ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಮೆಟ್ಟಿಲುಗಳ ಒಡೆಯನ ದೇಗುಲಕ್ಕೆ 18ರ ಸಂಭ್ರಮ

ಕೋಟೆನಾಡಿನ ಅಯ್ಯಪ್ಪಸ್ವಾಮಿ ಭಕ್ತರ ಧಾರ್ಮಿಕ ಕೇಂದ್ರ: 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ
Last Updated 16 ನವೆಂಬರ್ 2017, 9:16 IST
ಅಕ್ಷರ ಗಾತ್ರ

ಚಿತ್ರದುರ್ಗ: 18 ಮೆಟ್ಟಿಲುಗಳ ಒಡೆಯ ಎಂದೇ ಭಕ್ತರಿಂದ ಕರೆಸಿಕೊಳ್ಳುವ ಇಲ್ಲಿನ ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಈಗ 18ರ ಸಂಭ್ರಮ.

ರಾಜ್ಯದ ಅನೇಕ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಅಯ್ಯಪ್ಪಸ್ವಾಮಿಯ ದೇಗುಲ ನಿರ್ಮಾಣವಾದಂತೆ ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗದಲ್ಲೂ ನಿರ್ಮಿಸಲು ಅನೇಕ ಭಕ್ತರು 60 ವರ್ಷಗಳ ಹಿಂದೆಯೇ ಪ್ರಯತ್ನ ಪಟ್ಟಿದ್ದಾರೆ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಗುರು ಸ್ವಾಮಿಗಳಾಗಿದ್ದ ಶಿವಗಂಗಾಚಾರ್ಯ, ನಾರಾಯಣ, ಅವರ ನಂತರ ರುದ್ರಸ್ವಾಮಿ ಹೀಗೆ ಅನೇಕ ಮಂದಿ ಸತತ 20 ವರ್ಷ ಶ್ರಮಿಸಿದ್ದಾರೆ. ಕೊನೆಗೆ 1999ರಲ್ಲಿ ದೇಗುಲ ನಿರ್ಮಾಣವಾಯಿತು. ಈಗಿರುವ ಅಯ್ಯಪ್ಪ ಸ್ವಾಮಿ ದೇಗುಲದ ಆವರಣದ ಪ್ರದೇಶದಲ್ಲಿ 350 ವರ್ಷಗಳ ಹಿಂದಿನಿಂದಲೂ ಭೀಮಶಂಕರ ಮತ್ತು ಭೀಮಾಂಜನೇಯ ಸ್ವಾಮಿ ದೇಗುಲಗಳು ಇವೆ. ಈ ಕ್ಷೇತ್ರದಲ್ಲಿ ಶ್ರೀರಾಮತೀರ್ಥ ಸ್ವಾಮೀಜಿ ಬಂದ ನಂತರ ಅಯ್ಯಪ್ಪಸ್ವಾಮಿಯ ದೇಗುಲ ಮತ್ತು ಜೀರ್ಣೋದ್ಧಾರಕ್ಕಾಗಿ ಜಾಗವನ್ನು ದಾನವಾಗಿ ಕೊಟ್ಟರು ಎಂದು ಸ್ಮರಿಸುತ್ತಾರೆ ಅವರು.

ಕೇರಳದ ಶಬರಿಮಲೆ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದ ಭಕ್ತರಿಗಾಗಿ ಇಲ್ಲಿಯೇ ಕೇರಳದ ಮಾದರಿಯಲ್ಲಿ ದೇಗುಲ ನಿರ್ಮಿಸಬೇಕು ಎಂಬ ಚಿಂತನೆ ಮೂಡಿತು ಎಂದು ಈಗಿನ ಗುರುಸ್ವಾಮಿ ಸತೀಶ್ ಶರ್ಮ ತಿಳಿಸಿದರು.

‘ಕೇರಳದ ಶಬರಿಮಲೆಗೆ ಹೋಗಿ ಅಲ್ಲಿನ ಒಬ್ಬ ತಂತ್ರಶಾಸ್ತ್ರ, ವಾಸ್ತುತಜ್ಞರನ್ನು ಭೇಟಿ ಮಾಡಿದೆವು. ಅವರ ಮಾರ್ಗದರ್ಶನ ಪಡೆದ ನಂತರ ಕಾಸರಗೋಡಿನ ಕಮಲಾಕ್ಷನ್ ನೇತೃತ್ವದಲ್ಲಿ ದೇವಶಿಲ್ಪಿಗಳನ್ನು, ಎಂಜಿನಿಯರ್‌ಗಳನ್ನು ನೇಮಿಸಲಾಯಿತು. ಕೇರಳದ ತಪತಿ ಪರಿಮಳಾಚಾರ ಅವರು ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮೊದಲಿಗೆ ಇಟ್ಟಿಗೆಯಲ್ಲಿ, ತದನಂತರ ಕಲ್ಲಿನ ಕಟ್ಟಡವಾಗಿ ಭಕ್ತರ ಸಹಕಾರದಿಂದ ನಿರ್ಮಿಸಲಾಯಿತು’ ಎಂದು ಆಗಿನ ಟ್ರಸ್ಟ್‌ನಲ್ಲಿದ್ದ ಸಿ.ಕೆ.ರಾಘವೇಂದ್ರ, ಮಹೇಂದ್ರನಾಥ್, ತಿಮ್ಮರಾಯ ಶೆಟ್ಟಿ, ಎಸ್.ಎನ್.ರುದ್ರಸ್ವಾಮಿ, ಗುಡ್ಡಪ್ಪ ಮಾಹಿತಿ ನೀಡಿದರು.

ಮುರುಘಾಮಠದ ಹಿಂದಿನ ಮಲ್ಲಿಕಾರ್ಜುನ ಸ್ವಾಮೀಜಿ, ವಿರೂಪಾಕ್ಷಪ್ಪ ಅವರು ಸಹಕಾರ ನೀಡಿದರು. 10 ವರ್ಷಗಳ ಸತತ ಪರಿಶ್ರಮದಿಂದಾಗಿ ಸುಂದರವಾದ ದೇಗುಲ ನಿರ್ಮಾಣವಾಯಿತು ಎನ್ನುತ್ತಾರೆ ಇಂದ್ರಣ್ಣ, ಎಚ್.ಎನ್.ರಮೇಶ್, ಶ್ರೀನಿವಾಸಾಚಾರ್, ಮೋಹನ್, ರಾಜಣ್ಣ, ತಿಮ್ಮಣ್ಣ.

1999ರಲ್ಲಿ ಅಯ್ಯಪ್ಪಸ್ವಾಮಿಯ ಪಂಚಲೋಹದ ಮೂರ್ತಿಯ ಜತೆಗೆ ಗಣೇಶ, ಸುಬ್ರಹ್ಮಣ್ಯ, ವಿಷ್ಣು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಕೇರಳದ ಪ್ರಧಾನತಂತ್ರಿ ವಿಷ್ಣುಭಟ್ಟಾದ್ರಿಪಾಡ್ ತಂತ್ರಶಾಸ್ತ್ರದ ಮೂಲಕ ಪ್ರತಿಷ್ಠಾಪನೆ ನೆರವೇರಿಸಿಕೊಟ್ಟರು ಎಂದು ಟ್ರಸ್ಟ್‌ನ ಗೌರವಾಧ್ಯಕ್ಷ ಪಿ.ಜಯಪ್ರಕಾಶ್ ನಾರಾಯಣ್ ನೆನಪಿಸಿಕೊಳ್ಳುತ್ತಾರೆ.

‘ನಮ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್ ಕುಮಾರ್ ನೇತೃತ್ವದಲ್ಲಿ ದೇಗುಲ ಆಭಿವೃದ್ಧಿ ಹೊಂದಿತು. ವ್ರತಾಚರಣೆಯ 60 ದಿನ ಮಾಲಾಧಾರಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. 300 ಮಂದಿ ಮಲಗಲು ಕೋಣೆಗಳು ಹಾಗೂ ಸ್ನಾನ, ಶೌಚಾಲಯಗಳನ್ನು ಭಕ್ತರ ಸಹಕಾರದಿಂದ ನಿರ್ಮಿಸಲಾಗಿದೆ’ ಎನ್ನುತ್ತಾರೆ ಟ್ರಸ್ಟ್‌ನ ಉಪಾಧ್ಯಕ್ಷರಾದ ಬೆಟ್ಟದ ಮಲ್ಲಪ್ಪ, ಮಲ್ಲಿಕಾರ್ಜುನ್.

ಶಬರಿಮಲೆ ಮಾದರಿಯಲ್ಲೇ ಪೂಜೆ: ಅಯ್ಯಪ್ಪಸ್ವಾಮಿಗೆ ಶಬರಿಮಲೆಯಲ್ಲಿ ನಡೆಯುವ ಪಡಿಪೂಜೆ ಮಾದರಿಯಲ್ಲೇ ಕೇರಳದ ತಂತ್ರಿಗಳಿಂದ ಪಡಿಪೂಜಾ ಮಹೋತ್ಸವ ನೆರವೇರಿಸಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್‌ನ ನಿರ್ದೇಶರಾದ ಡಿ.ತಿಮ್ಮಣ್ಣ, ಬಿ.ಎಸ್.ಮೋಹನ್ ಕುಮಾರ್, ಕೆ.ವಿ.ಜಗದೀಶ್, ಮೋಹನ್ ಕರಮಚಂದ ಗಾಂಧಿ, ಎಸ್.ಇಂದ್ರಪ್ಪ, ಎನ್.ಎಸ್.ರಮೇಶ್, ಸೂರಯ್ಯ, ಮಿಠಾಯಿ ಆರ್.ಮುರುಗೇಶ್, ಮಂಜುನಾಥ್.

ಜಿಲ್ಲೆಯಿಂದ ಸುಮಾರು 10 ಸಾವಿರ ಮಂದಿ, ಇಲ್ಲಿನ ಸ್ವಾಮಿಯ ದೇಗುಲದಿಂದ 3.5 ಸಾವಿರ ಮಂದಿ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಇಲ್ಲಿನ ದೇಗುಲಕ್ಕೆ ಸಂಕ್ರಾಂತಿ ಹಬ್ಬದಲ್ಲಿ 20 ಸಾವಿರದಿಂದ 30 ಸಾವಿರ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಬರುತ್ತಾರೆ. ಇದೇ ಸಂದರ್ಭದಲ್ಲಿ ಅಂದು ಸಂಜೆ ನಡೆಯುವ ಲಕ್ಷ ದೀಪೋತ್ಸವದಲ್ಲಿ ದೀಪ ಹಚ್ಚುವವರಿಗೆ ಒಳಿತಾಗಿದೆ ಎಂಬುದು ಭಕ್ತರ ನಂಬಿಕೆ.

ಬ್ರಹ್ಮಕಲಶ ಉತ್ಸವ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಸಹಸ್ರ ರಜತ ಬ್ರಹ್ಮಕಲಶ ಉತ್ಸವವನ್ನು ಸಾವಿರಬೆಳ್ಳಿ ಹಾಗೂ ತಾಮ್ರದ ತಂಬಿಗೆ ಮೆರವಣಿಗೆ ಮಾಡುವ ಮೂಲಕ ನಡೆಸಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಪಿ.ವೆಂಕಟೇಶ್‌, ಸಹ ಕಾರ್ಯದರ್ಶಿ ಬಿ.ಎಂ.ಚಂದ್ರಶೇಖರ್, ಗೌರವ ಸಲಹೆಗಾರ ಆರ್.ಶ್ರೀನಿವಾಸಾಚಾರ್, ಕಾನೂನು ಸಲಹೆಗಾರ ಎಂ.ವಿಜಯ್ ಕುಮಾರ್.

ಸಾಮಾಜಿಕ ಕಾರ್ಯಕ್ಕೆ ತೀರ್ಮಾನ: ಟ್ರಸ್ಟ್‌ನಿಂದ 10 ಮಂದಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ರಕ್ತದಾನ ಶಿಬಿರ, ಬಡ ರೋಗಿಗಳ ಅನುಕೂಲಕ್ಕಾಗಿ ಆಂಬುಲೆನ್ಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರು ತಿಳಿಸಿದ್ದಾರೆ.

***

ಟ್ರಸ್ಟ್‌ನಿಂದ ನೆರವು

‘15 ರಾಜ್ಯಗಳಲ್ಲಿ ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಸದಸ್ಯರಿದ್ದಾರೆ. ಇದಕ್ಕೆ ತುಮಕೂರಿನ ಬಿ.ಟಿ.ಶೇಖರ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ರೋಜಾ ಷಣ್ಮುಗಂ ಸ್ವಾಮೀಜಿ ರಾಜ್ಯಾಧ್ಯಕ್ಷರು. ಶಬರಿ ಮಲೆಗೆ ಹೋಗಿ ಬರುವ ಭಕ್ತರಿಗೆ ಮಾರ್ಗ ಮಧ್ಯೆ ಏನಾದರೂ ತೊಂದರೆಯಾದರೆ ಆ ಸ್ಥಳಕ್ಕೆ ಸಂಬಂಧಿಸಿದ ಜಿಲ್ಲೆಗಳ ಅಧ್ಯಕ್ಷರು ಭೇಟಿ ನೀಡಿ ಸೂಕ್ತ ರೀತಿಯಲ್ಲಿ ಪ್ರಾಥಮಿಕ ನೆರವು ನೀಡಲಿದ್ದಾರೆ’ ಎಂದು ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್ ಕುಮಾರ್ ತಿಳಿಸಿದ್ದಾರೆ.

ಮಾಹಿತಿಗೆ ಮೊಬೈಲ್: 94484 04722 ಸಂಪರ್ಕಿಸಬಹುದು.

***

ನ.16ರಂದು ದೇಗುಲದಲ್ಲಿ ಬೆಳಿಗ್ಗೆ 11ಕ್ಕೆ ನಡೆಯುವ ಲಕ್ಷ್ಮೀನಾರಾಯಣ ಹೃದಯ ಹೋಮ ಕಾರ್ಯಕ್ರಮವನ್ನು ಟ್ರಸ್ಟ್‌ನ ರಾಜ್ಯಾಧ್ಯಕ್ಷ ರೋಜಾ ಷಣ್ಮುಗಂ ಸ್ವಾಮಿ ಉದ್ಘಾಟಿಸಲಿದ್ದಾರೆ.
-ಶರಣ್‌ಕುಮಾರ್, ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT