ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಟ್ಟು ಓಡಿ ಹೋಗುವುದಿಲ್ಲ: ರಮೇಶ್ ಕುಮಾರ್‌

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜೀನಾಮೆ ಕೊಟ್ಟು ಓಡಿಹೋಗುವುದಿಲ್ಲ. ಅಂತಹ ಸಂದರ್ಭವೂ ಉದ್ಭವಿಸಿಲ್ಲ’ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ ಕುಮಾರ್‌ ಪ್ರತಿಪಾದಿಸಿದರು.

‘ರಮೇಶ್‌ ಕುಮಾರ್ ಅವರ ಪ್ರತಿಷ್ಠೆ, ಹಟದಿಂದಾಗಿ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ’ ಎಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಮಾಡಿದ ಟೀಕೆಗೆ ರಮೇಶ್‌ ಕುಮಾರ್‌ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತರಿಸಿದರು. ಅವರ ಮಾತಿನಲ್ಲಿ ಆಕ್ರೋಶವಿತ್ತು. ಅಸಮಾಧಾನವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಭಾವೋದ್ವೇಗ ಇತ್ತು.

‘ರಾಜೀನಾಮೆ ಕೊಡುವುದಕ್ಕಾಗಿ ನಾನು ಸಚಿವನಾಗಿಲ್ಲ. ಎಲ್ಲ ಕಾಲಕ್ಕೂ ಶಾಸಕನಾಗಿರಬೇಕು ಎಂಬುದೂ ನನ್ನ ಹಂಬಲವಲ್ಲ. ಸಚಿವ ಸ್ಥಾನ ಬಿಟ್ಟು ಓಡಿ ಹೋದರೆ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಮಂಡನೆಯಾಗುತ್ತದೆ ಎಂಬ ನಂಬಿಕೆಯೂ ನನಗಿಲ್ಲ’ ಎಂದರು.

‘ಪ್ರಗತಿಪರ ಮಸೂದೆ ತರುವಾಗ ಆಕ್ಷೇಪ ಇರುವುದು ಸಹಜ. ಚುನಾವಣೆಗೆ ನಾಲ್ಕು ತಿಂಗಳು ಇದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಅಪೇಕ್ಷೆ ನಮಗೂ ಇದೆ. ಹಾಗಿರುವಾಗ ಭಯಾನಕ ಮಸೂದೆ ತರುವ ಕೆಲಸ ಮಾಡಬಾರದು ಎಂಬ ಕನಿಷ್ಠ ಜ್ಞಾನ ನಮಗೂ ಇದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮತ್ತು ನಾನು 40 ವರ್ಷದಿಂದ ಜತೆಗಿದ್ದೇವೆ. ಅವರು ನನ್ನನ್ನು ಕರೆದು ಮಂತ್ರಿ ಮಾಡಿದ್ದಾರೆ. ಅವರ ಮೇಲೆ ನನಗೆ, ನನ್ನ ಮೇಲೆ ಅವರಿಗೆ ವಿಶ್ವಾಸವಿದೆ. ಈ ವಿಷಯದಲ್ಲಿ ನನ್ನ ನಾಯಕರು(ಮುಖ್ಯಮಂತ್ರಿ) ಹೇಳಿದಂತೆ ನಡೆಯುತ್ತೇನೆ. ಜನ ಹಿತದ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

‘ಸಮಾಜದಲ್ಲಿ ಬಲ ಎಂದರೆ ಬಲಾಢ್ಯರು. ಎಡ ಎಂದರೆ ನಿರ್ಗತಿಕರು. ನಾನು ಮತ್ತು ನನ್ನ ನಾಯಕರು ಒಂದು ವೇಳೆ ವಾಲುವುದಾದರೆ ಎಡಕ್ಕೆ ವಾಲುತ್ತೇವೆ. ಈ ವಿಷಯದಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ. ಪ್ರತಿಷ್ಠೆ ಮಾಡಲು ನಾನು ರಾಜರ ಅಥವಾ ರಾಜಕಾರಣಿಗಳ ಕುಟುಂಬದವನಲ್ಲ. ನನ್ನ ಅಮ್ಮ ಅನಕ್ಷರಸ್ಥೆ, ಅಪ್ಪ ಎರಡನೆ ತರಗತಿ ಓದಿದವನು. ನಾನೊಬ್ಬ ಸಾಮಾನ್ಯ ಕುಟುಂಬದಿಂದ ಬಂದವನು’ ಎಂದು ಭಾವುಕವಾಗಿ ಹೇಳಿದರು.

ಸಮರ್ಥನೆ ಧಾಟಿ:

ಕೊಲೆಗಾರರನ್ನು ಶಿಕ್ಷಿಸಲು ಐಪಿಸಿ 302 ಸೆಕ್ಷನ್ ಇದೆ. ನಾಗರಿಕ ಸಮಾಜದಲ್ಲಿ ಕೊಲೆ ನಡೆಯುವುದನ್ನು ತಡೆಯಲು, ಕೊಲೆಗಡುಕರಿಗೆ ಭಯ ಹುಟ್ಟಿಸಲು ಈ ಸೆಕ್ಷನ್ ಇದೆ. ಆರೋಗ್ಯ ಸೇವೆಯಲ್ಲಿ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಹೆದರಿಕೆ ಇದ್ದರೆ ತಪ್ಪು ಮಾಡುವುದಿಲ್ಲ. ಅದಕ್ಕಾಗಿ ಕಾಯ್ದೆ ಮಾಡಬಾರದು ಎಂದರೆ ಹೇಗೆ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು.

‘ಡಿಸೆಂಬರ್‌ನಿಂದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಹಾಗೂ ಸಿ.ಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ₹8,000 ಶುಲ್ಕ ವಿಧಿಸುವ ಈ ಸೌಲಭ್ಯ ಉಚಿತವಾಗಿ ಸಿಗಲಿದೆ. ಇಂತಹ ವಿಷಯದಲ್ಲಿ ನಿಮಗೆ ಶತ್ರುವಾದರೆ ನಾನು ಅಸಹಾಯಕ. ಜನ ನನ್ನ ದೇವರು.  ಅವರ ಕಾಲ ಹತ್ತಿರ ಇದ್ದು ಕೆಲಸ ಮಾಡುತ್ತೇನೆ. ಹಾಗಂತ ವೈದ್ಯರು, ಖಾಸಗಿ ಆಸ್ಪತ್ರೆಗಳ ಶತ್ರು ನಾನಲ್ಲ’ ಎಂದು ಹೇಳಿದರು.

‘ಆಸ್ಪತ್ರೆಗಳಿಗೆ ನೀಡುತ್ತಿರುವುದು ಜನರ ದುಡ್ಡು’

‘ವಾಜಪೇಯಿ, ಜ್ಯೋತಿ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳಡಿ ಆರೋಗ್ಯ ಸೇವೆ ಒದಗಿಸಲು ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಿಧಿಸುತ್ತಿವೆ. ಅದನ್ನು ಪರಿಷ್ಕರಿಸುವುದು ಬೇಡವೇ’ ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.

‘ಖಾಸಗಿ ಆಸ್ಪತ್ರೆಗಳ ಜತೆ ಸರ್ಕಾರ ಒಪ್ಪಂದ ಮಾಡಿಕೊಳ್ಳುವಾಗ ಶುಲ್ಕವನ್ನು ಅವರೇ ನಿಗದಿ ಮಾಡಿದ್ದಾರೆ. ಜನರ ತೆರಿಗೆಯ ಹಣವನ್ನು ಇದಕ್ಕೆ ಕೊಡುತ್ತಿದ್ದೇವೆ. ನಾವು ಸರ್ಕಾರಿ ಹಣದ ವಾರಸುದಾರರೇ ವಿನಃ ಪಾಳೆಗಾರರಲ್ಲ. ಹಾಗಾಗಿ ಪರಿಷ್ಕರಣೆ ಮಾಡಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ನೀವೂ ಇರುತ್ತೀರಿ ಎಂದು ಆಸ್ಪತ್ರೆಗಳ ಪ್ರತಿನಿಧಿಗಳಿಗೆ ಹೇಳಿದ್ದೇನೆ. ಹಾಗಿರುವಾಗ ಗನ್ ಪಾಯಿಂಟ್‌ ಇಟ್ಟು ನೀವು ಹೀಗೆ ಮಾಡಿ ಎಂದು ಡೆಡ್ ಎಂಡ್‌ಗೆ ತಂದು ನಿಲ್ಲಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT