ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಂಇ ಕಾಯ್ದೆ ಬೆಂಬಲಿಸಿ ಪ್ರತಿಭಟನೆ

Last Updated 17 ನವೆಂಬರ್ 2017, 6:09 IST
ಅಕ್ಷರ ಗಾತ್ರ

ರಾಮನಗರ: ರಾಜ್ಯ ಸರ್ಕಾರ  ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಗುರುವಾರ ಅಣಕು ಶವಯಾತ್ರೆ ನಡೆಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ಗೌಡ ಮಾತನಾಡಿ, ‘ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳ ಶವ ಇಟ್ಟುಕೊಂಡು ಅವರ ಸಂಬಂಧಿಗಳನ್ನು ಸುಲಿಗೆ ಮಾಡುತ್ತಿವೆ. ಪ್ರತಿಯೊಂದು ಚಿಕಿತ್ಸೆಗೂ ಯದ್ವಾತದ್ವಾ ಶುಲ್ಕ  ವಿಧಿಸುತ್ತಿವೆ. ಇವೆಲ್ಲದರ ನಿಯಂತ್ರಣಕ್ಕೆ ಸರ್ಕಾರ ವೈದ್ಯಕೀಯ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕ್ರಮ ಸ್ವಾಗತಾರ್ಹವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರ ಈ ಕ್ರಮ  ಜನಪರ ಕಾಳಜಿಯಿಂದ ಕೂಡಿದೆ. ಈ ತಿದ್ದುಪಡಿಯು ಕಾನೂನಾಗಿ ಪರಿವರ್ತನೆಗೊಂಡಲ್ಲಿ ಬಡವರೂ ಉತ್ತಮ ಆರೋಗ್ಯ ಸೇವೆ ಹೊಂದುವುದು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಯ್ದೆಯ ಅಂಶಗಳೆಲ್ಲವೂ ಉತ್ತಮವಾಗಿದ್ದು, ಇನ್ನು ಮುಂದೆ ಯಾವ ಚಿಕಿತ್ಸೆಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಹಾಕಬೇಕು. ಎಲ್ಲ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕರೂಪದ ಚಿಕಿತ್ಸೆ ದರ ಅನುಸರಿಸಬೇಕು. ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಹಾಸಿಗೆ ವೆಚ್ಚ, ಚಿಕಿತ್ಸೆಯ ವೆಚ್ಚ ಹಾಗೂ ಔಷಧಿಯ ಸಂಭವನೀಯ ವೆಚ್ಚದ ಪಟ್ಟಿ ನೀಡಬೇಕು. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ರೋಗಿಯ ಸಂಬಂಧಿಕರಿಗೆ ಹಿಂಸಿಸಬಾರದು ಎಂಬ ಅಂಶಗಳು ಉದ್ದೇಶಿತ ಕಾಯ್ದೆಯಲ್ಲಿವೆ’ ಎಂದು ವಿವರಿಸಿದರು.

ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷಗಳು ಸರ್ಕಾರದ ಈ ಜನಪರ ನಿರ್ಣಯದ ಪರ ನಿಲ್ಲಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್‌ಗೌಡ, ತಾಲ್ಲೂಕು ಘಟಕದ ಅಧ್ಯಕ್ಷೆ ನಾಗರತ್ನಾ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಯುವ ಘಟಕದ ಅಧ್ಯಕ್ಷ ರಂಜಿತ್‌ ಗೌಡ, ಕಾರ್ಯಕರ್ತರಾದ ಪುಟ್ಟಮ್ಮ, ರಾಜಮ್ಮ, ಲಕ್ಷ್ಮಿ, ಕಿರಣ್‌ಸಿಂಗ್‌, ಜಾಕೀರ್, ಸಿದ್ದಪ್ಪಾಜಿ, ಚಿಕ್ಕೇನಹಳ್ಳಿ ರಾಮಚಂದ್ರು ಭಾಗವಹಿಸಿದ್ದರು.

ಸರ್ಕಾರಿ ಆಸ್ಪತ್ರೆಗಳತ್ತ ಜನರ ಚಿತ್ತ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಜಿಲ್ಲೆಯಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ.

ಕೆಲವು ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ ಹಾಗೂ ಕ್ಲಿನಿಕ್‌ಗಳಲ್ಲಿ ಗುರುವಾರದಿಂದಲೇ ಹೊರ ರೋಗಿಗಳಿಗೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲಾಗಿದೆ. ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರಿಗೆ ಮಾತ್ರ ಆರೋಗ್ಯ ಸೇವೆ ಮುಂದುವರಿಸಲು ಖಾಸಗಿ ವೈದ್ಯರು ನಿರ್ಧರಿಸಿದ್ದಾರೆ. ಆದಾಗ್ಯೂ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆ ಲಭ್ಯವಿದೆ.

ವೈದ್ಯರ ಸೇವೆ ನಿರಾಕರಣೆಯಿಂದಾಗಿ ಜಿಲ್ಲೆಯಲ್ಲಿ ಸಾವು–ನೋವು ಸಂಭವಿಸಿದ ಘಟನೆಗಳು ವರದಿ ಆಗಿಲ್ಲ. ಆದರೆ, ಶುಕ್ರವಾರದಿಂದ ಮುಷ್ಕರ ತೀವ್ರಗೊಳಿಸಲು ವೈದ್ಯರು ನಿರ್ಧರಿಸಿದ್ದು, ಪಟ್ಟು ಸಡಿಲಿಸದೆ ಹೋದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

‘ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಬಳಿಕ ಐಎಂಎ ಮುಖಂಡರು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದರಂತೆ ಶುಕ್ರವಾರದ ನಡೆಯನ್ನೂ ನಿರ್ಧರಿಸಲಾಗುವುದು’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗೆ ಲಗ್ಗೆ: ಖಾಸಗಿ ಆಸ್ಪತ್ರೆಗಳಲ್ಲಿನ ಅನಿಶ್ಚಿತತೆಯಿಂದಾಗಿ ಜನರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವುದು ಹೆಚ್ಚಾಗಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವ ಹೊರರೋಗಿಗಳ ಸಂಖ್ಯೆಯಲ್ಲಿಯೂ ಕೊಂಚ ಹೆಚ್ಚಳ ಕಂಡು ಬಂದಿದೆ. ಗುರುವಾರ ಮಧ್ಯಾಹ್ನದ ವೇಳೆಗೆ 750ಕ್ಕೂ ಹೆಚ್ಚು ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು.

ಎಲ್ಲ ಸರ್ಕಾರಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಅಗತ್ಯ ಔಷಧ ದಾಸ್ತಾನು ಮಾಡಿಕೊಳ್ಳಲಾಗುತ್ತಿದ್ದು, ಆಂಬುಲೆನ್ಸ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ರಣಧೀರ ಪಡೆ ಪ್ರತಿಭಟನೆ
ಖಾಸಗಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಹಾಗೂ ಕಾಯ್ದೆ ತಿದ್ದುಪಡಿಯನ್ನು ಬೆಂಬಲಿಸಿ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಗುರುವಾರ ಸಂಜೆ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಆರೋಗ್ಯ ಸಚಿವರ ನಡೆಯು ರೈತಪರ ಮತ್ತು ಜನಪರವೂ ಆಗಿದೆ. ಬಡವರನ್ನು ಶೋಷಿಸುತ್ತಿರುವ ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳ ನಿಯಂತ್ರಣಕ್ಕೆ ಇದು ಸಕಾಲವಾಗಿದೆ. ಸರ್ಕಾರವು ಯಾವುದೇ ಕಾರಣಕ್ಕೂ ಉದ್ದೇಶಿತ ಕಾಯ್ದೆ ತಿದ್ದುಪಡಿ ಜಾರಿಗೆ ಹಿಂದೇಟು ಹಾಕಬಾರದು’ ಎಂದು ಮನವಿ ಮಾಡಿದರು. ಸಂಘಟನೆಯ ಮುಖಂಡರಾದ ಹರೀಶ್‌ಕುಮಾರ್, ಗೋವಿಂದರಾಜು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT