ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ, ಕಡಲೆಗೆ ಕೀಟ ಬಾಧೆ: ಆತಂಕ

Last Updated 16 ನವೆಂಬರ್ 2017, 9:51 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಕೊನೆ ಕ್ಷಣದಲ್ಲಿ ಸುರಿದ ಮುಂಗಾರು ಮಳೆ ನೆಚ್ಚಿ ಬಿಳಿ ಜ್ವಾಳ, ಕಡ್ಲಿ, ಗೋಧಿ, ಕುಸುಬಿ ಬಿತ್ತನೆ ಮಾಡೇವಿ. ಆದ್ರ ಕಡ್ಲಿಗೆ ಕೀಟ, ಜ್ವಾಳಕ ಲದ್ದಿಹುಳ ಗಂಟು ಬಿದ್ದು ಬೆಳಿ ಹಾಳಾಗಕತ್ತಾವ್ರೀ’ ಎಂದು ಸಮೀಪದ ಬಸಾಪುರ ಗ್ರಾಮದ ಮಹಾಂತೇಶ ಜಾವೂರ ಅಳಲು ತೋಡಿಕೊಂಡರು.

ಮಹಾಂತೇಶ ಅವರು ಹಿಂಗಾರು ಹಂಗಾಮಿಗಾಗಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ತಡವಾಗಿ ಲಭಿಸಿದ್ದರಿಂದ ಬಿಳಿ ಜೋಳ ಬಿತ್ತನೆ ವಾಡಿಕೆಗಿಂತ ವಿಳಂಬವಾಗಿದೆ. ಇದೀಗ ಜೋಳಕ್ಕೆ ಲದ್ದಿ ಹುಳು (ಸೈನಿಕ ಹುಳು) ಕಾಟ ಪ್ರಾರಂಭವಾಗಿದೆ. ತಾಲ್ಲೂಕಿನ ಬಹುತೇಕ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಮುಂಗಾರು ಮುಗಿಯಿತು ಎನ್ನುವಷ್ಟರಲ್ಲಿ ಮಳೆರಾಯ ಕೊನೆ ದಿನಗಳಲ್ಲಿ ಸ್ವಲ್ಪ ಕರುಣೆ ತೋರಿದ್ದ, ಇದರಿಂದ ರೈತರು ಮುಂಗಾರು ಹಂಗಾಮಿನ ಬಿತ್ತನೆ ತಡವಾಗಿ ಪೂರ್ಣಗೊಳಿಸಿದ್ದರು. ತಾಲ್ಲೂಕಿನ ಎರೆ ಭೂಮಿ ಹೊಂದಿರುವ ರಾಮಗಿರಿ, ಗೋವನಾಳ, ಯಳವತ್ತಿ, ಮಾಗಡಿ, ಗೊಜನೂರು, ದೊಡ್ಡೂರು, ಅಡರಕಟ್ಟಿ, ಗೊಜನೂರು, ಬಟ್ಟೂರು, ಪುಟಗಾಂವ್‌ಬಡ್ನಿ ಗ್ರಾಮ ಪಂಚಾಯ್ತಿಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಬಿಳಿಜೋಳ, ಸೂರ್ಯಕಾಂತಿ, ಕಡಲೆ, ಗೋಧಿ, ಕುಸುಬಿ ಬಿತ್ತನೆ ಮಾಡಲಾಗಿದೆ. ಸದ್ಯ ಉತ್ತಮ ತೇವಾಂಶದಿಂದ ಎಲ್ಲ ಬೆಳೆಗಳೂ ಚೆನ್ನಾಗಿವೆ. ಈ ಬಾರಿ ಅಂದಾಜು 10 ಸಾವಿರ ಹೆಕ್ಟೇರ್‌ನಲ್ಲಿ ಬಿಳಿಜೋಳದ ಬಿತ್ತನೆಯಾಗಿದೆ. ಈ ನಡುವೆ ಬಿಳಿಜೋಳಕ್ಕೆ ಲದ್ದಿಹುಳುಗಳು ಕಾಟ ಎದುರಾಗಿದೆ. ಈ ಹುಳು ಜೋಳದ ಸುಳಿಯನ್ನು ಕತ್ತರಿಸಿ ತಿನ್ನುತ್ತಿದ್ದು, ಬೆಳೆಯುವ ಹಂತದಲ್ಲೆ ಜೋಳದ ಬೆಳೆ ಒಣಗುತ್ತಿದೆ.

ಜತೆಗೆ ಕಡಲೆಯಲ್ಲೂ ಸಹ ಕೀಟ ರೋಗ ಕಾಣಿಸಿಕೊಂಡಿದ್ದು, ರೈತರ ನಿದ್ದೆಗೆಡಿಸಿದೆ. ‘ಸಕಾಲಕ್ಕೆ ರೋಗಪೀಡಿತ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಬೇಕು. ಆದರೆ, ಈ ಕುರಿತು ರೈತರಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಒಮ್ಮೆಯೂ ರೈತರ ಹೊಲಗಳಿಗೆ ಭೇಟಿ ನೀಡಿ ಅವರಿಗೆ ಸಲಹೆ ಸೂಚನೆ ನೀಡುತ್ತಿಲ್ಲ’ ಎಂದು ತಾಲ್ಲೂಕು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಆರೋಪಿಸಿದರು.

‘ಅಧಿಕಾರಿಗಳಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಶೀಘ್ರವೇ ರೋಗಪೀಡಿತ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡವ ಬಗ್ಗೆ ತಿಳುವಳಿಕೆ ನೀಡಬೇಕು’ ಎಂದು ಲಕ್ಷ್ಮೇಶ್ವರದ ಸಾವಯವ ಕೃಷಿಕ ಬಸವರಾಜ ಬೆಂಡಿಗೇರಿಯವರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT