ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಶಿಕ್ಷಣ ಇಂದಿನ ಅಗತ್ಯ

Last Updated 17 ನವೆಂಬರ್ 2017, 5:30 IST
ಅಕ್ಷರ ಗಾತ್ರ

ಮಂಗಳೂರು: ಕೇವಲ ಪುಸ್ತಕ ಜ್ಞಾನವಿದ್ದರೆ ಸಾಲದು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಆಧಾರಿತ ಜೀವನ ಶಿಕ್ಷಣ ದೊರಕಬೇಕು. ಸ್ವಾಮಿ ವಿವೇಕಾನಂದರ ಮಾತಿನಂತೆ ನಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪ್ರಕಾಶಕ್ಕೆ ತರುವ, ಗುಣ-ನಡತೆಗಳ ವಿಕಾಸಕ್ಕೆ ನೆರವಾಗುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂದು ಚೆನ್ನರಾಯಪಟ್ಟಣದ ಮಲ್ನಾಡ್ ಅಕಾಡೆಮಿ ಪಿ.ಯು. ಕಾಲೇಜಿನ ನಿವೃತ್ತ ಪ್ರಾಚಾರ್ಯ ಬೈಕಾಡಿ ಜನಾರ್ದನ ಆಚಾರ್ಯ ಅಭಿಪ್ರಾಯಪಟ್ಟರು. ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ‘ಹಬ್ಬಗಳ ಸಂಗಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಕಲೆ, ಕ್ರೀಡೆ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸಮಾಜ ಸೇವೆ ಇತ್ಯಾದಿ ನಾನಾ ರಂಗಗಳಲ್ಲಿ ವಿಪುಲವಾದ ಅವಕಾಶಗಳಿದ್ದರೂ, ಅದನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೌಟುಂಬಿಕ ಪರಿಸರದ ಅನುಭವದಿಂದ ವಂಚಿತರಾಗುತ್ತಿರುವ ಅವರಿಗೆ, ಮಾನವೀಯ ಗುಣ-ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಸೇವಾ ಮನೋಭಾವದ ಜೀವನ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಉಳ್ಳ ಶಿಕ್ಷಣದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ, ಹಬ್ಬಗಳ ಸಂಗಮ ಎಂಬ ವೈವಿಧ್ಯಪೂರ್ಣ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ, ಗೋಪೂಜೆ, ದೀಪಾವಳಿ, ಭಾರತಮಾತಾ ಪೂಜನ ಕಾರ್ಯಕ್ರಮ ಆಚರಣೆಗಳ ಹಿನ್ನೆಲೆ, ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಟ್ರಸ್ಟಿ ಪ್ರದೀಪ ಕುಮಾರ್‌ ಕಲ್ಕೂರ, ಎಚ್. ಸೀತಾರಾಮ್ ಆಚಾರ್ಯ, ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ ಮಡಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ಭಟ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಬಾಲಕೃಷ್ಣ ಭಾರದ್ವಾಜ್‌ ವೇದಿಕೆಯಲ್ಲಿದ್ದರು.

ಶಿಕ್ಷಕಿ ಮಂಗಳಾ ವಂದಿಸಿದರು. ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ, ನಂದಿತಾರಾಣಿ, ರಮ್ಯಾ ರೈ, ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ದೇಶಭಕ್ತಿಗೀತೆ, ಪರಿಸರಗೀತೆ, ದೀಪಾವಳಿ, ಮಕ್ಕಳಹಬ್ಬಕ್ಕೆ ಸಂಬಂಧಪಟ್ಟ ಗೀತೆಗಳ ಜತೆಗೆ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆದವು.

ವೇದಿಕೆಯ ಬಲಭಾಗದಲ್ಲಿ ನಿರ್ಮಿಸಿದ ಗೋಶಾಲೆಯಲ್ಲಿ ಗೋವುಗಳಿಗೆ ತಿಲಕವಿಟ್ಟು ಗೋಗ್ರಾಸ ನೀಡಿ, ಆರತಿ ಬೆಳಗಿ, ಅತಿಥಿಗಳು ಹಾಗೂ ಗಣ್ಯರು ಗೋಪೂಜೆ ನೆರವೇರಿಸಿದರು. ವಿದ್ಯಾಲಯದ ಶಿಕ್ಷಕರಾದ ಶ್ರೀಪತಿ ಭಟ್ ಮತ್ತು ನಾಗರಾಜ್ ನೇತೃತ್ವ ವಹಿಸಿದ್ದರು. ವಿದ್ಯಾಸಂಸ್ಥೆಯ ಕಟ್ಟಡಗಳು, ಆಕರ್ಷಕ ವಿನ್ಯಾಸದ ಬಣ್ಣ-ಬಣ್ಣದ ಗೂಡುದೀಪಗಳಿಂದ ಮತ್ತು ಹಣತೆ ದೀಪಗಳಿಂದ ಭವ್ಯವಾಗಿ ಕಂಗೊಳಿಸಿತು. ಮೈದಾನದಲ್ಲಿ ಕಮಲಕೊಳ ಮತ್ತು ಎತ್ತರದಿಂದ ಜಿಗಿಯುವ ಜಲಪಾತ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT