ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ಷಸ ಕೋಟೆಯನೇರಿ

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ನಿಸರ್ಗವು ಹಲವು ದೃಷ್ಟಿಯಿಂದ ಪ್ರಸಿದ್ಧ. ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳು, ಅಸಂಖ್ಯ ಸಸ್ಯ ಪ್ರಭೇದಗಳು, ಮನಸ್ಸಿಗೆ ಉಲ್ಲಾಸ ನೀಡುವ ಜಲಧಾರೆ, ಕಣ್ಣು ಹರಿದಷ್ಟೂ ದೂರ ಗೋಚರಿಸುವ ಸಮೃದ್ಧ ಕಾಡು, ತಣ್ಣನೆಯ ಗಾಳಿ, ಮರಗಳ ಸಂದಿಯಿಂದ ಇಣುಕುವ ಸೂರ್ಯರಶ್ಮಿ, ಪಕ್ಷಿಗಳ ಇಂಪಾದ ಧ್ವನಿ...

ಚಾರಣಕ್ಕೆ ಹೇಳಿ ಮಾಡಿಸಿದ ವಾತಾವರಣ ಇಲ್ಲಿಯದು. ಇಲ್ಲಿನ ಕಾಡಿನ ಮಧ್ಯೆ ಚಾರಣ ನಡೆಸುವಾಗ ಆಗುವ ಸಂಭ್ರಮ, ಖುಷಿಯೇ ಭಿನ್ನ. ಸಿದ್ದಾಪುರ ತಾಲ್ಲೂಕಿನ ಪ್ರಕೃತಿಯ ಮಧ್ಯೆ ‘ರಾಕ್ಷಸ ಕೋಟೆ’ಗೆ ನಾವು ಈಚೆಗೆ ನಡೆಸಿದ ಯಾತ್ರೆ ಎಂತಹ ರೋಮಾಂಚನಕಾರಿಯಾಗಿತ್ತು ಗೊತ್ತೆ?

ಸಿದ್ದಾಪುರ ತಾಲ್ಲೂಕಿನ ಬಿಳಗಿಯು (ಶ್ವೇತಪುರ) ಹಿಂದೆ ಬಿಳಗಿ ಅರಸರ ರಾಜಧಾನಿಯಾಗಿ ಮೆರೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಗಂಗೊಳ್ಳಿ ನದಿಯಿಂದ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯವರೆಗೆ ವ್ಯಾಪಿಸಿದ್ದ ಅವರ ಆಡಳಿತ ಪ್ರದೇಶವು ‘ಹೈವ’ ನಾಡೆಂದು ಖ್ಯಾತಿ ಪಡೆದಿತ್ತು. ಈ ಅರಸರ ಕಾಲದಲ್ಲಿ ನಿರ್ಮಿಸಿದ ಪ್ರಮುಖ ಕೋಟೆಗಳಲ್ಲಿ ಹುಕ್ಕಳಿ ಕೋಟೆಯೂ ಒಂದು. ಈ ಕೋಟೆಯನ್ನು ರಾಕ್ಷಸ ಕೋಟೆ, ಹಿರೇಗುಡ್ಡ-ಬರೇಗುಡ್ಡ ಕೋಟೆ ಎಂದೂ ಕರೆಯಲಾಗುತ್ತದೆ.

ಈ ಪ್ರದೇಶವನ್ನು ಸೈನಿಕರ ತರಬೇತಿ ಕೇಂದ್ರವಾಗಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ, ಶಸ್ತ್ರಾಸ್ತ್ರ ಅಡಗಿಸಿಡಲು ಈ ಕೋಟೆಯನ್ನು ಬಳಸಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.

ಇಲ್ಲಿ ಸುಮಾರು 11 ಗುಡ್ಡಗಳಿವೆ. ನಾಲ್ಕನೇ ಗುಡ್ಡದಲ್ಲಿಯೇ ರಾಕ್ಷಸ ಕೋಟೆಯ ಅವಶೇಷಗಳನ್ನು ಕಾಣಬಹುದು. ಈ ಹುಕ್ಕಳಿ ಕೋಟೆಯ ಗೋಡೆಯನ್ನು ಕೊಣಜುಗಲ್ಲುಗಳಿಂದ ನಿರ್ಮಾಣ ಮಾಡಿರುವುದು ಸ್ಪಷ್ಟ. ನಾಲ್ಕನೇ ಗುಡ್ಡದಲ್ಲಿ ಕೋಟೆ ನಿರ್ಮಿಸಿಕೊಂಡಿದ್ದರೆ, ಉಳಿದ ಗುಡ್ಡದ ಮೇಲೆ ಅರಸರು ವೀಕ್ಷಣಾ ಗೋಪುರಗಳನ್ನಾಗಿ ಮಾಡಿಕೊಂಡಿದ್ದರು. ಹುಕ್ಕಳಿಯ ಪ್ರದೇಶದಲ್ಲಿರುವ ಐದನೇ ಗುಡ್ಡವು ಸಮುದ್ರ ಮಟ್ಟದಿಂದ ಸುಮಾರು 2,600 ಅಡಿ ಎತ್ತರದಲ್ಲಿದೆ. ಈ ಕೋಟೆ ಚಾರಣಿಗರ ಪಾಲಿನ ಸ್ವರ್ಗ.

ಅಘನಾಶಿನಿ ಹಾಗೂ ಶರಾವತಿ ನದಿಯ ಮಧ್ಯದಲ್ಲಿರುವ ಈ ಕೋಟೆಯ ಗುಡ್ಡದ ಸಾಲು ಜಿಲ್ಲೆಯ ಕತ್ತಲೆ ಕಾನಿನ ಒಂದು ಭಾಗ! ಈ ಕಾನಿನಲ್ಲಿ ನಡೆಯುವುದೇ ಒಂದು ಅನನ್ಯ ಅನುಭವ. ಕೆಲವರು ಕೈಯಲ್ಲಿ ಕೋಲು ಹಿಡಿದರೆ, ಇನ್ನು ಕೆಲವರು ನೋಟ್‌ಬುಕ್‌–ಪೆನ್ನು ಹಿಡಿದು ಹೊರಟಿದ್ದರು. ಪ್ರಕೃತಿಯಲ್ಲಿ ಕಾಣುತ್ತಿದ್ದ ಪ್ರತಿಯೊಂದು ಬೆರಗೂ ಅವರ ನೋಟ್‌ ಬುಕ್‌ನಲ್ಲಿ ದಾಖಲಾಗುತ್ತಿತ್ತು.

ಅಪರೂಪದ ಸಸ್ಯ ಸಂಕುಲಗಳಾದ ರಾಮಪತ್ರೆ, ದೊಡ್ಡಪತ್ರೆ, ಸಾಲುಧೂಪ, ರಾಳಧೂಪ, ಕೆಂಪು ನೇರಳೆ, ಪಾಂಡವರ ಅಡಿಕೆ, ಒಂದಂಕಿ, ಕಾನ ಹೊಳೆಗೇರು, ನೀರಟ್ಟೆ ಮೊದಲಾದ ಸಸ್ಯ ಪ್ರಭೇದಗಳನ್ನು ನಾವು ಕಂಡೆವು. ಅವುಗಳ ಕೆಳಗೆ ವಿಶಾಲವಾಗಿ ಹರಡಿಕೊಂಡಿರುವ ಬೇರುಗಳು. ಅಲ್ಲಿ ಕಾಲಿಟ್ಟರೆ ಸ್ಪಂಜಿನ ಮೇಲೆ ನಡೆದ ಅನುಭವ.

ಆ ಪ್ರದೇಶಕ್ಕೆ ‘ರಾಮಪತ್ರೆ ಜಡ್ಡಿ’ ಎಂದು ಕರೆಯುತ್ತಾರೆ. ಇದು ಶುದ್ಧ ನೀರಿನ ಪ್ರದೇಶವಾಗಿದ್ದು, ‘ಜೀವಂತ ವಸ್ತು ಸಂಗ್ರಹಾಲಯ’ ಎಂದೇ ಜೀವ ವಿಜ್ಞಾನಿಗಳು ಗುರುತಿಸಿದ್ದಾರೆ. ಇಲ್ಲಿರುವ ಸಸ್ಯ ಪ್ರಭೇದಗಳನ್ನು ಬೇರೆಡೆಗೆ ಕಾಣಲು ಸಾಧ್ಯವಿಲ್ಲ.

ಸಿದ್ದಾಪುರದ ಬಿಳಗಿಯಿಂದ ವಾಯವ್ಯಕ್ಕೆ ಸುಮಾರು 12 ಕಿ.ಮೀ. ದೂರದಲ್ಲಿ ಇರುವ ಈ ಕೋಟೆಯ ಒಂದೆಡೆ ಜೋಗದ ವಿದ್ಯುತ್ ಉತ್ಪಾದನಾ ಘಟಕ, ಮತ್ತೊಂದೆಡೆ ಶರಾವತಿ ಹಿನ್ನೀರು; ಸಿದ್ದಾಪುರ ತಾಲ್ಲೂಕಿನ ನಿಸರ್ಗದ ಮಧ್ಯೆ ಅವಿತುಕೊಂಡಿರುವ ಊರುಗಳ ದರ್ಶನವೂ ಆಗುತ್ತಿತ್ತು.ವಿಶಾಲವಾಗಿ ಹರಡಿಕೊಂಡಿರುವ ಸಹ್ಯಾದ್ರಿ ಪರ್ವತ ಶ್ರೇಣಿ, ಕುತೂಹಲ ಕೆರಳಿಸುವ ಪರಿಸರ ಕಣ್ಣ ಮುಂದಿತ್ತು. ಗಿಡ–ಮರಗಳಲ್ಲಿದ್ದ ವಿವಿಧ ಸ್ತರದ (ಗಾಢ, ಮಧ್ಯಮ, ತಿಳಿ) ಹಸಿರು ಎಲೆಗಳು ಹಸಿರು ಬಣ್ಣದಲ್ಲೇ ಎಷ್ಟೊಂದು ಬಗೆಯಿದೆ ಎಂದು ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿದ್ದವು.

ಚಾರಣಪ್ರಿಯರು ಶಿರಸಿಯ ಹೋರಾ ಸಂಸ್ಥೆಯನ್ನು ಸಂಪರ್ಕಿಸಬಹುದು: 08384 – 223266.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT