ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರದಿಂದಲೂ ಬಗೆಹರಿಯದ ‘ಪಟ್ಟ’ದ ಬಿಕ್ಕಟ್ಟು

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ಮೀಸಲಾತಿ ಬದಲಾವಣೆ: ಕಾನೂನು ಸಮರದಲ್ಲೇ ಕಳೆದವು 14 ತಿಂಗಳು!
Last Updated 16 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ‘ಪ್ರತಿಷ್ಠೆ’ಯ ವಿಚಾರವಾಗಿ ಮಾರ್ಪಟ್ಟಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆಗೆ ಸಂಬಂಧಿಸಿದ ಕಾನೂನು ಸಮರ 14 ತಿಂಗಳಾದರೂ ಅಂತ್ಯಗೊಂಡಿಲ್ಲ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದ ಜೆಡಿಎಸ್‌ ಸದಸ್ಯೆ ಕಾಂಗ್ರೆಸ್ ಸೇರ್ಪಡೆಗೊಂಡರೂ ‘ಪಟ್ಟ’ದ ಬಿಕ್ಕಟ್ಟು ಮಾತ್ರ ಈವರೆಗೆ ಬಗೆಹರಿದಿಲ್ಲ.

ಕಳೆದ ವರ್ಷದ ಆಗಸ್ಟ್‌ನಿಂದ ನ್ಯಾಯಾಲಯದ ‘ಕಣ’ದಲ್ಲಿ ಆರಂಭಗೊಂಡ ಉಭಯ ಪಕ್ಷಗಳ ಈ ‘ಕುಸ್ತಿ’ಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಆಗಾಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ ಬಂದಿತ್ತು. ಹೈಕೋರ್ಟ್‌ನಲ್ಲಿ ಬಗೆಹರಿಯದ ಈ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದೆ.

ನಗರಸಭೆಯಲ್ಲಿದ್ದ ಒಂಬತ್ತು ಜೆಡಿಎಸ್‌ ಸದಸ್ಯರ ಪೈಕಿ, ಈ ಕಾನೂನು ಸಮರ ಸಾರಿದ್ದ 22ನೇ ವಾರ್ಡ್‌ ಸದಸ್ಯೆ ಶ್ವೇತಾ ಮಂಜುನಾಥ್ ಅವರು ಸೇರಿದಂತೆ ಆರು ಸದಸ್ಯರು ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್ ‘ಕೈ’ ಹಿಡಿದಾಗ ಈ ಪ್ರಕರಣ ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎನ್ನುವ ಮಾತುಗಳು ನಗರಸಭೆಯ ಆವರಣದಲ್ಲಿ ಹರಿದಾಡಿದವು. ಇನ್ನೇನು ಆಡಳಿತಾಧಿಕಾರಿಯ ಅಧಿಕಾರ ಕೊನೆಗೊಂಡು, ಹೊಸ ಅಧ್ಯಕ್ಷರು ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಗರಿಗೆದರಿತ್ತು.

ಜೆಡಿಎಸ್‌ ತೊರೆದು ‘ಕೈ’ ಹಿಡಿದುಕೊಂಡರೂ ಶ್ವೇತಾ ಮಂಜುನಾಥ್‌ ಅವರು ಮಾತ್ರ ತಮ್ಮ ಕಾನೂನು ಸಮರ ಮಾತ್ರ ಕೈಬಿಟ್ಟಿಲ್ಲ. ನಾವು ಅಭಿವೃದ್ಧಿ ವಿಚಾರವಾಗಿ ಪಕ್ಷ ಬದಲಿಸಿದ್ದೇವೆ ವಿನಾ ಪಕ್ಷಾಂತರದ ಚರ್ಚೆ ವೇಳೆ ಅಧ್ಯಕ್ಷರ ಹುದ್ದೆಯ ವಿವಾದದ ವಿಚಾರ ಪ್ರಸ್ತಾಪವೇ ಆಗಿಲ್ಲ. ಅದೇ ಬೇರೆ, ಇದೇ ಬೇರೆ ಎನ್ನುತ್ತಿದ್ದಂತೆ ಅನೇಕರ ರಾಜಕೀಯ ‘ಲೆಕ್ಕಾಚಾರ’ ತಲೆಕೆಳಗಾಗಿದೆ.

ತಮ್ಮ ಪ್ರಕರಣದ ವಕಾಲತ್ತು ವಹಿಸುವ ವಕೀಲರಿಗಾಗಿ ಅಧ್ಯಕ್ಷ ಪಟ್ಟದ ಆಸೆಯಿಂದ ಸಾಕಷ್ಟು ಖರ್ಚು ಮಾಡಿ, ನ್ಯಾಯಾಲಯಗಳಿಗೆ ಅಲೆದಾಡಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ 7ನೇ ವಾರ್ಡ್ ಸದಸ್ಯ ಎಂ.ಮುನಿಕೃಷ್ಣಪ್ಪ ಮತ್ತು ಶ್ವೇತಾ ಮಂಜುನಾಥ್‌ ಅವರು ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ, ಉಭಯತ್ರಯರೊಂದಿಗೆ ಚರ್ಚಿಸಿ ‘ರಾಜಿಸೂತ್ರ’ವೊಂದನ್ನು ಕಂಡುಕೊಳ್ಳುವ ಜವಾಬ್ದಾರಿ ಶಾಸಕ ಡಾ.ಕೆ.ಸುಧಾಕರ್ ಹೆಗಲೇರಿದೆ.

ಸುಧಾಕರ್ ಅವರು ಇತ್ತೀಚೆಗೆ ಬೆಂಗಳೂರಿನ ತಮ್ಮ ನಿವಾಸಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹಿರಿಯ ಸದಸ್ಯ ಪಿ.ಶ್ರೀನಿವಾಸ್, ಶ್ವೇತಾ ಅವರ ಪತಿ ಮಂಜುನಾಥ್, ನಗರಸಭೆ ಸದಸ್ಯರಾದ ರಫೀಕ್ ಮತ್ತು ಮುನಿಕೃಷ್ಣ ಅವರನ್ನು ಕರೆಯಿಸಿಕೊಂಡು ಈ ವಿಚಾರವಾಗಿ ನಡೆಸಿದ ‘ಸಂಧಾನ’ದ ಪ್ರಯತ್ನ ಫಲಪ್ರದವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಭೇಟಿಯ ಬೆನ್ನಲ್ಲೇ ದೆಹಲಿಗೆ ಹೋಗಿದ್ದ ಪಿ.ಶ್ರೀನಿವಾಸ್, ಶ್ವೇತಾ ಅವರ ಪತಿ ಮಂಜುನಾಥ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ತಮ್ಮ ಪರ ವಕೀಲರಿಗೆ ಕಾನೂನಿನ ಹಿಡಿತ ಬಿಗಿಗೊಳಿಸಲು ಬೇಕಾದ ಕೆಲ ಅಗತ್ಯ ದಾಖಲೆಗಳನ್ನು ಒದಗಿಸಿಕೊಟ್ಟು ಬಂದಿದ್ದಾರೆ.

ಇನ್ನೊಂದೆಡೆ ಶ್ವೇತಾ ಪರ ವಕೀಲರು, ‘ಒಂದೆರಡು ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿ ಅಥವಾ ಸರ್ಕಾರಕ್ಕೆ ಚುನಾವಣಾ ಮಾರ್ಗಸೂಚಿಯಂತೆ ಯಾವುದು ಸರಿಯೋ ಅದರಂತೆ ಚುನಾವಣೆ ನಡೆಸಲು ಕ್ರಮಕೈಗೊಳ್ಳಲು ಸೂಚಿಸಿ’ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠಕ್ಕೆ ಮನವಿ ಮಾಡಿಕೊಂಡಿದ್ದಾರೆ. ನವೆಂಬರ್ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬರಲಿದೆ.

ಅಷ್ಟರೊಳಗೆ ಎರಡನೇ ಸುತ್ತಿನ ಮಾತುಕತೆ ನಡೆಸಿ ಒಂದು ‘ಒಪ್ಪಂದ’ಕ್ಕೆ ಇಬ್ಬರನ್ನು ಒಪ್ಪಿಸಲು ಸುಧಾಕರ್ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮುನಿಕೃಷ್ಣಪ್ಪ ಮತ್ತು ಶ್ವೇತಾ ಈ ಇಬ್ಬರ ಪೈಕಿ ಶೀಘ್ರದಲ್ಲಿಯೇ ಯಾರು ಅಧ್ಯಕ್ಷರ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ ಎನ್ನುವುದು ಸದ್ಯದ ಕುತೂಹಲ.

ಅಧ್ಯಕ್ಷ ಹುದ್ದೆಯ 30 ತಿಂಗಳ ಅವಧಿಯ ಪೈಕಿ ಈಗಾಗಲೇ ಕಾನೂನು ಸಮರದಲ್ಲಿಯೇ 14 ತಿಂಗಳು ಕಳೆದಿರುವುದರಿಂದ ನೂತನ ಅಧ್ಯಕ್ಷರಾದವರಿಗೆ ಬರೀ 16 ತಿಂಗಳ ಅಧಿಕಾರ ‘ಭಾಗ್ಯ’ ಧಕ್ಕಲಿದೆ. ಸದ್ಯ ನಗರಸಭೆಯಲ್ಲಿರುವ ಆಡಳಿತ ಮಂಡಳಿಯ ಅಧಿಕಾರಾವಧಿ 2019ರ ಮಾರ್ಚ್ 18ಕ್ಕೆ ಕೊನೆಗೊಳ್ಳಲಿದೆ.

***

ಏನಿದು ಪ್ರಕರಣ?

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಎರಡನೆಯ ಅವಧಿಯ ಚುನಾವಣೆಗಾಗಿ 2016ರ ಫೆಬ್ರುವರಿ 24 ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಮೀಸಲಾಗಿತ್ತು. ಇದರಿಂದಾಗಿ ನಗರಸಭೆಯ 31 ಸದಸ್ಯರ ಪೈಕಿ ಏಕೈಕ ಪರಿಶಿಷ್ಟ ಮಹಿಳೆಯಾಗಿರುವ ಶ್ವೇತಾ ಮಂಜುನಾಥ್‌ ಅವರಿಗೆ ಯಾವುದೇ ಸ್ಪರ್ಧೆ ಇಲ್ಲದೇ ಅಧ್ಯಕ್ಷ ಹುದ್ದೆ ಒಲಿಯಲಿದೆ ಎನ್ನುವ ಸಂತಸದಲ್ಲಿ ಜೆಡಿಎಸ್ ಸದಸ್ಯರಿದ್ದರು.

ಆದರೆ ಸರ್ಕಾರ ಮಾರ್ಚ್‌ 4 ರಂದು ಎರಡನೇ ಬಾರಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಸಾಮಾನ್ಯ ಎಂದು ಬದಲಾಯಿಸಿದ್ದು, ಜೆಡಿಎಸ್‌ ಸದಸ್ಯರನ್ನು ಕೆರಳಿಸಿತ್ತು. ತಮ್ಮ ಕನಸು ಭಗ್ನಗೊಳ್ಳುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾದ ಜೆಡಿಎಸ್‌ ಸದಸ್ಯರು 2016ರ ಆಗಸ್ಟ್‌ 8ರಂದು ಮೀಸಲಾತಿ ಬದಲಾವಣೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದಿನ ಉರುಳುತ್ತಿದ್ದಂತೆ ತಡೆಯಾಜ್ಞೆ, ಅರ್ಜಿ ವಜಾ, ಮೇಲ್ಮನವಿ ಎನ್ನುತ್ತಲೇ ಸಾಗಿದ ಪ್ರಕರಣ ಕಾಲಾಂತರದಲ್ಲಿ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತು.

***

ಯುದ್ಧ ಸಾರಿದ್ದೇವೆ. ಸೋಲೋ, ಗೆಲುವೋ ಹೋರಾಡುತ್ತೇವೆ. ಪ್ರಕರಣ ಹಿಂತೆಗೆದುಕೊಂಡರೆ ನಮ್ಮ ನಿಲುವಿನ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ.
ಪಿ.ಶ್ರೀನಿವಾಸ್, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT