ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ಯಾನಿಂಗ್‌ ಸೌಲಭ್ಯ ಇಲ್ಲದೆ ರೋಗಿಗಳ ಪರದಾಟ

Last Updated 17 ನವೆಂಬರ್ 2017, 5:57 IST
ಅಕ್ಷರ ಗಾತ್ರ

ಮಂಡ್ಯ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಎಂಪಿಎ) ತಿದ್ದುಪಡಿ ವಿರೋಧಿಸಿ ಗುರುವಾರ ಖಾಸಗಿ ಆಸ್ಪತ್ರೆ ಹೊರರೋಗಿಗಳ ವಿಭಾಗ, ಕ್ಲಿನಿಕ್‌ಗಳು, ರಕ್ತ ರಕ್ತ ತಪಾಸಣಾ, ಸ್ಕ್ಯಾನಿಂಗ್‌ ಕೇಂದ್ರಗಳು ಬಂದ್‌ ಆಗಿದ್ದ ಕಾರಣ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಪರದಾಡಿದರು.

ಅಶೋಕ್‌ನಗರದ ಅರ್ಚನಾ ಆಸ್ಪತ್ರೆ, ಸುರಭಿ ಆಸ್ಪತ್ರೆ, ಸೇವಾ ನರ್ಸಿಂಗ್‌ ಹೋಂ, ಡಾ.ಸುಶೀಲಮ್ಮ ನರ್ಸಿಂಗ್‌ ಹೋಂ, ಜನರಲ್‌ ಆಸ್ಪತ್ರೆ ರಸ್ತೆಯಲ್ಲಿರುವ ಎಸ್‌.ಡಿ.ಜಯರಾಂ ನರ್ಸಿಂಗ್‌ ಹೋಂ ಸೇರಿ ಎಲ್ಲಾ ಆಸ್ಪತ್ರೆಗಳು ಬಂದ್‌ ಆಗಿದ್ದು ಚಿಕಿತ್ಸೆ ದೊರೆಯಲಿಲ್ಲ. ಇದನ್ನು ಮೊದಲೇ ಅರಿತಿದ್ದ ಮಿಮ್ಸ್‌ ಆಸ್ಪತ್ರೆ ಸೇರಿ ಇತರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಮುಂದೆ ಜನರು ಕಿಕ್ಕಿರಿದು ತುಂಬಿದ್ದರು.

ನಗರದ ಬಹುತೇಕ ರಕ್ತ ತಪಾಸಣಾ ಹಾಗೂ ಸ್ಕ್ಯಾನಿಂಗ್‌ ಕೇಂದ್ರಗಳು ಸ್ಥಗಿತಗೊಂಡಿದ್ದ ಕಾರಣ ರೋಗಿಗಳು ಪರದಾಡಬೇಕಾಯಿತು. ಮಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲಾ ರೋಗಿಗಳಿಗೆ ಸ್ಕ್ಯಾನ್‌ ಮಾಡಲು ಸಾಧ್ಯವಾಗದೆ ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ವೈದ್ಯರು ಸೂಚಿಸಿದ್ದರು. ಖಾಸಗಿ ಕೇಂದ್ರಗಳು ಬಂದ್‌ ಆಗಿದ್ದ ಕಾರಣ ಸ್ಕ್ಯಾನಿಂಗ್‌ ಸೌಲಭ್ಯ ದೊರೆಯಲಿಲ್ಲ, ಹೀಗಾಗಿ ರೋಗಿಗಳ ಸಂಬಂಧಿಕರು ಆತಂಕಕ್ಕೊಳಗಾಗಿದ್ದರು.

ಮದ್ದೂರು ತಾಲ್ಲೂಕು ಮಾದಾಪುರದೊಡ್ಡಿಯ ಪುಟ್ಟಲಿಂಗಮ್ಮ ಅವರು ಮೂತ್ರ ಸೋಂಕಿನಿಂದ ಬಳಲುತಿದ್ದರು. ಅವರು ಮಂಡ್ಯ ಡಯಾಗ್ನೋಸ್ಟಿಕ್‌ ಕೇಂದ್ರಕ್ಕೆ ಸ್ಕ್ಯಾನಿಂಗ್‌ಗಾಗಿ ಆಂಬುಲೆನ್ಸ್‌ನಲ್ಲಿ ಬಂದಿದ್ದರು. ಆದರೆ ಕೇಂದ್ರ ಸ್ಥಗಿತಗೊಂಡಿದ್ದ ಕಾರಣ ಅವರು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದು ಅವರ ಕುಟುಂಬ ಸದಸ್ಯರು ಗೊಂದಲಕ್ಕೀಡಾಗಿದ್ದಾರೆ.

‘ಮಿಮ್ಸ್‌ ಆಸ್ಪತ್ರೆಯಲ್ಲಿ ಸ್ಕ್ಯಾನ್‌ ಮಾಡಿಸಲು 2018, ಜನವರಿ 20ಕ್ಕೆ ದಿನಾಂಕ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಯನ್ನು ನಂಬಿ ಕುಳಿತರೆ ನಮ್ಮ ತಾಯಿ ಅಷ್ಟೊರಳಗೆ ಮೃತಪಡುತ್ತಾರೆ. ಮಿಮ್ಸ್‌ ಸ್ಕ್ಯಾನಿಂಗ್‌ ಕೇಂದ್ರವನ್ನು ನಂಬಿಕೊಂಡು ಕೂರಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಅಲೆಯುತ್ತಿದ್ದೇವೆ. ಆದರೆ ಮುಷ್ಕರದಿಂದಾಗಿ ಸ್ಕ್ಯಾನಿಂಗ್‌ ಆಗಿಲ್ಲ. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಪುಟ್ಟಲಿಂಗಮ್ಮ ಮಗ ನಾಗರಾಜ ತಿಳಿಸಿದರು.

ಹೊಸ ದಾಖಲಾತಿ ಇಲ್ಲ:
ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಒಳರೋಗಿಗಳ ವಿಭಾಗಕ್ಕೆ ಹೊಸ ರೋಗಿಗಳನ್ನು ದಾಖಲು ಮಾಡಿಕೊಳ್ಳಲಿಲ್ಲ. ವಾರ್ಡ್‌ನಲ್ಲಿ ಇದ್ದ ಒಳರೋಗಿಗಳಿಗೆ ಸಿಬ್ಬಂದಿ ಎಂದಿನಂತೆ ಚಿಕಿತ್ಸೆ ನೀಡಿದರು. ಬೆಳಿಗ್ಗೆಯೇ ದಾಖಲಾಗಲು ಬಂದ ರೋಗಿಗಳು ಆಸ್ಪತ್ರೆಯ ಬಾಗಿಲಲ್ಲೇ ಕುಳಿತಿದ್ದರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಮಾತ್ರ ದಾಖಲು ಮಾಡಿಕೊಂಡರು.

‘ನಾನು ಮಳವಳ್ಳಿ ತಾಲ್ಲೂಕಿನಿಂದ ಬಂದಿದ್ದೇನೆ. ಗರ್ಭಕೋಶದ ಸಮಸ್ಯೆ ಇದೆ. ಕಳೆದ ವಾರ ವೈದ್ಯರಿಗೆ ತೋರಿಸಿದ್ದೆ. ಗುರುವಾರ ಬರುವಂತೆ ಹೇಳಿದ್ದರು. ಈಗ ಮುಷ್ಕರ ಇದೆ ದಾಖಲು ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಂಜೆಯವರೆಗೂ ಕಾಯುತ್ತೇನೆ’ ಎಂದು ತಾಯಮ್ಮ ಹೇಳಿದರು.

ದಂತ ಚಿಕಿತ್ಸಾಲಯಗಳೂ ಬಂದ್‌:
ನಗರದಾದ್ಯಂತ ದಂತ ವೈದ್ಯಕೀಯ ಚಿಕಿತ್ಸಾಲಯಗಳೂ ಬಂದ್‌ ಆಗಿದ್ದವು. ಕೆಪಿಎಂಇ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಪ್ರತಿಭಟನಾ ಕರೆಗೆ ಭಾರತೀಯ ದಂತ ವೈದ್ಯಕೀಯ ಸಂಘ ಬೆಂಬಲ ನೀಡಿದ್ದು ಎಲ್ಲಾ ಕ್ಲಿನಿಕ್‌ಗಳನ್ನು ಬಂದ್‌ ಮಾಡಿವೆ. ಎಲ್ಲಾ ಚಿಕಿತ್ಸಾಲಯಗಳ ಮುಂದೆ ಪ್ರತಿಭಟನೆಯ ಕುರಿತ ಮಾಹಿತಿಯ ಕರಪತ್ರ ಅಂಟಿಸಲಾಗಿದೆ.

ಶಿರಡಿಯಿಂದ ವಾಪಸ್‌ ಬಂದ ಡಿಎಚ್‌ಒ
ಪ್ರವಾಸ ತೆರಳಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಶಿರಡಿಯಿಂದ ಗುರುವಾರ ಬೆಳಿಗ್ಗೆ ನಗರಕ್ಕೆ ವಾಪಸ್‌ ಬಂದಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಯಾವುದೇ ವೈದ್ಯರು ಸಕಾರಣವಿಲ್ಲದೆ ರಜೆ ಪಡೆಯುವಂತಿಲ್ಲ ಎಂದು ಆದೇಶಿಸಿದ್ದಾರೆ.

‘ಪ್ರತಿಭಟನೆಯ ವಿಷಯ ತಿಳಿದು ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್‌ ಬಂದಿದ್ದೇನೆ. ಜಿಲ್ಲೆಯಲ್ಲಿರುವ ಸ್ಥಿತಿಯನ್ನು ಜಿಲ್ಲಾಧಿಕಾರಿಗೆ ವರದಿ ನೀಡಿದ್ದೇನೆ. ಆದಿಚುಂಚನಗಿರಿಯ ಬಾಲಗಂಗಾಧರನಾಥ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೆರವು ನೀಡಲು ಮನವಿ ಮಾಡಿದ್ದೇನೆ. ನಮ್ಮ ಮನವಿಗೆ ಸ್ಪಂದಿಸಿ ಅವರು ಚಿಕಿತ್ಸೆ ನೀಡಲು ಒಪ್ಪಿದ್ದಾರೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ಅನುಷ್ಠನಾಧಿಕಾರಿಗಳು ಎಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಡಾ.ಕೆ.ಮೋಹನ್‌ ತಿಳಿಸಿದರು.

ತುಂಬಿ ಥುಳುಕಿದ ಮಿಮ್ಸ್‌ ಆಸ್ಪತ್ರೆ
ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದಾಗಿ ನಗರದ ಮಿಮ್ಸ್‌ ಆಸ್ಪತ್ರೆ ರೋಗಿಗಳಿಂದ ತುಂಬಿ ಥುಳುಕುತ್ತಿತ್ತು. ಚೀಟಿ ಪಡೆಯುವ ಕೌಂಟರ್‌ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಎಲ್ಲಾ ವಾರ್ಡ್‌ಗಳ ಬೆಡ್‌ಗಳು ರೋಗಿಗಳಿಂದ ತುಂಬಿದ್ದವು.

‘ಪರಿಸ್ಥಿತಿ ಮೊದಲೇ ಗೊತ್ತಿದ್ದ ಕಾರಣ ಪರಿಸ್ಥಿತಿ ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೆವು. ಹೆಚ್ಚುವರಿ ಬೆಡ್‌ ಹಾಕಿಸಿದ್ದೇವೆ. ಯಾವುದೇ ವೈದ್ಯರಿಗೆ, ಶಸ್ತ್ರಚಿಕಿತ್ಸಕರಿಗೆ ರಜೆ ನೀಡಿಲ್ಲ. ಎಷ್ಟೇ ಜನರು ಬಂದರೂ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಪ್ರಕಾಶ್‌ ಹೇಳಿದರು.

ಮದ್ದೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌
ಮದ್ದೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ಮುಚ್ಚಲಾಗಿತ್ತು. ಜೊತೆಗೆ ರಕ್ತ ಪರೀಕ್ಷಾ ಕೇಂದ್ರಗಳು ಮುಚ್ಚಿದ್ದವು. ಹೀಗಾಗಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT