ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಸಂಬಂಧಿಕರೂ ಸರ್ಕಾರಿ ಆಸ್ಪತ್ರೆಗೆ

ಕೆ.ಪಿ.ಎಂ.ಇ. ಕಾಯಿದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆಗಳು ಬಂದ್‌
Last Updated 16 ನವೆಂಬರ್ 2017, 10:14 IST
ಅಕ್ಷರ ಗಾತ್ರ

ಹಾವೇರಿ: ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ ಬುಧವಾರವೂ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ರೋಗಿಗಳು ಪರದಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹೆಚ್ಚಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸಂಬಂಧಿಕರೂ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯ ಮೊರೆ ಹೋದರು.

‘ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆ.ಪಿ.ಎಂ.ಇ.) ಕಾಯಿದೆ’ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕರ್ತವ್ಯ ಸ್ಥಗಿತಗೊಳಿಸಿ, ಸೋಮವಾರದಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ, ಸರ್ಕಾರಿ ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚಿತ್ತು. ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟ ಕಾರಣ ಬುಧವಾರ ಹಲವು ಪ್ರಮುಖರು, ಶ್ರೀಮಂತರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದರು.

ಖಾಸಗಿ ವೈದ್ಯರ ಲಭ್ಯತೆ ಇಲ್ಲದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸಮೀಪದ ಸಂಬಂಧಿ ಹಾಗೂ ಅವರ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ ನಾಯಕ್‌ ಅವರು, ತಮ್ಮ ಮಗನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದರು. ಇತರ ಸಂಬಂಧಿಕರೂ ಇದ್ದರು.

ನಗರದ ಎಲ್ಲ ಖಾಸಗಿ ಆಸ್ಪತ್ರೆ, ಅದಕ್ಕೆ ಹೊಂದಿಕೊಂಡ ಔಷಧಾಲಯ ಹಾಗೂ ಅರೆ ವೈದ್ಯಕೀಯ ವ್ಯವಸ್ಥೆಗಳು ಬಂದ್‌ ಆಗಿದ್ದವು. ಮಾಹಿತಿ ತಿಳಿಯದೇ ಬಂದ ಕೆಲವು ರೋಗಿಗಳು, ಜಿಲ್ಲಾ ಸರ್ಕಾರಿ ಆಸ್ಪತ್ರೆಗ ಕಡೆ ಮುಖ ಮಾಡಿದ ದೃಶ್ಯವು ಬುಧವಾರವೂ ಕಂಡುಬಂತು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೋರ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಹೊರ ರೋಗಿಗಳ ವಿಭಾಗದ ಚೀಟಿ ಮಾಡಿಸುವ, ಔಷಧಾಲಯ, ಸ್ಕ್ಯಾನ್‌, ರಕ್ತ ಪರೀಕ್ಷೆ ಹಾಗೂ ವೈದ್ಯರ ಕೊಠಡಿಗಳ ಎದುರು ಉದ್ದನೆಯ ಸರದಿಗಳು ಕಂಡು ಬಂದವು.

‘ರೋಗಿಗಳ ಸಂಖ್ಯೆ ಹೆಚ್ಚಿದ ಕಾರಣ ಹೆಚ್ಚುವರಿ ಹಾಸಿಗೆಗಳ ಹೊಸ ವಾರ್ಡ್ ತೆರೆಯಲಾಗಿದೆ. ಬುಧವಾರ 921 ಹೊರ ರೋಗಿಗಳು, 110 ಒಳ ರೋಗಿಗಳು ಹಾಗೂ 23 ಹೆರಿಗೆಗಳು ನಡೆದಿವೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆ ಉದ್ಭವಿಸಿಲ್ಲ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ನಾಗರಾಜ ನಾಯಕ್‌ ತಿಳಿಸಿದರು.

108ರ ಕರೆ ಇಳಿಕೆ:
ಆದರೆ, ‘108 ಆ್ಯಂಬುಲೆನ್ಸ್‌ಗೆ ಸೋಮವಾರ ಹಾಗೂ ಮಂಗಳವಾರ ತಲಾ ಸುಮಾರು 100 ಕರೆಗಳು ಬಂದಿದ್ದರೆ, ಬುಧವಾರ 50ಕ್ಕೆ ಇಳಿದಿರುವುದು ಅಚ್ಚರಿ ಮೂಡಿಸಿದೆ’ ಎಂದು ಆರೋಗ್ಯ ಕವಚ 108ರ ಸಿಬ್ಬಂದಿ ಪ್ರತಿಕ್ರಿಯಿಸಿದರು.

***

ಹೆಚ್ಚುವರಿ ನಿಯೋಜನೆ

ಹಾವೇರಿ: ‘ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ವಿವಿಧ ಘಟಕಗಳಿಗೆ ನಿಯೋಜಿಸಲಾದ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಂತೆ ತಿಳಿಸಲಾಗಿದೆ. ಹೆಚ್ಚುವರಿ ಔಷಧಿ ದಾಸ್ತಾನು ಇರಿಸಿಕೊಳ್ಳಲಾಗಿದೆ. ಯಾವುದೇ ರೋಗಿಯನ್ನು ವಾಪಾಸ್‌ ಕಳುಹಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಜಿಲ್ಲಾ ಶಸ್ತ್ರಚಿಕಿತ್ಸಕರು ದಿನದ 24 ಗಂಟೆಗಳ ಉಸ್ತುವಾರಿ ವಹಿಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ.ತಿಳಿಸಿದರು.

‘ವೈದ್ಯರಿಗೆ ಸಹಜವಾಗಿ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳನ್ನು ನಿರ್ವಹಿಸಲು, ಅವರಿಗೆ ಮಾಹಿತಿ ನೀಡಲು, ಸ್ಪಂದಿಸುವ ಸಲುವಾಗಿ ಇತರ ಇಲಾಖಾ ಸಿಬ್ಬಂದಿಯನ್ನೂ ಮುಷ್ಕರ ಮುಗಿಯುವ ತನಕ ತಾತ್ಕಾಲಿಕ ನಿಯೋಜನೆ ಮಾಡಲಾಗುವುದು. ಆಗ, ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಯತ್ತ ಪೂರ್ಣ ಗಮನ ಹರಿಸಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT