ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ

Last Updated 16 ನವೆಂಬರ್ 2017, 10:43 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಯೆಂದು ಗುರುತಿಸಿಕೊಂಡಿರುವ ನನಗೆ ರಾಜ್ಯೋತ್ಸವ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ಪರಿಶ್ರಮಕ್ಕೆ ಈ ಗೌರವ ಸಿಕ್ಕಿರುವುದಕ್ಕೆ ಖುಷಿಯಾಗಿದೆ’ ಎಂದು ಗಣಿತ ಸಂಪನ್ಮೂಲ ವ್ಯಕ್ತಿ ವಿ.ಎಸ್.ಎಸ್.ಶಾಸ್ತ್ರಿ ಸಂತಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಅನಾರೋಗ್ಯದ ಕಾರಣದಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ಅಪಾರ್ಥ ಕಲ್ಪಿಸಬಾರದು ಎಂದರು.

‘ನಾನು ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಭೂಗರ್ಭ ಶಾಸ್ತ್ರ, ಪಳೆಯುಳಿಕೆ, ಗಿಡ ಮೂಲಿಕೆಗಳನ್ನು ಗುರುತಿಸಿಕೊಟ್ಟಿರುವ ನಂಜುಂಡಗೌಡರು, ಹಿರಿಯ ಲೇಖಕ ಕಾಮರೂಪಿ ಅವರಂತಹ ವ್ಯಕ್ತಿಗಳ ಸಾಧನೆ ಗುರುತಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

‘ನಾನು ಗಣಿತ ಶಾಸ್ತ್ರದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 800 ತರಬೇತಿ ಕಾರ್ಯಗಾರ ನಡೆಸಿದ್ದೇನೆ. 35ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಅವೆಲ್ಲಾ ಗಣಿತಕ್ಕೆ ಸಂಬಂಧಿಸಿವೆ. ಗಣಿತವನ್ನು ಸುಲಭವಾಗಿ ಕಲಿಯಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸೂಫಿ ಸಂತರ ಪ್ರಭಾವವಿದೆ. ಅವರೊಂದಿಗೆ ಹಿಂದೂಗಳು ಅನೋನ್ಯವಾಗಿ ಬಾಳುತ್ತಿದ್ದಾರೆ. ಸೂಫಿ ಸಂತರ ಬಗ್ಗೆ ಅಧ್ಯಯನ ನಡೆಯಬೇಕು’ ಎಂದು ಹೇಳಿದರು.

ವಿಶೇಷ ಸನ್ಮಾನ: ಡಿ.19 ಮತ್ತು 20ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸ್ತ್ರಿ ಅವರನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಬಹುಮುಖ ಪ್ರತಿಭೆಯ ಶಾಸ್ತ್ರಿ ಅವರು ಸಾಹಿತ್ಯ, ವಿಜ್ಞಾನ, ಗಣಿತ, ಐತಿಹಾಸಿಕ ಹಿನ್ನೆಲೆಯ ಸಂಶೋಧಕರೂ ಆಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಚಂದ್ರಪ್ಪ, ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಿವಪ್ಪ ಅರಿವು, ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎ.ರಮೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸಗೌಡ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT