ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ತಿಂಗಳೊಳಗೆ ಉಪನೋಂದಣಿ ಕಚೇರಿ ಸ್ಥಳಾಂತರಿಸಿ

Last Updated 17 ನವೆಂಬರ್ 2017, 5:37 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯ ಪಕ್ಕದ ನಿವೇಶನದಲ್ಲಿರುವ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧ ಅಥವಾ ಸೂಕ್ತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು 2 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಅವರು ವಿವಿಧ ರೋಗಿಗಳ ವಿಭಾಗಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ಅವರು ‘ಆಸ್ಪತ್ರೆಗೆ ಸೇರಿದ ನಿವೇಶನದಲ್ಲಿರುವ ಉಪನೋಂದಣಿ ಕಚೇರಿಯನ್ನು ಅಲ್ಲಿಂದ ಸ್ಥಳಾಂತರಿಸಿದಲ್ಲಿ ಈ ನಿವೇಶನದಲ್ಲಿ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಲು ಸಾಧ್ಯ. ಆದರೆ ಜಿಲ್ಲಾಧಿಕಾರಿಗಳು ಆದೇಶಿಸಿದರೂ, ಕಚೇರಿಯನ್ನು ಸ್ಥಳಾಂತರ ಮಾಡುತ್ತಿಲ್ಲ’ ಎಂದು ಗಮನ ಸೆಳೆದರು.

ವಿಶ್ವನಾಥ ಶೆಟ್ಟಿ ಅವರು ಮಾತನಾಡಿ ‘ಈ ಬಗ್ಗೆ ಕ್ರಮ ಕೈಗೊಳ್ಳಿ. ಮಾತ್ರವಲ್ಲದೆ ಜಿಲ್ಲಾ ನೋಂದಣಿ ಅಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರು ನೀಡಿದ ಸೂಚನೆಯ ಕುರಿತು ತಿಳಿಸಬೇಕು. ಈ ಕುರಿತು ಸ್ಪಂದನೆ ವ್ಯಕ್ತವಾಗದಿದ್ದರೆ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಉಪನೋಂದಣಿ ಕಚೇರಿಯನ್ನು ಇಲ್ಲಿಂದ ಸ್ಥಳಾಂತರಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬಾರದು’ ಎಂದು ಸೂಚಿಸಿದರು.

ಸಿಬ್ಬಂದಿಗೆ ಸೂಚನೆ: ‘ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ರೋಗಿಗಳ ಸಹಾಯಕರು ಸೇರಿದಂತೆ ಯಾರೂ ಚಪ್ಪಲಿ ಧರಿಸಿ ಒಳಗೆ ಹೋಗಬಾರದು. ಈ ಕುರಿತು ಪ್ರತಿ ವಾರ್ಡ್‌ಗಳ ಬಾಗಿಲ ಬಳಿ ಫಲಕಗಳನ್ನು ಕೂಡಲೇ ಅಳವಡಿಸಬೇಕು. ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು’ ಎಂದು ಲೋಕಾಯುಕ್ತರು ಸೂಚಿಸಿದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಹೂದೋಟ ಮತ್ತು ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ಸಂಜೆ ಹೊತ್ತು ವಿರಮಿಸಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ ಮಾಡುವಂತೆ ಅವರು ಸಲಹೆ ಮಾಡಿದರು.

ಲೋಕಾಯುಕ್ತ ಜಿಲ್ಲಾ ಎಸ್ಪಿ ರಶ್ಮಿ, ಇನ್‌ಸ್ಪೆಕ್ಟರ್‌ ವಿಜಯ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್‌ಕುಮಾರ್‌, ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಆಶಾ ಪುತ್ತೂರಾಯ, ಡಾ.ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT