ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನ ಸಹಿಸದೆ ಚಿಕಿತ್ಸೆ ನಿರಾಕರಿಸಿದ ಮಾಜಿ ಸೈನಿಕ

ರೋಗಿಯ ಪತ್ನಿ ಮೇಲೆ ಖಾಸಗಿ ವೈದ್ಯರಿಂದ ಹಲ್ಲೆ: ಆರೋಪ
Last Updated 16 ನವೆಂಬರ್ 2017, 9:36 IST
ಅಕ್ಷರ ಗಾತ್ರ

ಧಾರವಾಡ: ತಮ್ಮ ಪತ್ನಿಯ ಮೇಲೆ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಮಾಜಿ ಸೈನಿಕರೊಬ್ಬರು ಬುಧವಾರ ಇಲ್ಲಿನ ಶ್ರೀಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರು.

ಮೂಲವ್ಯಾಧಿಯಿಂದ ಬಳಲುತ್ತಿದ್ದ ಮಾಜಿ ಸೈನಿಕ ಬಸಯ್ಯ ಅಡಿವೆಪ್ಪನವರಮಠ (76) ಒಂದು ವಾರದ ಹಿಂದೆ ಈ ಆಸ್ಪತ್ರೆಗೆ ದಾಖಲಾಗಿದ್ದರು.

ತಮ್ಮ ಪತ್ನಿ ಸುಶೀಲಾಗೆ ಆಸ್ಪತ್ರೆಯ ವೈದ್ಯ ಡಾ. ವೈ.ಎನ್‌. ಇರಕಲ್‌ ಅವರು ಮಂಗಳವಾರ ಸಂಜೆ ಹೊಡೆದಿದ್ದಾಗಿ ಬಸಯ್ಯ ಆರೋಪಿಸಿದ್ದಾರೆ. ಈ ಅವಮಾನ ಸಹಿಸಲಾರದೇ ಚಿಕಿತ್ಸೆ ನಿರಾಕರಿಸಿದ ಅವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಕೋರಿದ್ದಾರೆ. ತಕ್ಷಣವೇ ಬಸಯ್ಯ ಅವರನ್ನು ಕಳುಹಿಸಿಕೊಡಲು ಆಸ್ಪತ್ರೆ ಮುಂದಾಯಿತು.

ಈ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸುಶೀಲಾ, ‘ನನ್ನ ಪತಿಗೆ ಮೂಲವ್ಯಾಧಿ ಸಮಸ್ಯೆ ಇದ್ದುದರಿಂದ ತೀವ್ರ ರಕ್ತಸ್ರಾವವಾಗಿತ್ತು. ಅವರದು ರಕ್ತದ ಗುಂಪು (ಎಬಿ ನೆಗಟಿವ್‌) ಅಪರೂಪದ್ದಾಗಿದ್ದರಿಂದ ಹುಬ್ಬಳ್ಳಿ–ಧಾರವಾಡದಲ್ಲಿ ನಮಗೆ ರಕ್ತ ಸಿಗಲಿಲ್ಲ.

₹ 7 ಸಾವಿರ ಕೊಟ್ಟು ಬೆಳಗಾವಿಯಿಂದ ರಕ್ತ ತರಿಸಿದೆವು. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ರಕ್ತ ಸೋರುತ್ತಲೇ ಇತ್ತು. ಈ ಕುರಿತು ಡಾ. ವೈ.ಎನ್.ಇರಕಲ್‌ಗೆ ತಿಳಿಸಿದೆ. ಅದಕ್ಕೆ ಸಿಡಿಮಿಡಿಗೊಂಡ ವೈದ್ಯರು ಕೈಹಿಡಿದು ಎಳೆದು, ಕಪಾಳಕ್ಕೆ ಎರಡು ಬಾರಿ ಹೊಡೆದರು’ ಎಂದು ದೂರಿದರು.

‘ಇಷ್ಟು ಮಾತ್ರವಲ್ಲ, ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಹಣ ತುಂಬಬೇಕು ಎಂದು ಸೂಚಿಸಿದರು. ಹಣ ತರಲು ನನ್ನ ಹೆಣ್ಣು ಮಕ್ಕಳು ಎಟಿಎಂಗೆ ಹೋಗಿದ್ದರು. ಅವರು ಬರುವುದಕ್ಕೆ ತಡವಾಗಿದ್ದರಿಂದ ಮತ್ತೆ ಸಿಟ್ಟಿಗೆದ್ದ ವೈದ್ಯರು, ಅವರು ಹಣ ತರಲು ಹೋಗಿದ್ದಾರೋ ಅಥವಾ ಓಡಿ ಹೋಗಿದ್ದಾರೋ... ಎಂದು ಕೀಳಾಗಿ ಮಾತನಾಡಿದರು. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತೀವ್ರವಾಗಿ ನೋವು ಉಂಟು ಮಾಡಿತು. ಹಣ ನೀಡಿಯೂ ಹೊಡೆಸಿಕೊಳ್ಳಲು ಹಾಗೂ ಅವಹೇಳನಕಾರಿ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಎಂದು ನನ್ನ ಪತಿ ಹೇಳಿದರು’ ಎಂದು ಅಳಲು ತೋಡಿಕೊಂಡರು.

ಅವರ ಮಾತಿಗೆ ಪ್ರತಿಕ್ರಿಯಿಸಿದ ಪಕ್ಕದ ಹಾಸಿಗೆಯಲ್ಲಿದ್ದ ಮಹಿಳೆಯೊಬ್ಬರು, ‘ವೈದ್ಯರ ಮಾತು ಹಾಗೂ ವರ್ತನೆ ಕೇಳಿ ನಮಗೇ ಸಿಟ್ಟು ಬರುತ್ತಿತ್ತು’ ಎಂದರು.

ಬಸಯ್ಯ ಅವರು ಮಾತನಾಡಿ, ‘ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ನಾವು ಇಲ್ಲಿಗೆ ಬಂದಿದ್ದೇವೆ. ಅವರು ಕೇಳಿದಷ್ಟು ಹಣ ನೀಡಲೂ ಸಿದ್ಧ. ಆದರೆ, ಅನಗತ್ಯವಾಗಿ ನನ್ನ ಕುಟುಂಬದವರ ಮೇಲೆ ಹಲ್ಲೆ ಹಾಗೂ ಬೈಗುಳ ನಡೆಸಿರುವ ವೈದ್ಯರ ಕ್ರಮವನ್ನು ಸಹಿಸುವುದು ಅಸಾಧ್ಯ. ಹೀಗಾಗಿ ನನ್ನ ಕುಟುಂಬದವರ ಮರ್ಯಾದೆಗಿಂತ ನನ್ನ ಆರೋಗ್ಯವೇನೂ ಮುಖ್ಯವಲ್ಲ. ಇಂದು ಮನೆಗೆ ಹೋಗುತ್ತೇನೆ. ಮುಂದೆ ಏನಾಗುತ್ತದೋ ನೋಡೋಣ’ ಎಂದು ಬೇಸರ ವ್ಯಕ್ತಪಡಿಸಿದರು.

ಘಟನೆ ನಂತರ ಆಸ್ಪತ್ರೆಯಲ್ಲಿ ಇರಕಲ್ ಲಭ್ಯವಿರಲಿಲ್ಲ. ಫೋನ್‌ ಕರೆಗೂ ಅವರು ಸಿಗಲಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದ ಅವರ ಪುತ್ರ ಡಾ. ಸತೀಶ ಇರಕಲ್‌ ಪ್ರತಿಕ್ರಿಯಿಸಿ, ‘ರಕ್ತಸ್ರಾವ ಆಗುತ್ತಿದ್ದರಿಂದ ಕಾಲನ್ನು ಮೇಲಕ್ಕೆ ಮಾಡಿ ಮಲಗಲು ಅನುಕೂಲವಾಗುವಂತೆ ಮಂಚವನ್ನು ಸಿದ್ಧಪಡಿಸಲಾಗಿತ್ತು.

ಆದರೆ, ಅವರು ಅತ್ತ ತಲೆ ಹಾಕಿ ಮಲಗಿದ್ದರು. ಇದರಿಂದ ಮತ್ತಷ್ಟು ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇದನ್ನು ರೋಗಿಯ ಕಡೆಯವರಿಗೆ ಹೇಳಿದ್ದಕ್ಕೆ ಅವರು ಇಷ್ಟೆಲ್ಲಾ ಅವಾಂತರ ಮಾಡಿದ್ದಾರೆ. ನಮ್ಮ ತಂದೆ ಯಾರ ಮೇಲೂ ಹಲ್ಲೆ ನಡೆಸಿಲ್ಲ. ರೋಗಿಯ ಕೋರಿಕೆ ಮೇರಿಗೆ ಅವರನ್ನು ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT