ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯಿಂದ 24‍‍‍‍‍‍X7 ಸೇವೆ

Last Updated 17 ನವೆಂಬರ್ 2017, 7:07 IST
ಅಕ್ಷರ ಗಾತ್ರ

ಗಂಗಾವತಿ: ಸುಸಜ್ಜಿತ ಸೌಲಭ್ಯ, ಆಸ್ಪತ್ರೆ ಅಧುನೀಕರಣ, ರೋಗಿಗಳಿಗೆ ತಾಂತ್ರಿಕ ಸುಧಾರಿತ ಅಧುನಿಕ ಸೌಲಭ್ಯ, ಸಹಜ ಹೆರಿಗೆಯಲ್ಲಿ ದಾಖಲೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದ ಮಧ್ಯೆ ನಲುಗುತ್ತಿರುವ ರೋಗಿಗಳ ಪಾಲಿಗೆ ಈಗ
ದೇವರಾಗುವ ಮೂಲಕ ಮತ್ತೊಮ್ಮ ಸುದ್ದಿಯಾಗಿದ್ದಾರೆ.

ನೂರು ಹಾಸಿಗೆ ಆಸ್ಪತ್ರೆಯಲ್ಲಿ ಈಗ ಕೂರಲು ಸ್ಥಳವಿಲ್ಲವಾಗಿದೆ. ರೋಗಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿದೆ. ಆದರೆ ವೈದ್ಯರು ಮಾತ್ರ ಅಷ್ಟೆ ತಾಳ್ಮೆ ಸಹನೆಯಿಂದ ರೋಗಿಗಳಿಗೆ ಉಪಚರಿಸುತ್ತಿದ್ದಾರೆ ಎಂದು ದಾಖಲಾಗಿದ್ದವರು ಹೇಳಿದರು. ಕಳೆದ ನಾಲ್ಕು ದಿನದಿಂದ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದ ಪರಿಣಾಮ ನಗರದ 27ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಬೀಗ ಹಾಕಲಾಗಿದೆ.

ತುರ್ತು ಚಿಕಿತ್ಸೆ ಸೇರಿದಂತೆ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಬಯಸಿ ಆಸ್ಪತ್ರೆಗೆ ಬರುತ್ತಿರುವ ಹೊರ (ಒಪಿಡಿ) ರೋಗಿಗಳ ಸಂಖ್ಯೆ 400ರಿಂದ 900ಕ್ಕೆ ಏರಿಕೆಯಾಗಿದೆ. ಸಾಮಾನ್ಯ ದಿನದಲ್ಲಿ ಈ ಸಂಖ್ಯೆ 380ರಿಂದ 450ರಷ್ಟು ಮಾತ್ರ ಇರುತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ಚಿಕಿತ್ಸೆ ಬಯಸಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳನ್ನು ವಾಪಸ್ ಕಳುಹಿಸಬಾರದು ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದ ರೋಗಿಗಳ ಮನವೊಲಿಸಿ ಒಂದು ಹಾಸಿಗೆಯಲ್ಲಿ ಇಬ್ಬರನ್ನು ಮಲಗಿಸಿ ವೈದ್ಯ ಸಿಬ್ಬಂದಿ ಚಿಕಿತ್ಸೆ ಕೊಡುತ್ತಿದ್ದಾರೆ.

24X7 ಮಾದರಿ ಸೇವೆ: ಸ್ತ್ರೀರೋಗ, ಮಕ್ಕಳು, ಕಿವಿ ಮೂಗು ಗಂಟಲು, ದಂತ ಹೀಗೆ ಆಸ್ಪತ್ರೆಯಲ್ಲಿ ಒಟ್ಟು 9 ತಜ್ಞ ವೈದ್ಯರಿದ್ದಾರೆ. ನಾಲ್ಕು ದಿನದಿಂದ ವಿಶ್ರಾಂತಿ ಪಡೆಯದೇ 24 ಗಂಟೆ ಸೇವೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ವೈದ್ಯಾಧಿಕಾರಿ ಈಶ್ವರ ಸವುಡಿ ಹೇಳಿದರು.

ಸುರಕ್ಷಿತ ಮತ್ತು ಸಹಜ ಹೆರಿಗೆಗೆ ಗಂಗಾವತಿಯ ಸರ್ಕಾರಿ ಆಸ್ಪತ್ರೆ  ಸುತ್ತಮುತ್ತಲಿನ ತಾಲ್ಲೂಕು ಗಳಲ್ಲಿಯೂ ಹೆಸರು ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಹೆರಿಗೆಯ ಪ್ರಮಾಣದಲ್ಲಿ ಶೇ 20ರಷ್ಟು ಏರಿಕೆಯಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸಹಜವಾಗಿ ದಿನಕ್ಕೆ 20ರಿಂದ 25 ಹೆರಿಗೆ ಮಾಡಲಾಗುತ್ತದೆ. ನಾಲ್ಕು ದಿನಗಳಿಂದ ಪ್ರತಿದಿನ 35ರಿಂದ 40ರಷ್ಟು ಹೆರಿಗೆ ಮಾಡಲಾಗುತ್ತಿದೆ. ಶೇ 20ರಿಂದ 25ರಷ್ಟು ಹೆರಿಗೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಅನಿರೀಕ್ಷಿತವಾಗಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸುವ ಅಗತ್ಯ ಔಷಧಿಗಳ ಕೊರತೆಯಾಗುತ್ತಿದೆ. ಆದರೆ ರೋಗಿಗಳ ಮೇಲೆ ಇದರ ಪರಿಣಾಮ ಬೀಳದಂತೆ ತಕ್ಷಣವೇ ಆರೋಗ್ಯ ರಕ್ಷಾ ಸಮಿತಿಯ ನಿಧಿಯಲ್ಲಿ ಖರೀದಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನಕ್ಕೆ 800ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ

ಒಪಿಡಿಯಲ್ಲಿ ಶೇ 50ರಷ್ಟು ರೋಗಿಗಳು ಹೆಚ್ಚಳ

ಒಂದು ಹಾಸಿಗೆಯಲ್ಲಿ ಇಬ್ಬರನ್ನು ಮಲಗಿಸಿ ಚಿಕಿತ್ಸೆ

* * 

ಖಾಸಗಿ ವೈದ್ಯರ ಮುಷ್ಕರದ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಸೇವೆ ನೀಡುತ್ತಿದ್ದಾರೆ. ಡಾ. ಈಶ್ವರ ಸವುಡಿ
ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT