ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಡ ಸುಬ್ರಹ್ಮಣ್ಯ ದೇವಾಲಯದ ಸಮೀಪ ಶಿಲಾಯುಗದ ಬೃಹತ್ ಸಮಾಧಿ ಪತ್ತೆ

Last Updated 17 ನವೆಂಬರ್ 2017, 9:20 IST
ಅಕ್ಷರ ಗಾತ್ರ

ಉಡುಪಿ: ಶಿಲಾಯುಗದ ಬೃಹತ್ ಗುಹಾಸಮಾಧಿಯೊಂದು ಕಾರ್ಕಳ ತಾಲ್ಲೂಕಿನ ಸೂಡ ಸುಬ್ರಹ್ಮಣ್ಯ ದೇವಾಲಯ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.

ನೆಲಮಟ್ಟದಿಂದ ಸುಮಾರು 3 ಅಡಿ ಆಳದಲ್ಲಿ ಕೆಂಪು ಮುರಕಲ್ಲಿನಲ್ಲಿ ಅರ್ಧ ಗೋಳಾಕಾರದ ಗುಹೆ ರಚಿಸಲಾಗಿದೆ. ಸುಮಾರು ಒಂದು ಮೀಟರ್‌ ಉದ್ದ, 2 ಅಡಿ ಸುತ್ತಳತೆಯ ವೃತ್ತಾಕಾರದ ಏಕೈಕ ಪ್ರವೇಶ ದ್ವಾರವನ್ನು ಹೊಂದಿದೆ. ಈ ಪ್ರವೇಶ ದ್ವಾರವನ್ನು ಗ್ರಾನೈಟ್ ಶಿಲೆಯಿಂದ ಮುಚ್ಚಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಲಾಗಿದೆ. ಸ್ಥಳವನ್ನು ಸಮತಟ್ಟು ಮಾಡುವಾಗ ಈ ಗುಹಾಸಮಾಧಿ ಪತ್ತೆಯಾಗಿದೆ. ಒಳಗೆ ಮಣ್ಣು ಕುಸಿದು ಬಿದ್ದಿರುವುದರಿಂದ ಅಲ್ಲಿರುವ ಬೇರಾವುದೇ ಪ್ರಾಚೀನ ಅವಶೇಷ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಇಂಥದೇ ಗುಹಾಸಮಾಧಿ ಸೂಡ ಪಾಲುಮನೆ ಹಾಗೂ ಸಾಂತೂರಿನಲ್ಲಿ ಕಂಡುಬಂದಿದ್ದು ಅವುಗಳಲ್ಲಿ ಮಡಿಕೆಯ ಅವಶೇಷ ಲಭಿಸಿತ್ತು ಎಂದು ಅವರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯಲ್ಲಿ ಕಂಡು ಬಂದಿರುವ ಗುಹಾಸಮಾಧಿಗಳು ಸುಮಾರು ಕ್ರಿ. ಪೂ. 800ರಿಂದ ಕ್ರಿ. ಶ. 200ರ ಕಾಲದಲ್ಲಿ ರಚನೆಯಾಗಿವೆ. ಪ್ರಸ್ತುತ ಸಮಾಧಿಯನ್ನು ಸರಿಸುಮಾರು ಕ್ರಿ. ಪೂ. 500ರಲ್ಲಿ ರಚಿಸಲಾಗಿದೆ ಎಂದು ಪಾಲುಮನೆ ಮತ್ತು ಸಾಂತೂರಿನಲ್ಲಿ ಕಂಡುಬಂದ ಸಮಾಧಿಗಳ ಅಧ್ಯಯನದ ಹಿನ್ನೆಲೆಯಲ್ಲಿ ಭಾವಿಸಲಾಗಿದೆ.

ಉಡುಪಿ ಜಿಲ್ಲೆಯ ಬಹುತೇಕ ಬೃಹತ್ ಶಿಲಾಯುಗದ ಸಮಾಧಿಗಳು ದೇವಾಲಯ, ಆಲಡೆ ಮತ್ತು ನಾಗಬ್ರಹ್ಮಸ್ಥಾನಗಳ ಸಮೀಪದಲ್ಲಿ ಕಂಡುಬಂದಿವೆ. ಆದ್ದರಿಂದ ತುಳುನಾಡಿನ ಆರಾಧನಾ ಪರಂಪರೆ ಮೂಲತಃ ಸಮಾಧಿ ಅಥವಾ ಸಾವಿನ ಆರಾಧಾನಾ ಸಂಪ್ರದಾಯದ ಮೂಲಕ್ಕೆ ಸಂಬಂಧಿಸಿದ ಸಂಪ್ರದಾಯಗಳು ಎಂದು ತಿಳಿಯಬಹುದಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT