ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಿ ಬಿತ್ತನೆ; ಶೇ 80ರಷ್ಟು ಗುರಿ ಸಾಧನೆ

Last Updated 17 ನವೆಂಬರ್ 2017, 6:54 IST
ಅಕ್ಷರ ಗಾತ್ರ

ವಿಜಯಪುರ: ಹಿಂಗಾರು ಹಂಗಾಮಿನ ಬಿತ್ತನೆ ಪೂರ್ಣಗೊಳ್ಳಲು ಎರಡು ವಾರಗಳು ಬಾಕಿಯಿದ್ದು, ಈಗಾಗಲೇ ಬಿತ್ತನೆಯಾಗಿರುವ ಕಡಲೆ, ಹಿಂಗಾರಿ ಬಿಳಿ ಜೋಳದ ಬೆಳೆ ಹುಲುಸಾಗಿದೆ. ನವೆಂಬರ್‌ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿದ್ದು, ನೀರಾವರಿ ಆಸರೆ, ಕಾಲುವೆ ನೀರಿನ ಆಶ್ರಯದಲ್ಲಿ ಕಡಲೆ ಬಿತ್ತನೆ ನಡೆದರೆ, ಒಣ ಬೇಸಾಯದಲ್ಲಿ ಗೋಧಿ, ಜವಾ ಗೋಧಿಯ ಬಿತ್ತನೆ ಬಿರುಸಿನಿಂದ ನಡೆಯಲಿದೆ.

ಕಡಲೆ ನಿರೀಕ್ಷೆಗೂ ಮೀರಿದ ಬಿತ್ತನೆಯಾಗಿದೆ. 1.87 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 2.22 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನೂ 15ರಿಂದ 20,000 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ (ತಾಂತ್ರಿಕ ವಿಭಾಗ) ಶಿವನಗೌಡ ಬಿರಾದಾರ ತಿಳಿಸಿದರು.

‘ಯಥಾಪ್ರಕಾರ ಬಿಳಿಜೋಳದ ಬಿತ್ತನೆ ಪ್ರಮಾಣ ಈ ವರ್ಷವೂ ತಗ್ಗಿದೆ. ವರ್ಷದಿಂದ ವರ್ಷಕ್ಕೆ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳ ಬೆಳೆಯಲು ಮುಂದಾಗುವ ರೈತರ ಸಂಖ್ಯೆ ಕ್ಷೀಣಿಸುತ್ತಿದೆ. ಜಾನುವಾರು ಮೇವಿನ ಅಗತ್ಯವಿದ್ದವರು, ಜೋಳ ಮನೆ ಬಳಕೆಗೆ ಬಳಸುವವರು ಮಾತ್ರ ಬೆಳೆಯಲು ಮುಂದಾಗುತ್ತಿರುವುದರಿಂದ ಪ್ರಸ್ತುತ ವರ್ಷ 2.12 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿ ಜೋಳ ಬೆಳೆಯುವ ಗುರಿ ಹೊಂದಿದ್ದರೂ, 1.39 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ’ ಎಂದು ಅವರು ಹೇಳಿದರು.

‘ಬಿಳಿಜೋಳದ ಬಿತ್ತನೆ ಅವಧಿ ಈಗಾಗಲೇ ಮುಗಿದಿದ್ದು, ಖಾಲಿಯುಳಿದ ಪ್ರದೇಶದಲ್ಲಿ ಈ ಬಾರಿ ಕಡಲೆ ಬೆಳೆಯುವವರೇ ಹೆಚ್ಚು. ಮುದ್ದೇಬಿಹಾಳ, ಇಂಡಿ ತಾಲ್ಲೂಕಿನಲ್ಲಿ ಎರಡು ನೂತನ ಸಕ್ಕರೆ ಕಾರ್ಖಾನೆ ಆರಂಭವಾಗಿದ್ದು, ಇದರ ಜತೆಗೆ ಪ್ರಸ್ತುತ ವರ್ಷ ಕಬ್ಬಿಗೆ ದರವೂ ಚಲೋ ಇರುವುದರಿಂದ ಈ ಭಾಗದಲ್ಲಿ ಹೊಸದಾಗಿ ಕಬ್ಬಿನ ನಾಟಿ ಪ್ರಮಾಣ ಹೆಚ್ಚಲಿದೆ. ಎರಡೂ ಕಾರ್ಖಾನೆ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಪ್ರವೃತ್ತವಾಗಿವೆ’ ಎಂದು ಶಿವನಗೌಡ ಮಾಹಿತಿ ನೀಡಿದರು.

‘10,000 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಿದ್ದು, ಇದುವರೆಗೂ 3,500 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇದೇ ರೀತಿ 60,000 ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆಯ ಗುರಿ ಹೊಂದಲಾಗಿದ್ದು, 34,227 ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆಯಾಗಿದೆ.

ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ 2.91 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯ ಬಿತ್ತನೆಯ ಗುರಿಗೆ, ಇದುವರೆಗೂ 1.77 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಆದರೆ 1.87 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ದ್ವಿದಳ ಧಾನ್ಯ ಬಿತ್ತನೆಯ ಗುರಿಗೆ 2.22 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ’ ಎಂದು ತಿಳಿಸಿದರು.

ಎಣ್ಣೆಕಾಳು ಬಿತ್ತನೆಯೂ ಕ್ಷೀಣ: ಜಿಲ್ಲೆಯ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಎಣ್ಣೆಕಾಳು ಬಿತ್ತನೆ ಪ್ರದೇಶವೂ ಈ ಬಾರಿ ಕ್ಷೀಣಿಸಿದೆ ಎಂಬುದನ್ನು ಜಿಲ್ಲಾ ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢಪಡಿಸಿವೆ.

‘34000 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆಯ ಗುರಿ ಹೊಂದಿದ್ದರೂ, ಈವರೆಗೂ ಕೇವಲ 3500 ಹೆಕ್ಟೇರ್‌ನಲ್ಲಿ ಬಿತ್ತುವ ಮೂಲಕ ಶೇ 10ರ ಗುರಿ ಸಾಧಿಸಲಾಗಿದೆ. 4000 ಹೆಕ್ಟೇರ್‌ನಲ್ಲಿ ಕುಸುಬೆ ಬಿತ್ತನೆ ಗುರಿಯಿದ್ದರೂ, 1806 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದೆ. 3000 ಹೆಕ್ಟೇರ್‌ನಲ್ಲಿ ಅಗಸಿ ಬಿತ್ತನೆಯ ಗುರಿಗೆ ಇದುವರೆಗೂ ಕೇವಲ 278 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದ್ದು, ಎಣ್ಣೆಕಾಳು ಬಿತ್ತನೆಯ ಗುರಿ ಶೇ 14ರಷ್ಟನ್ನು ದಾಟಿಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಯಿಕಟ್ಟುವ ಹಂತದಲ್ಲಿ ತೊಗರಿ
ಮುಂಗಾರಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿತ್ತನೆಯಾಗಿದ್ದ ತೊಗರಿ, ಇದೀಗ ಹೂವಿನಿಂದ ಕಾಯಿಕಟ್ಟುವ ಹಂತದಲ್ಲಿದೆ. ಕೀಟಬಾಧೆ ಕಂಡು ಬರುತ್ತಿದ್ದು, ಜಿಲ್ಲೆಯ 18 ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಕೀಟನಾಶಕ ಸಿಂಪಡಿಸುವ ಸೂಚನೆ ನೀಡಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲೂ ಶೇ 50ರ ರಿಯಾಯಿತಿ ದರದಲ್ಲಿ ಕೀಟನಾಶಕ ಮಾರಾಟ ಮಾಡಲಾಗುತ್ತಿದೆ ಎಂದು ಶಿವನಗೌಡ ತಿಳಿಸಿದರು.

* * 

ಚಳಿಯ ವಾತಾವರಣ ಬೆಳೆಗೆ ಪೂರಕವಾಗಿದೆ. 20 ಎಕರೆಯಲ್ಲಿ ಕಡಲೆ ಸೊಂಪಾಗಿ ಬೆಳೆದಿದೆ. ಬಂಪರ್ ಇಳುವರಿಯ ನಿರೀಕ್ಷೆ ನನ್ನದಾಗಿದೆ
ಫಕ್ರುದ್ಧೀನ್ ಮುಲ್ಲಾ, ಹೊನವಾಡ ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT