ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಬೋಪಯ್ಯ ವಿರುದ್ಧ ಅನಗತ್ಯ ಟೀಕೆ: ಆಕ್ಷೇಪ

Last Updated 17 ನವೆಂಬರ್ 2017, 7:21 IST
ಅಕ್ಷರ ಗಾತ್ರ

ಮಡಿಕೇರಿ: ಬಿದ್ದಾಟಂಡ ಹಾಕಿ ನಮ್ಮೆ ವಿಚಾರದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ವಿರುದ್ಧ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್‌.ತಮ್ಮಯ್ಯ ಅವರು ಅನಗತ್ಯವಾಗಿ ಟೀಕೆ, ಆರೋಪ ಮಾಡುತ್ತಿದ್ದಾರೆ ಎಂದು ‘ನಮ್ಮೆ’ ಅಧ್ಯಕ್ಷ ರಮೇಶ್ ಚಂಗಪ್ಪ ದೂರಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಾಕಿ ನಮ್ಮೆಯಲ್ಲಿ 306 ಕುಟುಂಬಗಳು ಸ್ಪರ್ಧಿಸುವ ಮೂಲಕ ದಾಖಲೆ ಮಾಡಿವೆ. ಸರ್ಕಾರ ಪ್ರತಿವರ್ಷ ಕೌಟುಂಬಿಕ ಹಾಕಿ ನಮ್ಮೆಗೆ ಅನುದಾನ ನೀಡುತ್ತಿದ್ದು ಈ ಬಾರಿ ₹ 50 ಲಕ್ಷ ಅನುದಾನ ನೀಡುವಂತೆ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಮೂಲಕ ಶಿಫಾರಸು ಮಾಡಿಸಲಾಗಿತ್ತು. ಆರ್ಥಿಕ ಇಲಾಖೆಯು ₹ 40 ಲಕ್ಷ ಅನುದಾನ ಮಂಜೂರು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿತ್ತು. ಹೆಚ್ಚಿನ ಅನುದಾನ ಬರುವ ನಿರೀಕ್ಷೆಯಲ್ಲಿ ಕುಟುಂಬಸ್ಥರ ಹಾಕಿ ಹಬ್ಬಕ್ಕೆ ₹ 1.20 ಕೋಟಿ ಖರ್ಚು ಮಾಡಲಾಗಿತ್ತು. ಆದರೆ, ಇದೀಗ ಸರ್ಕಾರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೂಲಕ ₹ 5 ಲಕ್ಷ ಮಂಜೂರು ಮಾಡಿ ಆದೇಶ ಹೊರಡಿಸಿದೆ’ ಎಂದು ದೂರಿದರು.

ಈ ವಿಚಾರವನ್ನು ಶಾಸಕ ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತರಲಾಗಿತ್ತು. ನಮ್ಮ ಮನವಿ ಮೇರೆಗೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆಯೇ ಹೊರತು ರಾಜಕೀಯ ಪ್ರೇರಿತವಾಗಿ ಅಲ್ಲ ಎಂದು ರಮೇಶ್‌ ಸ್ಪಷ್ಟನೆ ನೀಡಿದರು.

ತಮ್ಮಯ್ಯ ಅವರು ಸರ್ಕಾರದ ಆದೇಶ ಪ್ರತಿ ಪಡೆದುಕೊಳ್ಳದೆ ವೀಣಾ ಅಚ್ಚಯ್ಯ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅನಗತ್ಯವಾಗಿ ಟೀಕೆ, ಆರೋಪ ಮಾಡಲಾಗುತ್ತಿದೆ. ಪ್ರಶ್ನಿಸುವುದು ಶಾಸಕರ ಕರ್ತವ್ಯ. ಗೋಣಿಕೊಪ್ಪಲು ದಸರಾಕ್ಕೆ ಅನುದಾನ ತಂದ ಕೀರ್ತಿಗೆ ಶಾಸಕರು ಭಾಜನರಾಗಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡ ಮನು ಮುತ್ತಪ್ಪ ಮಾತನಾಡಿ, ‘ತಮ್ಮಯ್ಯ ಅವರು ಈ ವಿಚಾರದಲ್ಲಿ ರಾಜಕೀಯ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೂರ್ನಿಯ ಆರಂಭಕ್ಕೂ ಮೊದಲೇ ಅನುದಾನ ಬಿಡುಗಡೆ ಮಾಡಲಾಗಿತ್ತು. ಇನ್ನೂ ಕೂಡ ಶಾಂತೆಯಂಡ ಹಾಗೂ ಬಿದ್ದಾಟಂಡ ಹಾಕಿ ನಮ್ಮೆಗೆ ನಿಗದಿಪಡಿಸಿದ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಂಬಿ ಕಾರ್ಯಪ್ಪ, ಮನು ಮಹೇಶ್, ಮುರಳಿ ಕರುಂಬಯ್ಯ ಹಾಜರಿದ್ದರು.

ಅನುದಾನ: ಯಾವುದಕ್ಕೆ ಖರ್ಚು
ಮಡಿಕೇರಿ: ವೀಣಾ ಅಚ್ಚಯ್ಯ ಅವರು ನೀಡಿದ್ದ ₨ 5 ಲಕ್ಷ ಅನುದಾನದಲ್ಲಿ ಮೈದಾನ ಅಭಿವೃದ್ಧಿ, ಪ್ರತಾಪ್ ಸಿಂಹ ಅವರು ಸಂಸದರ ನಿಧಿಯಿಂದ ಬಿಡುಗಡೆ ಮಾಡಿದ್ದ ₨ 20 ಲಕ್ಷದಲ್ಲಿ ಕಾಲೇಜು ಮೈದಾನ ಅಭಿವೃದ್ಧಿ, ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಕರುಂಬಯ್ಯ ನೀಡಿದ್ದ ₨ 7 ಲಕ್ಷ ಅನುದಾನದಲ್ಲಿ ಮೈದಾನ ಅಭಿವೃದ್ಧಿ ಹಾಗೂ ರಕ್ಷಣಾ ಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಹಾಗೆಯೇ ಶಾಸಕ ಬೋಪಯ್ಯ ಅವರೂ ₨ 3 ಲಕ್ಷ ಅನುದಾನ ನೀಡಿದ್ದರು ಎಂದು ರಮೇಶ್‌ ಮಾಹಿತಿ ನೀಡಿದರು.

ಹಾಕಿ ಪಂದ್ಯಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ತಮ್ಮಯ್ಯ ಅವರು ಹಾಕಿ ಹಬ್ಬ ಕಳೆದು ಎಂಟು ತಿಂಗಳಾದರೂ ಅನುದಾನ ಬಿಡುಗಡೆ ಮಾಡಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಬಿದ್ದಾಟಂಡ ಕುಟುಂಬ ಮತ್ತು ಕೊಡಗಿನ ಜನತೆಗೆ ತಪ್ಪು ಮಾಹಿತಿ ನೀಡಿ, ವೀಣಾ ಅಚ್ಚಯ್ಯ ಅವರ ಮೂಲಕ ತಪ್ಪು ಹೇಳಿಕೆ ಕೊಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

* * 

ವೀಣಾ ಅಚ್ಚಯ್ಯ ಹಾಗೂ ಬಿ.ಎಸ್‌. ತಮ್ಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಅನುದಾನ ಬಿಡುಗಡೆಗೆ ಒತ್ತಡ ಹೇರಲಿ
 ಮನು ಮುತ್ತಪ್ಪ, ಮುಖಂಡ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT