ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬಗ್ಗೆ ಕಿಚ್ಚಿತ್ತು ಸರ್ಕಾರಗಳಿಗೆ ಕಣ್ಣಿಲ್ಲ

ಜೆಡಿಎಸ್‌ ಯುವ ಸಮಾವೇಶ ಹಾಗೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಪಿ.ಜಿ.ಆರ್.ಸಿಂಧ್ಯಾ
Last Updated 16 ನವೆಂಬರ್ 2017, 8:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಚೇದಿನ್‌, ಮನ್‌ ಕಿ ಬಾತ್‌ ಹೆಸರು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರೈತರ ಬಗ್ಗೆ ಸರ್ಕಾರಗಳಿಗೆ ಕಣ್ಣಿಲ್ಲ’ ಎಂದು ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯಾ ಆರೋಪಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್‌ ಯುವ ಸಮಾವೇಶ ಹಾಗೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಮೋದಿ ಅವರಿಗೆ ಅಚ್ಚೇದಿನ್‌ ಬಂದಿದೆಯೇ ಹೊರತು, ಭಾರತ ದೇಶಕ್ಕೆ ಅಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವೊಬ್ಬ ನಾಯಕನು ರೈತರ ಬಗ್ಗೆ ಧ್ವನಿ ಎತ್ತುತ್ತಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಿಜೆಪಿ ವಿಷನ್‌ 150ಎಂದು ಹೇಳಿಕೊಂಡು ಮುಂಬರುವ ಚುನಾವಣೆಯಲ್ಲಿ ನಾವೇ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೊರಟಿರುವ ಬಿಜೆಪಿಯ ಕೆಲವು ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ ಬಂದವರೂ ಪ್ರಾಮಾಣಿಕವಾಗಿ ದೇಶದ ಜನರಿಗೆ ಉತ್ತರ ಕೊಡಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯೋಜನೆಗಳ ಹೆಸರೇಳಿ ಹಣ ಲೂಟಿ ಮಾಡುತ್ತಿದ್ದಾರೆ. ಯುವಕರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗುತ್ತಿದ್ದಾರೆ. ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಸಿದ್ದಾರೆ ಎಂಬುದಕ್ಕೆ ಜನರಿಗೆ ಉತ್ತರ ನೀಡಬೇಕು’ ಎಂದರು.

‘ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿ ತರಲು ಮುಂದಾಗಿರುವ ಆರೋಗ್ಯ ಸಚಿವ ರಮೇಶ್‌ ಅವರು ಈ ಹಿಂದೆ ಕಾನೂನು ಬದ್ಧ ರೀತಿಯಲ್ಲಿ ಜಾರಿ ಮಾಡಬಹುದಿತ್ತು. ರೋಗಿಗೆ ಪ್ರಾಣ ನೀಡುವ ವೈದ್ಯರಿಗೆ 5 ವರ್ಷ ಜೈಲು ಶಿಕ್ಷೆ ಏಕೆ? ಸರ್ಕಾರದ ಶಕ್ತಿ ದಿನೇ ದಿನೇ ಕುಸಿಯುತ್ತಿದೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಕುಮಾರಸ್ವಾಮಿ ಅವರು 20 ತಿಂಗಳ ಆಡಳಿತ ಅವಧಿಯನ್ನು ಇಡೀ ದೇಶವೇ ಮೆಚ್ಚಿದೆ. ರೈತರು, ದಲಿತರು, ಬಡವರು, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲಾರೂ ಶ್ರಮಿಸಬೇಕು’ ಎಂದು ತಿಳಿಸಿದರು.

‘ಇತ್ತೀಚೆಗೆ ಸಿದ್ದರಾಮಯ್ಯ ಅವರು ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ₹ 50 ಸಾವಿರ ಸಾಲ ಮನ್ನಾವೂ ಯಾರೊಬ್ಬರಿಗೂ ತಲುಪಿಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾದಲ್ಲಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲದೇ ಎಲ್ಲ ರೀತಿಯ ಸಾಲ ಮನ್ನಾ ಮಾಡಲಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.

ಮುಖಂಡ ಕೆ.ಪಿ ಬಚ್ಚೇಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಲು ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ತಿಳಿಸಿದರು.

‘ಜಿಲ್ಲೆಯನ್ನು ಮಾಡಿದ ಕುಮಾರಸ್ವಾಮಿ ಜಿಲ್ಲೆಗೆ ಅನೇಕ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್‌ ಅಧಿಕಾರಕ್ಕೆ ತರಲು ಪಣ ತೊಡಬೇಕು’ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಂಜಿನಪ್ಪ, ರಾಜಣ್ಣ, ರಾಜ್ಯ ಕಾರ್ಯದರ್ಶಿ ನಾರಾಯಣಗೌಡ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಎನ್‌.ನಾರಾಯಣಸ್ವಾಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ.ವಿ.ರಾಜಶೇಖರ್‌, ಜಿಲ್ಲಾಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅದ್ಯಕ್ಷ ಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್‌, ಮುನೇಗೌಡ ಮುಖಂಡರಾದ ಶಂಕರೇಗೌಡ, ಅವಲಕೊಂಡಪ್ಪ, ಗೋವಿಂದರೆಡ್ಡಿ, ಸುಬ್ರಮಣ್ಮಿ, ಮಟಮಪ್ಪ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT