ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಬಳಗಕ್ಕೆ ಲಂಕಾ ಸವಾಲು

ಭಾರತ–ಶ್ರೀಲಂಕಾ ಟೆಸ್ಟ್‌ ಸರಣಿ ಆರಂಭ ಇಂದು
Last Updated 15 ನವೆಂಬರ್ 2017, 20:24 IST
ಅಕ್ಷರ ಗಾತ್ರ

ಕೋಲ್ಕತ್ತ: ಈಡನ್ ಗಾರ್ಡನ್‌ ಕ್ರೀಡಾಂಗಣದ ನೆತ್ತಿಯ ಮೇಲೆ ಬುಧವಾರ ಕಪ್ಪುಮೋಡಗಳು ಠಳಾಯಿಸುತ್ತಿದ್ದವು. ಇತ್ತ ಹಸಿರು ತುಂಬಿದ ಅಂಗಳದಲ್ಲಿ ಟೆಸ್ಟ್‌ ಕ್ರಿಕೆಟ್‌ನ ಅಗ್ರಶ್ರೇಯಾಂಕದ ವಿರಾಟ್ ಕೊಹ್ಲಿ ಬಳಗದ ಆಟಗಾರರು ಬೆವರು ಸುರಿಸಿದರು.

ಗುರುವಾರ ಇಲ್ಲಿ ಶ್ರೀಲಂಕಾ ತಂಡದ ಎದುರು ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಜಯಗಳಿಸುವ ಹುಮ್ಮಸ್ಸಿನೊಂದಿಗೆ ಅಭ್ಯಾಸ ಮಾಡಿದರು.

ಕಳೆದ ಎರಡು ತಿಂಗಳಿಂದ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಲ್ಲಿ ಮಿಂಚಿರುವ ಭಾರತ ತಂಡ ಈಗ ಮತ್ತೆ ಟೆಸ್ಟ್‌ ಕ್ರಿಕೆಟ್‌ನ ಲಯಕ್ಕೆ ಹೊಂದಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಮಾಡುವ ಛಲದಲ್ಲಿದೆ.

ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತಕ್ಕೆ ಇದು ಪೂರ್ವಾಭ್ಯಾಸದ ಸರಣಿಯೂ ಹೌದು. ಅಲ್ಲಿ ಮೂರು ಟೆಸ್ಟ್‌, ಆರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ತಂಡವು ಆಡಲಿದೆ.

ಬಲಾಬಲದಲ್ಲಿ ಭಾರತ ತಂಡದೆದುರು ಶ್ರೀಲಂಕಾ ಅಷ್ಟೇನೂ ಶಕ್ತಿಯುತವಲ್ಲ. ತವರಿನಲ್ಲಿ ಇಲ್ಲಿಯವರೆಗೆ ನಡೆದ ಸರಣಿಗಳಲ್ಲಿ  ಭಾರತ ತಂಡವು ಶ್ರೀಲಂಕಾ ಎದುರು ಒಮ್ಮೆಯೂ ಸೋತಿಲ್ಲ. ಹೋದ ಜುಲೈ– ಆಗಸ್ಟ್‌ನಲ್ಲಿ ವಿರಾಟ್‌ ಬಳಗವು ಶ್ರೀಲಂಕಾದಲ್ಲಿ ಆಡಿದ್ದ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಗೆಲುವು ದಾಖಲಿಸಿತ್ತು.

ರಣಜಿ ಟ್ರೋಫಿಯಲ್ಲಿ ಶತಕಗಳನ್ನು ದಾಖಲಿಸಿ ಮಿಂಚಿರುವ ಸೌರಾಷ್ಟ್ರದ ಚೇತೇಶ್ವರ್ ಪೂಜಾರ, ಗಾಯದಿಂದ ಚೇತರಿಸಿಕೊಂಡಿರುವ ತಮಿಳುನಾಡಿನ ಮುರಳಿ ವಿಜಯ್, ಕರ್ನಾಟಕದ ಕೆ.ಎಲ್. ರಾಹುಲ್, ಶಿಖರ್ ಧವನ್, ಬಂಗಾಳದ ವೃದ್ಧಿಮಾನ್ ಸಹಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  ಏಕದಿನ ಕ್ರಿಕೆಟ್‌ ಪರಿಣತ ರೋಹಿತ್ ಶರ್ಮಾ ಕೂಡ ತಂಡದಲ್ಲಿದ್ದಾರೆ. ಅಂತಿಮ ಹನ್ನೊಂದರ ತಂಡಕ್ಕೆ ಆಯ್ಕೆ ಮಾಡುವುದು ಸ್ವಲ್ಪ ಕಷ್ಟದ ಕೆಲಸ. ಅದರಲ್ಲೂ ಆರಂಭಿಕ ಜೋಡಿಯಾಗಿ ಮುರಳಿ ವಿಜಯ್ ಜತೆಗೆ ಶಿಖರ್ ಅಥವಾ ರಾಹುಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ನಂತರದ ಕ್ರಮಾಂಕದಲ್ಲಿ ಪೂಜಾರ ಮತ್ತು ವಿರಾಟ್ ಇದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರೋಹಿತ್, ಅಜಿಂಕ್ಯ ಮತ್ತು ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರಿದ್ದಾರೆ.

ಏಳು ಜನ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಿದರೆ, ಇಬ್ಬರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳಿಗೆ ಸ್ಥಾನ ಸಿಗಬಹುದು. ಆಲ್‌ರೌಂಡರ್ ಆಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡುವ ಸಮರ್ಥರು.

ಮಧ್ಯಮವೇಗಿ ಇಶಾಂತ್ ಶರ್ಮಾ ಬೌಲಿಂಗ್ ಸಾರಥ್ಯ ವಹಿಸುವುದು ಬಹುತೇಕ ಖಚಿತ. ಅವರೊಂದಿಗೆ ಭುವನೇಶ್ವರ್ ಕುಮಾರ್ ಅಥವಾ ಉಮೆಶ್ ಯಾದವ್ ಅವರಿಗೆ ಸ್ಥಾನ ಲಭಿಸಬಹುದು. ಒಂದೊಮ್ಮೆ ಆರು ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಿದರೆ ಮೂರನೇ ಸ್ಪಿನ್ನರ್ ಆಗಿ ಚೈನಾಮನ್ ಕುಲದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯೂ ಇದೆ.  ಆಗ ರೋಹಿತ್ ವಿಶ್ರಾಂತಿ ಪಡೆಯಬಹುದು.

ರಂಗನಾ ಮೇಲೆ ಅವಲಂಬನೆ: ಶ್ರೀಲಂಕಾ ತಂಡದಲ್ಲಿ ಅನುಭವಿಗಳ ಕೊರತೆಯಿದೆ. ನಾಯಕ ಚಾಂಡಿಮಲ್ ಅವರು ತಮ್ಮ ತಂಡದ ಹಿರಿಯ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದ್ದಾರೆ. ಏಂಜೆಲೊ ಮ್ಯಾಥ್ಯೂಸ್ ಮತ್ತು ರಂಗನಾ ಅವರು 2009ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಆಡಿದ್ದರು. ಅವರಿಬ್ಬರನ್ನೂ ಬಿಟ್ಟರೆ ಇಲ್ಲಿಯ ನೆಲದ ಪರಿಚಯ ಉಳಿದವರಿಗೆ ಇಲ್ಲ.

ದಿಟ್ಟ ಹೋರಾಟ ಮಾಡುವ ಗುಣ ಇರುವ ಯುವ ಪ್ರತಿಭೆಗಳು ತಂಡದಲ್ಲಿದ್ದಾರೆ. ಯೋಜನಾಬದ್ಧ ಆಟವಾಡಿದರೆ ಆಚ್ಚರಿಯ ಫಲಿತಾಂಶವೂ ಬರಬಹುದು.

ತಂಡಗಳು ಇಂತಿವೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್),  ಆರ್. ಅಶ್ವಿನ್, ಕುಲದೀಪ್  ಯಾದವ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.  ರವಿಶಾಸ್ತ್ರಿ (ಮುಖ್ಯ ಕೋಚ್), ಸಂಜಯ್ ಬಂಗಾರ (ಬ್ಯಾಟಿಂಗ್ ಕೋಚ್). ಭರತ್ ಅರುಣ್ (ಬೌಲಿಂಗ್ ಕೋಚ್). 

ಶ್ರೀಲಂಕಾ: ದಿನೇಶ್ ಚಾಂಡಿಮಲ್ (ನಾಯಕ), ಲಾಹಿರು ತಿರಿಮನ್ನೆ, (ಉಪನಾಯಕ), ದಿಮುತ ಕರುಣಾರತ್ನೆ, ಸದೀರಾ ಸಮರವಿಕ್ರಮ, ನಿರೋಷನ್ ಡಿಕ್ವೆಲ್ಲಾ (ವಿಕೆಟ್‌ಕೀಪರ್), ದಿಲ್ರುವಾನ ಪೆರೆರಾ, ರಂಗನಾ ಹೆರಾತ್, ಸುರಂಗಾ ಲಕ್ಮಲ್, ಲಾಹಿರು ಗಾಮಗೆ, ಧನಂಜಯ ಡಿಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಲಕ್ಷಣ್ ಸಂದಕನ್, ವಿಶ್ವ ಫರ್ನಾಂಡೊ, ದಸುನ್ ಶನಾಕಾ, ರೋಷನ್ ಸಿಲ್ವಾ. ನಿಕ್ ಬೊತಾಸ್ (ಕೋಚ್).

ಅಂಪೈರ್‌: ರಿಚರ್ಡ್‌ ಕೆಟಲ್‌ಬರೊ, ನಿಗೆಲ್‌ ಲಾಂಗ್‌.

ಟಿ.ವಿ ಅಂಪೈರ್: ಜೊ ವಿಲ್ಸನ್‌

ಮುಖ್ಯ ರೆಫರಿ: ಡೇವಿಡ್‌ ಬೂನ್

ಪಂದ್ಯ ಆರಂಭ: ಬೆಳಿಗ್ಗೆ 9

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT