ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಪಾಲಾಗುತ್ತಿವೆ ಲೋಹದ ಬಾಗಿಲುಗಳು

ಬಹಮನಿ, ನಿಜಾಮರ ಸ್ಮಾರಕಗಳ ರಕ್ಷಣೆಗೆ ಜಿಲ್ಲಾಡಳಿತ ನಿರಾಸಕ್ತಿ, ಅಭಿವೃದ್ಧಿ ಕೈಗೊಳ್ಳಲು ಸ್ಥಳೀಯರ ಮನವಿ
Last Updated 16 ನವೆಂಬರ್ 2017, 8:15 IST
ಅಕ್ಷರ ಗಾತ್ರ

ಬೀದರ್: ಬಹಮನಿ ಸುಲ್ತಾನರು ಹಾಗೂ ಮೊಘಲರ ಆಡಳಿತದಲ್ಲಿ ನಿರ್ಮಿಸಿರುವ ಐತಿಹಾಸಿಕ ಮಹಾದ್ವಾರಗಳು ಜಿಲ್ಲಾ ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬೀದರ್‌ ಕೋಟೆ ಹಾಗೂ ಓಲ್ಡ್‌ಸಿಟಿಯಲ್ಲಿ ವಿಶಿಷ್ಟ ವಿನ್ಯಾಸದ ಐದು ದರ್ವಾಜಾಗಳು ಇವೆ. ಅವುಗಳಿಗೆ ಅಳವಡಿಸಿರುವ ಲೋಹದ ಪಟ್ಟಿಗಳಿರುವ ಬಾಗಿಲುಗಳು ನೆಲದಲ್ಲಿ ಹೂತು ಮಣ್ಣು ಪಾಲಾಗುತ್ತಿವೆ.

ಬಹಮನಿ ಸುಲ್ತಾನರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಕೋಟೆಯ ಪ್ರವೇಶದಲ್ಲಿರುವ ಶಾರ್ಜಾ ದರ್ವಾಜಾ, ಮಂಗಲಪೇಟ್‌ ದರ್ವಾಜಾ, ಫತೇ ದರ್ವಾಜಾ ಹಾಗೂ ಶಹಾಗಂಜ್‌ ದರ್ವಾಜಾ ನಿಜಾಮರ ಆಡಳಿತದಲ್ಲಿ ನವೀಕರಣಗೊಂಡಿವೆ.

ಅಂದಾಜು 30 ಅಡಿ ಎತ್ತರದ ದ್ವಾರಗಳಿಗೆ ಸಾಗವಾನಿ, ಸಿಸಂ ಹಾಗೂ ಲೋಹದ ಪಟ್ಟಿಗಳನ್ನು ಬಳಸಲಾಗಿದೆ. ಬಾಗಿಲ ಹಿಂಬದಿಯ ಚಿಲಕ ಹಾಗೂ ಸರಪಳಿಗಳು ಇಂದಿಗೂ ಬಲಿಷ್ಠವಾಗಿವೆ. ದರ್ವಾಜಾಗಳ ಮೇಲೆ ಅರಬ್‌ ಭಾಷೆಯಲ್ಲಿ ಬರೆಯಲಾದ ಲೋಹದ ಫಲಕಗಳಿವೆ. ಕೆಲ ಕಡೆ ಕಳ್ಳರು ಲೋಹದ ಪಟ್ಟಿ ಕದಿಯಲು ಪ್ರಯತ್ನಿಸಿರುವ ಕಾರಣ ದ್ವಾರಗಳಿಗೆ ಹಾನಿಯಾಗಿದೆ.

‘ಬಹಮನಿ ಸುಲ್ತಾನರ ಆಡಳಿತವು ಕೊಂಕಣ ಪ್ರದೇಶದವರೆಗೂ ವಿಸ್ತರಿಸಿಕೊಂಡಿತ್ತು. ಗುಣಮಟ್ಟದ ಲೋಹದ ಬಳಕೆಯ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು.

ಹೀಗಾಗಿ ಕೊಂಕಣ ಪ್ರದೇಶದಿಂದಲೇ ಲೋಹವನ್ನು ತರಿಸಿ ಬಲಿಷ್ಠ ಬಾಗಿಲುಗಳನ್ನು ನಿರ್ಮಿಸಿರಬಹುದು. ಔರಂಗಜೇಬ್‌, 40 ದಿನಗಳ ಕಾಲ ಬೀದರ್‌ ಕೋಟೆಗೆ ಮುತ್ತಿಗೆ ಹಾಕಿದರೂ ಸೈನಿಕರಿಗೆ ಕೋಟೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ’ ಎಂದು ಇತಿಹಾಸ ತಜ್ಞ ಸಮದ್‌ ಭಾರತಿ ಹೇಳುತ್ತಾರೆ.

ನಿಜಾಮರು ಬೀದರ್‌ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಂತರ ದರ್ವಾಜಾಗಳಲ್ಲಿ ಕೆಲವು ಬದಲಾವಣೆ ಮಾಡಿದರು. ಕೋಟೆ ಪ್ರವೇಶದಲ್ಲಿರುವ ಶಾರ್ಜಾ  ದರ್ವಾಜಾದಲ್ಲಿ ಬದಲಾದ ವಿನ್ಯಾಸ ಕಾಣಸಿಗುತ್ತದೆ. ದರ್ವಾಜಾಗಳಲ್ಲಿ ಎರಡೂ ಬದಿಗೆ ಕಮಾನಿನ ಕಾವಲುಗಾರರ ಕೊಠಡಿ, ವೀಕ್ಷಣಾ ಗೋಪುರ, ಪ್ರವೇಶದಲ್ಲಿ ಇಂಗ್ಲಿಷ್‌ನ ‘S’ ಮಾದರಿಯ ರಸ್ತೆ ನಿರ್ಮಾಣ ಇವು ಬದಲಾವಣೆಯ ಮೇಲೆ ಬೆಳಕು ಚೆಲ್ಲುತ್ತವೆ.

ಯುದ್ಧದ ವೇಳೆ ಕೋಟೆ ಮಹಾದ್ವಾರಗಳನ್ನು ತೆಗೆದು ಸೈನಿಕರಿಗೆ ಒಳಗೆ ನುಗ್ಗಲು ಸಾಧ್ಯವಾಗದಿದ್ದಾಗ ಗಾಲಿಗಾಡಿಯ ಮೇಲೆ ಮರದ ದಿಮ್ಮೆಗಳನ್ನು ಇಟ್ಟು ಓಡಿಸಿಕೊಂಡು ಬಂದು ಬಾಗಿಲಿಗೆ ಡಿಕ್ಕಿ ಹೊಡಿಸಿ ಬಾಗಿಲು ಮುರಿಯುತ್ತಿದ್ದರು. ಹೀಗೆ ಮಾಡಲು ಸಾಧ್ಯವಾಗದಂತೆ ‘S’ ಆಕಾರದಲ್ಲಿ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಆನೆಗಳಿಂದ ಬಾಗಿಲುಗಳನ್ನು ಮುರಿಯದಂತೆ ಬಾಗಿಲಿಗೆ ಲೋಹದ ಚೂಪಾದ ಗುಂಡಿಗಳನ್ನು ಬಡಿಯಲಾಗಿದೆ.

ಐತಿಹಾಸಿಕ ಮಹತ್ವ ಅರಿತಿದ್ದ ಈ ಹಿಂದಿನ ಜಿಲ್ಲಾಧಿಕಾರಿ ಅನುರಾಗ ತಿವಾರಿ ಅವರು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು, ಇತಿಹಾಸ ತಜ್ಞರು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದರ್ವಾಜಾಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಅವರು ಬೆಂಗಳೂರಿಗೆ ವರ್ಗಾವಣೆಯಾದ ನಂತರ ಯೋಜನೆಯೂ ಮೂಲೆ ಗುಂಪಾಯಿತು.

‘ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಸ್ತೆ ನಿರ್ಮಾಣ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಸ್ಮಾರಕಗಳಿಗೆ ಹೆಚ್ಚು ಧಕ್ಕೆ ಆಗಿದೆ. ಗುತ್ತಿಗೆದಾರರು ರಸ್ತೆಗಳನ್ನು ಅಗೆದು ಹೊಸ ರಸ್ತೆ ನಿರ್ಮಿಸಬೇಕು.

ಆದರೆ, ಹಾಳಾದ ರಸ್ತೆ ಮೇಲೆಯೇ ಕಲ್ಲು ಸುರಿದು ರಸ್ತೆ ನಿರ್ಮಿಸಿದ್ದಾರೆ. ಹೀಗಾಗಿ ದರ್ವಾಜಾ ಬಾಗಿಲುಗಳು ನೆಲದಲ್ಲಿ ಹೂತು ಹೋಗಿವೆ. ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಇದ್ದೂ ಇಲ್ಲದ ಲೆಕ್ಕದಲ್ಲಿ ಇದ್ದಾರೆ. ಸ್ಮಾರಕಗಳು ಹಾಳಾಗುತ್ತಿವೆ’ ಎಂದು ನಗರಸಭೆಯ ಸದಸ್ಯ ನಬಿ ಖುರೇಶಿ ಬೇಸರ ವ್ಯಕ್ತಪಡಿಸುತ್ತಾರೆ.

ಇದರ ಬಗ್ಗೆ ಜಿಲ್ಲಾ ಆಡಳಿತ ಗಮನಹರಿಸಬೇಕು ಎಂದು ಅವರು ಕೋರುತ್ತಾರೆ.

***

ದರ್ವಾಜಾದ ಶಾಸನಗಳಲ್ಲಿ ಏನಿದೆ?

‘ತಲಘಾಟ ದರ್ವಾಜಾ, ಫತ್ಹೇ ದರ್ವಾಜಾ ಹಾಗೂ ಶಹಾಗಂಜ್ ದರ್ವಾಜಾಗಳು ಔರಂಗಜೇಬ್‌ನ ಆಡಳಿತಕ್ಕಿಂತ ಮೊದಲೇ ನಿರ್ಮಾಣವಾಗಿವೆ. ಕ್ರಿ.ಶ 1664 ರಿಂದ 1671ರ ಅವಧಿಯಲ್ಲಿ ಎರಡು ತಿಂಗಳ ಅಂತರದಲ್ಲಿ ನವೀಕರಣಗೊಂಡಿವೆ’ ಎಂದು ಇತಿಹಾಸ ತಜ್ಞ ಸಮದ್ ಭಾರತಿ ಹೇಳುತ್ತಾರೆ.

‘ಔರಂಗಜೇಬ್ ಆಡಳಿತ ವಹಿಸಿಕೊಂಡ 15 ವರ್ಷಗಳ ನಂತರ ಮೊಘಲರ ಸುಬೇದಾರ್ ಮುಕ್ತಾರಖಾನ್ ಸಭ್ಝುವಾರಿ ದರ್ವಾಜಾ ನವೀಕರಣಗೊಳಿಸಿದ ಬಗೆಗೆ ಲೋಹದ ಶಾಸನದ ಮೇಲೆ ಉಲ್ಲೇಖ ಇದೆ. ಶಹಾಗಂಜ್ ದರ್ವಾಜಾದ ಮೂಲ ಹೆಸರು ಮಕ್ಕಿ ದರ್ವಾಜಾ ಎಂದಿದೆ. ಹೆಸರು ಏಕೆ ಬದಲಾಯಿತು ತಿಳಿದಿಲ್ಲ’ ಎನ್ನುತ್ತಾರೆ.

‘ಅವ್ವಲ್ ತಾಲ್ಲೂಕುದಾರ್ (ಜಿಲ್ಲಾಧಿಕಾರಿ) ಹುಸಾಮುದ್ದೀನ್ ಖಾನ್ ಅಧೀನದ ನಸೀರುದ್ದೌವಲಾ 1838 ರಿಂದ 1859 ರ ಅವಧಿಯಲ್ಲಿ ಮೆಹಮೂದ್ ದರ್ವಾಜಾ ಕಟ್ಟಿಸಿದ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಮಂಗಲಪೇಟ್ ದರ್ವಾಜಾ ಮೇಲೆ ಇರುವ ಶಾಸನದ ಮೇಲೆ ಮೆಹಮೂದ್ ದರ್ವಾಜಾ ಎಂದು ಸ್ಪಷ್ಟವಾಗಿ ಬರೆದದ್ದು ಇದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಮಂಗಲ ಪೇಟ್ ದರ್ವಾಜಾ ಎಂದು ಏಕೆ ಫಲಕ ಹಾಕಿದ್ದಾರೆ ಗೊತ್ತಿಲ್ಲ’ ಎಂದು ವಿವರಿಸುತ್ತಾರೆ.

***
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಯೋಜನೆಯ ಮಾದರಿಯಲ್ಲಿ ದರ್ವಾಜಾಗಳ ಸಂರಕ್ಷಣೆ ಮಾಡಬೇಕು.
-ಡಾ. ಬಸವರಾಜ ಬಲ್ಲೂರ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT