ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ

Last Updated 16 ನವೆಂಬರ್ 2017, 9:08 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಮಧ್ಯರಾತ್ರಿ ವಹಿವಾಟು ನಡೆಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಎದುರು ಮಾತನಾಡಿದರೆಂದು ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕ ರಾಜುಶೆಟ್ಟಿ ಅವರಿಗೆ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್ ಬಾಬು ಅವರು ಲಾಠಿಯಿಂದ ಮನಸೋಇಚ್ಛೆ ಹೊಡೆದಿದ್ದಾರೆ.

ನ.9ರಂದು ಈ ಘಟನೆ ನಡೆದಿದ್ದು, ಎಸಿಪಿ ಲಾಠಿ ಬೀಸಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ರಾಜುಶೆಟ್ಟಿ ಅವರು ಎಸಿಪಿ ವಿರುದ್ಧ ನಗರ ಪೊಲೀಸ್ ಕಮಿಷನರ್‌ ಟಿ.ಸುನೀಲ್ ಕುಮಾರ್ ಅವರಿಗೆ ದೂರು ಕೊಟ್ಟಿದ್ದಾರೆ.

‘ನ.9ರ ರಾತ್ರಿ 11.56ಕ್ಕೆ ಹೋಟೆಲ್‌ಗೆ ಬಂದ ಎಸಿಪಿ ಹಾಗೂ ಕಾನ್‌ಸ್ಟೆಬಲ್‌, ‘ಯಾಕೋ ತಡರಾತ್ರಿವರೆಗೂ ಹೋಟೆಲ್‌ ನಡೆಸುತ್ತಿದ್ದೀಯಾ’ ಎಂದು ಪ್ರಶ್ನಿಸಿದರು. ‘ರಾತ್ರಿ 1 ಗಂಟೆವರೆಗೂ ವಹಿವಾಟು ನಡೆಸಲು ಸರ್ಕಾರವೇ ಆದೇಶ ಹೊರಡಿಸಿದೆಯಲ್ಲವೇ’ ಎಂದು ನಾನು ಹೇಳಿದೆ. ಆಗ ಎಸಿಪಿಯು ‘ನಮಗೇ ಎದುರು ಮಾತನಾಡುತ್ತೀಯಾ’ ಎಂದು ಲಾಠಿಯಿಂದ ಕೈಗೆ ಹೊಡೆಯಲಾರಂಭಿಸಿದರು. ಆಗ ಕಾನ್‌ಸ್ಟೆಬಲ್‌ ಎಲ್ಲ ಗ್ರಾಹಕರನ್ನೂ ಹೋಟೆಲ್‌
ನಿಂದ ಹೊರಗೆ ಕಳುಹಿಸಿದರು’ ಎಂದು ರಾಜುಶೆಟ್ಟಿ ದೂರಿದ್ದಾರೆ.

‘ಹತ್ತಕ್ಕೂ ಹೆಚ್ಚು ಏಟುಗಳನ್ನು ಹೊಡೆದ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ  ಹೋಟೆಲ್ ಮುಚ್ಚಿಸಿ ಹೊರಟು ಹೋದರು. ಹಲ್ಲೆ ನಡೆದು ಆರು ದಿನ ಕಳೆದರೂ ಕೈ ಮೇಲಿನ ಬಾವು ಕಡಿಮೆ ಆಗಿಲ್ಲ. ರೌಡಿಗಳಂತೆ ಹೋಟೆಲ್‌ಗೆ ನುಗ್ಗಿ ದಾಂದಲೆ ನಡೆಸಿದ ಎಸಿಪಿ ಹಾಗೂ ಕಾನ್‌ಸ್ಟೆಬಲ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ.

‘ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗಳು ರಾತ್ರಿ 2 ಗಂಟೆವರೆಗೆ ವಹಿವಾಟು ನಡೆಸಿದರೂ ಪೊಲೀಸರು ಕೇಳುವುದಿಲ್ಲ. ಗಲ್ಲಿಗಳಲ್ಲಿ ಸಣ್ಣಪುಟ್ಟ ಹೋಟೆಲ್ ಇಟ್ಟುಕೊಂಡಿರುವ ನಮ್ಮಂಥವರ ಮೇಲೆ ದರ್ಪ ತೋರುತ್ತಾರೆ. ನಾನು ಮದ್ಯ ಮಾರಾಟ ಮಾಡುತ್ತಿರಲಿಲ್ಲ. ಹಸಿದವರಿಗೆ ಅನ್ನ ಹಾಕುತ್ತಿದ್ದೆಯಷ್ಟೇ. ಎಷ್ಟೋ ಸಲ ಆರ್.ಟಿ.ನಗರ ಠಾಣೆ ಪೊಲೀಸರು ಸಹ ರಾತ್ರಿ 12 ಗಂಟೆಗೆ ಹೋಟೆಲ್‌ಗೆ ಬಂದು ಊಟ ಮಾಡಿಕೊಂಡು ಹೋಗಿದ್ದಾರೆ. ಹೀಗಿರುವಾಗ ಎಸಿಪಿ ಏಕೆ ಹೀಗೆ ವರ್ತಿಸಿದರು ಎಂಬುದುಗೊತ್ತಾಗುತ್ತಿಲ್ಲ’ ಎಂದು ರಾಜುಶೆಟ್ಟಿ ಹೇಳಿದರು.

‘ಬೈದಿದ್ದಕ್ಕೆ ಲಾಠಿ ಬೀಸಿದೆ’

‘ದಿಣ್ಣೂರು, ಆರ್.ಟಿ.ನಗರ, ದೇವರಜೀವನಹಳ್ಳಿ ಹಾಗೂ ಕಾವಲ್‌ಬೈರಸಂದ್ರ ಪ್ರದೇಶಗಳಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದವು. ಹೀಗಾಗಿ, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ 11 ಗಂಟೆಗೇ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದೆವು. ಅಂತೆಯೇ ಹೋಟೆಲ್‌ ಮುಚ್ಚುವಂತೆ ಹೇಳಲು ಹೋದ ನಮ್ಮ ಸಿಬ್ಬಂದಿಗೆ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆಗ ಕೋಪದ ಭರದಲ್ಲಿ ಲಾಠಿ ಬೀಸಿದೆ’ ಎಂದು ಎಸಿಪಿ ಮಂಜುನಾಥ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ತನಿಖೆ ನಡೆಸಿ ವರದಿ ಕೊಡುವಂತೆ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರಿಗೆ ಸೂಚಿಸಿದ್ದೇನೆ

-ಟಿ.ಸುನೀಲ್ ಕುಮಾರ್
ಪೊಲೀಸ್ ಕಮಿಷನರ್

ಇದು ಗೂಂಡಾ ರಾಜ್ಯ ಎಂಬುದಕ್ಕೆ ಈ ದೌರ್ಜನ್ಯವೇ ನಿದರ್ಶನ. ಪೊಲೀಸರ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ಗೃಹ ಸಚಿವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ

– ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT