ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ವಸತಿ ಕಲ್ಪಿಸುವುದರಲ್ಲಿ ಶೇ 58 ಸಾಧನೆ

ನಾಲ್ಕೂವರೆ ವರ್ಷದ ಅವಧಿಯಲ್ಲಿ 5164 ಮನೆಗಳ ನಿರ್ಮಾಣ
Last Updated 16 ನವೆಂಬರ್ 2017, 9:28 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಲ್ಲಿ ಇಂದಿರಾ ಆವಾಸ್, ಬಸವ, ಪ್ರಧಾನಮಂತ್ರಿ ಆವಾಸ್, ದೇವದಾಸಿ, ಲಿಡಕರ್, ಅಂಬೇಡ್ಕರ್ ವಸತಿ ನಿವಾಸ್ ಮುಂತಾದ ಯೋಜನೆಗಳ ಅಡಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒಟ್ಟು 5164 ಮನೆಗಳು ನಿರ್ಮಾಣಗೊಂಡಿದ್ದು, ಶೇ 58ರಷ್ಟು ಸಾಧನೆ ಮಾಡಲಾಗಿದೆ.

2013ರಿಂದ 2017ರ ವರೆಗೆ ಇಂದಿರಾ ಆವಾಸ್ ಯೋಜನೆ ಅಡಿ 3256, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 415, ದೇವದಾಸಿ, ಲಿಡಕರ್ ಹಾಗೂ ವಿಶೇಷ ಯೋಜನೆ ಅಡಿ 34, ಬಸವ 4,728, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಅಡಿ 2,808 ಮನೆಗಳು ಸೇರಿ ಒಟ್ಟು 11,238 ಮನೆಗಳು ಮಂಜೂರಾಗಿವೆ.

ಈ ಪೈಕಿ ಎಸ್‌ಸಿಗೆ 5,321, ಎಸ್‌ಟಿಗೆ 2,602, ಸಾಮಾನ್ಯ ವರ್ಗದವರಿಗೆ 2,462 ಹಾಗೂ ಇತರೆ ವರ್ಗಗಳಿಗೆ 853 ಮನೆಗಳು ಮಂಜೂರಾಗಿದ್ದು, ಈ ಪೈಕಿ ಇದುವರೆಗೆ 2,759 ಮನೆಗಳ ನಿರ್ಮಾಣ ಕಾರ್ಯವೇ ಆರಂಭವಾಗಿಲ್ಲ. ಇನ್ನೂ 998 ಬುನಾದಿ ಹಂತದಲ್ಲಿವೆ. ಲಿಂಟಲ್ ಹಂತದಲ್ಲಿ 655, ಚಾವಣಿ ಹಂತದಲ್ಲಿ 928 ಮನೆಗಳು ಇವೆ. ಒಟ್ಟಾರೆ 11,238 ಮನೆಗಳಲ್ಲಿ 5,164 ಮನೆಗಳು ಮಾತ್ರ ನಿರ್ಮಾಣಗೊಂಡಿವೆ. ಸಿದ್ಧಗೊಂಡ ಬಹುತೇಕ ಮನೆಗಳಿಗೆ ಶೌಚಾಲಯಗಳ ನಿರ್ಮಾಣವಾಗಬೇಕಾಗಿದೆ. ಇದುವರೆಗೆ 1,763 ಮನೆಗಳಿಗೆ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ.

ಸಾಮಾನ್ಯವಾಗಿ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ಶಾಸಕರು ಆಯಾ ಗ್ರಾಮ ಪಂಚಾಯ್ತಿಗಳ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುತ್ತಾರೆ. ಫಲಾನುಭವಿಗಳನ್ನು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಆಯ್ಕೆ ಮಾಡಬೇಕೆಂಬುದು ಇಲಾಖೆಯ ನಿಯಮ.

ಆದರೆ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸದೆ ಚುನಾಯಿತ ಸದಸ್ಯರು ತಮಗೆ ಇಷ್ಟಬಂದ ಫಲಾನುಭವಿಗಳನ್ನು ಆಯ್ಕೆ ಮಾಡಿ, ಮನೆಗಳನ್ನು ಮಂಜೂರು ಮಾಡಿರುವ ಪ್ರಕರಣಗಳೂ ಇವೆ. ತುಂಬಾ ನಿಧಾನಗತಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

2013ರಿಂದ 2017ರ ವರೆಗೆ ಒಟ್ಟು 11,238 ಮನೆಗಳು ಮಂಜೂರಾಗಿದ್ದವು. ಈ ಪೈಕಿ ಇದುವರೆಗೆ 5,164 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 6,074 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯ ಹಂತದಲ್ಲಿದೆ. ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಚುನಾಯಿತ ಸದಸ್ಯರ ಅಸಹಕಾರದಿಂದಾಗಿ ಮನೆಗಳ ನಿರ್ಮಾಣ ಕಾರ್ಯ ಕುಂಠಿತವಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಶೀಘ್ರ ಮನೆಗಳ ನಿರ್ಮಾಣ ಕಾರ್ಯ ಮಾಡಬೇಕೆಂದು ಆದೇಶ ಮಾಡಿದರೂ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರ ಒತ್ತಡದಿಂದ ನಿರ್ಮಾಣ ಕಾರ್ಯ ಕುಂಠಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಮನೆಗಳ ನಿರ್ಮಾಣ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯ್ತಿ ಇಒ ಎಂ.ಆರ್. ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT