ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮನಗೆದ್ದ ಎಳೆಯ ಕೃಷಿಕರು!

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೃಷಿಗೂ ಯುವಜನತೆಗೂ ಅಜಗಜಾಂತರ ಎಂಬಂತಾಗಿರುವ ಈಗಿನ ಸಮಯದಲ್ಲಿ ಅದೊಂದು ಲಾಭದಾಯಕ ಕೆಲಸವೇ ಅಲ್ಲ ಎಂಬ ಮಾತಿಗೆ ಸಾಕಷ್ಟು ಪುಷ್ಟಿಯೂ ದೊರಕುತ್ತಿದೆ. ಹಳ್ಳಿಯನ್ನು ಬಿಡಲಾಗದೇ ಯಾವುದೋ ಅನಿವಾರ್ಯತೆಯಿಂದಾಗಿ ಬೇಸಾಯ ಮಾಡುತ್ತಿರುವವರು ವೃದ್ಧರಷ್ಟೇ ಹೊರತೂ ಯುವಕರಲ್ಲ. ಈ ಕತ್ತಲಲ್ಲೂ ಅಲ್ಲಲ್ಲಿ ಬೆಳಕಿನ ಕಿರಣಗಳಂತೆ ಒಂದಷ್ಟು ಯುವಕ, ಯುವತಿಯರು ಮರಳಿ ಹಳ್ಳಿಗೆ ಬಂದಿದ್ದಾರೆ.

ಬೇರೆ ಕ್ಷೇತ್ರದಲ್ಲಿ ಅವಕಾಶವಿದ್ದರೂ ಮಣ್ಣನ್ನೇ ನಂಬಿ ಬಂದವರು ಇವರು. ಹೀಗೆ ಬಂದವರಿಗೆ ಸುಸ್ಥಿರ ಕೃಷಿ ಹಾದಿಯ ಬಗೆಬಗೆಯ ಆಯಾಮಗಳು ಕಾಣಿಸುತ್ತಿವೆ. ಈಚೆಗೆ ದೆಹಲಿಯಲ್ಲಿ ನಡೆದ 19ನೇ ‘ಜಾಗತಿಕ ಸಾವಯವ ಸಮಾವೇಶ’ (ಆರ್ಗ್ಯಾನಿಕ್ ವಲ್ಡ್ ಕಾಂಗ್ರೆಸ್) ಇಂಥ ಹಲವು ಯುವ ಸಾಧಕರಿಗೆ ವೇದಿಕೆ ಕಲ್ಪಿಸಿತ್ತು.

ನೂರಾರು ದೇಶಗಳಿಂದ ಬಂದಿದ್ದ ಸಾವಯವ ಕೃಷಿಕರು, ವಿಜ್ಞಾನಿಗಳು ಹಾಗೂ ಉದ್ಯಮಿಗಳಿಂದ ‘ಭಲೇ’ ಅನಿಸಿಕೊಂಡ ಭಾರತದ ಕೆಲವು ಎಳೆಯ ಕೃಷಿಕರ ಸಾಧನೆ ಕುರಿತು ವಿವರಿಸಿದ್ದಾರೆ ಆನಂದತೀರ್ಥ ಪ್ಯಾಟಿ.

*

ಸೂರಜ್ ಸಿ.ಎಸ್.
ವಯನಾಡು, ಕೇರಳ

ಈ ಯುವಕ ‘ಅತ್ಯಂತ ಕಿರಿಯ ಸಾವಯವ ಕೃಷಿಕ’ ಎಂದೇ ಪ್ರಸಿದ್ಧ. ಶಾಲೆ- ಕಾಲೇಜು ಓದುತ್ತಿರುವಾಗಲೇ ಸಾವಯವ ಕೃಷಿಯನ್ನು ಮಾಡುತ್ತ ಅದರಲ್ಲಿ ಹಲವು ಅನುಶೋಧನೆ ನಡೆಸುತ್ತ ಸುದ್ದಿ ಮಾಡಿದ್ದಾರೆ. ಇಪ್ಪತ್ತೊಂದು ವರ್ಷದ ಸೂರಜ್ ಸಿ.ಎಸ್., ಕೇರಳ ಸರ್ಕಾರ ಕೊಡುವ ‘ಶ್ರೇಷ್ಠ ವಿದ್ಯಾರ್ಥಿ ಕೃಷಿಕ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

‘ಕೇರಳದ ಯುವ ಕೃಷಿಕನ ಸುಸ್ಥಿರ ಹಾದಿ’ ಎಂಬ ವಿಷಯದ ಕುರಿತು ಮಾತಾಡಲು ವೇದಿಕೆಯೇರಿದ ಸೂರಜ್, ಮೊದಲಿಗೆ ‘ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವುದರಲ್ಲಿ ದೊಡ್ಡತನವೇನೂ ಇಲ್ಲ’ ಎಂದೇ ಸ್ಪಷ್ಟಪಡಿಸಿ ದರು. ಕುಟುಂಬದ ಹಿರಿಯರಿಂದ ಬಂದಿದ್ದ ಜಮೀನಿನಲ್ಲಿ ಹವ್ಯಾಸಕ್ಕೆಂದು ಹದಿನೈದನೇ ವಯಸ್ಸಿನಲ್ಲಿ ಕೃಷಿ ಶುರು ಮಾಡಿದ ಸೂರಜ್, ಒಮ್ಮೆ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಸಾಧಕ ಸುಭಾಷ್ ಪಾಳೇಕರ್ ಅವರ ಉಪನ್ಯಾಸ ಕೇಳಿದರು. ಅಲ್ಲಿಂದ ಯೋಚನಾಲಹರಿ ಬದಲಾಯಿತು. ಓದಿನ ಜತೆಗೆ ಶಿಸ್ತುಬದ್ಧವಾಗಿ ಸಾವಯವ ಕೃಷಿ ಮಾಡುತ್ತಿರುವ ಸೂರಜ್, ಆಧುನಿಕ ಕೃಷಿಯ ಉಪಯುಕ್ತ ವಿಧಾನಗಳನ್ನು ‘ಬ್ಲೆಂಡ್’ ಮಾಡಿ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ.

ಮಾದಮಂಗಲಂ ಬಳಿಯ ನಾಲ್ಕು ಎಕರೆ ಜಮೀನು ಕೃಷಿ ವೈವಿಧ್ಯದ ತಾಣ. ಟೊಮಾಟೊ, ಬದನೆ, ಬೀನ್ಸ್, ಮೆಣಸಿನಕಾಯಿ, ಬೀಟ್‍ರೂಟ್, ಆಲೂ ಸೇರಿದಂತೆ ಇಪ್ಪತ್ತು ಬಗೆಯ ತರಕಾರಿ ಹಾಗೂ 30 ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಸ್ವಲ್ಪವೇ ಜಾಗದಲ್ಲಿ ಸುಲಭವಾಗಿ ಬೆಳೆಯುವ ಔಷಧೀಯ ಸಸ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ. ವಾಣಿಜ್ಯಬೆಳೆಯಾಗಿ ಏಲಕ್ಕಿ, ಕಾಫಿ, ಕಾಳುಮೆಣಸು ಇವೆ. ‘ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಮಡಗಾಸ್ಕರ್ ವಿಧಾನ ಅನುಸರಿಸುತ್ತಿದ್ದೇನೆ. ಕಳೆದ ವರ್ಷ ಎಕರೆಗೆ ನಾಲ್ಕು ಟನ್ ಇಳುವರಿ ಪಡೆದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುವ ಸೂರಜ್, ನಾಲ್ಕು ದೇಸಿ ತಳಿ ಸಂರಕ್ಷಣೆ ಮಾಡಿ ರೈತರಿಗೆ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ.
ಸಾವಯವ ಕೃಷಿಯಲ್ಲಿ ಸಸ್ಯಗಳ ಚೈತನ್ಯ ಹೆಚ್ಚಿಸಲು ದ್ರವರೂಪಿ ಗೊಬ್ಬರ ‘ಕುನಪಜಲಂ’ ಹಾಗೂ ‘ಅರ್ಕಸೂತ್ರಂ’ ತಯಾರಿಸಿ, ಸಿಂಪಡಿಸುತ್ತಾರೆ.

ವೃಕ್ಷಾಯುರ್ವೇದದಲ್ಲಿ ಹೇಳಿರುವ ವಿಧಾನಗಳನ್ನು ಹೆಚ್ಚಾಗಿ ಅನುಸರಿಸುವುದೂ ಇದೆ. ಕೃಷಿ ಆಸಕ್ತ ಶಾಸಕರಿಗೆಂದು ಕೆಲವು ತಿಂಗಳ ಹಿಂದೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಯವ ವ್ಯವಸಾಯದ ಬಗ್ಗೆ ಪಾಠ ಮಾಡಿದ್ದು ತಮಗೆ ಮರೆಯಲಾಗದ ನೆನಪು ಎನ್ನುತ್ತಾರೆ ಸೂರಜ್!

*


ಸೈಯದ್ ಘನಿ ಖಾನ್ 
ಕಿರುಗಾವಲು, ಮಂಡ್ಯ ಜಿಲ್ಲೆ
ಸಾವಯವ ಸಮಾವೇಶಕ್ಕೆ ಬಂದವರಿಗೆ ಕೊಡಲಾಗಿದ್ದ ಕಿಟ್‍ನಲ್ಲಿ ಪುಸ್ತಕದ ಜತೆ ಪೆನ್ ಇತ್ತು. ಅದು ಸೂಲಂಗಿಯಿಂದ ಮಾಡಿದ್ದು! ಕಬ್ಬಿನ ಹೂವಿನ ಒಂದು ಭಾಗ ಈ ಸೂಲಂಗಿ. ಕಡ್ಡಿಯಾಕಾರದಲ್ಲಿ ಇರುವ ಇದನ್ನು ಕಟಾವಿನ ಬಳಿಕ ರೈತರು ಸುಡುವುದೇ ಹೆಚ್ಚು. ಆದರೆ ಸಾವಯವ ಕೃಷಿಕ ಸೈಯದ್ ಘನಿ ಖಾನ್ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಯೋಚಿಸಿದಾಗ ಹೊಳೆದಿದ್ದು- ಈ ಪೆನ್.

ಇದಕ್ಕೂ ಮೊದಲು ಅವರು ಸೂಲಂಗಿಯಿಂದ ಟ್ರೇ, ಪೆನ್ ಸ್ಟ್ಯಾಂಡ್ ಮಾಡಿದ್ದರು. ಪೆನ್ ಮಾಡಲು ಯೋಚಿಸಿದಾಗ ಎದುರಾದ ಸವಾಲು, ಅದರೊಳಗೆ ರೀಫಿಲ್ ತೂರಿಸುವುದು ಹೇಗೆ ಎಂಬುದು. ಏನೇನೋ ಪ್ರಯತ್ನಗಳ ಬಳಿಕ ಕಬ್ಬಿಣದ ಕಡ್ಡಿಯಿಂದ ನಿಧಾನವಾಗಿ ರಂಧ್ರ ಮಾಡಿ, ರೀಫಿಲ್ ಕೂಡಿಸುವುದರಲ್ಲಿ ಸಫಲರಾದರು. ಐದು ಪೆನ್‍ಗಳನ್ನು ಸಂಘಟಕರಿಗೆ ಕಳಿಸಿದಾಗ, ಅವರು ಆ ಕುಶಲತೆ ಒಪ್ಪಿ ಮೂರು ಸಾವಿರ ಪೆನ್ ಕಳಿಸುವಂತೆ ಸೂಚಿಸಿದರು.

‘ಒಂದೊಂದು ಪೆನ್ ಕೂಡ ಒಂದೊಂದು ಆಕಾರದಲ್ಲಿದೆ. ಮೇಲೆ ರಚಿಸಲಾಗಿರುವ ಕಲೆಯೂ ಒಂದು ಇನ್ನೊಂದಕ್ಕಿಂತ ಭಿನ್ನ. ಹಲವು ಬಣ್ಣಗಳು, ವಿವಿಧ ವಿನ್ಯಾಸದ ಚಿತ್ರಗಳು ಪೆನ್ ಮೇಲೆ ಕಾಣುತ್ತವೆ. ಸೂಲಂಗಿಯ ಮರುಬಳಕೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ನಾನು ಮಾಡಿಕೊಂಡೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ಕೈಯಲ್ಲಿ ನಾನು ತಯಾರಿಸಿದ ಪೆನ್ ನೋಡಿ ಖುಷಿಯೂ ಆಗಿದೆ’ ಎನ್ನುತ್ತಾರೆ ಘನಿ ಖಾನ್.

ಸಂಘಟಕರ ಬಳಿ ಈ ಬಗ್ಗೆ ಕೇಳಿ, ಘನಿ ಅವರನ್ನು ಕೆಲವರು ಹುಡುಕಿಕೊಂಡು ಬಂದು ಪ್ರಶಂಸಿಸಿದ್ದು ಡಬಲ್ ಖುಷಿ ಕೊಟ್ಟಿದೆ. ಅಂದ ಹಾಗೆ, ಈ ಯೋಜನೆಯಲ್ಲಿ ಘನಿ ಅವರ ಪತ್ನಿ ಸೈಯದಾ ಫಿರದೋಸ್ ನೆರವು ನೀಡಿದ್ದಾರೆ. ಅಕ್ಕಪಕ್ಕದ ಕೆಲವು ಮಹಿಳೆಯರಿಗೂ ಈ ಕೌಶಲ ಕಲಿಸಿ, ಅವರಿಗೆ ಒಂದಷ್ಟು ಆದಾಯ ಬರುವಂತೆ ನೋಡಿಕೊಂಡ ಘನಿಖಾನ್ ಪರಿಸರಪೂರಕ ಹೆಜ್ಜೆಯೊಂದನ್ನು ಹುಡುಕಿದ ಸಂತಸದಲ್ಲಿ ಇದ್ದಾರೆ.

*


ನಾಗರತ್ನ
ಮಾಯಸಂದ್ರ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಬೆಳಗಾಗುತ್ತಲೇ ಹಳ್ಳಿಯಿಂದ ಹತ್ತಕ್ಕೂ ಹೆಚ್ಚು ಕ್ವಿಂಟಾಲ್ ತರಕಾರಿ ಬೆಂಗಳೂರಿನತ್ತ ಹೊರಡುತ್ತದೆ. ಅದಕ್ಕೂ ಹಿಂದಿನ ದಿನದವರೆಗೆ ನಡೆದಿರುವ ಪ್ರಕ್ರಿಯೆ ಕಡಿಮೆಯೇಲ್ಲ. ನಿರ್ದಿಷ್ಟ ತರಕಾರಿಯನ್ನು ಯಾರು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು? ಅದು ಯಾವಾಗ ಕಟಾವಿಗೆ ಸಿದ್ಧ? ಇವರು ಈ ತರಕಾರಿ ಬೆಳೆದರೆ, ಇನ್ನೊಬ್ಬ ರೈತ ಏನನ್ನು ಬೆಳೆಯಬೇಕು? ಅದರ ಕಟಾವು ಯಾವಾಗ? ಇಂಥವೇ ಹತ್ತಾರು ಪ್ರಶ್ನೆಗಳನ್ನು ಯೋಜನಾಬದ್ಧವಾಗಿ ಜೋಡಿಸಿ, ಮಾರುಕಟ್ಟೆ ಕಂಡುಕೊಳ್ಳುವುದು ದೊಡ್ಡ ಸವಾಲು.

ಮಾಯಸಂದ್ರ ಗ್ರಾಮದಲ್ಲಿ ರೈತರೇ ಕಟ್ಟಿಕೊಂಡ ಸಮುದಾಯ ಮಾರುಕಟ್ಟೆ ವ್ಯವಸ್ಥೆಯನ್ನು ನಾಗರತ್ನ ಸಾವಯವ ಸಮಾವೇಶದಲ್ಲಿ ವಿವರಿಸುತ್ತಿದ್ದರೆ ದೇಶ ವಿದೇಶದ ಪ್ರತಿನಿಧಿಗಳಿಂದ ಭರ್ಜರಿ ಕರತಾಡನ.

ಪ್ರತಿ ವರ್ಷ ಸುಮಾರು ಎಂಟು ಲಕ್ಷದವರೆಗೆ ವಹಿವಾಟು ನಡೆಸುವ ತರಕಾರಿ ಮಾರುಕಟ್ಟೆಯು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿರುವ ನಾಗರತ್ನ, ರೈತನ ಮಗಳು. ‘ಸಾವಯವ ಗ್ರಾಮ’ ಯೋಜನೆಯ ಉಸ್ತುವಾರಿಗೆಂದು ಸಹಜ ಸಮೃದ್ಧ ಸಂಸ್ಥೆಯ ಪ್ರತಿನಿಧಿಯಾಗಿ ಈ ಹಳ್ಳಿಗೆ ಬಂದ ಅವರಿಗೆ ಅನಿಸಿದ್ದು- ಉತ್ಪಾದನೆಯ ಜತೆಗೆ ಮಾರುಕಟ್ಟೆಯೂ ಇರಬೇಕು. ಇಲ್ಲದೇ ಹೋದರೆ, ರೈತರು ಮತ್ತೆ ಕಂಗಾಲಾಗುತ್ತಾರೆ.

ಇದಕ್ಕಾಗಿ ರೂಪಿಸಲಾದ ವಿಧಾನದ ಒಂದು ಕೊಂಡಿಯಾಗಿ ನಾಗರತ್ನ ಕೆಲಸ ಮಾಡುತ್ತಾರೆ. ಆರಂಭದಲ್ಲಿ ಹತ್ತು ಜನರಿಂದ ಶುರುವಾದ ‘ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘ’ವು ಈಗ 60 ರೈತರನ್ನು ಒಳಗೊಂಡಿದೆ. ವರ್ಷವಿಡೀ ತರಕಾರಿ ಅಬಾಧಿತವಾಗಿ ಪೂರೈಕೆಯಾಗುವಂತೆ ರೈತ- ಉತ್ಪನ್ನ- ಕಟಾವು ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ. ಅದರ ಅನುಸಾರ ರೈತರು ತರಕಾರಿ ಬೆಳೆಯುತ್ತಾರೆ. ಅದು ಗ್ರಾಮದಲ್ಲಿನ ಸಂಗ್ರಹ ಕೊಠಡಿಗೆ ಬಂದು, ಅಲ್ಲಿಂದ ‘ಸಹಜ ಆರ್ಗ್ಯಾನಿಕ್ಸ್’ ರೈತರ ಕಂಪನಿಗೆ ರವಾನೆಯಾಗುತ್ತದೆ.

ಬಳಿಕ ಅಲ್ಲಿಂದ ಬರುವ ಹಣವನ್ನು ವಾರಕ್ಕೊಮ್ಮೆ ರೈತರಿಗೆ ಬಟವಾಡೆ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಯ ಉಸ್ತುವಾರಿ ನಾಗರತ್ನ ಅವರದು. ಸದ್ಯ ಈ ಹಳ್ಳಿಯಿಂದ 35 ಬಗೆಯ ತರಕಾರಿ, 15 ತರಹದ ಸೊಪ್ಪು ಹಾಗೂ ನಿರ್ದಿಷ್ಟ ಅವಧಿಯಲ್ಲಿ ಐದು ಬಗೆಯ ಹಣ್ಣುಗಳು ಮಾರುಕಟ್ಟೆಗೆ ಹೋಗುತ್ತಿವೆ.

ಮೊದಲೆಲ್ಲ ವಾರಕ್ಕೆ ಎರಡು ದಿನ ನಡೆಯುತ್ತಿದ್ದ ಮಾರಾಟ ವ್ಯವಸ್ಥೆ ಈಗ ಆರು ದಿನಗಳಿಗೆ ಏರಿಕೆಯಾಗಿದೆ. ‘ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೂ ಖಚಿತ ಆದಾಯ ಬರುವಂತೆ ಮಾಡುವ ಕೆಲಸದಲ್ಲಿ ನೆಮ್ಮದಿಯಿದೆ’ ಎನ್ನುತ್ತಾರೆ ನಾಗರತ್ನ.

*


ಬಾಲಮುರಳಿ
ತಿರುಚ್ಚಿ, ತಮಿಳುನಾಡು

ಆ ಒಡವೆಗಳು ಬೆಳ್ಳಿ-ಬಂಗಾರದ್ದಲ್ಲ; ವಜ್ರ- ವೈಡೂರ್ಯವನ್ನಂತೂ ಬಳಸಿಯೇ ಇಲ್ಲ. ಎಲ್ಲವೂ ಗಿಡ-ಮರಗಳ ಬೀಜದಿಂದ ತಯಾರಿಸಿದಂಥವು! ಸಾವಯವ ಸಮಾವೇಶಕ್ಕೆ ಬಂದಿದ್ದ ವಿದೇಶಿ ಹೆಣ್ಣುಮಕ್ಕಳು ಈ ‘ಜಂಗಲ್ ಜ್ಯುವೆಲ್’ಗೆ ಭೇಟಿ ಕೊಟ್ಟು, ಒಂದೆರಡು ಒಡವೆಗಳನ್ನಾದೂ ಖರೀದಿಸದೇ ಹೋಗಿದ್ದು ಇಲ್ಲವೇ ಇಲ್ಲ. ಅಪ್ಪ ನೆಟ್ಟ ಔಷಧೀಯ ವನಕ್ಕೆ ಜೋತು ಬಿದ್ದ ಮಗ, ಅದಕ್ಕೆ ಮತ್ತೊಂದು ಕಿರೀಟ ತೊಡಿಸಿದ ಕಥೆಯಿದು!

ತಿರುಚ್ಚಿಯ ಸಾಮಾಜಿಕ ಕಾರ್ಯಕರ್ತ ಜಗನ್ನಾಥನ್ ಅವರಿಗೆ ಔಷಧೀಯ ಸಸ್ಯಗಳ ಮೇಲೆ ಬಲು ಪ್ರೀತಿ. ಅದಕ್ಕೆಂದೇ ಅವರು ‘ಅನ್ಸಾ’ ಎಂಬ ಔಷಧೀಯ ವನ ಸ್ಥಾಪಿಸಿ, ಅದಕ್ಕೆ ಸಂಬಂಧಿಸಿದ ಮೌಲ್ಯವರ್ಧನೆ ಕೆಲಸ ಶುರು ಮಾಡಿದರು. ಹಲವು ವರ್ಷಗಳ ಬಳಿಕ ತಮ್ಮ ಮಗ ಬಾಲಮುರಳಿಗೆ ಆ ವನದ ಹೊಣೆ ವಹಿಸಿದರು.

ಔಷಧೀಯ ಉತ್ಪನ್ನದ ಜತೆಗೆ ಮಹಿಳೆಯರಿಗೆ ಇನ್ನೊಂದಷ್ಟು ಆದಾಯ ಕೊಡುವ ಹೊಸಬಗೆಯ ಕೆಲಸಕ್ಕಾಗಿ ಮುರಳಿ ಯೋಚಿಸಿದಾಗ ಕಂಡಿದ್ದು- ಬೀಜಗಳ ಬಳಕೆ. ರಸ್ತೆ ಬದಿ ಮರಗಳ ಕೆಳಗೆ ಅಥವಾ ಕಾಡಿನಲ್ಲಿ ಯಥೇಚ್ಛವಾಗಿ ಸಿಗುವ ಬೀಜಗಳನ್ನು ಆಭರಣಗಳನ್ನಾಗಿ ಮಾಡಿದರೆ ಹೇಗೆ ಎಂಬ ಉಪಾಯ ಅವರಲ್ಲಿ ಮೂಡಿತು. ಅದೇ ‘ಜಂಗಲ್ ಜ್ಯುವೆಲ್ಸ್’ ಸ್ಥಾಪನೆಗೆ ಬುನಾದಿ. ಆ ದಾರಿಯಲ್ಲೀಗ ಅವರದು ಹಲವು ವರ್ಷಗಳ ಯಶಸ್ವೀ ಪಯಣ.

ಇಂಥದೇ ಗಿಡ-ಮರ, ಪೊದೆ ಅಥವಾ ಮುಳ್ಳುಕಂಟಿಯ ಬೀಜ ಎಂದೇನಿಲ್ಲ. ಯಾವುದು ಉಪಯೋಗವಾಗಬಲ್ಲದೋ ಅದನ್ನು ತಂದು ‘ಆಭರಣ’ ಮಾಡಲಾಗುತ್ತದೆ.

ಅದಕ್ಕಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ತರಬೇತಿ ಕೊಡಲಾಗಿದೆ. ‘ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಅತ್ಯಧಿಕ ಪ್ರಮಾಣದಲ್ಲಿ ಸಿಗುವ ಬೀಜಗಳನ್ನಷ್ಟೇ ನಾವು ಇದಕ್ಕೆ ಬಳಸಿಕೊಳ್ಳುತ್ತೇವೆ. ಅವನತಿಯ ಅಂಚಿಗೆ ಬಂದು ನಿಂತಿರುವ ಸಸ್ಯ ಪ್ರಭೇದದ ಬೀಜಗಳನ್ನು ಖಂಡಿತ ಉಪಯೋಗಿಸುವುದಿಲ್ಲ. ವಿಷರಹಿತ ಹಾಗೂ ಬೇಗನೇ ಹುಳಬೀಳದ ಬೀಜಗಳನ್ನು ಸಾಕಷ್ಟು ಪರೀಕ್ಷೆಯ ಬಳಿಕವೇ ಆಯ್ದು ತಂದು ಒಡವೆ ಮಾಡಲಾಗುತ್ತದೆ. ಹೀಗಾಗಿ ಬಹುವರ್ಷಗಳವರೆಗೆ ಇವು ಬಾಳಿಕೆ ಬರುತ್ತವೆ’ ಎನ್ನುತ್ತಾರೆ ಮುರಳಿ.

ಮನೆಯಲ್ಲೇ ಕುಳಿತು ಒಡವೆ ತಯಾರಿಸಿಕೊಡುವ ಅವಕಾಶವನ್ನು ಸಹ ಮಹಿಳೆಯರಿಗೆ ಕಲ್ಪಿಸಲಾಗಿದೆ. ಕೌಶಲ ಹೆಚ್ಚಿಸಲು ಅವರಿಗೆ ನಿಗದಿತವಾಗಿ ಕೊಡುತ್ತಿರುವ ತರಬೇತಿ ಕೂಡ ವಿಶಿಷ್ಟ. ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ಇದಕ್ಕಿಂತ ಇನ್ನಾವ ಉತ್ತಮ ಉದಾಹರಣೆ ಇದ್ದೀತು!?

*


ಆಜಾದ್
ಹಲಸೂರು, ಎಚ್.ಡಿ.ಕೋಟೆ

‘ಸಂಪೂರ್ಣ, ಪರಿಪೂರ್ಣ ಸ್ವಾತಂತ್ರ್ಯದ ಸ್ವರೂಪ ಅರ್ಥವಾಗುವುದು ಕೃಷಿಯಲ್ಲಿ ಮಾತ್ರ’ ಎಂದು ಹೇಳಿದ ಯುವಕನ ಹೆಸರು ಆಜಾದ್. ಅವರು ಹೆಸರಾಂತ ಸಾವಯವ ಕೃಷಿಕರಾದ ವಿವೇಕ್ ಕಾರ್ಯಪ್ಪ ಹಾಗೂ ಜೂಲಿ ಅವರ ಪುತ್ರ.

ದೆಹಲಿ ತೊರೆದು ಕರ್ನಾಟಕದ ಎಚ್.ಡಿ.ಕೋಟೆ ಸಮೀಪದ ಹಳ್ಳಿಗೆ ಬಂದು ಸಾವಯವ ಕೃಷಿ ಮಾಡುತ್ತಿರುವ ವಿವೇಕ ಮತ್ತು ಜೂಲಿ ದಂಪತಿ ಸಾಧನೆ ಕಡಿಮೆಯೇನಲ್ಲ. ಮಕ್ಕಳೂ ಅದೇ ದಾರಿಯಲ್ಲಿ ಸಾಗುತ್ತಿರುವುದು ಈ ಕುಟುಂಬದ ಮತ್ತೊಂದು ವೈಶಿಷ್ಟ್ಯ. ಅದರಲ್ಲೂ ಮನೆಯೇ ಶಾಲೆಯನ್ನಾಗಿ ಮಾಡಿಕೊಂಡು ಬದುಕುವುದು ಈಗಿನ ಕಾಲಘಟ್ಟದಲ್ಲಿ ತುಸು ವಿಚಿತ್ರವೇ ಸೈ. ಶಾಲೆಗೆ ಹೋಗದೇ ಸಾವಯವ ತೋಟವನ್ನೇ ವಿದ್ಯಾಲಯ ಮಾಡಿಕೊಂಡು ಗಳಿಸಿದ ಜ್ಞಾನವನ್ನು ಆಜಾದ್ ‘ಸಾವಯವ ಸಮಾವೇಶ’ದಲ್ಲಿ ಹಂಚಿಕೊಂಡರು.

‘ಶಾಲೆಗೆ ಹೋಗದೇ ಇದ್ದುದಕ್ಕೆ ನಿಮಗೆ ಏನನ್ನೋ ಮಿಸ್ ಮಾಡಿಕೊಂಡಂತೆ ಆಗಿಲ್ಲವೇ?’ ಎಂಬ ಪ್ರಶ್ನೆಗೆ ಥಟ್ಟನೇ ಬಂದ ಮರುಪ್ರಶ್ನೆ- ‘ಕಲಿಯಲು ಶಾಲೆಯ ಆಚೆಗೂ ಸಾಕಷ್ಟು ಅವಕಾಶ ಇದೆಯಲ್ಲ?’

ಆಜಾದ್ ಪ್ರಕಾರ, ಶಾಲೆಯ ಹೊರಗೂ ಕಲಿಯಲು ಅನಂತ ಅವಕಾಶಗಳಿವೆ; ಜ್ಞಾನದ ವಿಸ್ತಾರವೂ ಹೆಚ್ಚುತ್ತದೆ. ಕೊಠಡಿಯ ಆಚೆಗೆ ಇರುವ ಪ್ರಾಣಿ- ಪಕ್ಷಿ, ಚಿಟ್ಟೆ, ಸಸ್ಯ ವೈವಿಧ್ಯದ ಬಗ್ಗೆ ಕಲಿಯಲು ನೂರು ವರ್ಷಗಳೂ, ಜನ್ಮಗಳೂ ಸಾಕಾಗುವುದಿಲ್ಲ. ತೋಟದಲ್ಲಿ ಓಡಾಡುತ್ತ, ಪರಿಸರದ ಬದಲಾವಣೆ ಗಮನಿಸುತ್ತ ಹೋದರೆ ಅಲ್ಲಿ ಕಲಿಯಬಹುದಾದ ಪಾಠ ಸಾವಿರಾರು ಎನ್ನುತ್ತಾರೆ ಆಜಾದ್.

‘ಕೃಷಿ ಅಂದರೆ ಮಣ್ಣು. ಈಗಿನ ಜನರಿಗೆ- ಅದರಲ್ಲೂ ಪಟ್ಟಣವಾಸಿಗಳ ಪಾಲಿಗೆ ಮಣ್ಣು ಅಂದರೆ ಕೆಸರು ಎಂದಷ್ಟೇ ಗೊತ್ತು’ ಎಂದು ಬೇಸರದ ದನಿಯಲ್ಲಿ ಹೇಳುವ ಆಜಾದ್, ಶುದ್ಧ ಸ್ವಾತಂತ್ರ್ಯ ಸಿಗಬೇಕೆಂದರೆ ಅದು ಕೃಷಿಯಲ್ಲಿ ಮಾತ್ರ ಸಾಧ್ಯ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅಪ್ಪ- ಅಮ್ಮನ ಜತೆಗೆ ತೋಟದಲ್ಲಿ ಕೆಲಸ ಮಾಡುತ್ತ, ಮಾರುಕಟ್ಟೆ, ತಂತ್ರಜ್ಞಾನ ಇನ್ನಿತರ ಕೃಷಿ ಲೋಕದ ಪ್ರಚಲಿತ ವಿದ್ಯಮಾನಗಳನ್ನು ಅವಲೋಕಿಸುವ ವಿಧಾನವಂತೂ ವಿಸ್ಮಯ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT