ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಸಿ.ಟಿ.ವಿ ಕ್ಯಾಮೆರಾ ಹಾಕದಿದ್ದರೆ ದಂಡ

ವಿಧಾನ ಪರಿಷತ್ತಿನಲ್ಲಿ ಮಸೂದೆಗೆ ಒಪ್ಪಿಗೆ
Last Updated 16 ನವೆಂಬರ್ 2017, 6:50 IST
ಅಕ್ಷರ ಗಾತ್ರ

ಬೆಳಗಾವಿ: ನೂರಕ್ಕೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸದಿದ್ದರೆ ದಂಡ ವಿಧಿಸುವ ಕರ್ನಾಟಕ ಸಾರ್ವಜನಿಕ ಸುರಕ್ಷಾ (ಕ್ರಮಗಳ) ಮಸೂದೆಗೆ ಬುಧವಾರ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.

‘ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳಿಗೆ ಅನ್ವಯವಾಗುವ ಮಸೂದೆ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಕೈಗಾರಿಕೆ ಸಂಸ್ಥೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾ ಸಂಕೀರ್ಣಗಳು, ರೈಲ್ವೆ, ಬಸ್‌ ನಿಲ್ದಾಣಗಳು ಸೇರಿವೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿವರಿಸಿದರು.

‘ಪ್ರಮಾಣಪತ್ರ ಸಲ್ಲಿಸದವರಿಗೆ ಮೊದಲ ಬಾರಿಗೆ ₹ 2,000 ಹಾಗೂ ಎರಡನೇ ಬಾರಿಗೆ ₹4,000 ದಂಡ, ಕರ್ತವ್ಯ ಲೋಪಕ್ಕೆ ಮೊದಲ ತಿಂಗಳಿಗೆ ₹5,000 ಹಾಗೂ ಎರಡನೇ ತಿಂಗಳಿಗೆ 10,000 ರಾಜಿ ಶುಲ್ಕ ವಿಧಿಸಲಾಗುವುದು. ವಿಫಲತೆ ಬಗ್ಗೆ ನೀಡುವ ವಿವರಣೆ ತೃಪ್ತಿಕರವಾಗಿರದಿದ್ದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಸಂಸ್ಥೆಗಳಿಗೆ ಬೀಗ ಹಾಕಲಾಗುವುದು’ ಎಂದು ತಿಳಿಸಿದರು. ‘ಪೂರ್ವಸೂಚನೆ ಇಲ್ಲದೇ ಯಾವ ಸಮಯದಲ್ಲಿ ಬೇಕಾದರೂ ಸಂಸ್ಥೆಗಳಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವ ಅಧಿಕಾರ ಪೊಲೀಸ್‌ ಅಧಿಕಾರಿಗಳಿಗೆ ಇದೆ’ ಎಂದರು.

’ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ಕ್ಯಾಮೆರಾ ದೃಶ್ಯಾವಳಿಗಳನ್ನು ಒಂದು ತಿಂಗಳವರೆಗೆ ಸಂಗ್ರಹಿಸಿಡಬೇಕು. ಸುರಕ್ಷತಾ ಕ್ರಮಗಳು ಜಾರಿಯಲ್ಲಿರುವ ಬಗ್ಗೆ ಮೂರು ತಿಂಗಳಿಗೊಮ್ಮೆ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ಅವರು ಹೇಳಿದರು.

‘ಈ ಮಸೂದೆ ವಿವಿಧ ಬಗೆಯ ದೌರ್ಜನ್ಯ ತಡೆಯಲು ಸಹಕಾರಿಯಾಗಿದೆ. ವಸತಿ ನಿಲಯಗಳು ಹಾಗೂ ಸಂತೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಬೇಕು. ದೃಶ್ಯಾವಳಿಗಳನ್ನು ಒಂದು ತಿಂಗಳಿಗೆ ಬದಲಾಗಿ ಒಂದರಿಂದ ಮೂರು ವರ್ಷ ಇಡುವಂತಾಗಬೇಕು. ದಂಡ ಪ್ರಮಾಣವನ್ನು ₹ 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಕಾಂಗ್ರೆಸ್ಸಿನ ಸದಸ್ಯ ವಿ.ಎಸ್‌. ಉಗ್ರಪ್ಪ ಸಲಹೆ ನೀಡಿದರು.

‘ಶಿಕ್ಷಣ, ಧಾರ್ಮಿಕ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ಆಯಾ ಇಲಾಖೆಗಳಿವೆ. ಅವುಗಳಿಗೆ ಪರಿಶೀಲನೆ ಅಧಿಕಾರ ನೀಡಬೇಕು. ಪೊಲೀಸರಿಗೆ ನೀಡಿದರೆ ಅದು ಎಲ್ಲಿ ಹೋಗಿ ನಿಲ್ಲುತ್ತೆ ಎಂದು ಊಹಿಸಲೂ ಕಷ್ಟ’ ಎಂದು ಜೆಡಿಎಸ್‌ನ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಆತಂಕ ವ್ಯಕ್ತಪಡಿಸಿದರು.

’ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಡುವೆ ತಾರತಮ್ಯ ಮಾಡಬೇಡಿ. ಸರ್ಕಾರದ ವತಿಯಿಂದಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT