ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಔತಣ

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಯಾಮಿಗೆ ಅಡ್ಡೆ, ಪುಂಡಿ, ಕೋಳಿ, ಮೀನಿನ ಪುಳಿಮುಂಜಿ, ಕೋಕಂ ಕಡಿ... ಈ ಹೆಸರುಗಳನ್ನು ಕೇಳಿದಾಕ್ಷಣ ಕರಾವಳಿ ಖಾದ್ಯ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಕರಾವಳಿ ಖಾದ್ಯಗಳಿಗೆಂದೇ ಸೀಮಿತವಾದ ರೆಸ್ಟೊರೆಂಟ್‌ ಎಂ.ಜಿ.ರಸ್ತೆಯಲ್ಲಿ ಇರಬೇಕಿತ್ತು ಎನ್ನುವ ಸೀಫುಡ್ ಆಹಾರ ಪ್ರಿಯರ ಕೊರಗನ್ನು ನೀಗಿಸಲೆಂದೇ ಪ್ರಾರಂಭವಾಗಿದೆ ಕೊಂಕಣ್‌ ರೆಸ್ಟೊರೆಂಟ್‌.

ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದ ಈ ಹೋಟೆಲ್, ಒಳಾಂಗಣ ವಿನ್ಯಾಸದ ಮೂಲಕವೂ ಗಮನ ಸೆಳೆಯುತ್ತದೆ. ಗೋಡೆಯ ಮೇಲಿನ ಆಕರ್ಷಕ ಚಿತ್ರಗಳು ಕರಾವಳಿ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಮಾರ್ಗರೆಟ್‌ ಆಳ್ವ, ಚಾರ್ಜ್‌ ಫರ್ನಾಂಡಿಸ್‌, ಮನೋಹರ್‌ ಪರಿಕ್ಕರ್‌, ರೆಮೊ ಫರ್ನಾಂಡಿಸ್‌, ಲೋರ್ನಾ... ಹೀಗೆ ರಾಜಕಾರಣಿ, ಸಂಗೀತಗಾರರ ಜೊತೆಗೆ ಯಕ್ಷಗಾನ, ಕಂಬಳ ಚಿತ್ರಗಳು ಇಲ್ಲಿವೆ.

ಇವುಗಳನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ ಸರ್ವರ್‌ ತಂದಿಟ್ಟ ಮೆನು ಪಟ್ಟಿಯ ಮೇಲೆ ಕಣ್ಣಾಡಿಸಿದೆ. ಅದನ್ನು ನೋಡುತ್ತಲೇ ಮೊದಲು ಗಮನ ಹೋಗಿದ್ದು ಕೋಕಂ ಕಡಿಯ ಮೇಲೆ. ಆರ್ಡರ್‌ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ತಿಳಿ ಗುಲಾಬಿ ಬಣ್ಣದ ಪಾನೀಯವನ್ನು ಮೇಜಿನ ಮೇಲಿಟ್ಟರು ಸರ್ವರ್‌. ಪುನರ್ಪುಳಿ ಮತ್ತು ಮಜ್ಜಿಗೆಯಿಂದ ತಯಾರಿಸಿದ್ದ ಈ ಪಾನೀಯ ಇಷ್ಟವೆನಿಸಿತು. ಹದವಾಗಿ ಬೆರೆತ ಉಪ್ಪು, ಹುಳಿ ಖಾರವನ್ನು ಆಹ್ವಾದಿಸುತ್ತಲೇ, ಸ್ಟಾರ್ಟರ್‌ ಕಡೆಗೆ ಕಣ್ಣಾಡಿಸಿ, ಚಿಕನ್‌ ಪೆಪ್ಪರ್‌ ಆರ್ಡರ್‌ ಮಾಡಿದೆ. ಕರಿಬೇವು, ಕಾಳುಮೆಣಸಿನ ಘಮ ಮೂಗಿಗೆ ಬಡಿಯುತ್ತಿದ್ದಂತೆ, ಹೊಟ್ಟೆ ಹಸಿವು ಹೆಚ್ಚಿತು. ಬಾಯಿಗಿಡುತ್ತಿದ್ದಂತೆ ರುಚಿ ಮತ್ತಷ್ಟು ಖಾದ್ಯದ ಸವಿ ನೋಡಲು ಪ್ರೇರೇಪಿಸಿತು. ಇಳಿಸಂಜೆಯಲ್ಲಿ ಇದನ್ನು ತಿನ್ನುವುದೇ ಮಜಾ.

ಇದನ್ನು ತಿನ್ನುತ್ತಿದ್ದಂತೆ ಪಾಂಫ್ರೆಟ್‌ ಮಸಾಲ ಫ್ರೈ ತಂದು ಕೊಟ್ಟರು. ಕೊಬ್ಬರಿ ಎಣ್ಣೆಯ ಘಮ, ಉಪ್ಪು, ಖಾರ ಹದವಾಗಿ ಬೆರೆತ ತಾಜಾ ಮೀನು ಬಾಯಿಗಿಟ್ಟಾಗ, ಅಮ್ಮನ ಕೈರುಚಿ ನೆನಪಾಯಿತು. ನೀರು ದೋಸೆ ಕಾಣೆ ಮೀನಿನ ಕಾಂಬಿನೇಷನ್‌ ವಾವ್‌ ಎನ್ನುವಂತಿತ್ತು.

‌ಚಿಕನ್‌ ಸುಕ್ಕಾದ ರುಚಿ ಚೆನ್ನಾಗಿದ್ದರೂ, ಖಾರ  ಸ್ವಲ್ಪ ಕಡಿಮೆ ಎನಿಸಿತು. ಸ್ಯಾಮಿಗೆ ಅಡ್ಡೆಗೆ ಚಿಕನ್‌ ಸಾರು ಬೆರೆಸಿ ತಿನ್ನಲು ಸ್ವಾದಿಷ್ಟವಾಗಿತ್ತು. ಬಂಗುಡೆ ಫ್ರೈ ಘಮದ ಜೊತೆಗೆ ರುಚಿಯೂ ಅದ್ಭುತವಾಗಿತ್ತು. ಈರುಳ್ಳಿ, ಕರಿಬೇವಿನ ಜೊತೆಗೆ ತುಪ್ಪದಲ್ಲಿ ಕರಿದ ಏಡಿಯ ಘೀರೋಸ್ಟ್‌ ಇಷ್ಟವಾಗುತ್ತದೆ. ಏಡಿ, ಸಿಗಡಿಯಲ್ಲಿ ಇಲ್ಲಿ ವಿವಿಧ ಆಯ್ಕೆಗಳಿವೆ. ಪೆಪ್ಪರ್‌ ಫ್ರೈ, ಮಸಾಲ, ತವಾ ಫ್ರೈ ಪುನಃ ಬಂದು ತಿನ್ನಬೇಕು ಎನಿಸದೇ ಇರಲಾರದು. ಡೆಸರ್ಟ್‌ನಲ್ಲಿ ಗೋಧಿ ಪಾಯಸ, ರಾಗಿ ಮಣಿ ಇಲ್ಲಿಯ ವಿಶೇಷ.

ಎರಡು ತಿಂಗಳ ಹಿಂದೆ ಚೈತ್ರಾ, ನೀಲ್‌ ದಂಪತಿ ಹೋಟೆಲ್‌ ಪ್ರಾರಂಭಿಸಿದ್ದಾರೆ. ಇವರಿಗೆ ಷಿರಾಜ್‌ ಕೂಡ ಜೊತೆಯಾಗಿದ್ದಾರೆ. ‘ಹೋಟೆಲ್‌ ಆರಂಭಿಸಬೇಕು ಎಂಬ ಆಸೆ ಬಹುಕಾಲದಿಂದ ಇತ್ತು. ಕರಾವಳಿ ಖಾದ್ಯಕ್ಕೆ ಬೇಡಿಕೆ ಚೆನ್ನಾಗಿದೆ. ಎಂ.ಜಿ. ರಸ್ತೆಯಲ್ಲಿ ಸಾಗರ ಖಾದ್ಯಗಳ ಹೋಟೆಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ನನ್ನ ಪತಿ ನೀಲ್‌ ಮಂಗಳೂರಿನವರು. ಹಾಗಾಗಿ ಕರಾವಳಿ ಖಾದ್ಯದ ಹೋಟೆಲ್‌ ಆರಂಭಿಸಿದೆವು’ ಎನ್ನುತ್ತಾರೆ ಚೈತ್ರಾ.

‘ಚಿಕನ್‌, ಮೀನಿನ ಥಾಲಿಗೆ ಪ್ರತಿದಿನವೂ ಹೆಚ್ಚು ಬೇಡಿಕೆ ಇರುತ್ತದೆ. ವಾರಾಂತ್ಯದಲ್ಲಿ ಚಿಕನ್‌, ಸಿಗಡಿ ಘೀರೋಸ್ಟ್‌, ಪಾಂಫ್ರೆಟ್‌, ಕಾಣೆ ಮಸಾಲ ಫ್ರೈಗೆ ಬೇಡಿಕೆಯಿರುತ್ತದೆ’ ಎನ್ನುತ್ತಾರೆ ಇವರು.

ಇಲ್ಲಿಯ ಮುಖ್ಯ ಬಾಣಸಿಗ ಶ್ರೀನಿವಾಸ್‌ ಕುಂದಾಪುರದವರು. ಆಹಾರ ಉದ್ಯಮದಲ್ಲಿ 33 ವರ್ಷಗಳ ಅನುಭವ ಇವರಿಗಿದೆ. ಅಮ್ಮನ ಕೈರುಚಿಯನ್ನು ಸವಿಯುತ್ತಲೇ ಆರು ವರ್ಷವಿರುವಾಗಿನಿಂದಲೇ ಅಡುಗೆ ಮಾಡಲು ಆರಂಭಿಸಿದ್ದಾರೆ.

‘ಹೊಸದಾಗಿ ಪ್ರಾರಂಭವಾದ ಹೋಟೆಲ್‌ನಲ್ಲಿ ರುಚಿ ನೋಡಲು ಬಂದಿದ್ದೆವು. ಸೀಫುಡ್‌ ಖಾದ್ಯಗಳು ಇಷ್ಟವಾಯಿತು. ಸ್ವಲ್ಪ ಸ್ಪೈಸಿಯಾಗಿದ್ದರೆ ಚೆನ್ನಾಗಿರುತ್ತಿತ್ತು’ ಎನ್ನುತ್ತಾರೆ ಜೆ.ಪಿ.ನಗರದ ರಾಕೇಶ್‌.

ರೆಸ್ಟೊರೆಂಟ್‌: ಕೋಂಕಣ್‌ ಹೋಟೆಲ್‌
ವೈಶಿಷ್ಟ್ಯ: ಪಾಂಫ್ರೆಟ್‌, ಕಾಣೆ ಮಸಾಲ, ಪ್ರಾನ್ಸ್‌, ಚಿಕನ್‌ ಗೀರೋಸ್ಟ್‌
ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11
ಸ್ಥಳ: ನಂ. 48, ಮೊದಲನೇ ಮಹಡಿ, ಸೇಂಟ್‌ ಮಾರ್ಕ್ಸ್ ರಸ್ತೆ.
ಕಾಯ್ದಿರಿಸಲು: 9986762579
ಥಾಲಿ ಸೀಫುಡ್‌ ಒಬ್ಬರಿಗೆ: ₹125
ಚಿಕನ್‌ ಥಾಲಿ: ₹120, ವೆಚ್‌ ಥಾಲಿ– ₹99

*


–ಶ್ರೀನಿವಾಸ್, ಬಾಣಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT