಿದೆ’ ಅಂತ ಮನೆ ಒಳಗೆ ಹೋಗೇಬಿಟ್ಟಳು. ಮಾಲೀಕ ಬಂದು ನಮ್ಮ ದೇಹಸ್ಥಿತಿ ನೋಡಿದವನೇ ಅವನೂ ನಗ್ತಾನೇ ‘ಲೇ ಹುಡುಗ್ರಾ ಮೊದ್ಲು ಬಟ್ಟೆ ಹಾಕ್ಕಳ್ರಲಾ’ ಅಂತ ಬಟ್ಟೆಗಳನ್ನು ಕೊಟ್ಟ ಮೇಲೆ, ನಾವು ಅಲ್ಲೇ ಬಟ್ಟೆ ಹಾಕ್ಕೋಬೇಕು ಅನ್ನೋ ಪರಿಜ್ಞಾನವೂ ಇಲ್ಲದೆ ಮತ್ತೆ ಬರೀ ಮೈಯಲ್ಲೇ ಒಂದೇ ಉಸುರಿಗೆ ‘ಉಳ್‌’ ಅಂತಾ ಓಡಿದ್ದು ನೋಡಿ ಎಲ್ಲರೂ ಗೊಳ್‌ ಅಂತಾ ನಗಾಡ್ತಿದ್ರು. ಆಮೇಲೆ ಬಟ್ಟೆ ಹಾಕ್ಕೊಂಡು ಮನೆ ಸೇರಿದೆವು.

ನನ್ನ ಗೆಳೆಯರಲ್ಲಿ ಈಗ ಕೆಲವರು ವೈದ್ಯರು, ಉಪನ್ಯಾಸಕರು, ದೊಡ್ಡ ವರ್ತಕರೂ ಆಗಿದ್ದಾರೆ. ನಾವೆಲ್ಲಾ ಪರಸ್ಪರ ಭೇಟಿ ಆದ ಕ್ಷಣ ಥಟ್‌ ಅಂತ ಈ ಬಾಲ್ಯದ ನೆನಪು ಮಾಡಿಕೊಳ್ಳುತ್ತೇವೆ.
–ಜಿ.ಎಚ್‌. ಸಂಕಪ್ಪ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT