ಬೆಳದಿಂಗಳು

ಮಾಹಿತಿ ಎಂಬ ಕನ್ನಡಿಯ ಗಂಟು

ನಾವು ದಿನನಿತ್ಯ ಸಂಧಿಸುವ ಹಲವು ವಿವರಗಳ ‘ರಹಸ್ಯ’ವನ್ನು, ಎಂದರೆ ತಾತ್ವಿಕತೆಯನ್ನು ಈ ಕೃತಿ ಸೊಗಸಾಗಿ ವಿವರಿಸುತ್ತದೆ. ಇರಲಿ. ಇಲ್ಲಿ ನಮಗೆ ಪ್ರಸ್ತುತವಾಗಿರುವುದು ಈ ಪುಸ್ತಕದ ಮೊದಲ ಮಾತು ಮತ್ತು ಅದರ ಹಿಂದಿರುವ ತಾತ್ವಿಕತೆ.

ಮಾಹಿತಿ ಎಂಬ ಕನ್ನಡಿಯ ಗಂಟು

‘Knowledge is a great treasure, but there is one thing higher than knowledge, and that is understanding.’ ಇದು ‘Mystery of Things’ ಪುಸ್ತಕದ ಮೊದಲ ಸಾಲು. ‘ವಿದ್ಯೆ ಒಂದು ದೊಡ್ಡ ನಿಧಿ, ಹೌದು; ಆದರೆ ಅದಕ್ಕಿಂತಲೂ ಮಿಗಿಲಾದುದು ಅರಿವು’ ಎಂಬುದು ಈ ಮಾತಿನ ಅರ್ಥ. ತತ್ತ್ವಶಾಸ್ತ್ರದ ಪ್ರೊಫೆಸರ್ ಎ. ಸಿ. ಗ್ರೇಲಿಂಗ್‌ ಅವರ ಬರೆದಿರುವ ಈ ಪುಸ್ತಕ ಸ್ವಾರಸ್ಯಕರವಾಗಿದೆ

ನಾವು ದಿನನಿತ್ಯ ಸಂಧಿಸುವ ಹಲವು ವಿವರಗಳ ‘ರಹಸ್ಯ’ವನ್ನು, ಎಂದರೆ ತಾತ್ವಿಕತೆಯನ್ನು ಈ ಕೃತಿ ಸೊಗಸಾಗಿ ವಿವರಿಸುತ್ತದೆ. ಇರಲಿ. ಇಲ್ಲಿ ನಮಗೆ ಪ್ರಸ್ತುತವಾಗಿರುವುದು ಈ ಪುಸ್ತಕದ ಮೊದಲ ಮಾತು ಮತ್ತು ಅದರ ಹಿಂದಿರುವ ತಾತ್ವಿಕತೆ.

ಇಂದು ನಮಗೆಲ್ಲರಿಗೂ ವಿದ್ಯೆಯ ಅಹಂಕಾರವಿದೆ. ದಿಟವಾಗಿ ನೋಡಿದರೆ ನಾವು ವಿದ್ಯೆ ಎಂದು ಅಂದುಕೊಂಡಿರುವುದು ಕೂಡ ವಿದ್ಯೆಯೇ ಹೌದೆ ಎಂಬ ಪ್ರಶ್ನೆಯೂ ಏಳುವುದೆನ್ನಿ! ನಾವು ಮಾಹಿತಿಯನ್ನೇ ವಿದ್ಯೆ– ಎಂದುಕೊಂಡಿದ್ದೇವೆ. ಹೀಗಾಗಿ ನಾವು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡುವಾಗ ನಮ್ಮ ಮನಸ್ಸು ಮತ್ತು ಕೈ ಸಹಜವಾಗಿಯೇ ಗೂಗಲ್‌ ಕಡೆಗೆ ಚಲಿಸುತ್ತದೆ. ನಮ್ಮಲ್ಲಿ, ಎಂದರೆ ನಮ್ಮ ಕಂಪ್ಯೂಟರ್‌ನಲ್ಲಿ ಆ ಮಾಹಿತಿ ಇದ್ದರೆ ಸಾಕು, ಆ ‘ವಿದ್ಯೆ’ ನಮಗೆ ವಶವಾದಂತೆಯೇ ಸರಿ ಎಂದು ಭಾವಿಸುತ್ತೇವೆ. ಇದು ಹೌದೆ – ಎಂದು ನಾವು ಗಂಭೀರವಾಗಿ ಯೋಚಿಸಬೇಕಿದೆ.

ಇಂದು ನಮಗೆ ಸಾಕಷ್ಟು ಸಂಗತಿಗಳ ಬಗ್ಗೆ ಮಾಹಿತಿಯಿದೆ. ಆದರೆ ಅವುಗಳ ಬಗ್ಗೆ ಅರಿವು ಇಲ್ಲವಾಗಿದೆ. ‘ಅರಿವು’ ಎನ್ನುವುದು ಮಾಹಿತಿಯಲ್ಲ; ಮಾಹಿತಿ ಹೇಗೆ ನಮಗೆ ಒದಗಿ ನಮ್ಮ ಜೀವನದಲ್ಲಿ ತಾದಾತ್ಮ್ಯವನ್ನು ಪಡೆಯುತ್ತದೆ ಎನ್ನುವುದು ಅರಿವಿನ ಮಾನದಂಡ.

ನಮಗೆ ಟ್ರಾಫಿಕ್‌ ನಿಯಮಗಳು ಅಷ್ಟೂ ಕಂಠಸ್ಥವಾಗಿರಬಹುದು; ಆದರೆ ಅದರ ಅರಿವು ಇದೆ ಎನ್ನುವುದು ಸಿದ್ಧವಾಗುವುದು ನಾವು ವಾಹನವನ್ನು ಚಾಲನೆ ಮಾಡುವಾಗ ಅವನ್ನು ಎಷ್ಟು ಪಾಲಿಸುತ್ತೇವೆ ಎನ್ನುವುದರಲ್ಲಿ ಹಾಗೂ ನಾವು ರಸ್ತೆಯಲ್ಲಿ ಆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ನಡೆಯುತ್ತೇವೆ ಎನ್ನುವುದರಲ್ಲಿ. ಹೀಗೆಯೇ ನಮಗೆ ಸಂತೋಷ, ದುಃಖ, ಕರುಣೆ, ಪ್ರೀತಿ, ಸಹಕಾರ, ಸಹಾಯ, ಮಾನವತೆ, ಸ್ನೇಹ – ಇಂಥ ಹಲವು ವಿಚಾರಗಳ ಬಗ್ಗೆ ಮಾಹಿತಿಯಿದೆ; ಆ ಶಬ್ದಗಳಿಗೆ ಅರ್ಥ ತಿಳಿದಿದೆ, ಅವುಗಳಿಗೆ ಸಂಬಂಧಿಸಿದಂತೆ ಕಥೆಗಳು, ಸೂಕ್ತಿಗಳು ಗೊತ್ತಿವೆ; ಅವುಗಳ ಬಗ್ಗೆ ಭಾಷಣವನ್ನೇ ಮಾಡುವಷ್ಟು ಮಾಹಿತಿಯೂ ಇರಬಹುದು. ಆದರೆ ಈ ವಿವರಗಳು ನಿಜವಾದ ‘ಅರಿವು’ ಎಂದಾಗುವುದು ಇವು ನಮ್ಮ ಬದುಕಿನ ಭಾಗವಾದಾಗ ಮಾತ್ರವೇ.

ಕರುಣೆಯ ಬಗ್ಗೆ ನಾವೆಷ್ಟು ಮಾತನಾಡಿದರೂ ಪ್ರಯೋಜನವಿಲ್ಲ; ಸಂಕಟದಲ್ಲಿರುವ ಒಬ್ಬ ವ್ಯಕ್ತಿಗೆ ನಾವು ಸ್ಪಂದಿಸಿದರೂ
ಸಾಕು, ಕರುಣೆಯ ಬಗ್ಗೆ ನಮಗೆ ಅರಿವಿರುವುದು ಸ್ಪಷ್ಟವಾಗುತ್ತದೆ. ಪ್ರೀತಿಯ ಬಗ್ಗೆ ಪ್ರಬಂಧ ಬರೆದು ಬಹುಮಾನವನ್ನೂ ಪಡೆಯಬಹುದು; ಆದರೆ ಪ್ರೀತಿ ಎಂದರೇನು ಎಂಬುದು ನಮ್ಮ ಜೀವನದ ಸಾವಯವ ತತ್ತ್ವವಾಗಲು ನಾವು ಪ್ರೀತಿಸುವುದನ್ನು ಕಲಿಯಬೇಕು – ನಮ್ಮ ತಂದೆ–ತಾಯಿ, ಅಕ್ಕ–ತಂಗಿ, ಅಣ್ಣ–ತಮ್ಮ, ನಮ್ಮ ಶಾಲೆ–ಊರು, ಸ್ನೇಹಿತರು–ಗುರುಗಳು, ಕಾಡು–ನಾಡು – ಯಾವುದೂ ನಮ್ಮ ಪ್ರೀತಿಗೆ ವಸ್ತುವಾಗಬಹುದು. ಪ್ರೀತಿಸುವ ಗುಣವನ್ನು ಬೆಳಸಿಕೊಳ್ಳದ ಹೊರತು ‘ಪ್ರೀತಿ’ಗೆ ಸಾರ್ಥಕತೆ ಒದಗದು.

ಸಂವಿಧಾನ, ಸಮಾಜಸೇವೆ, ಜೀವನ, ವಿಜ್ಞಾನ, ಭಕ್ತಿ, ದೇವರು, ಕಾನೂನು, ಸ್ವಚ್ಛತೆ – ಹೀಗೆ ಪ್ರತಿ ದಿನವೂ ನೂರಾರು ಸಂಗತಿಗಳ ಬಗ್ಗೆ ತುಂಬ ಸುಲಭವಾಗಿ ಮಾತನಾಡುತ್ತಿರುತ್ತೇವೆ. ಆದರೆ ಅವುಗಳ ನಿಜವಾದ ಅರ್ಥವೂ ಗೊತ್ತಿರುವುದಿಲ್ಲ; ಅವು ನಮ್ಮ ಬದುಕಿಗೆ ಹೇಗೆ ಪ್ರಯೋಜನಕ್ಕೆ ಒದಗುತ್ತವೆ ಎಂಬ ಅರಿವೂ ಇರುವುದಿಲ್ಲ. ನಮ್ಮ ಅಂತರಂಗಕ್ಕೆ ಇಳಿಯದ ಯಾವುದೇ ವಿವರವೂ ನಮ್ಮ ಬದುಕನ್ನು ಅಲಂಕರಿಸಬಲ್ಲ ಆಭರಣ ಆಗಲಾರದು. ಚಿತ್ರದಲ್ಲಿರುವ ಹಣ್ಣು ಎಷ್ಟೇ ಚೆನ್ನಾಗಿದ್ದರೂ ಅದು ನಮ್ಮ ನಾಲಿಗೆಯನ್ನು ತಣಿಸದು; ಅಂತೆಯೇ ಮಸ್ತಕಕ್ಕೆ ತಲುಪದ ಪುಸ್ತಕದ ವಿದ್ಯೆ ಅದು ಎಷ್ಟೇ ಗಹನವಾಗಿ ಕಂಡರೂ ನಮ್ಮ ಬದುಕನ್ನು ಬೆಳಗದು.

Comments
ಈ ವಿಭಾಗದಿಂದ ಇನ್ನಷ್ಟು
ಸ್ಪರ್ಧೆಗೆ ಇಳಿಯಿತು ಮೋಜೊ

ಆಟೋ ಸಂತೆಯಲ್ಲಿ...
ಸ್ಪರ್ಧೆಗೆ ಇಳಿಯಿತು ಮೋಜೊ

15 Mar, 2018
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

ಕಾಮನಬಿಲ್ಲು
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

15 Mar, 2018

ಬೆಳದಿಂಗಳು
ರಾಗ–ದ್ವೇಷಗಳ ಜಾಲ

ರಾಗವೆಂದರೆ ಯಾವುದಾದರೊಂದು ವಸ್ತುವಿನಲ್ಲಿ ಹೆಚ್ಚಿನ ಪ್ರೀತಿ. ದ್ವೇಷವೆಂದರೆ ಯಾವುದಾದರೊಂದು ವಸ್ತುವಿನ ವಿಷಯದಲ್ಲಿ ಹೆಚ್ಚಿನ ಅಸಹನೆ. ಈ ರಾಗದ್ವೇಷಗಳು ಜೀವವನ್ನು ಹಿಡಿದಾಗ ಜೀವವು ತನ್ನ ಒಳಗಿನ...

15 Mar, 2018
ಬೊಗಸೆಯಲ್ಲಿ ತೇಲಿಬಂದ ಮೀನು...

ಪ್ರೇಮಪತ್ರ ಸ್ಪರ್ಧೆ,
ಬೊಗಸೆಯಲ್ಲಿ ತೇಲಿಬಂದ ಮೀನು...

15 Mar, 2018
ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

ಪ್ರಜಾವಾಣಿ ಟೆಸ್ಟ್‌ಡ್ರೈವ್‌
ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

15 Mar, 2018