ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಸದಾಶಿವ ವರದಿ ಜಾರಿಗೆ ಆಗ್ರಹ

Last Updated 16 ನವೆಂಬರ್ 2017, 10:21 IST
ಅಕ್ಷರ ಗಾತ್ರ

ಹಾವೇರಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

‘2004ರಲ್ಲಿ ನೇಮಕವಾದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಧ್ಯಕ್ಷತೆಯ ಆಯೋಗವು ಪರಿಶಿಷ್ಟರಿಗೆ ನ್ಯಾಯ ಒದಗಿಸಲು, ಒಳಮೀಸಲಾತಿ ಕಲ್ಪಿಸಿ ವರದಿ ನೀಡಿದೆ. ಮಾದಿಗ ಸಂಬಂಧಿತ ಸಮುದಾಯಗಳಿಗೆ ಶೇ 6, ಹೊಲೆಯ ಸಂಬಂಧಿತ ಸಮುದಾಯಗಳಿಗೆ ಶೇ 5, ಕೊರಮ, ಲಂಬಾಣಿ, ಭೋವಿ ಸಂಬಂಧಿತ ಸಮುದಾಯಗಳಿಗೆ ಶೇ 3 ಹಾಗೂ ಇತರ ಜಾತಿಗಳಿಗೆ ಶೇ 1 ಮೀಸಲಾತಿ ಕಲ್ಪಿಸಿದೆ. ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡುವಂತೆ ಶಿಫಾರಸು ಮಾಡಿ ವರದಿಯನ್ನು 2012ರಲ್ಲಿ ಸರಕಾರಕ್ಕೆ ಸಲ್ಲಿಸಿದೆ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಆದರೆ, ಈ ವರದಿಯನ್ನು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಶಿಫಾರಸುವ ಮಾಡುವಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ವಿಫಲವಾಗಿವೆ. ಆ ಮೂಲಕ ಪರಿಶಿಷ್ಟ ಜಾತಿಗಳಲ್ಲಿ ಆಂತರಿಕ ಸಂಘರ್ಷ ಹುಟ್ಟು ಹಾಕಲಾಗುತ್ತಿದೆ. ಸರ್ಕಾರಗಳ ವಿಳಂಬ ಧೋರಣೆಯಿಂದಾಗಿ 101 ಶೋಷಿತ ಜಾತಿಗಳು 15 ವರ್ಷಗಳಿಂದ ಸೌಲಭ್ಯ ವಂಚಿತವಾಗಿವೆ’ ಎಂದು ದೂರಿದರು.

‘ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಸಮುದಾಯಗಳ ಎಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಸಂಘಟಿತರಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ, ಚುನಾವಣೆಗಳಲ್ಲಿ ಅವರನ್ನು ಸೋಲಿಸಲಾಗುವುದು’ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿದ್ದರೆ, ಅಧಿವೇಶನದಲ್ಲಿ ವರದಿ ಮಂಡಿಸಿ, ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರೂಪಿಸಿರುವ ಎಸ್‌.ಟಿ.ಪಿ/ ಟಿ.ಎಸ್‌.ಟಿ. ಯೋಜನೆಯಡಿ ಮೀಸಲಾಗಿರುವ ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಉಪಯೋಗಿಸಬೇಕು. ಕಾಯ್ದೆಯಲ್ಲಿನ 13 ಅಂಶಗಳನ್ನು ತಿದ್ದುಪಡಿ ಮಾಡಬೇಕು. ದಲಿತರಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಬಗರ್‌ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿದ ದಲಿತರಿಗೆ ಭೂ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.

‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು.

ಇದಕ್ಕೂ ಮೊದಲು ಜಿಲ್ಲಾಡಳಿತ ಭವನದ ಗೇಟಿನ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರಲಿಲ್ಲ ಎಂದು ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ಬಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪರಮೇಶ್ವರ ಮೇಗಳಮನಿ, ಸದಸ್ಯ ಶಿವರಾಜ ಹರಿಜನ, ಮಾಲತೇಶ ಯಲ್ಲಾಪುರ, ನಾಗರಾಜ ಮಾಳಗಿ, ಉಡಚಪ್ಪ ಮಾಳಗಿ, ಸಂಜಯಗಾಂಧಿ ಸಂಜೀವಣ್ಣವರ, ಎನ್.ಎಫ್. ನಿಂಬಕ್ಕನವರ, ಎಚ್.ಕೆ.ಮಾದರ, ಸುರೇಶ ಅಳ್ಳಳ್ಳಿ, ಡಿ.ಎಚ್.ತಿಮ್ಮಣ್ಣನವರ, ರಮೇಶ ಜಾಲಿಹಾಳ, ಶ್ರೀಕಾಂತ ಸಣ್ಣಮನಿ, ರಾಮು ಎಚ್.ಜೆ, ನಾಗೇಶ ಪೂಜಾರ ಮತ್ತಿತರರು ಇದ್ದರು.

***

ನ್ಯಾ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು
–ಪರಮೇಶ್ವರ ಮೇಗಳಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT