ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮರೆದ ಸರ್ಕಾರಿ ವೈದ್ಯರು, ಸಿಬ್ಬಂದಿ

Last Updated 17 ನವೆಂಬರ್ 2017, 6:25 IST
ಅಕ್ಷರ ಗಾತ್ರ

ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ವಿರೋಧಿಸಿ ಖಾಸಗಿ ಆಸ್ಪತ್ರೆಗಳು ಗುರುವಾರವೂ ಬಂದ್‌ ಮಾಡಿದ ಕಾರಣ ಜಿಲ್ಲೆಯಲ್ಲೂ ಆರೋಗ್ಯ ಸೇವೆಗೆ ತೊಡಕಾಯಿತು. ಎಲ್ಲ ತೊಡಕುಗಳನ್ನೂ ಮೀರಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಪಳಿರಹಿತ 24 ಗಂಟೆ ರೋಗಿಗಳಿಗೆ ಸೇವೆ ಸಲ್ಲಿಸುವ ಮೂಲಕ ಮಾನವಿಯತೆ ಮರೆದರು.

ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸಿ ಜಿಲ್ಲೆಯಲ್ಲಿ ಇರುವ 500ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲ ಬಗೆಯ ಆರೋಗ್ಯಸೇವೆಯನ್ನೂ ಸ್ಥಗಿತಗೊಳಿಸಿದ್ದವು. ಎಂದಿನಂತೆ ಈ ಆಸ್ಪತ್ರೆಗಳಿಗೆ ಬಂದ ರೋಗಿಗಳು ಚಿಕಿತ್ಸೆ ಲಭ್ಯವಿಲ್ಲದೇ ಪರದಾಡಿದರು.

ನಗರದ ಸುಸಜ್ಜಿತ ಆಸ್ಪತ್ರೆಗಳಾದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮ್ಯಾಕ್ಸ್, ಸರ್ಜಿ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಮೆಟ್ರೋ ಯುನೈಟೆಡ್‌ ಆಸ್ಪತ್ರೆಗಳು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಮೊದಲೇ ದಾಖಲದ ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಯಿತು.

ಮೆಗ್ಗಾನ್ ಆಸ್ಪತ್ರೆಯಲ್ಲಿ ನೂಕುನುಗ್ಗಲು: ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ 118 ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಆದರೆ, ಸುಸಜ್ಜಿತ ಸೌಲಭ್ಯ ಇರುವ ಕಾರಣ ಬಹುತೇಕ ಜನರು ಮೆಗ್ಗಾನ್ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಹಾಗಾಗಿ, ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಭಾರಿ ಜನಸ್ತೋಮ ಕಂಡುಬಂತು. ಅಲ್ಲಿನ ವೈದ್ಯರು ಸರದಿಯಲ್ಲಿ ಬಂದ ಸಾವಿರಾರು ರೋಗಿಗಳಿಗೆ ತಾಳ್ಮೆಯಿಂದ ಚಿಕಿತ್ಸೆ ನೀಡಿದರು.

ಶಾಸಕರ ನೇತೃತ್ವದಲ್ಲಿ ತುರ್ತು ಸಭೆ: ಖಾಸಗಿ ವೈದ್ಯರ ಮುಷ್ಕರದ ಕಾರಣ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕಿಸಲು ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಸ್ಪತ್ರೆ ಆವರಣದಲ್ಲಿ ತುರ್ತು ಸಭೆ ನಡೆಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಯಾರಿಗೂ ಚಿಕಿತ್ಸೆ ನಿರಾಕರಿಸಬಾರದು ಎಂದು ಸೂಚಿಸಿದರು.

ಪಾಲಿಕೆ ಸದಸ್ಯ ಪಂಡಿತ್ ವಿಶ್ವನಾಥ್, ಮೆಗ್ಗಾನ್ ಆಸ್ಪತ್ರೆ ಸಲಹಾ ಸಮಿತಿ ಸದಸ್ಯರಾದ ಚಿನ್ನಪ್ಪ, ಬಾಲಾಜಿ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ಸುಶೀಲ್ ಕುಮಾರ್, ಜಿಲ್ಲಾ ಸರ್ಜನ್ ಡಾ.ಆರ್. ರಘುನಂದನ್ ಉಪಸ್ಥಿತರಿದ್ದರು.

ವೈದ್ಯರ ಧೋರಣೆ ಖಂಡಿಸಿ ಪ್ರತಿಭಟನೆ: ಖಾಸಗಿ ವೈದ್ಯರ ಪ್ರತಿಭಟನೆಗೆ ಸರ್ಕಾರ ಮಣಿಯಬಾರದು. ಮುಷ್ಕರ ನಿರತ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಹಾಗೂ ಪ್ರಜಾಭಿವೃದ್ಧಿ ಸಮಿತಿ, ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಹಾಗೂ ಪ್ರಜಾಭಿವೃದ್ಧಿ ಸಮಿತಿ: ರಾಜ್ಯದಲ್ಲಿ ಖಾಸಗಿ ವೈದ್ಯರ ಹಾವಳಿ ಹೆಚ್ಚಾಗಿದೆ. ವೈದ್ಯರ ಚಿಕಿತ್ಸಾ ವೆಚ್ಚಗಳು ಜನಸಾಮಾನ್ಯರಿಗೆ ಎಟಕುವ ಹಾಗಿಲ್ಲ. ಆರೋಗ್ಯ ಸಚಿವರು ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಕಾಯ್ದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಪಾಧ್ಯಕ್ಷ ರಜಾಕ್ ಸಾಬ್, ಪ್ರಮುಖರಾದ ವಾತ್ಸಲ್ಯಾ, ಶಾಹಿನಾ, ಮಂಗಳಮ್ಮ, ಗಿರಿ, ಪ್ರವೀಣ್, ಮಹಾಂತೇಶ್, ಅರ್ಜುನ್, ಅರುಣ್ ಕುಮಾರ್, ಪಾಂಡು, ರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕರ್ನಾಟಕ ನವ ನಿರ್ಮಾಣ ವೇದಿಕೆ: ಪ್ರತಿಭಟನಾ ನಿರತ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜಕಾರಣಿಗಳು, ಸಚಿವರು, ಶಾಸಕರು ಹಾಗೂ ಅವರ ಸಂಬಂಧಿಕರು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಪರೋಕ್ಷವಾಗಿ ಈ ಮಸೂದೆ ಜಾರಿಗೆ ಬರುವಂತೆ ತಡೆಯುವ ಹುನ್ನಾರ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಧನದಾಹಿತ್ವಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ವೇದಿಕೆಯ ಮುಖಂಡರಾದ ಮುರುಳೀಧರ್, ನಾಗರಾಜ್ ಭೋವಿ, ದೇವೇಂದ್ರಪ್ಪ, ಹನುಮೇಶ್, ನರಸಿಂಹ ಮೂರ್ತಿ, ಆಸಿಫ್, ಮಧು, ಜಯಲಕ್ಷ್ಮೀ ಮನವಿ ಸಲ್ಲಿಸಿದರು

ಎರಡೂವರೆ ಸಾವಿರ ರೋಗಿಗಳಿಗೆ ಚಿಕಿತ್ಸೆ
ಖಾಸಗಿ ವೈದ್ಯರ ಮುಷ್ಕರದ ಕಾರಣ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿತ್ಯವೂ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿ ಗುರುವಾರ ಇಡೀ ದಿನ ರೋಗಿಗಳ ಸೇವೆಗೆ ತೊಡಗಿದ್ದರು.

ವಿವಿಧ ವಿಭಾಗಗಳಲ್ಲಿ 125 ವೈದ್ಯರ ಸೇವೆ ಬಳಸಿಕೊಳ್ಳಲಾಯಿತು. ಸಂಜೆಯವರೆಗೆ 2,350 ರೋಗಿಗಳು ಚಿಕಿತ್ಸೆ ಪಡೆದರು. ತುರ್ತು ಚಿಕಿತ್ಸೆಯ ಅಗತ್ಯವಿದ್ದು 167 ರೋಗಿಗಳನ್ನು ದಾಖಲು ಮಾಡಲಾಯಿತು. ಒಂದೇ ದಿನ 27 ಹೆರಿಗೆ ಮಾಡಿಸಲಾಗಿದೆ. 15 ಡಯಾಲಿಸಿಸ್ ಯಂತ್ರಗಳಲ್ಲಿ ಮೂರು ಹಂತದಲ್ಲಿ 24 ತಾಸು ಸೇವೆ ಒದಗಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಆರ್.ರಘುನಂದನ್ ವಿವರ ನೀಡಿದರು. ನಿತ್ಯ ಬರುವ ರೋಗಿಗಳಿಗಿಂತ ಗುರುವಾರ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ರೋಗಿಗಳ ಸಂಖ್ಯೆ ಶೇ 20ರಿಂದ 25ರಷ್ಟು ಹೆಚ್ಚಳವಾಗಿತ್ತು.

ಆರೋಗ್ಯ ಇಲಾಖೆ ಕ್ರಮ
ಖಾಸಗಿ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ 8ರವರೆಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ ನೀಡುವಂತೆ ಆದೇಶಿಸಲಾಗಿದೆ.

ತಜ್ಞ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಯನ್ನು ಅಗತ್ಯ ಇರುವ ಕಡೆ ನಿಯೋಜಿಸಲಾಗಿದೆ. ಎಲ್ಲ ರಜೆಗಳನ್ನೂ ರದ್ದುಗೊಳಿಸಲಾಗಿದೆ. ಈಗಾಗಲೇ ರಜೆಯಲ್ಲಿ ತೆರಳಿರುವವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ. ಅಂಬುಲೆನ್ಸ್‌ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ ಲೋಕೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT