ಭ್ರಷ್ಟಾಚಾರ ಪ್ರಕರಣ

ನ್ಯಾಯಾಂಗ ವಿಶ್ವಾಸಾರ್ಹತೆ ಪಾರದರ್ಶಕತೆ ಅಗತ್ಯ

ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ವ್ಯವಸ್ಥೆ ನ್ಯಾಯಾಂಗದಲ್ಲಿ ಇಲ್ಲ ಎಂಬ ಅಭಿಪ್ರಾಯ ಮೂಡುವುದು ಸಲ್ಲದು.

ನ್ಯಾಯಾಂಗ ವಿಶ್ವಾಸಾರ್ಹತೆ ಪಾರದರ್ಶಕತೆ ಅಗತ್ಯ

ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ಸೃಷ್ಟಿಯಾದ ಸಂಘರ್ಷಮಯ ವಾತಾವರಣ ಅಸಮಂಜಸವಾದದ್ದು. ವೈದ್ಯಕೀಯ ಕಾಲೇಜಿನ ಪ್ರವೇಶಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿರ್ಧಾರದ ಮೇಲೆ ಪ್ರಭಾವ ಬೀರುವ ಭರವಸೆ ನೀಡಿ ಭ್ರಷ್ಟಾಚಾರ ನಡೆಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಅನಪೇಕ್ಷಿತ ಬೆಳವಣಿಗೆಗಳು ನಡೆದಿವೆ. ಲಂಚ ಪಡೆದ ಆರೋಪದ ಮೇಲೆ ಒರಿಸ್ಸಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಿಬಿಐನಿಂದ ಬಂಧನಕ್ಕೂ ಒಳಗಾಗಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ನ್ಯಾಯಮೂರ್ತಿ ಜೆ.ಚಲಮೇಶ್ವರ್ ನೇತೃತ್ವದ ದ್ವಿಸದಸ್ಯ ಪೀಠ ವರ್ಗಾಯಿಸಿತ್ತು. ಈ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ನೇತೃತ್ವದ ಮತ್ತೊಂದು ಪೀಠ ರದ್ದು ಮಾಡಿತು. ನ್ಯಾಯಮೂರ್ತಿಗಳ ನಡುವಿನ ಈ ಭಿನ್ನ ನಿರ್ದೇಶನಗಳ ಮಧ್ಯೆ ಹಿರಿಯ ವಕೀಲರ ಬಣಗಳ ಕೂಗಾಟ, ಅರಚಾಟಗಳು ಹಿಂದೆಂದೂ ನಡೆಯದ ರೀತಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ನಡೆದುಹೋದದ್ದು ಕಪ್ಪುಚುಕ್ಕೆ. ನ್ಯಾಯಾಂಗದ ಅಂಗಳದಲ್ಲಿ ವ್ಯಕ್ತವಾದ ಆಕ್ರೋಶ, ದ್ವೇಷ ಹಾಗೂ ಪರಸ್ಪರ ಸಂಶಯದ ಭಾವಗಳು ಆತಂಕ ಮೂಡಿಸುವಂತಹವು.

‘ಪೀಠಗಳ ರಚನೆ ಹಾಗೂ ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯಾಂಗದ ಕೆಲಸದ ಹಂಚಿಕೆಯನ್ನು ಬೇರೆ ಯಾರೂ ನಿರ್ಧರಿಸಲಾಗದು. ಇಂತಹ ನಿರ್ಧಾರಗಳನ್ನು ಕೈಗೊಳ್ಳುವವರು ಸಿಜೆಐ ಮಾತ್ರ’ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಮಾಡಿರುವ ಪ್ರತಿಪಾದನೆಯಲ್ಲಿರುವ ಶಾಸನಾತ್ಮಕ ತರ್ಕ ಖಂಡಿತಾ ಸರಿಯಾದದ್ದು. ಇದನ್ನು ಮೀರಿ ಪೀಠ ರಚನೆಗೆ ನ್ಯಾಯಮೂರ್ತಿ ಚಲಮೇಶ್ವರ್ ಮುಂದಾದದ್ದು, ಅಧಿಕಾರ ವ್ಯಾಪ್ತಿಯನ್ನು ಮೀರಿದಂತಹ ನಡೆ ಎಂಬುದನ್ನು ನಿರ್ಲಕ್ಷಿಸಲಾಗದು. ಆದರೆ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು ನ್ಯಾಯಮೂರ್ತಿ ಚಲಮೇಶ್ವರ್ ಆ ನಿರ್ಧಾರ ಕೈಗೊಂಡರೆಂಬ ವಾದದಲ್ಲಿಯೂ ಹುರುಳಿಲ್ಲ ಎಂದು ಹೇಳಲಾಗದು.

ಹಿತಾಸಕ್ತಿ ಸಂಘರ್ಷ ಹಾಗೂ ನ್ಯಾಯಮೂರ್ತಿಗಳ ಪರಮಾಧಿಕಾರಗಳ ವಿಚಾರದ ನಿರ್ವಹಣೆ ನ್ಯಾಯಾಂಗ ಸಂಸ್ಥೆಯನ್ನು ಇನ್ನಷ್ಟು ಒಂದುಗೂಡಿಸಬೇಕೇ ಹೊರತು ಅದನ್ನು ಒಡೆಯುವಂತಾಗಬಾರದು.

ಈ ಪ್ರಸಂಗದಲ್ಲಿ ನಿಯಮಗಳ ಉಲ್ಲಂಘನೆ ಆಗಿರುವುದು ನಿಜ. ಆದರೆ ಉನ್ನತ ನ್ಯಾಯಾಂಗದ ಭ್ರಷ್ಟಾಚಾರ ವಿಚಾರ ಈ ವಿವಾದದ ಕೇಂದ್ರಬಿಂದು ಎಂಬುದನ್ನು ಮರೆಯಲಾಗದು. ನ್ಯಾಯಾಂಗವು ಭ್ರಷ್ಟಾಚಾರ ವಿಚಾರಕ್ಕೆ ಬೆನ್ನು ಹಾಕುವುದು ಸರಿಯಲ್ಲ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಬಂಧನ, ಈ ಭ್ರಷ್ಟಾಚಾರದ ಕೊಳಕಿನ ಸಂಕೇತ. ಆದರೆ ಈ ವಿಚಾರವನ್ನು ನ್ಯಾಯಾಲಯ ಸರಿಯಾಗಿ ನಿರ್ವಹಿಸಲಿಲ್ಲ ಎಂಬುದು ದುರದೃಷ್ಟಕರ. ಈ ವಿಚಾರದಲ್ಲಿ ಕಳೆದ ವಾರ ನಡೆದ ಬೆಳವಣಿಗೆಗಳು ಹಾಗೂ ಕೈಗೊಂಡ ನಿರ್ಧಾರಗಳನ್ನು ಗಮನಿಸಿದಲ್ಲಿ ಇಂತಹ ವಿಚಾರವನ್ನು ನಿರ್ವಹಿಸಬಹುದಾದ ವ್ಯವಸ್ಥೆಯ ಕೊರತೆ ಎದ್ದು ಕಾಣಿಸುತ್ತದೆ.

ನ್ಯಾಯಾಂಗದ ಉನ್ನತ ವಲಯದಲ್ಲಿ ಕಂಡುಬಂದ ಗುಂಪುಗಾರಿಕೆ ಅಸಹನೀಯ. ಇದು ನ್ಯಾಯಾಂಗ ವ್ಯವಸ್ಥೆಯೊಳಗಿನ ದುರ್ನಡತೆ ನಿಯಂತ್ರಿಸುವ ಸಾಮುದಾಯಿಕ ವಿವೇಕವನ್ನು ದುರ್ಬಲಗೊಳಿಸುತ್ತದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಆಡಳಿತದ ಪರಮಾಧಿಕಾರವನ್ನು ಸ್ಪಷ್ಟವಾಗಿ ಪ್ರತಿಪಾದಿಸಿಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯೊಳಗಿರುವವರ ವಿರುದ್ಧದ ಆರೋಪಗಳಿಗಿಂತ ಸಿಜೆಐ ಪರಮಾಧಿಕಾರ ವಿಚಾರವೇ ಈ ವಿವಾದದಲ್ಲಿ ಕಳೆದ ವಾರ ಮೇಲುಗೈ ಪಡೆಯಿತೇ ಎಂಬ ಸಂಶಯವೂ ಸೃಷ್ಟಿಯಾಗಿರುವುದು

ನಿಜ. ಹಿಂದಿನಿಂದಲೂ ನ್ಯಾಯಾಂಗದ ಸಾಂಸ್ಥಿಕ ಸ್ವಾಯತ್ತೆಯನ್ನು ಕಾಪಾಡಿಕೊಂಡು ಅದರ ವಿಶ್ವಾಸವನ್ನು ಉಳಿಸಿಕೊಂಡು ಬರಲಾಗಿದೆ. ಇದಕ್ಕೆ ಧಕ್ಕೆ ಬರಬಾರದು.

Comments
ಈ ವಿಭಾಗದಿಂದ ಇನ್ನಷ್ಟು
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

ಅತ್ಯಾಚಾರಕ್ಕೆ ಮರಣ ದಂಡನೆ
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

22 Apr, 2018
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಸಂಪಾದಕೀಯ
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

20 Apr, 2018
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಸಂಪಾದಕೀಯ
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

19 Apr, 2018
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

ಸಂಪಾದಕೀಯ
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

18 Apr, 2018
ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

ಸಂಪಾದಕೀಯ
ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

17 Apr, 2018